Wednesday 20 January 2016

ಆಕ್ರಮಣ

Readoo ವಿನಲ್ಲಿ ಪ್ರಕಟಗೊಂಡ ನನ್ನ ಸಣ್ಣಕಥೆ ...

ಈ ಕಥೆ ಮೈತ್ರಿ ಪ್ರಕಾಶನದ "ಧ್ವನಿಗಳು" ಕಥಾಸಂಕಲನದಲ್ಲಿ ಪ್ರಕಟಗೊಂಡಿದೆ.

ಸಂಜೆ ೪ ಘಂಟೆ ಆಗುತ್ತಿದೆ. ಮೇಜಿನ ಮೇಲಿನ mug ನಲ್ಲಿ ಹಬೆಯಾಡುತ್ತಾ ಹೊರಗಿನ ತೇವಕ್ಕೆ ತನ್ನನ್ನು ಒಡ್ಡಿಕೊಂಡು ಬೆಚ್ಚಗೆ ಕೂತಿರುವ ಕಾಫಿಯಿದೆ. ನನ್ನ ಕುರ್ಚಿಯ ಎಡ ಮಗ್ಗುಲಲ್ಲೇ ರೂಮಿನ ಕಿಟಕಿ. ಸಣ್ಣಗೆ ಜಿನುಗುವ ಜಡಿಮಳೆಯಲ್ಲಿ ನಾಲ್ಕಾರು ಕೊಡೆಗಳು ಮಂದವಾಗಿ ಚಲಿಸುತ್ತಿವೆ. ರೂಮಿನಲ್ಲಿ ಕುಳಿತು , ನೊರೆ-ನೊರೆ ಕಾಫಿ ಹೀರುತ್ತಾ ಹೊರಗಿನ ಮಳೆಯನ್ನು ನೋಡುವುದು ಎಷ್ಟು ಆಪ್ಯಾಯಮಾನ ಅಲ್ಲವೇ !!. 'ಅಂದಹಾಗೆ ಮೊಬೈಲ್ ಎಲ್ಲಿ ? 'ಎಂದುಕೊಂಡು ಮೇಜನ್ನು ತಡಕಾಡಲು ಆರಂಭಿಸಿದೆ. ಮೇಜು ಅರ್ಧ ತಿಂದು , ಅರೆ ನಗ್ನಾವಸ್ಥೆಯಲ್ಲಿರುವ ಬಿಸ್ಕೆಟಿನ ಪ್ಯಾಕೆಟ್, ಅಮ್ಮ ಹಾಸನದಿಂದ 'ಯಾರಿಗೂ ಕೊಡದೇ ನೀನೊಬ್ಬನೇ ತಿನ್ನು ' ಎಂದು ಹೇಳಿ ಕಳುಹಿಸಿದರೂ ನನ್ನೊಬ್ಬನನ್ನು ಬಿಟ್ಟು ಹಾಸ್ಟೆಲ್ಲಿನ ಇತರರೆಲ್ಲರೂ ತಿಂದು ಬಿಟ್ಟಿರುವ ಚಕ್ಲಿಯ ಕವರ್, ಓದಲೆಂದು ತೆಗೆದಿಟ್ಟುಕೊಂಡು, ಅರ್ಧಮರ್ಧ ಓದಿ 'ಇನ್ನಷ್ಟು ಓದಬೇಕು ... 'ಎಂದುಕೊಳ್ಳುತ್ತಾ bookmark ಹಾಕಿ ಪ್ರತಿದಿನ ಪೇರಿಸಿಡುವ ಅನಂತಮೂರ್ತಿ, ಚಿತ್ತಾಲ, ತೇಜಸ್ವಿ ಯವರ ಪುಸ್ತಕಗಳು, ತೊಳೆಯದೇ ಉಳಿದುಕೊಂಡಿರುವ ಕಾಫಿ ಕಪ್ ಗಳು, ಅರ್ಧ ಸೇದಿ ಬಿಟ್ಟ ಸಿಗರೇಟು ಚೂರುಗಳಿಂದ ಒಂದಿಂಚೂ ಜಾಗ ಸಿಗದಂತೆ ತುಂಬಿ ಹೋಗಿತ್ತು. ಸಮುದ್ರದ ಆಳದಲ್ಲಿ ಮುತ್ತನ್ನು ಹುಡುಕುವಂತೆ,ಮೇಜಿನ ಮೇಲೆ ವಿರಾಜಮಾನವಾಗಿ ಕುಳಿತಿದ್ದ ರಾಶಿಯ ಗರ್ಭವನ್ನು ಭೇದಿಸಲು ಅಣಿಯಾದೆ. " Needle in a haystack " ಅಂತರಾಲ್ಲ ಹಾಗೆ. ಈ ಎಲ್ಲದರ ನಡುವೆ ಕೈಗೆ ಮೊಬೈಲ್ ಸಿಕ್ಕ ಸಂತೋಷಕ್ಕೆಂದು ಇನ್ನೊಂದು ಸಿಪ್ ಹೀರಿ, ಮೂಗಿನ ಮೇಲೆ ಕನ್ನಡಕ ಸಿಕ್ಕಿಸಿ ' ಕ್ಷಮಾಳ messsage ಏನಾದರೂ ಇದಿಯೇ ? ' ಎಂದು ಹುಡುಕತೊಡಗಿದೆ.

' ಗೋವಾ ಕ್ಕೆ ತಲುಪಿರಬಹುದೇ ? ಒಂದು call ಮಾಡಿ ಹೋಗಬಹುದಿತ್ತು ಅಲ್ವಾ ? ' ಎಂದುಕೊಂಡು ನಿರ್ವಿಣ್ಣನಾದೆ. ಸಿಟ್ಟಿಗೋ ಏನೋ ಮೊಬೈಲ್ ಕುಕ್ಕಿ ಬಿಡೋಣ ಎಂದು ಮನಸ್ಸಾಯಿತು. ' ಅವಳ ಬಗ್ಗೆ ಹೆಚ್ಚು ಯೋಚಿಸಬಾರದು ಎಂದುಕೊಂಡರೂ ಎಂತೆಂತಹ ಯೋಚನೆಗಳು ತಲೆಯೊಳಗೆ ಈಜಾಡುತ್ತವೆ ' ಎಂದುಕೊಂಡು ಹಾಸಿಗೆಯ ಮೇಲೆ ಮೊಬೈಲ್ ಎಸೆದೆ. ಅಪ್ರಯತ್ನವಾಗಿ ಕೈ ಕಾಫಿಯಾ mug ಹುಡುಕಿತು. ಕಾಫಿಯನ್ನು ಹೀರುತ್ತಲೇ ಕಿಟಕಿಯ ಬಳಿ ಬಂದೆ. ಹೊರಗೆ ತಣ್ಣನೆಯ ಮಳೆ. ಜಿನುಗು ... ಸೋನೆ ... ಎಂತಹ ಕಲ್ಲು ಮನಸ್ಸನ್ನೂ ಚಿಗುರಿಸಬಲ್ಲ ಮಾಂತ್ರಿಕ ಮಳೆ. ದೂರದಲ್ಲಿ ಜೋಡಿಯೊಂದು ಒಂದೇ ಕೊಡೆಯ ಅಡಿಯಲ್ಲಿ ನಡೆದು ಬರುತ್ತಿರುವುದು ಕಾಣಿಸಿತು. ನಲ್ಲೆಯ ಮೃದು ನಡುವನ್ನು ಬಳಸಿ ಗಟ್ಟಿ ಒತ್ತಿ ಹಿಡಿದು ಪ್ರಿಯಕರ ಮಳೆಯ ಹನಿಯನ್ನು ಅವಳ ಮೈಗೆ ಸೊಕಗೊಡದಂತೆ ಮಾಡಲು ಸಾಹಸ ಪಡುತ್ತಿದ್ದ. ಆ ಕ್ರಿಯೆಯಲ್ಲೇ ತನ್ನ ದೇಹದ ಬೆಚ್ಚಗಿನ ಸ್ಪರ್ಶವನ್ನೂ ಅವಳಿಗೆ ಈಯುತ್ತಿದ್ದ. ನೋಡ ನೋಡುತ್ತಲೇ , ' ಹೀಗೆಯೇ ಕ್ಷಮಾಳೂ ದಾಸ್ ನ ತೋಳಿನ ಬೆಚ್ಚಗಿನ ಕಾವಿಗೆ ಹಾತೊರೆಯುತ್ತಿದ್ದಳೇ ? ಈಗ ಗೋವಾದಲ್ಲಿ, ಸಮುದ್ರದ ಅಂಚಿನಲ್ಲಿ, ಮರಳುದಂಡೆಯ ಮೇಲೆ ಒಬ್ಬರನ್ನೊಬ್ಬರು ಬಾಚಿ ತಬ್ಬಿ ಮಳಲ ಮೇಲೆ ನಡೆಯುತ್ತಾ, ಆಡುತ್ತಾ , ಹಾಡುತ್ತಾ ( ಹೌದಲ್ಲಾ ... ಅವಳು ಎಂಥ ಚೆಂದ ಹಾಡುತ್ತಾಳೆ ) ನಲಿದಾಡುತ್ತಿರಬಹುದೇ ? ' ಎಂದುಕೊಳ್ಳುತ್ತ ಇನ್ನೊಂದು ಸಿಪ್ಪನ್ನು ಉದರಕ್ಕೆ ಸೇರಿಸಿಕೊಂಡೆ. ಕೈಗೆ ಸಿಕ್ಕ ಸಿಗರೇಟು ಹಚ್ಚಿ ವೃತ್ತ-ವೃತ್ತಾಕಾರದ ಹೊಗೆ ಉಗುಳತೊಡಗಿದೆ. ಕಾಫಿಯ ಹಬೆಯ ಜೊತೆಗೆ ಇದೂ ಸೇರಿ ಒಂದು ವಿಶೇಷ ಮಬ್ಬು ಮಬ್ಬು ವಾತಾವರಣ ಸೃಷ್ಟಿಸಿತು. ಚಳಿಗೆ ಇದೂ ಆಪ್ಯಾಯಮಾನ ಎನ್ನಿಸದೇ ಇರದು.

ನಲಿದಾಡಿಕೊಂಡು ಬರುತಿದ್ದ ಜೋಡಿ ಹಾಸ್ಟಿಲ್ಲಿಗೆ ಹತ್ತಿರಾಗುತಿತ್ತು. ಅವಳು ಈ boys' ಹಾಸ್ಟೆಲ್ ಒಳಗೆ ಬರುವಂತಿಲ್ಲ. ಇನ್ನು ಸ್ವಲ್ಪವೇ ಕ್ಷಣಗಳಲ್ಲಿ ಅವರಿಬ್ಬರು ಬೇರೆಯಾಗಬೇಕು... ಬೇರೆಯಾಗುತ್ತಾರೆ. ಅವಳು ಇವನ ಅಪ್ಪುಗೆಯ ಬಿಸಿ ನೆನಪುಗಳಿಂದ ಮೀಯಿಸಿಕೊಳ್ಳುತ್ತಾ ಇಲ್ಲಿಂದ ಹೊರಡುತ್ತಾಳೆ. ಇವನೂ ಅಷ್ಟೇ ಹಿತವಾದ ಭಾವವನ್ನು ತೊಟ್ಟಿಕ್ಕಿಸಿಕೊಳ್ಳುತ್ತಾ ತನ್ನ ರೂಮಿಗೆ ಹೋಗುತ್ತಾನೆ. ಮತ್ತೆ ಇಬ್ಬರೂ ರಾತ್ರಿಯ ಊಟಕ್ಕೆ ಸಿಗಬಹುದು. ಅಲ್ಲಿಯವರೆಗೂ ಮೆಸೇಜ್ ಗಳಲ್ಲಿನ ಪ್ರೇಮನಿವೇದನೆ ಇದ್ದೇ ಇದೆಯಲ್ಲಾ !!. ಕಿಟಕಿಯಿಂದ ದೃಷ್ಟಿ ತೆಗೆದು ಮಂಚದ ಮೇಲೆ ಕುಳಿತೆ.   ' ಗೋವಾದಿಂದ ಕ್ಷಮಾ ಹೊರಟು ಬರುವಾಗ ಅವಳಿಗೂ ಇದೇ ಭಾವ ಕಾಡಬಹುದೇ ? ಅವಳೂ ದಾಸ್ ನ ಅಪ್ಪುಗೆಯ ನೆನಪನ್ನು ಹೊತ್ತು ಮರಳಬಹುದೇ ? ...  ಛೆ!! ಎಂತಹ ಯೋಚನೆಗಳು ನನಗೆ .!' ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಅಡಿಗರ ' ಮೌನ ತಬ್ಬಿತು ನೆಲವ ... ' ಕವಿತೆ ಕೇಳಲು ಆರಂಭಿಸಿದೆ.

ಕ್ಷಮಾ ... ಎಂತಹ ಅದ್ಭುತ ಲೇಖಕಿ!! ಅವಳ ಕಥೆಗಳಲ್ಲಿ ಅದೇನೋ ಒಂದು ಮಾಂತ್ರಿಕ ಸ್ಪರ್ಶ ಇರುತ್ತಿತ್ತು. ಮನಸ್ಸಿಗೆ ಹೊಳೆಯುವ ಯಾವುದೇ ವಿಚಾರವನ್ನೂ ನಿರ್ಭೆಡೆಯಿಂದ ತಾನು ಸೃಷ್ಟಿಸುವ ಪದಗಳಲ್ಲಿ ಪಳಗಿಸಿಕೊಳ್ಳಬಲ್ಲ ಶಕ್ತಿಯ ಕಥೆಗಾರ್ತಿ ಇವಳು. ಇವಳ ಕಥೆ " ಮೋಹಿತೆ " ಗೆ ನಾನು ಮರುಳಾಗಿ ಹೋಗಿದ್ದೆ. ಎಷ್ಟು ಮನೋಜ್ಞವಾಗಿ, ಎಳೆ-ಎಳೆಯಾಗಿ ಒಬ್ಬಳು ಹೆಣ್ಣುಮಗಳ ಮನದ ಆಸೆಗಳನ್ನು ಬಿಚ್ಚಿಟ್ಟಿದ್ದಳು. ಹರೆಯದ ಕುದಿ ಕುದಿ ಬಯಕೆಗಳನ್ನೂ , 'ಮದುವೆ' ಎಂಬ ಕಾಣದ ಕಡಲಿನ ಮೊರೆತ ಕೇಳುತ್ತಾ ಕೂರುವ, ಸ್ವಲ್ಪ ಸ್ವಲ್ಪವೇ ಅದರತ್ತ ವಾಲುತ್ತಾ ಸಾಗುವ ಬಯಕೆಗಳ ಮೆರವಣಿಗೆಯನ್ನು ಚಿತ್ರಿಸಿದ್ದಳು. ತನ್ನದಲ್ಲದ ಜಾತಿಯವನ ಸ್ನೇಹ, ಅವನ ಮನದ ಹಂಬಲ, ತನ್ನೊಳಗಿನ ಬೇಗುದಿ ಎಲ್ಲವನ್ನೂ ಆ ಕಥೆ ಗರ್ಭೀಕರಿಸಿಕೊಂಡಿತ್ತು. ' ಅವಳದ್ದೇ ಜೀವನವನ್ನು ಬರೆದುಕೊಂಡಿದ್ದಾಳೆಯೇ ? ' ನಾನು ಕೇಳಲೂ ಇಲ್ಲ . ಅವಳಿಂದ ಉತ್ತರ ಬರಲೂ ಇಲ್ಲ. ಹಲವು ದಿನಗಳ ಮಟ್ಟಿಗೆ ಇದು ಮನದ ಒಳಗೆ ಕೊರೆಯುವ ದುಂಬಿಯ ಮೊರೆತವೇ ಆಗಿತ್ತು. ಅವಳ ಕಥೆಯ ಹೆಣೆಯುವಿಕೆಗೆ ಮೋಹಿತನಾಗಿ ಅವಳ ಸ್ನೇಹವನ್ನೂ ಸಂಪಾದಿಸಿದೆ. ಎಷ್ಟಾದರೂ ನಾನೂ ಒಬ್ಬ amateur ಲೇಖಕನೇ ಅಲ್ಲವೇ !. ಇದು ಅವಳಿಗೆ ನನ್ನನ್ನು ಪರಿಚಯಿಸಿಕೊಂಡಾಗ ಜಂಬದ ಪ್ರತಿನಿಧಿಯಾಗಿತ್ತೋ ಅಥವ ನಾನೂ ನೀನೂ ಒಂದೇ ದೋಣಿಯ ಮೇಲಿನ ಪಯಣಿಗರು ಎಂದು ಹೇಳುವ ಭಾವಸೂಕ್ಷ್ಮತೆಯನ್ನು ಗುರುತಿಸುತ್ತಿತ್ತೋ ಹೇಳುವುದು ಕಷ್ಟ. ಇದಂತೂ ಸತ್ಯ.. ನಾನು ಅವಳತ್ತ ಆಕರ್ಷಿತನಾಗಿದ್ದೆ.

