ನೇಹಾ ತನ್ನ ಕಾಲೇಜು ಮುಗಿಸಿ ಎಫ್. ಸಿ ರೋಡಿನ ಬಸ್ಟಾಪಿಗೆ ಬಂದು ನಿಂತುಕೊಂಡಾಗ ಸುಮಾರು ಹನ್ನೊಂದುವರೆ ಆಗಿದ್ದಿರಬೇಕು. ಸೂರ್ಯ ಆಗತಾನೆ ತನ್ನ ಕಿರಣದ ಪಂಪನ್ನು ಒತ್ತುತ್ತಾ ಬಿಗಿಯಾಗುತ್ತಾ ಸಾಗಿದ್ದ. ನಿನ್ನೆ ಸುರಿದಿದ್ದ ಸಂಜೆಯ ವರ್ಷಧಾರೆಗೆ ತನ್ನನ್ನು ಒಡ್ಡಿಕೊಂಡಿದ್ದ ರಸ್ತೆಯ ತುಂಬೆಲ್ಲಾ ಮರದ ಎಲೆಗಳು ಒತ್ತೊತ್ತಾಗಿ ಸರಿದು ನೀರು ಓಡಿದ ದಾರಿಯನ್ನು ತೋರಿಸುತ್ತಿತ್ತು. ನೇಹಾ ಕಾಲೇಜು ಬ್ಯಾಗನ್ನು ಬೆನ್ನಿನ ಒಂದು ಬದಿಗೆ ಸರಿಸಿ ಹೋಗುವ-ಬರುವ ವಾಹನಗಳತ್ತ ಕಣ್ಣುಹಾಯಿಸತೊಡಗಿದಳು. ಅವಳಿಗೆ ತಾನು ಏರಬೇಕೆಂದಿರುವ ಬಸ್ಸು ಬರುವ ಮುನ್ನ ಕಾರಲ್ಲಿ ಯಾರಾದರೂ ಬಂದು ತನ್ನಡೆಗೆ ಒಂದು ಓರೆ ನೋಟ ಬೀರಬಹುದೋ ಎನ್ನುವ ಆಸೆ . ಕಾರು ಬರಲೂಬಹುದು, ಅದರಿಂದೊಬ್ಬ ನವಯುವಕ ಇಳಿದು ಇವಳ ನಡು ಸುತ್ತಿ ಬಳಸಿ ಅನಾಮತ್ತಾಗಿ ಎತ್ತಿ ಅವನ ಬಿಸಿ ಅಪ್ಪುಗೆಯ ಮುದ ನೀಡಬಹುದು. ಕಾರಲ್ಲಿ ಕೂತು ಅವಳನ್ನು ನೇರ ಒಂದು long drive ಗೆಂದು ಲೋನವಲಾಕ್ಕೆ ಕರೆದುಕೊಂಡು ಹೋಗಬಹುದು. ಡ್ಯೂಕ್ ನೋಸ್ ನ ಮೇಲೆ ಇಬ್ಬರೂ ತಬ್ಬಿ ನಿಲ್ಲಬಹುದು, ಕೆಳಗಿನ ಕೆಫೆಯಲ್ಲಿ ಕಾಫಿ, ಜೊತೆಗೆ ಅರಳು ಹುರಿದಂತೆ ಅವನ ಮುಖ ನೋಡುತ್ತಾ ತಾನು ಹರಟುಬಹುದು. ಆಮೇಲೆ ಸಂಜೆಯ ಮಳೆ, ಒದ್ದೆ ಮಣ್ಣು .. ಕಣ್ಣ ಮುಂದೆ ಹುಯ್ದಾಡುವ ವೈಪರ್ ನ ನಡುವೆ ಕಾಣುವ, ಉದ್ದಕ್ಕೂ ತನ್ನನ್ನು ಮಳೆಗೆ ಒಡ್ಡಿಕೊಂಡು ನೆನೆಯುತ್ತಿರುವ ರಸ್ತೆ. ಪಕ್ಕದಲ್ಲಿರುವ 'ಅವನು' ಹಚ್ಚಿರುವ ಸಿಗರೇಟು, ಸಣ್ಣ ಹೊಗೆ. ಅವನ ತೆಕ್ಕೆಯಲ್ಲಿ ನಾನು... ' ಅಬ್ಬಾ ... !! ಎಂತಹ ಕಲ್ಪನೆ. ಆಗಲೇ ಅವನು ನನ್ನ ಬದುಕಿನ ಭಾಗವಾಗಿಬಿಟ್ಟನಲ್ಲ ! ' ಎಂದುಕೊಳ್ಳುತ್ತಾ ತಲೆ ಕೊಡವಿಕೊಂಡಳು ನೇಹಾ. ಹೊಸ ಕಾರೊಂದರಲ್ಲಿ ಒಬ್ಬನೇ ಹುಡುಗ ಸೆಟೆದು ಕೂತು ಓಡಿಸಿಕೊಂಡು ಹೋಗುವಾಗ ಆ ಕಾರಿನಲ್ಲಿ ... ಅವನ ಪಕ್ಕದಲ್ಲಿರುವ ಖಾಲಿ ಸೀಟಿನಲ್ಲಿ ನಾನಿರಬಾರದೇ ! ಎಂದು ಕಲ್ಪಿಸಿಕೊಳ್ಳುವುದು ಅವಳ ದಿನಚರಿಯ ಭಾಗವೇ ಆಗಿಬಿಟ್ಟಿದೆ. 'ಅವನು' ನೇಹಾಳ ಜೀವನದಲ್ಲಿ ಬರದೆಯೇ ಇರಬಹುದು. ಆದರೆ ಈ ಕಲ್ಪನೆಯಲ್ಲಿ ಸಿಗುವ ಸವಿಯನ್ನು ಮಾತ್ರ ನೇಹಾ ಬಿಡಲಾರಳು.
ನೇಹಾ ತನ್ನ ಬಾಲ್ಯ ಕಳೆದದ್ದು ಸಾಂಗ್ಲಿಯ ಹತ್ತಿರದ ಒಂದು ಪುಟ್ಟ ಹಳ್ಳಿಯಲ್ಲಿ. ಕೇವಲ ಎರಡು ವರ್ಷದ ಹಿಂದೆಯಷ್ಟೇ ಪುಣೆಗೆ ತಮ್ಮ ಸಾಮಾನು ಸರಂಜಾಮೆಲ್ಲವನ್ನು ಒಟ್ಟುಮಾಡಿಕೊಂಡು ಪುಟ್ಟದೊಂದು ಟಂಟಂನಲ್ಲಿ ಹೇರಿಕೊಂಡು ತನ್ನ ಊರನ್ನು ಬಿಟ್ಟು ಅಪ್ಪನ ಕೆಲಸದ ರಾಜಧಾನಿ ಪುಣೆಗೆ ಬಂದಿದ್ದರು. ಸಣ್ಣ ವಯಸ್ಸಿನಿಂದಲೂ ಶಹರದ ಬಗ್ಗೆ ವಿಶೇಷವಾದ ಸೆಳವು ನೇಹಾಳಿಗೆ ಇದ್ದೇ ಇತ್ತು. ವಾರಕ್ಕೊಮ್ಮೆಯೋ ಅಥವಾ ಹದಿನೈದು ದಿವಸಕ್ಕೊಮ್ಮೆಯೋ ಅಪ್ಪ ಮಂಡಕ್ಕಿ, ಭಜಿ, ಬರ್ಫಿಗಳನ್ನು ಪೇಪರಿನ ಪೊಟ್ಟಣದಲ್ಲಿ ಕಟ್ಟಿಕೊಂಡು ಬಂದಾಗ ಉರಿವ ದೀಪದ ಮುಂದೆ ಮೊಣಕೈ ಊರಿ ಅವನ ಪುಣೆಯ ಸಾಹಸಗಳನ್ನೆಲ್ಲಾ ಕೇಳುತ್ತಿದ್ದಳು. ಇವನ್ನೆಲ್ಲಾ ಕೇಳುತ್ತಾ ' ಅಪ್ಪನಿಗೆ ಒಂದು ವಿಶೇಷವಾದ ಶಕ್ತಿಯಿದೆ. ಆತ ನಮ್ಮೂರಿಗೆ ದಿವಸಕ್ಕೊಮ್ಮೆ ಡುರ್ರ್... ಎಂದು ಬರುವ ಬಸ್ಸಿನೊಳಗೆ ಕೂತು ಅದನ್ನು ಓಡಿಸುತ್ತಾನೆ. ಅದರ ಸ್ಟೇರಿಂಗ್ ಹಿಡಿದು ತಿರುಗಾಡಿಸುತ್ತಾ ಮುಂದೆ ಕಾಣುವ, ದೂರ ದೂರದವರೆಗೆ ಮೈಚಾಚಿ ಮಲಗಿರುವ ರಸ್ತೆಯ ಮೇಲೆ ಬಸ್ಸನ್ನು ಓಲಾಡಿಸುತ್ತಾ ಬಿಡುತ್ತಾನೆ ' ಎಂದು ಮನದಲ್ಲಿ ತಾನೂ ಅವನ ತೊಡೆಯ ಮೇಲೆ ಕೂತು ಬಸ್ಸು ಓಡಿಸುತ್ತಾ ದೀಪದ ಎದುರು ಕಣ್ಣೆವೆಗಳನ್ನು ಮುಚ್ಚಿ ನಿದ್ರೆ ಹೋಗುವಳು. ಆಮೇಲೆ ಅವಳನ್ನು ಅವಳ ಅಜ್ಜಿ ಅನಾಮತ್ತಾಗಿ ಎತ್ತಿ ಒಳಕೋಣೆಯಲ್ಲಿ ಮಲಗಿಸುವಳು.ತನ್ನೂರಿಗೆ ಇರುವುದು ಒಂದೇ ಬಸ್ಸು. ಅದೇ ಬಸ್ಸು ಮತ್ತೊಮ್ಮೆ ಸಂಜೆಗೆ ತಿರುಗಿ ಬರುವುದು. ಅಪ್ಪನ ಶಹರದಲ್ಲಿ ಈ ರೀತಿಯ ನೂರಾರು ಇವೆಯಂತೆ. ಎಂತಹ ಅದ್ಭುತ... !. ಅಪ್ಪನ ಶೆಹರಕ್ಕೆ ನೇಹಾಳ ಮಾನಸಿಕ ನಂಟು ಯಾವಾಗಲೂ ಬೆಸೆದುಕೊಂಡೇ ಇರುತ್ತಿತ್ತು. ಹಠ ಮಾಡಿ ಗಣೇಶನ ಹಬ್ಬಕ್ಕೆ ದಗಡೂ ಶೇಠನ ಗಣಪತಿ ಮಂದಿರಕ್ಕೆ ಬಂದು ಹೋಗಿದ್ದು ಬಿಟ್ಟರೆ ಆಮೇಲೆ ಎಂದೂ ಅಪ್ಪನ ಶಹರದ ದರ್ಶನ ಭಾಗ್ಯ ನೇಹಾಳಿಗೆ ಒದಗಿ ಬಂದಿರಲಿಲ್ಲ. ಬಂದಾಗ ತಿಂದಿದ್ದ ಬಿಸಿ ಬಿಸಿ ಮಿಸಾಲ್ ಪಾವ್, ಮಂಡಕ್ಕಿ, ಭಜಿಯನ್ನೂ, ಕೆಂಪು, ಹಳದಿ ಬಣ್ಣದ ಮಿಠಾಯಿಯನ್ನೂ ತಿಂಗಳುಗಟ್ಟಲೆ ನೆನಪಿನ ಬುತ್ತಿಯಲ್ಲಿ ಜೋಪಾನ ಮಾಡಿಟ್ಟಿದಳು ನೇಹಾ.
ಇಲ್ಲಿಗೆ ಬಂದಮೇಲಂತೂ ಕಡಲನ್ನು ಸೇರಲು ಹಾತೊರೆದ ನದಿ ಕಡಲು ಕಂಡಾಗ ನೊರೆ ನೊರೆದು ಉಕ್ಕುವಂತೆ ಪುಣೆಯನ್ನು ಇಡಿಯಾಗಿ ನುಂಗಿಬಿಡುವಂತೆ ಅಡ್ಡಾಡಿದ್ದಳು. ಅವಳ ಯಾವಾಗಲೂ ಗೊಣಗುತ್ತಾ " ಯಹಾ ಕಾ ಪಬ್ಲಿಕ್ ಸೆರ್ವಿಸ್ ಘಟಿಯಾ ಹೈ " ಬಸ್ಸು ಕಾಯುತ್ತ ಮೂಗು ಮುರಿಯುತ್ತಿದ್ದರೆ, ತನ್ನ ಆಸೆಯ ಕಣ್ಣಲ್ಲಿ ಶೆಹರದ ವಾಹನಗಳನ್ನೂ, ಅದರ ಸವಾರರನ್ನೂ ನೋಡುತ್ತಾ ನೇಹಾ ಮಂತ್ರಮುಗ್ಧಳಾಗುವಳು. ' ಇಷ್ಟೊಂದು ಬಸ್ಸುಗಳು ಓಡಾಡುವಾಗ ಇವರಿಗೆ ಬಸ್ಸೇ ಇಲ್ಲ ಎಂದು ಹೇಗನ್ನಿಸುವುದು ? ' ಎಂದು ಲೆಖ್ಖ ಹಾಕುತ್ತಿದಳು ನೇಹಾ. ಬೆಳಗ್ಗೆ ಎದ್ದು ಶಹರ ಓಡುವ ವೇಗಕ್ಕೆ ಆತುಕೊಳ್ಳುವ ಆತರದಲ್ಲಿ ಬೆಳ್ಳಂಬೆಳಗ್ಗೆ ಕಾತ್ರಾಜ್ ಇಂದ ತನ್ನ ಕಾಲೇಜಿನವರೆಗೂ ಬಸ್ಸಿನಲ್ಲಿ ನೇತುಹಾಕಿಕೊಂಡು ಬರುವುದು -ಕಾಲೇಜು ಹಿಂದು ಮುಂದೆಲ್ಲಾ ಕಲ್ಲು ಬೆಂಚುಗಳ ಮೇಲೆ ಕೂತು ಒಬ್ಬರನ್ನೊಬ್ಬರು ತಬ್ಬಿ ಪ್ರಣಯಿಸುವ ಪ್ರೇಮ ಪಕ್ಷಿಗಳ ಕಲರವ ಕೇಳುವುದು ನೇಹಾಳ ದಿನಚರಿಯೇ ಆಗಿಹೋಗಿದೆ. ಒಂದೆರಡು ದಿವಸ ಸ್ವರ್ಗ ಸದೃಶವಾಗಿ ಕಂಡ ಅಪ್ಪನ ಬಸ್ಸುಗಳು, ಬರಬರುತ್ತಾ ನೇಹಾಳಿಗೆ ಬಡವನ ವಾಹನ ಎಂದು ಅನ್ನಿಸತೊಡಗಿತ್ತು. ಶಿವಾಜಿನಗರದ ಸರ್ಕಲ್ ನಲ್ಲೋ ಅಥವಾ ಸ್ವಾರ್ಗೆಟ್ ನ ಸಿಗ್ನಲ್ ನಲ್ಲೋ ಬಸ್ಸು ಟ್ರಾಫಿಕ್ ಜಾಮಿನಲ್ಲಿ ಸಿಕ್ಕಿ ಎದುರು ನಿಂತ ನೂರಾರು ವಾಹನಗಳ ಮಧ್ಯೆ ಕಣ್ಣು ಮಿಟಿಕಿಸುತ್ತಾ, ಗುರುಗುಡುತ್ತಾ ನಿಂತಾಗ, ಅದರ ಗರ್ಭದಲ್ಲಿ ಬೆವರು ವಾಸನೆಯ ಕಂಕುಳುಗಳ ಮಧ್ಯೆ ನಿಂತ ನೇಹಾ ತನ್ನ ಕನಸಿನ ರಾಜವಾಹನವೆಂದು ನಂಬಿಕೊಂಡಿದ್ದ ಬಸ್ಸುಗಳ ಮೇಲಿನ ಆರ್ಷ ಪ್ರೇಮವನ್ನು ಹೂರಹಾಕತೊಡಗಿದ್ದಳು. ಆಸೆಯಾಗಿದ್ದ ಬಸ್ಸಿನ ಪ್ರಯಾಣ ಬರಬರುತ್ತಾ ಕೇವಲ ಯಾಂತ್ರಿಕವಾಗುತ್ತಾ ಹೋಯಿತು. ಸುಡುಬಿಸಿಲಿಗೆ ಹಿಡಿದ ಕನ್ನಡಿಯಂತೆ ತನ್ನ ಮನೆಯೂ - ವಾಹನವೂ ಏಕತ್ರವಾಗಿ ನೇಹಾಳು ನಲುಗಲು ಆರಂಭಿಸಿದಳು.
ತನ್ನೊಂದಿಗೆ ಕ್ಲಾಸಿನಲ್ಲಿ ಪಕ್ಕದಲ್ಲಿ ಕೂತು ಮೊಣಕೈಯೂರಿ black boardನತ್ತ ಕ್ಷೀಣ ದೃಷ್ಟಿ ಹರಿಸುವ ತನ್ನ ಸ್ನೇಹಿತೆಯರೆಲ್ಲರೂ, ಕಾಲೇಜು ಆವರಣಕ್ಕೆ ಬಿದ್ದೊಡನೆಯೇ ಜೀನ್ಸ್ ತೊಟ್ಟು ಕನ್ನಡಕ ಏರಿಸಿ ಮೀಸೆ ತುದಿಯಲ್ಲಿ ಸಿಗರೇಟು ಸಿಕ್ಕಿಸಿಕೊಳ್ಳುವ ಹುಡುಗರೊಡನೆ ಕಣ್ಣು ಮಿಟಿಕಿಸುತ್ತಾ ಬೈಕಿನಲ್ಲಿ ಹತ್ತಿಕೂತು ಆಂಟಿಕೊಳ್ಳುವಾಗ ನೇಹಾಳಿಗೆ ' ನಂಗೂ ಹೀಗೊಬ್ಬನೇಕಿಲ್ಲಾ ... ? ' ಎಂದು ಕೈಹಿಸುಕಿಕೊಳ್ಳುವುದಿದೆ. ಹೀಗೆಲ್ಲಾ ಅಂದುಕೊಂಡಾಗ ತಾನು ಚಿಕ್ಕ ವಯಸ್ಸಿನಲ್ಲಿ ಅಜ್ಜಿಯ ಹತ್ತಿರ, ಅವಳ ತೊಡೆಯ ಮೇಲೆ ಕೂತು, ತಲೆಯನ್ನು ಅವಳ ಭುಜಕ್ಕೆ ಆನಿಸಿ ಕೇಳುತ್ತಿದ್ದ ರಾಜಕುಮಾರನ ಕುದುರೆ ಸವಾರಿಯ ಕಥೆ ನೆನಪಿಸಿಕೊಳ್ಳುತ್ತಾಳೆ. .. ಹಿಗ್ಗುತ್ತಾಳೆ. ' ನನ್ನ ಹುಡುಗ ಕಾರು... ಕಾರಿನಲ್ಲೇ ಓಡಾಡುವವನಾಗಿರಬೇಕು. ಇಲ್ಲದಿದ್ದರೆ ಮತ್ತದೇ ಚಾಳು , ಅದೇ ಬಸ್ಸು ... ' ಎಂದುಕೊಳ್ಳುತ್ತಾ ತನ್ನೊಳಗೇ ಕನಸಿನ ಮನೆ ಕಟ್ಟುತ್ತಾಳೆ.
ಗುರ್ರ್ ... ಎಂದು ಶಬ್ಧ ಹೊರಡಿಸುತ್ತಾ ಬಂದ ಬಸ್ಸನ್ನೇರಿ ಕುಳಿತಳು ನೇಹಾ. ಇಂದು ಬಹಳ ಬೇಗನೇ ಕಾಲೇಜಿನಿಂದ ಹೊರಟದ್ದರಿಂದ ಅಪವೇಳೆಯಲ್ಲಿ ಅಷ್ಟು ಜನಸಂದಣಿ ಇಲ್ಲದೇ ಬಸ್ಸು ಖಾಲಿಯಾಗಿತ್ತು.ಯಾವತ್ತೂ ಬೆಳಗ್ಗಿನ ಪೂಜಾ ಮಂತ್ರದಂತೆ ಕೇಳುವ ಕಂಡಕ್ಟರಿನ ' ಪುಡೆ ಸಲಾ ..ಸರ್ಕಾ ಪುಡೆ ' ಗಳು, ಇಳಿಯುವ ಸ್ಟಾಪನ್ನು ಗುರ್ತಿಸಿಕೊಡುವ ಘಂಟಾನಾದಗಳು ಇಂದು ಕೇಳಿಸುತ್ತಿಲ್ಲ. ನೇಹಾ ಕಾತ್ರಾಜಿಗೊಂದು ಟಿಕೇಟು ಪಡೆದು ಕಿಟಕಿಯಿಂದ ತನ್ನ ಯೋಚನಾಲಹರಿಯ ಬಲೆ ಹೊರಚಾಚಿ ಕುಳಿತಳು. ಮಂದವಾಗಿ ಚಲಿಸುತ್ತಾ ಬಸ್ಸು ಲಕ್ಷ್ಮಿ ನಾರಾಯಣದ ಸರ್ಕಲ್ ಬಳಿ ಸಿಗ್ನಲ್ ಲೈಟ್ ನಲ್ಲಿ ನಿಂತುಕೊಂಡಿತು. ನೇಹಾಳ ದೃಷ್ಟಿಬಸ್ಸಿನ ಪಕ್ಕದಲ್ಲೇ ನಿಂತಿದ್ದ ಕಾರಿನೊಳಗೆ ಹರಿಯಿತು. ಒತ್ತೊತ್ತಾಗಿ ಕುಳಿತ ಜೋಡಿ ನೋಡಿ ನೇಹಾ ಆಕರ್ಷಿತಳಾದಳು. ಇನ್ನಷ್ಟು ಅವರನ್ನೇ ನೋಡುತ್ತಾ ಕುಳಿತಿರಬೇಕೆನ್ನುವಷ್ಟು ... Sunday hangout ಎನ್ನುವ ಮಿರಿ ಮಿರಿ ಹೆಸರಿನ ಸಂಜೆ ತಿರುಗಾಟಕ್ಕೆ F C ರೋಡಲ್ಲಿ ನೇಹಾ, ಹುಡುಗಿಯ ಸೊಂಟದ ಮೇಲೊಂದು ಕೈ ಬಳಸಿ ಇನ್ನೊಂದು ಕೈಲಿ ಕೆಂಪು ಬಣ್ಣದಿ ಚಿಮಣಿಯಂತೆ ಹೊಗೆಯುಗುಳುವ ಸಿಗರೇಟು ಸಿಕ್ಕಿಸಿ ಕಾರಣವಿಲ್ಲದೆ ನಗುವಂತಹ ಹುಡುಗರನ್ನು ನೋಡಿ , ' ಅವಳ' ಜಾಗದಲ್ಲಿ ತನ್ನನ್ನು ಕಲ್ಪಿಸಿಕೊಳ್ಳುತ್ತಿದ್ದಳು. ನೀಳ ಕಾಲುಗಳನ್ನು ರಾತ್ರಿಯ ಝಗಮಗದ ಬೆಳಕಿನಲ್ಲಿ ಆಡಿಸುತ್ತಾ, ನಿಕ್ಕರ್ ತೊಟ್ಟು ಮುಖದ ಮೇಲೆ ಬೀಳುವ ತಿಳಿ ಕೂದಲನ್ನು ಎಲೆ ಎಳೆದು ಸರಿಸಿಕೊಳ್ಳುವ ಪುಣೆಯ ಸುಂದರಿಯರಂತೆ ತಾನೂ ಆಗಬೇಕೆಂದು ನೇಹಾ ಎಷ್ಟೋ ಬಾರಿ ಪ್ರಯತ್ನಿಸಿದ್ದಿದೆ. ದೂರದ ಕೋರೆಗಾವ್ ಪಾರ್ಕ್ ನ ಬೀದಿಗಳಲ್ಲಿ ಅಡ್ಡಾಡಿ Benneton ನ ಮಳಿಗೆಗಳಿಗೆ ನುಗ್ಗಿ ಚಡ್ಡಿಯ ದರ ನೋಡಿ ಇಷ್ಟೊಂದನ್ನು ಅಪ್ಪನ ತಿಂಗಳ ಸಂಬಳವನ್ನು ತೆತ್ತೂ ತೆಗೆದುಕೊಳ್ಳಲಾರೆ ಎಂದು ಅರೆಬರೆ ಮನಸಲ್ಲಿ ಹೊರಬಂದದ್ದಿದೆ. ' ಅಪ್ಪ ನನಗೂ ಒಬ್ಬ ಹುಡುಗನನ್ನು ನೋಡಿಯೇ ಇರುತ್ತಾನೆ!ಗಾಡಿಯ ಓನರ್ ಅಲ್ಲದಿದ್ದರೇನಂತೆ, ಡ್ರೈವರ್ ಆದರೂ ಆಗಿದ್ದಾನು. ಕಾರಿನ ಒಳಗೆ ಇವರಿಬ್ಬರು ಕೂತ ಹಾಗೆ ನಾವೂ ಕೂತು ಲೋನಾವಲಕ್ಕೆ ಹೋಗಬಹುದು !' ಎಂದುಕೊಂಡಳು.
ನೇಹಾ ಕಾತ್ರಾಜ್ ಬಸ್ ಸ್ಟ್ಯಾಂಡಿನಲ್ಲಿ ಇಳಿದು ಅಲ್ಲಿಂದ ಅರ್ಧ ಮೇಲಿರುವ ತನ್ನ ಮನೆಗೆ ಹೆಜ್ಜೆ ಹಾಕತೊಡಗಿದಳು. ಮಧ್ಯಾಹ್ನದ ಸೂರ್ಯನನ್ನು ಮೋಡ ತನ್ನ ಹೊದಿಕೆಯ ಒಳಗೆ ಎಳೆದುಕೊಂಡು ಬಿಗಿಗೊಳಿಸಿಕೊಳ್ಳುತ್ತಿದ್ದ. ಬೀಸುವ ಗಾಳಿಯಲ್ಲಿ ತೇವದ ಅಂಶ ನೇಹಾಳ ಮೂಗಿಗೆ ಬಡಿಯಿತು. ' ಅಯ್ಯೋ .. ಮಳೆ ಬಂದೀತು ! ' ಎಂದ್ದುಕೊಳ್ಳುತ್ತಾ ಹೆಜ್ಜೆಯ ವೇಗ ಹೆಚ್ಚಿಸಿದಳು ನೇಹಾ. ಮೆನೆಯ ತಿರುವು ಬಂದೊಡನೆಯೇ ಜೋರು ಜೋರಾದ ಆರ್ತನಾದ ಕಿವಿಗೆ ಬೀಳತೊಡಗಿತು. ಅಜ್ಜಿಯ ಧ್ವನಿ ಕೇಳುತ್ತಲೇ ನೇಹಾಳ ಎದೆ ಧಸಕ್ಕೆಂದಿತು. ಅವಳ ವೇಗ ಕಮ್ಮಿಯಾಯಿತು. ತನ್ನ ಮನದೊಳಗೆ ಎದ್ದ ಸಾವಿರ ಮುಖಬಿಂಬಗಳು ನಗುತ್ತ, ಅಳುತ್ತಾ ನೇಹಾಳ ತಲೆಯನ್ನು ತುಂಬಿಕೊಂಡವು. ' ಅಪ್ಪನಿಗೆ ಏನಾದರೂ ಆಗಿದೆಯೇ ?... ನಿನ್ನೆ ಏಕೆ ಅವನು ಮನೆಗೆ ಬಂದಿರಲಿಲ್ಲ? ಬಸ್ಸಿಗೇನಾದ್ರೂ ಆಕ್ಸಿಡೆಂಟ್ ? .. ಛೇ ಛೇ .. ' ಎಂದುಕೊಳ್ಳುತ್ತಾ ಮನೆಯ ಕಡೆಗೆ ಹೆಜ್ಜೆ ಕಿತ್ತಿಡ ತೊಡಗಿದಳು. ಇವಳನ್ನು ಕಂಡೊಡನೆಯೇ ' ಅಯ್ಯೋ ... ಈ ಹಾಳಾದ ಪಾಪಿ ವಯಸ್ಸಿಗೆ ಬಂದ ಮಗಳು ಇರುವಾಗ ಇನ್ನೊಬ್ಬಳ ಹಿಂದೆ ಓಡಿ ಹೋದ್ನಲ್ಲಾ .. ಇವಳ ಗತಿಯೇನು ? ತಾಯಿನೂ ಇಲ್ಲದ ತಬ್ಬಲಿನ ನಾನು ಹೇಗಪ್ಪಾ ಸಾಕ್ಲಿ ? ಇವಳ ಮದುವೆ ಹೇಗೆ ಮಾಡ್ಲಿ !! ' ಎಂದು ಅಜ್ಜಿ ಜೋರಾಗಿ ಕಿರುಚಿ ಕೊಂಡಳು. ಇದು ಕೇಳಿದೊಡನೆ ನೇಹಾಳ ಮನದಲ್ಲಿ ಎದ್ದಿದ್ದ ಒಂದಷ್ಟು ಸಂಶಯಗಳಿಗೆ ತೆರೆ ಬಿದ್ದಿತಾದರೂ ಅವಳಿಗೆ ಅಳುವ, ನಗುವ ಯಾವುದೇ ಭಾವನೆ ಉಂಟಾಗಲಿಲ್ಲ. ' ನನಗೆ ಅನ್ನಿಸಿದ ಹಾಗೆ ಅಪ್ಪನಿಗೂ ತನಗೊಂದು ಜೋಡಿ ಬೇಕು ಅನ್ನಿಸಿತೇ ? ' ಎಂದುಕೊಳ್ಳುತ್ತಾ ನಿಧಾನ ಬಂದು ಅಜ್ಜಿಯ ತೊಡೆಯ ಮೇಲೆ ತಲೆ ಊರಿದಳು. ಅವಳ ತಲೆಯ ಮೇಲೆ ಹನಿಯುತ್ತಾ ಮಳೆ ತನ್ನ ಆಟ ಆರಂಭಿಸಿತು.