Monday, 4 May 2020

ಜಾನಕಿ

ಮಣ್ಣುಟ್ಟು ಹುಟ್ಟು,
ಕರಡಿಗೆಯಲ್ಲಿ ಪಿಳಿ ಪಿಳಿ ಕಣ್ಬಿಟ್ಟ ಕಂದ ,
ಎತ್ತರೆತ್ತರದ ಮರಗಳ ನಡುವಿನ ಪುಟ್ಟ ಬಿಳಿಯ ಹೂವು ಜಾನಕಿ.

ಅಳುವಂತೆಯೂ ಇಲ್ಲ, ಅತ್ತರೆ ಕೇಳುವವರೂ ಇಲ್ಲ,
ಮಣ್ಣಲ್ಲಿ ಹೂತ ಬಂಗಾರದ ಡಬ್ಬಿಯಲ್ಲಿ
ಕೈಗಿವುಚಿ , ಉಸಿರ ಏರಿಳಿತ ಬಿಗಿಹಿಡಿದು ,
ಮೊಂಡು ಬಿದ್ದ ನೇಗಿಲ ತುದಿ ಒಡಲ ಗರ್ಭ ಸೀಳುವ ಸದ್ದನ್ನು ಕಾದು, ಕಿವಿ ನಿಮಿರಿಸಿ ,
ಹೊರಬಿದ್ದು , ಉಸಿರು ಹುಯ್ದು,
ಕಣ್ಣಾಲಿಗಳನ್ನು ತುಂಬಿಕೊಂಡು ಅತ್ತಾಗ ,
ಜನಕನ ಕಣ್ಣೂ ಒದ್ದೆ ಆಗಿದ್ದವು .

ವಾಸ ಸಾಗರದಾಚೆಯ ಮರದ ಪಂಜರದಲ್ಲಿ,
ಸುಟ್ಟಿಯೂ ಮುಟ್ಟದ ಪತಿಯ ಪ್ರತಿಷ್ಠೆ,
ಕಾಡಲ್ಲಿ ಅಲೆದು, ಹೊಟ್ಟೆಯಲ್ಲಿ ಹೆಪ್ಪುಗಟ್ಟಿದ ಕೂಸುಗಳ ಹೊರದಬ್ಬಿ,
ನಿಗಿ ನಿಗಿ ಹೊಳೆವ ಬದುಕ ಬಿಚ್ಚಿಟ್ಟು,
ದಣಪೆಯಾಚೆ ಚಿಗುರು ಹಸಿರ ಕಚ್ಚಿ ಎಳೆವ 
ಇಲ್ಲದ ಹೊಳಪಿನ ಸೆಳೆತ ಹೊದ್ದು ನಿಂತಳು.

ಒಗ್ಗರಣೆಯ ಕಮಟು ಮನೆಯಲ್ಲಾ ಹರಡಿ,
ಸಾಸಿವೆಯ ಚಿಟ - ಪಟ ಸದ್ದಿನ ನಡುವೆ
ಕಾರು, ರೈಲು, ಬಸ್ಸುಗಳ ಹ್ಞೂಕಾರ ಅಡಗಿಹೋಗಿ,
ಒಂದೊಂದು ಕೋಣೆಯ ಮೂಲೆಯಿಂದಲೂ
ಒಂದೊಂದು ಕೂದಲು ಬಿಳಿಯಾಗಿ, ಬೆನ್ನು ಬಾಗಿ,
ಮತ್ತೆ ಮಣ್ಣುಟ್ಟಳು ಸೀತೆ .

ಮಳೆಹನಿ ಬಿದ್ದು, ಮೊಳೆತು, ಗಿಡವಾಗಿ , ಮರವಾಗಿ,
ಎಲೆಯಾಗಿ, ಹಣ್ಣಾಗಿ,
ರೆಂಬೆ ಕೊಂಬೆ ಚಾಚಿ ಬೆಳೆದು,
ತಿದ್ದಿ ತೀಡಿದ ಬೈತಲೆಗಟ್ಟಿ ,
ನಾಲ್ಕಾರು ಹನಿ ನೀರು ಕೂದಲ ತುದಿಯಿಂದ ಇಳಿದು,
ಮುಂಬಾಗಿಲ ಹೊಸ್ತಿಲ ದಾಟಿ, ರೆಕ್ಕಿ ಬಿಚ್ಚಿ ಹಾರುವ ದಿನಕ್ಕೆ
ಎದೆಯ ಮೇಲೆ ಕೈ ಇಟ್ಟು
ಕಾದಿಹಳು ಸೀತೆ