ಅವಳ ಜಾತಿನಿರಭಿಮಾನ ನನ್ನನ್ನು ಇನ್ನಷ್ಟು ಅವಳಿಗೆ ಹತ್ತಿರ ಮಾಡಿತ್ತು. ಹಲವಾರು ದಿನ ನಾವಿಬ್ಬರು ಕಾಫಿಯ ಮುಂದೆ ಕುಳಿತು ಮಾರ್ಕ್ಸ್ ನನ್ನು ಚರ್ಚಿಸಿದ್ದಿದೆ. ಇಬ್ಬರೂ 'ಇವತ್ತಿನ ಪ್ರಪಂಚಕ್ಕೆ ಮಾರ್ಕ್ಸ್ ಸರಿಹೊಂದುವುದಿಲ್ಲ ' ಎನ್ನುವ final note ನೊಂದಿಗೆ ಚರ್ಚೆ ಪೂರೈಸಿದ್ದಿದ್ದೆ. ಅನಂತಮೂರ್ತಿಯವರನ್ನೂ ಅವರ ಇಬ್ಬಂದಿತನದ ನಿಲುವನ್ನೂ ಪ್ರಶ್ನಿಸಿದ್ದೇವೆ. ಅವಳು ಮೇಷ್ಟ್ರ ರಾಜಕೀಯ ನಿಲುವುಗಳನ್ನು ಖಂಡಿಸುತ್ತಲೇ ಹೇಳುತ್ತಿದ್ದು ಇಷ್ಟೇ , "ಎಷ್ಟೇ ಆದರೂ ಅವರು ತನ್ನದಲ್ಲದ ಜಾತಿಯ ಹುಡುಗಿಯನ್ನು ಪ್ರೀತಿಸಿ ಮದುವೆ ಆದರು!! guts ಬೇಕು ಮಡಿವಂತ ಕುಟುಂಬದ ಕುಡಿ ಇದನ್ನು ಮಾಡೋದಕ್ಕೆ !'. ಇಷ್ಟೆಲ್ಲಾ ಹೇಳುವಾಗ ತನ್ನನ್ನೇ ಮನಸ್ಸಿನಲ್ಲಿ ಗುರ್ತಿಸಿಕೊಂಡು ಹೇಳುತ್ತಿದ್ದಳೋ ಎಂದು ಅವಳನ್ನು ಪ್ರಶ್ನೆಯೂ ಮಾಡಿದ್ದೆ, 'ಅದೇನು ಈ ವಿಚಾರವನ್ನು ಅಷ್ಟು ಒತ್ತಿ ಒತ್ತಿ ಹೇಳುತ್ತಿ ? 'ಎಂದು. ಆಗಲೇ ಅವಳು ದಾಸ್ ನ ಬಗ್ಗೆ ಹೇಳಿದ್ದು. ಹೆಸರೇ ಹೇಳುವಂತೆ ದಾಸ್ ಬಂಗಾಳಿ ಹುಡುಗ. ಅವನ ಬಗ್ಗೆ ಮನೆಯಲ್ಲಿ ಸೋಲ್ಲೆತ್ತಿದಾಗೆಲ್ಲಾ 'ಇಡೀ ಜಗತ್ತಲ್ಲಿ ಇವನೇ ಸಿಕ್ಕಿದ್ದಾ ನಿನಗೆ ? ಜಾತಿಯಿಲ್ಲದ ಜಾತಿಯವ 'ಎಂದು ದುರು ದುರು ಮೊರೆಯವರಾಗಿ ಹೇಳಿದ್ದರಂತೆ ಅವರ ತಂದೆ. ಅದನ್ನು ಹೇಳುತ್ತಲೇ ಕಣ್ಣೀರಾಗಿದ್ದಳು ಕ್ಷಮಾ. ' ಅವಳ ಬಗ್ಗೆ ಇಷ್ಟೆಲ್ಲಾ ಗೊತ್ತಿದ್ದೂ ಅವಳನ್ನು ಬಯಸಿದೆನೇ ? ಅಪ್ಪನ, ಸಂಬಂಧಿಕರ ಎಲ್ಲರ ವಿರೋಧದ ನಡುವೆಯೂ ಪ್ರೀತಿಗಾಗಿ ಬದುಕುತ್ತಿರುವ, ಹೋರಾಡುತ್ತಿರುವ ಕ್ಷಮಾಳಿಗೆ ಸಾಂತ್ವನ ಹೇಳುತ್ತಲೇ ಅವಳನ್ನು ನನ್ನ ತೆಕ್ಕೆಗೆ ಎಳೆದುಕೊಳ್ಳುವ ಪ್ರಯತ್ನ ಬಾಲಿಶ ಅನ್ನಿಸುವುದಿಲ್ಲವೇ? ದಾಸ್ ನನ್ನ ಜಾತಿಯವನೇ ಆಗಿದ್ದರೆ ಹೀಗೆ ನಾನು ಯೋಚಿಸಲೂ ಜಾಗ ಸಿಗುತ್ತಿರಲಿಲ್ಲ, ಏಕೆಂದರೆ ಕ್ಷಮಾಳ ಅಪ್ಪ ದಾಸ್ ನನ್ನು ಒಪ್ಪಿಬಿಡಬಹುದಿತ್ತು. ' . ಈ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿಲ್ಲ. ಇದರ ಬಗ್ಗೆ ಅಪರಾಧಿಪ್ರಜ್ಞೆ ಕಾಡಿದ್ದಿದೆ. ನನ್ನವೇ ಆದ ಫೇಸ್ ಬುಕ್ ಪೋಸ್ಟ್ ಗಳು, ಲೇಖನಗಳು, ಕಥೆಗಳು ನನ್ನ ಮುಂದೆ ಸಜೀವವಾಗಿ ನಿಂತು ಕ್ಯಾಕರಿಸಿ ತುಪ್ಪಿ ' ನಿನ್ನ ಜಾತ್ಯಾತೀತ ಪ್ರಜ್ಞೆ ಕೇವಲ ಬರಹಕ್ಕಷ್ಟೆಯೇ ?  ' ಎಂದು ಕೇಳಿದ್ದಿದೆ. ಎಲ್ಲವೂ ನನ್ನ ಖಾಲಿ ಮನದ ಮೌನವನ್ನೇ ಉತ್ತರವಾಗಿ ಪಡೆದಿವೆ. 

ಸಿಗರೇಟೂ ಖಾಲಿಯಾಯಿತು. ಕಾಫಿಯೂ ಕೂಡ. ಮಳೆಯೂ ನಿಂತಿದೆ. ತೇವದ ಸಂಜೆಯಲ್ಲಿ ತಿರುಗಾಡುವುದೆಂದರೆ ನನಗೆ ಎಲ್ಲಿಲ್ಲದ ಆನಂದ. ರೀನಾಳ ಜತೆ ನಾನು ಅಡ್ದಾಡುತಿದ್ದ ನೆನಪುಗಳು ಇನ್ನೂ ಹಸಿರಾಗಿದೆ. ನಾನು ಆಗ ಎಂ.ಎಸ್ಸಿ ವ್ಯಾಸಂಗ ಮಾಡುತ್ತಾ ಇದ್ದೆ. ಅವಳೂ ಕೂಡ. ಅವಳು ಬಹಳವೇ ಚುರುಕಿನ ಹುಡುಗಿ. ಅಧ್ಯಾತ್ಮದ ಬಗ್ಗೆ ಬಹಳ ಒಲವಿದ್ದ ಚೆಲುವೆ ಅವಳು. ನನ್ನ ಸಾಮಾಜಿಕ ಪ್ರಜ್ಞೆ ಆಗತಾನೆ ಮೊಳೆಯುತಿದ್ದ ಸಮಯವದು. ಯಾವ ನಿರ್ಧಾರ ತೆಗುದುಕೊಳ್ಳಬಹುದು ಎಂಬ ಸ್ಪಷ್ಟ ನಿಲುವು ಇಲ್ಲದ ಕಾಲಘಟ್ಟ. ಕ್ರಾಂತಿಕಾರಿ ಯೋಚನೆಗಳಷ್ಟೇ ತಲೆಯ ತುಂಬೆಲ್ಲಾ ಹರಿದಾಡುತಿದ್ದ ಸಮಯ. ಅವಳು ನನ್ನ ಜೊತೆ ಹೆಜ್ಜೆ ಹಾಕುವಾಗ ತನ್ನ ಇರುವಿಕೆಯನ್ನು ಗಟ್ಟಿಗೊಳಿಸಲು ಸಾಂಧರ್ಬಿಕವಲ್ಲದ ಮಾತುಗಳನ್ನು ಸೃಷ್ಟಿಸಿ ಆಡುತ್ತಿದ್ದ ಬಗೆ ನನಗೆ ಹೊಸತು. ಅದನ್ನು ಅರಗಿಸಿಕೊಳ್ಳುವುದೇ ಕೆಲವೊಮ್ಮೆ ಕಷ್ಟಕರವಾಗುತಿತ್ತು. ಭಗವದ್ಗೀತೆಯ ಅಧ್ಯಾಯವನ್ನೋ, ಉಪನಿಷತ್ತಿನ ವಾಕ್ಯವನ್ನೋ ಅವಳು ನನಗೆ ಹೇಳಿಕೊಡುತ್ತಿದ್ದಾಗ ಅವಳ ಆಂತರಿಕ ಸೌಂದರ್ಯವನ್ನು ಎಷ್ಟೊಂದು ಬಾರಿ ಹೇಳಲಾರದ ತುದಿಯವರೆಗೆ ನಾನು ಆರಾಧಿಸಿದ್ದಿದ್ದೆ.     

ಅವಳನ್ನು ಕೊನೆಬಾರಿ ಭೇಟಿ ಆದಾಗಲೂ ಹೀಗೆ ಮಳೆ ಸುರಿಯುತ್ತಿತ್ತು. ನನ್ನನು ನಾನೇ ಇನ್ನಷ್ಟು ಶಪಿಸಿಕೊಳ್ಳುವಂತೆ ಮಾಡಿ ಹೋಗಿದ್ದಳು ರೀನಾ. ಜಿನುಗುವ ಮಳೆಯಲ್ಲಿ ತನ್ನನ್ನು ನನಗಾಗಿ ಸಂಪೂರ್ಣ ಒಡ್ಡಿಕೊಂಡಿದ್ದ ಅವಳನ್ನು ನಾನು ತಿರಸ್ಕರಿಸಿಬಿಟ್ಟಿದ್ದೆ. ಯಾಕೆಂದು ಇಂದಿಗೂ ಸ್ಪಷ್ಟವಾಗಿ ಗೊತ್ತಾಗದೇ ಹೆಣಗಾಡುವುದಿದೆ,  ನೊಂದುಕೊಳ್ಳುವುದಿದೆ. ನನಗಿಂತಲೂ ಹೆಚ್ಚು ಸಂಸ್ಕೃತ-ಅಧ್ಯಾತ್ಮ ಜ್ಞಾನ ಪಡೆದ ರೀನಾಳನ್ನು, ನನಗಾಗಿ ತನ್ನ ಅಷ್ಟೂ ಸಮಯವನ್ನು ತೆಗೆದಿಡುತ್ತಿದ್ದ ರೀನಾಳನ್ನು, ಸುರಿವ ಸೋನೆಯಲ್ಲಿ ನನ್ನ ಬೆಚ್ಚಗಿನ ಅಪ್ಪುಗೆಯ ಬಯಸಿ ಬಂದಿದ್ದ ರೀನಾಳನ್ನು ಕಲ್ಲಾಗಿ ಬೇಡವೆಂದು ದೂರತಳ್ಳುವ ಮನಸ್ಸೇಕೆ ಬಂದಿತ್ತು ನನಗೆ ? ಭಯವೇ ? ಹೆದರಿಕೆಯೇ? ಹೌದು!! ಒಂದು ವಿಚಿತ್ರ ಭಯ ಕಾಡಿದ್ದಿದೆ. ಆದರೆ ಏಕೆ ಎಂದು ಹೇಗೆ ವಿಷದಪಡಿಸಲಿ! ಅವಳನ್ನು ಪ್ರೀತಿಸಿ ಮದುವೆಯಾಗಲಾರೆ ಎನ್ನುವ ಭಯವೇ? ಅಪ್ಪನ ಮುಂದೆ ನಿಂತು, ' ರೀನಾಳನ್ನು ನಿನ್ನ ಸೊಸೆ ಮಾಡಿಕೊ ' ಎಂದು ಹೇಳಲು ಸಾಧ್ಯವಾಗಗೊಡದ ಭಯವೇ? ಜಾತಿಯ ಭಯವೇ? ಧರ್ಮದ ಭಯವೇ? ಮನೋಧೈರ್ಯದ ಭಯವೇ? ಇರಬಹುದು ಅಲ್ಲವೇ... ನಾನು ಹೇಳಿಕೊಂಡು ತಿರುಗಾಡುತ್ತಿರುವ 'ಜಾತ್ಯಾತೀತ' ವಾದ ನನ್ನ ಕಥೆಗಳ ಪಾತ್ರಗಳಿಗೆ ಅಷ್ಟೇ ಸೀಮಿತವೆಂದು ಭಾಸವಾಗುತ್ತಿದೆ. ಇಷ್ಟೆಲ್ಲಾ ವದರುವ ನಾನು ಒಳಗೆ ಏನೂ ಇಲ್ಲದ ಖಾಲಿಎಂದು ಅನ್ನಿಸಲು ಆರಂಭಿಸಿದೆ. ರೀನಾಳ ಬಗ್ಗೆ ಎಷ್ಟು ಹೆಚ್ಚು ಯೋಚಿಸುತ್ತೇನೋ ಅಷ್ಟು ಹೆಚ್ಚು ನನ್ನ ಸೈದ್ಧಾಂತಿಕ ನೆಲಗಟ್ಟಿನ ಲೋಳೆ ಪದರ ಪದರವಾಗಿ ನನ್ನೆದುರು ಬಿಚ್ಚಿಕೊಳ್ಳುತ್ತದೆ. ನಾನು ನಾನೇ ಸೃಷ್ಟಿ ಮಾಡಿಕೊಂಡ ಉಸುಕಿನಲ್ಲಿ ಮೆಲ್ಲಗೆ ಹುಗಿದು ಹೋಗುತ್ತೇನೆ. 

ಸ್ವೆಟರ್ ಒಂದನ್ನು ನೇತು ಹಾಕಿಕೊಂಡು, ಮಫ್ಲರ್ ಕುತ್ತಿಗೆಗೆ ಬಿಗಿದು, ಛತ್ರಿಯನ್ನು ಮಡಿಸಿ ಹಿಡಿದು ಹಾಸ್ಟೆಲ್ ನ ಮೆಟ್ಟಿಲನ್ನು ಇಳಿದು ಕೆಳಬಂದೆ. ಹೊರಗಿನ ಮಂದ ಬೆಳಕಿನ ವಾತಾವರಣ ಇನ್ನಷ್ಟು ನನ್ನನು ಜಡಿಗಟ್ಟಲು ಅನುವುಮಾಡಿಕೊಡುವಂತಿತ್ತು. ಹಾಸ್ಟೆಲ್ ನಿಂದ ನೇರ ನಡೆಯತೊಡಗಿದೆ. ