ಹಿಂದೆಂದೋ ಕನಸಲ್ಲಿ ಕಂಡ ನೆನಪು
ನೀ ಮುಷ್ಟಿಯಲ್ಲಷ್ಟು ಜೀವರಸ ಹಿಡಿದು
ಕಾಲದ ಗರ್ಭಸೀಳಿ ನಡೆದೆ,
ಬಟ್ಟಲಲ್ಲಿ ತಂದಿದ್ದು ಕೇವಲ ನೀರಲ್ಲ,ನೆನಪು
ಅಕ್ಕ-ಪಕ್ಕದ್ದನ್ನೂ ಸೇರಿಸಿ ರಂಗು-ರಂಗಾದೆ , ಮುಂದೆ ನಡೆದೆ
ಹಿಂದೆಂದೋ ಕನಸಲ್ಲಿ ಕಂಡ ನೆನಪು ...
ಏರಿ ಇಳಿದು ,ತಗ್ಗಲ್ಲಿ ಬಗ್ಗಿ,
ನುಸುಳಿ ಸಿಂಧೂ ತಟಕ್ಕೆ ನೀ ಅಂದು ಬಂದಿದ್ದೆ
ಅಂದು ನಿನ್ನ ನೋಡಿ
ಹುಡಿ ಹಾರಿಸಿದ್ದರು ಮಂದಿ,
ಇಂದೂ ಕೂಡ
ಮುಖ ಮೊರೆ ಉಜ್ಜಿ ತೊಳೆದು
ನಡು ಬಗ್ಗಿಸಿ , ಈಗಲೂ ನೋಡುವವರೇ
ಆ ನಿನ್ನ ಕುರುಹು ,
ಅಮ್ಮ ಹೇಳಿದ್ದು ನೆನಪಿದೆ ,
ನೀನು ಇತ್ತೀಚಿಗೆ ಕಾಣುವುದೇ ಇಲ್ಲವಂತೆ?
ಬಟ್ಟಲು ಬತ್ತಿ ಹೋಗಿದೆಯಂತೆ ?
ಅರೆ ... ನೀನಿಲ್ಲದೇ ಹೋದರೆ ಏನಾದೀತು ?
ಮುಖ ತೊಳೆಯುವುದಿಲ್ಲವಷ್ಟೆ .... ಸ್ನಾನ - ಸಂಧ್ಯಾವಂದನೆಗಳಿಲ್ಲ
ಹಸುರಿಲ್ಲ ... !!!
ನವಿರಿಲ್ಲ ... !!!
ಇವೆಲ್ಲದರೊಟ್ಟಿಗೆ ನೆನಪೂ ಇಲ್ಲ
ನೆನಪೂ ಇಲ್ಲ