Saturday, 31 October 2015

ಕನ್ನಡಕ್ಕೆ ಭವಿಷ್ಯವಿದೆಯೇ ? 

ಮತ್ತೆ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಹರಡಿಕೊಂಡಿದೆ. ನವೆಂಬರ್ ತಿಂಗಳು ಬಂದೊಡನೆಯೇ ನಮ್ಮೆಲ್ಲರ ಕನ್ನಡ ಪ್ರೇಮ ನೊರೆಹಾಲಾಗಿ ಉಕ್ಕಿ ಉಕ್ಕಿ ಹರಿಯಲಾರಂಭಿಸುತ್ತದೆ. ಎಲ್ಲರೂ, ಹಲವರು ಎಂದಿಟ್ಟುಕೊಳ್ಳೋಣ, ಕನ್ನಡ-ಕರ್ನಾಟಕದ ಹಿರಿಮೆ-ಗರಿಮೆಯ ದ್ಯೋತಕದ ಗರಿಗರಿ ಟೀ-ಶರ್ಟ್ ಗಳು, ಜೆರ್ಸಿ ಗಳನ್ನು ಮೈ ಮೇಲೆ ಹಾಕಿಕೊಂಡು ಅರೆಬರೆ ಕನ್ನಡ ಮಾತನಾಡುತ್ತಾ ತಿರುಗಾಡುತ್ತಾರೆ. ಇತ್ತೀಚಿಗೆ ಯೂಟ್ಯೂಬ್ ನಲ್ಲಿ ಏನೋ ಜಾಲಾಡುತ್ತಿದ್ದಾಗ ಯು. ಆರ್. ಅನಂತಮೂರ್ತಿಯವರ ಯಾವುದೋ ಸಂದರ್ಶನವೊಂದು ಸಿಕ್ಕಿತು. ಮೇಷ್ಟ್ರು ಹೇಳಿದ, " ಕನ್ನಡ ಇನ್ನೂ ಜೀವಂತವಾಗಿದೆ ಎಂದರೆ, ಅದಕ್ಕೆ ಕಾರಣರು ಓದು ಬರಹ ಗೊತ್ತಿಲ್ಲದ ಹಳ್ಳಿಯ ಅನಕ್ಷರಸ್ಥರು. ಓದು ಬರಹ ಬಂಡ ಬಹುತೇಕರು ಇಂಗ್ಲಿಷ್ ಗೆ ಮೊಹಿತರಾಗಿಬಿಡುತ್ತಾರೆ.  ", ಈ ಮಾತುಗಳು ಅತ್ಯಂತ ಸತ್ಯವೆಂದೆನಿಸಿತು. ನಾವೆಲ್ಲರೂ ಕನ್ನಡ ಪ್ರೇಮವನ್ನು ಫೇಸ್ಬುಕ್ ನ ಕಾಮೆಂಟ್ ಗೋ, ಅಥವ ನಮ್ಮ ಡ್ರೆಸ್ಸಿಂಗ್ ಗೋ ಸೀಮಿತವಾಗಿಸಿಬಿಡುತ್ತೇವೆ. ಒಮ್ಮೆ ಬೆಂಗಳೂರಿನಲ್ಲಿ ಸುತ್ತಾಡಿ ಬನ್ನಿ, ನಮ್ಮ ರಾಜಧಾನಿಯಲ್ಲೇ ನಮ್ಮ ಭಾಷೆಯ ಸ್ಥಿತಿ ಬಹಳ ಹತ್ತಿರದಿಂದ ಅರ್ಥವಾಗುತ್ತದೆ. " ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೋಳ್ , ಭಾವಿಸಿದ ಜನಪದಂ ... "ಎಂದು ಹಾಡಿ ಹೊಗಳಿಸಿಕೊಂಡಿದ್ದ ನಮ್ಮ ಭಾಷೆ- ಸಮೂಹಕ್ಕೆ ಇಂದು ಬಂದಿರುವ ಚಿಂತಾಜನಕ ಸ್ಥಿತಿ ನಮಗೆಲ್ಲ ಎಚ್ಚರಿಕೆಯ ಕರಘಂಟೆಯಲ್ಲದೆ ಮತ್ತೇನು?

ಇದಕ್ಕೆಲ್ಲಾ ಮೂಲಭೂತವಾದ ಪ್ರಶ್ನೆ, "ಭಾಷೆಯ ಬಗ್ಗೆ ಇಷ್ಟೊಂದು ತಲೆಕೆರೆದುಕೊಳ್ಳಬೇಕು ? ". ಭಾಷೆ ಕೇವಲ ಸಂವಹನ ಮಾಧ್ಯಮವಷ್ಟೇ ಅಲ್ಲ. ಅದು ನಮ್ಮ ಭಾವನೆಗಳ ಮೂರ್ತಸ್ವರೂಪ. ಅಮೂರ್ತವಾದ ಮನೋಲೋಕದ ತಲ್ಲಣಗಳನ್ನು ಘನೀಕರಿಸಿ ಕೊಡುವ ಕೆಲಸ ಭಾಷೆಯದು. ಆದ್ದರಿಂದ, ಅದು ನಮ್ಮ ಜೀವನದ ಬಹಳ ಮುಖ್ಯ ಅಂಗ. ಯಾವುದೇ ವಸ್ತು ನಮ್ಮ ಭಾವಪ್ರಪಂಚದ ಭಾಗವಾಗುವುದೋ , ಅದು ನಮ್ಮ ಜನಾಂಗದ ಸಾಂಸ್ಕೃತಿಕ ಮತ್ತು ಬೌದ್ಧಿಕ ವಿಕಾಸದಲ್ಲಿ ಬಹಳ ದೊಡ್ಡ ಪಾತ್ರವಹಿಸುತ್ತದೆ. ಆದ್ದರಿಂದ 'ಕನ್ನಡ' ನಮ್ಮ ಸಾಮಾಜಿಕ ಸ್ಥಿತ್ಯಂತರಗಳ ಮುಖ್ಯ ವಾಹಿನಿಯಾಗಿ ಹರಿದು ಸಾಂಸ್ಕೃತಿಕ ಶ್ರೀಮಂತಿಕೆಗೆ ಕಾರಣವಾಗಿದೆ. ಅದರೊಟ್ಟಿಗೆ ಭಾವಸೂಕ್ಷ್ಮತೆಯ ಒಂದು ಪ್ರತಿಬಿಂಬವೂ ಆಗಿದೆ. ಶ್ರೀ ತೇಜಸ್ವಿಯವರು ಮರಣವನ್ನಪ್ಪಿದಾಗ ನನಗೆ ಸುಮಾರು ೧೩-೧೪ ವರ್ಷ ವಯಸ್ಸಾಗಿರಬೇಕು. ಅವರ ಯಾವುದೇ ಕೃತಿಗಳನ್ನೂ ಓದಿಲ್ಲದ ನನಗೆ ಅವರ ಸಾವಿನ ದುಃಖ ಮತ್ತು ಬಿಸಿ ತಟ್ಟಿದ್ದು ನಿಜ. ಈ ರೀತಿಯ ಮನಸುಗಳನ್ನು ಬೆಸೆಯುವ ಕೆಲಸ ಭಾಷೆ ಮಾಡಬಲ್ಲುದು. ಪುಣೆಯಲ್ಲಿ ಎಲ್ಲಾದರೂ 'ಕನ್ನಡ' ಕೇಳಿದ ಕೂಡಲೇ ಕುವೆಂಪುರವರ " ಕನ್ನಡ ಏನೆ ಕಿವಿ ನಿಮಿರುವುದು ... " ಅಕ್ಷರಶಃ ಅನುಭವವಾಗುತ್ತದೆ. ಆದ್ದರಿಂದಲೇ ಭಾಷೆಯ ಬಗ್ಗೆ ನಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಇಡುವುದು ಬಹಳ ಅವಶ್ಯಕ. ಭಾರತ ಧರ್ಮ ಮತ್ತು ಜಾತಿಯ ಹೆಸರಲ್ಲಿ ಎಷ್ಟು ವಿವಿಧತೆಯನ್ನು ಸಂಪಾದಿಸಿದೆಯೋ ಭಾಷೆಯ ಹೆಸರಲ್ಲೂ ಅಷ್ಟೇ ವಿವಿಧತೆಯನ್ನು ಸಂಪಾದಿಸಿದೆ. ಅದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. 

ಭಾಷೆಯ ಉಳಿವನ್ನು ನೇರವಾಗಿ ಅದನ್ನು ಮಾತನಾಡುವ ಸಮೂಹ ನಿರ್ಧರಿಸುತ್ತದೆ. ಲಾಟಿನ್, ಪಾಳಿ, ಸಂಸ್ಕೃತ ಹೀಗೆ ಈ ಎಲ್ಲಾ ಭಾಷೆಗಳನ್ನು ಬಳಕೆಯಿಂದ ನಾಶಮಾಡಿದ್ದು ಅದನ್ನು ಮಾತನಾಡುತ್ತಿದ್ದ ಜನಸಮೂಹವೇ. ಹಾಗೆಯೇ ಯೂರೋಪಿನ ಸಣ್ಣ ಮೂಲೆಯಲ್ಲಿ ಪುಟ್ಟ ದೇಶದ ಭಾಷೆಯಾಗಿದ್ದ ಇಂಗ್ಲೀಷನ್ನು ಸಾರ್ವತ್ರಿಕವಾಗಿ ಬಳಸುವಂತಹದ್ದಾಗಿ ಮಾಡಿದ್ದೂ ಅದೇ ಜನತೆಯೇ. ಇಂದು ಇಂಗ್ಲೀಷ್ ವಿಶ್ವದ ಅತ್ಯಂತ ಹೆಚ್ಚು ಬಳಸುವ ಭಾಷೆಯಾಗಿ ಪರಿವರ್ತಿತವಾಗಿರುವುದಕ್ಕೆ ಮೂಲ ಕಾರಣ, ವಿಜ್ಞಾನವನ್ನು ಆ ಭಾಷೆಯಲ್ಲಿ ಗರ್ಭೀಕರಿಸಲು ಸಾಧ್ಯವಾಗಿದ್ದು. ಆಂಗ್ಲರು ಎಲ್ಲೆಲ್ಲಿ ತಮ್ಮ ತಳವೂರಿದರೋ, ಅಲ್ಲೆಲ್ಲಾ ತಮ್ಮ ಭಾಷೆಯ ಬೀಜವನ್ನು ಜನರ ಲೌಕಿಕಪ್ರಪಂಚದ ಬಿತ್ತಿದರು. ಇಂದು ಆ ಬೀಜವೇ ಮೊಳೆತು, ಹೆಮ್ಮರವಾಗಿ ಬೆಳೆದು ನಿಂತಿದೆ. ಕನ್ನಡವೂ ಇಷ್ಟೆಲ್ಲಾ ಸಾಧಿಸಿರುವ ಆಂಗ್ಲದಷ್ಟೇ ಸಮೃದ್ಧ ಭಾಷೆ. ಇದಕ್ಕೂ ಬೆಳೆಯುವ-ಬೆಸೆಯುವ ಶಕ್ತಿಯಿದೆ. ಆದರೆ, ಬಳಸದೆ ಇದ್ದಲ್ಲಿ ಯಾವ ಭಾಷೆಯೂ ಬೆಳೆಯಲು ಸಾಧ್ಯವಿಲ್ಲ. ಜೀವಂತ ಭಾಷೆಯ ಸಂಕೇತ, ಬಳಸುವಿಕೆ. ಸೋದರ ಭಾಷೆಗಳಿಂದ ಪದಪುಂಜಗಳನ್ನು ಎರವಲು ಪಡೆದುಕೊಳ್ಳುವಿಕೆ. ಆಗಲೇ ನಾನು ಹೇಳಿದಂತೆ, ಆಂಗ್ಲದಂತೆ ಕನ್ನಡದಲ್ಲಿಯೂ ವಿಜ್ಞಾನವನ್ನು ಅಭ್ಯಸಿಸುವ ಅವಕಾಶ ನಮ್ಮದಾಗಬೇಕು. ಆಗಲೇ ನಾವು ಪ್ರಗತಿಶೀಲ ಭಾಷೆಯ ವಾರಸುದಾರರಾಗಲು ಸಾಧ್ಯ. ಇದಕ್ಕೆ ಬಹಳ ಮುಖ್ಯ ಹೆಜ್ಜೆ, ಶಿಕ್ಷಣದ ಸಾರ್ವಜನೀಕರಣ. ಎಲ್ಲಾ ಮಕ್ಕಳೂ ಒಂದೇ ತೆರನಾದ ಶಾಲೆಯಲ್ಲಿ ಮಾತೃಭಾಷೆಯಲ್ಲಿ ಒಂದೇ ರೀತಿಯ ಶಿಕ್ಷಣ ಪಡೆಯಬೇಕು. ಸಂವಹನಕ್ಕೆ ಅಗತ್ಯವಾದ ಇಂಗ್ಲೀಷೂ ಪ್ರವಚನದ ಭಾಗವಾಗಬೇಕು. ಹೀಗಾದಲ್ಲಿ ಭಾಷೆಯನ್ನು ಕಟ್ಟುವ ಕಾರ್ಯ ಬಹಳ ತಳಮಟ್ಟ ದಲ್ಲಿ ಆಗುತ್ತದೆ. ಅದಕ್ಕೆ ಪೋಷಕವಾದ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಹೊಣೆ. ಇತ್ತೀಚೆಗಿನ ದಿನಗಳಲ್ಲಿ ನಗರವಾಸಿಗಳಾದವರು ಕರ್ತವ್ಯಭ್ರಷ್ಟರಾಗುತ್ತಿದ್ದಾರೆ. ಹಳ್ಳಿಗಳಲ್ಲಷ್ಟೇ ಕನ್ನಡ ಭಾಷೆ ತನ್ನ ಸೊಗಡನ್ನು ಉಳಿಸಿಕೊಂಡಿರುವುದು. ಏಕೆಂದರೆ ಅಲ್ಲಿನ ಜನಪದ ಇನ್ನೂ 'ಆಧುನಿಕ'ಗೊಂಡಿಲ್ಲ. ಆದ್ದರಿಂದಲೇ, ನಮಗೆ ಕಂಬಾರರು, ದೇವನೂರು, ಲಂಕೇಶ್ ರಂತಹ ಲೇಖಕರು ಸಿಕ್ಕಲು ಸಾಧ್ಯವಾಗಿದ್ದು. ತೇಜಸ್ವಿ, ಕಾಯ್ಕಿಣಿ, ಅನಂತಮೂರ್ತಿ  ಯವರಂತಹ  ಹಳ್ಳಿ ಮತ್ತು ಪಟ್ಟಣದ ನಡುವೆ ನಿಂತು ಕಥೆ ಹೆಣೆಯುವ ಪ್ರತಿಭಾಶಾಲಿಗಳು ನಮ್ಮ ಪಾಲಿಗೆ ದೊರಕಿದ್ದು! ಕನ್ನಡ ಭಾಷೆಯ ಮೂಲ ಮೂರ್ತತ್ವವನ್ನು ವಿರೂಪಗೊಳಿಸದೇ ಇಂದಿನ ಐಟಿ- ಬಿಟಿ ಕಾಲಕ್ಕೆ ತಕ್ಕಂತೆ ಅಲ್ಲಿ-ಇಲ್ಲಿ ಸಿಂಗರಿಸಿಕೊಂಡು ಮುಂದಕ್ಕೆ ಕರಕೊಂಡು ಹೋಗುವ ಹೊಣೆ ನಮ್ಮೆಲ್ಲರ ಮೇಲಿದೆ. ಆಡಂಬರದ ರಾಜ್ಯೋತ್ಸವದ ಆಚರಣೆಯ ಹಿಂದಿನ ಯೋಚನಾಲಹರಿಯನ್ನು ತಿದ್ದುವ ಸಂದರ್ಭವಿದು.  

ಮೇಷ್ಟ್ರು ಇದನ್ನು ಬಹಳ ಹಿಂದೆಯೇ ಹೇಳಿದ್ದರು. " ಕನ್ನಡ ಸಾಹಿತ್ಯಕ್ಕೆ ಉಜ್ವಲ ಭವಿಷ್ಯವಿದೆ. ಆದರೆ ಕನ್ನಡಕ್ಕಿದ್ದಾಗ ಮಾತ್ರ ... " ಎಂದು.