ನಮ್ಮ ಕಾಲದ ಸಮಸ್ಯೆಗಳು ಇವಲ್ಲ...
"Misplaced priorities can, sometimes, be more dangerous than having no priorities", ಆತ್ಮೀಯಳಾದ ಗೆಳತಿಯೊಬ್ಬಳ ಜತೆ ಕಾಫಿ ಹೀರುತ್ತಾ ಹರಟೆ ಕೊಚ್ಚುತ್ತಿದ್ದಾಗ ಅವಳು ಹೇಳಿದ ಈ ಮಾತು ಇನ್ನೂ ಮನದ ಕೋಣೆಯೊಳಗೆ ಮಾರ್ದನಿಸುತ್ತಲೇ ಇದೆ. ಪ್ರತಿಯೊಂದು ಬಾರಿ ಈ ಮಾತನ್ನು ನೆನೆದಾಗಲೂ ಇದು ಹೊಸ ಹೊಸ ಅರ್ಥಗಳನ್ನು ನೀಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಸೂಕ್ಷ್ಮಸಂವೇದನೆ ಇರುವ ಯಾರಿಗಾದರೂ , ' ಇವೆಲ್ಲವೂ ಸಧ್ಯದ ಅಗತ್ಯವೇ ? ' ಎನ್ನುವ ಪ್ರಶ್ನೆ ಉದ್ಭವಿಸದೇ ಇರದು. ಬೇಡದ ವಿಷಯಗಳ ಬಗ್ಗೆ ತಿಂಗಳುಗಟ್ಟಲೆಯಿಂದ ಚರ್ಚೆಗಳು ನಡೆಯುತ್ತಿವೆ. ರಾಮನ ಹುಟ್ಟು-ಗುಟ್ಟಿನ ಬಗ್ಗೆ, ನಾವೇನು ತಿನ್ನಬಾರದು ? ನಾವು ಯಾವುದರ ಬಗ್ಗೆ ಬರೆಯಬೇಕು ? ನಾವು ಏನನ್ನು ನೋಡಬೇಕು ? ಇಂತಹದ್ದೇ ಪ್ರಚಾರಗಮ್ಯವಾದ ವಿಚಾರಗಳ ಬಗ್ಗೆ ಒಂದಲ್ಲಾ ಒಂದು ರೀತಿಯ ವಿವಾದಗಳು ಹುಟ್ಟಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ಜೀವಂತ ಸಮಾಜದ ಕುರುಹು " ಚರ್ಚೆಗಳು" ಎಂಬುದನ್ನು ನಾನು ಖಡಾಖಂಡಿತವಾಗಿ ಒಪ್ಪುತ್ತೇನೆ. ಅಂತೆಯೇ ಚರ್ಚೆಯ ಹೆಸರಿನಲ್ಲಿ ಒಬ್ಬರನ್ನೋಬ್ಬರ ಮೇಲೆ ಸಗಣಿ ಎರಚುವುದು ಒಂದು ರೋಗಗ್ರಸ್ಥ ಸಮಾಜದ ಲಕ್ಷಣ. facebook, twitter ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಿದಿನ abusive ಎನ್ನುವಂತಹ ಭಾಷೆ ಉಪಯೋಗಿಸಿ ಜನ ಟೀಕಿಸುತ್ತಿದ್ದಾರೆ. ವೈಚಾರಿಕ ಸಂಪ್ರದಾಯಕ್ಕೆ ಇದು ತದ್ವಿರುದ್ಧ. ಹೀಗೆ ಪರಸ್ಪರ ವೈಯುಕ್ತಿಕ ಅವಹೇಳನಕಾರಿಯಾಗಿ ಮಾತನಾಡುತ್ತಾ ನಾವು ಸಮಾಜದ ಧ್ರುವೀಕರಣ (polarize) ಮಾಡುತ್ತಾ ಇದ್ದೇವೇನೋ ಎನ್ನುವ ಭಯ ಇತ್ತೀಚೆಗೆ ಹೆಚ್ಚಾಗಿ ಆಗುತ್ತಿದೆ. ಏಕೆಂದರೆ ಧ್ರುವೀಕರಣಗೊಂಡ ಸಮಾಜದ ಮುಂದಿನ ಹೆಜ್ಜೆ ಹಿಂಸಾತ್ಮಕವಾಗಿರುವುದರಲ್ಲಿ ಸಂದೇಹವಿಲ್ಲ. ಸ್ವಾತಂತ್ರ್ಯೋತ್ತರ ಹಿಂಸಾಚಾರ, ಸಿಖ್ ಹತ್ಯಾಖಾಂಡ, ಗೋಧ್ರಾ ಹತ್ಯಾಖಾಂಡ ಎಲ್ಲದರಲ್ಲೂ ಈ ರೀತಿಯ ಒಂದು ಸಾಮಾಜಿಕ ಧ್ರುವೀಕರಣವಿತ್ತು. ಅದು ಸಹಜವೂ ಕೂಡ. ವೈಚಾರಿಕವಾಗಿ ಇಬ್ಭಾಗವಾದ ಸಮಾಜ ತನ್ನ ಆಂತರ್ಯದಲ್ಲಿ ಹುಟ್ಟಿಸಿಕೊಂಡ ಆಕ್ರೋಶವನ್ನು ಹಿಂಸೆಗೆ ತಿರುಗಿಸಿಕೊಳ್ಳುವುದರಲ್ಲಿ ಹೆಚ್ಚು ಸಮಯ ಬೇಕಾಗಿಲ್ಲ. ಅದಕ್ಕೆ ಇತ್ತೀಚಿಗೆ ಮುಖ್ಯಮಂತ್ರಿಗಳ ಮೇಲೆ ಬಂದಂತಹ " ತಲೆ ಕಡಿಯಲು ಸಿದ್ಧ " ಎನ್ನುವ ಹೇಳಿಕೆ ಒಂದು ಸಣ್ಣ ಉದಾಹರಣೆ ಅಷ್ಟೇ. ಯಾವುದೇ ರೀತಿಯಲ್ಲಿ ಒಡೆದರೂ, ಎರಡೂ ಪಂಥಗಳಲ್ಲಿ ತಮ್ಮ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಯಾವುದೇ ರೀತಿಯ ಕೆಲಸವನ್ನೂ ಮಾಡಲು ಕಟ್ಟಾಪಂಥಿಗಳು ಸಿದ್ಧರಿರುತ್ತಾರೆ. ಆದ್ದರಿಂದಲೇ ನಾವು ಇಂದಿನ ಸಾಮಾಜಿಕ ಸ್ಥಿತಿಯನ್ನು ಬಹಳ ಎಚ್ಚರದಿಂದ ತಿಳಿಗೊಳಿಸಬೇಕಾದ ಅಗತ್ಯತೆಯಿದೆ.
ಇನ್ನೊಂದು ಮುಖ್ಯವಾದ ವಿಚಾರವೇನೆಂದರೆ, ಈ ಗೋಮಾಂಸ ನಿಷೇಧ, ರಾಮನ ಬಗ್ಗೆಗಿನ ಚರ್ಚೆ, ಪೋರ್ನ್ ಬ್ಯಾನ್, ವಿದೇಶಾಂಗ ಸ್ಥಿತಿಯನ್ನು ಗಟ್ಟಿಗೊಳಿಸುವಿಕೆ, ಇವೆಲ್ಲಕ್ಕಿಂತ ಹೆಚ್ಚು ಮೂಲಭೂತವಾದ ಸಮಸ್ಯೆಗಳು ಭಾರತದಲ್ಲಿ ಇನ್ನೂ ತಾಂಡವವಾಡುತ್ತಿದೆ. ರಾಜ್ಯ ಸರ್ಕಾರದ 'ಅನ್ನಭಾಗ್ಯ' ಯೋಜನೆಯ ಬಗ್ಗೆ ಕೆಲವು ದಿನಗಳು ಚರ್ಚೆಯಾಗುತ್ತಿರುವುದನ್ನು ನೋಡಿ ಒಂದು ರೀತಿಯ ಸಮಾಧಾನವಾಗಿತ್ತು. ಚರ್ಚೆಯಲ್ಲಿ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿರುವ ಹಿರಿಯರಾದ ಶ್ರೀ ಭೈರಪ್ಪನವರು ಇಡೀ ಯೋಜನೆಯೇ ಸರಿಯಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದು ಸ್ವಲ್ಪ ಬೇಸರ ತರಿಸಿದ್ದರೂ, ಆರೋಗ್ಯಕರ ಚರ್ಚೆ ಆಗುತ್ತಿದೆಯಲ್ಲಾ ಎಂದು ಖುಷಿಯಾಗಿತ್ತು. ಯೋಜನೆಯ implementation ನ ಬಗ್ಗೆ ಕಳವಳ ಪಡಬೇಕಾದ್ದು ಸಹಜ. ಏಕೆಂದರೆ, ಬಹಳ ಅಗ್ಗವಾಗಿ ಅನ್ನ-ಧಾನ್ಯಗಳನ್ನು ಹಂಚುವ ಪ್ರಕ್ರಿಯೆಯಲ್ಲಿ ದುರುಪಯೋಗ ಪಡೆದುಕೊಳ್ಳಲು ಕಾದುಕುಳಿತ ಹಲವಾರು ಕೈಗಳು ಕೆಲಸ ಮಾಡುತ್ತವೆ. ಹೀಗೆ ಅವು ಕೆಲಸ ಮಾಡುತ್ತವೆ ಅಂದ ಮಾತ್ರಕ್ಕೆ ಇಡೀ ಯೋಜನೆಯೇ ತಪ್ಪು ಎಂದಾಗುವುದಿಲ್ಲ. ಭಾರತದಂತಹ ಪೌಷ್ಟಿಕ ಆಹಾರ ಕೊರತೆಯಿಂದ ಮಕ್ಕಳು ಸಾಯುತ್ತಿರುವಂತಹ ದೇಶದಲ್ಲಿ ಇಂತಹ ಯೋಜನೆಯಿಂದ 'ಸೋಮಾರಿತನ' ಹೆಚ್ಚಾಗುತ್ತದೆ ಎಂದು ಹೇಳುವುದು ವಿಷಾದನೀಯವಷ್ಟೇ ಅಲ್ಲ ಅಮಾನವೀಯ ಕೂಡ. ಅತ್ಯಂತ ಪೌಷ್ಟಿಕ ಆಹಾರ ಬೇಕಾಗಿರುವುದು ದುಡಿಯುವ ಶ್ರಮಿಕ ವರ್ಗಕ್ಕೆ. ಆದರೆ ಅವರಿಗೆ ಸಿಗುತ್ತಿರುವ ಆಹಾರವಾದರೂ substandard ಎನ್ನುವಂತಹದ್ದು. ಅಪೌಷ್ಟಿಕವಾದ ಆಹಾರದ ಜತೆಗೆ ದೈಹಿಕ ಶ್ರಮವೂ ಸೇರುವುದರಿಂದ ಆ ವರ್ಗದ ಕ್ಷಮತೆ ಕುಗ್ಗುತ್ತದೆ. ಇನ್ನಷ್ಟು ಆಹಾರ ಹುಟ್ಟಿಸಿಕೊಳ್ಳುವ ಆರ್ಥಿಕ ಸಬಲೀಕರಣದ ತರಬೇತಿ ಕೊಡುವುದು ನಂತರದ ವಿಷಯ. ಮೊದಲು ತನ್ನ ದೈನಿಕ ಹೊಟ್ಟೆಪಾಡನ್ನು ಸಂಭಾಳಿಸಿದ ಮೇಲಲ್ಲವೇ ವರ್ಗದ ಮುಂದುವರಿಕೆಯ ಮತ್ತು ಕೌಶಲ್ಯದ ಬಗ್ಗೆ ಯೋಚಿಸಲು ಸಾಧ್ಯ! ಬಹುರಾಷ್ಟ್ರೀಯ ಕಂಪನಿಗಳಿಗೆ ಈಗಲೂ ನಾವು ಜೋತುಬಿದ್ದರೆ, ಈ ದುಡಿಯುವ ವರ್ಗವನ್ನೆಲ್ಲಾ ( ಇಲ್ಲಿ ನಾನು ಸಣ್ಣ ರೈತರನ್ನೂ ಸೇರಿಸುತ್ತೇನೆ ) ಇನ್ನೊಂದು ಕಂಪನಿಯ ಅಡಿಯಾಳಾಗಿ ಮಾಡಿಬಿಡುವ ಸಂಭವವಿರುತ್ತೆ. ಇದರಿಂದ ನಾವು ನಮ್ಮತನವನ್ನು ಕಳಕೊಳ್ಳುವುದು ಸಾಧ್ಯ. ನಾವು ಈ ಸ್ಥಿತಿಯನ್ನು ಈಗಾಗಲೇ ತಲುಪಿಬಿಡುವ ಹಂತದಲ್ಲಿದ್ದೇವೆ. ಚನ್ನಪಟ್ಟಣದ ಬೊಂಬೆಗಳ ಜಾಗದಲ್ಲಿ Chinese ಆಟಿಕೆಗಳು ಬಂದಿವೆ, ಖಾದಿಯಂತೂ ಮಂಗಮಾಯವಾಗಿದೆ, ಇಳಕಲ್ ಸೀರೆಗಳು ಅಳಿವಿನಂಚಿನಲ್ಲಿವೆ. ಹೀಗೆ ನಾವೇ ಉದ್ಯೋಗಾವಕಾಶ ಕಲ್ಪಿಸಲು ನೂರಾರು ಗಾರ್ಮೆಂಟ್ ಫ್ಯಾಕ್ಟರಿಗಳನ್ನು ತೆಗೆದು ನಮ್ಮವೇ ಆದ ಅದ್ಭುತ ಕಲೆಯನ್ನು ತುಳಿದು ನಿರ್ನಾಮ ಮಾಡುತ್ತಿದ್ದೇವೆ. ಒಂದರ್ಥದಲ್ಲಿ ಸೃಜನಶೀಲತೆ ಸತ್ತ ಹೈಟೆಕ್ ಆಳುಗಳನ್ನು ತಯಾರು ಮಾಡುತ್ತಾ ಇದ್ದೇವೆ ಎಂದರೆ ಅತಿಶಯೋಕ್ತಿ ಅಲ್ಲ.
ನನ್ನ ಪ್ರಕಾರ ಇಂದಿನ ಜ್ವಲಂತ ಸಮಸ್ಯೆಗಳು ಇವು... ಆಹಾರ ಮತ್ತು ಸಾಮಾಜಿಕ ಭದ್ರತೆಯೇ ಹೊರತು ವಿಶ್ವಸಂಸ್ಥೆಯಲ್ಲೋ ಅಥವಾ ಇನ್ನೆಲ್ಲೋ ನಮ್ಮ ದೇಶಕ್ಕೆ ಎಷ್ಟು ಗೌರವ ಸಿಕ್ಕುತ್ತದೆ ಎನ್ನುವಂತಹದಲ್ಲ. ನಾನು ಅದರ ಬಗ್ಗೆ ಯೋಚನೆಯೇ ಮಾಡಬೇಡಿ ಎಂದೆನ್ನುತ್ತಿಲ್ಲ. ಇಂದು ಆ ವಿಚಾರಗಳಿಗೆ ಸಿಗುತ್ತಿರುವ priority ಆಹಾರ ಭದ್ರತೆಗೆ ಸಿಗಬೇಕು ಎಂದು ಹೇಳುತ್ತಿದ್ದೇನೆ ಅಷ್ಟೇ. ನಾವು ಇದನ್ನು ಸರಿಪಡಿಸಿಕೊಳ್ಳದೇ ದೇಶ-ವಿದೇಶಗಳ ಬಗ್ಗೆ ಮಾತನಾಡುತ್ತಾ ಇರುವುದು ನನಗೆ, ಹೊಲದೊಳಗೆ ನುಗ್ಗಿ ಕುಳಿತಿರುವ ಹುಲಿಯ ಬಗ್ಗೆ ಚಿಂತಿಸುವುದನ್ನು ಬಿಟ್ಟು ಹೊರಗಿನಿಂದ ಯಾರೋ ಬರುತ್ತಾರೆ ಎಂದು ಕಾಂಪೌಂಡ್ ಹಾಕಿಸಿಕೊಳ್ಳುತ್ತಿರುವಂತೆ ಇದೆ. ಧರ್ಮ, ಜಾತಿ, ವೈಚಾರಿಕ ಇಸಮ್ಮುಗಳಿಂದ polarize ಆಗಿದ್ದು ಸಾಕು. ಈಗ "ವ್ಯಕ್ತಿ ಭಕ್ತಿ" ಯಿಂದ ಬೇರೆ ಆಗಬೇಕೇ !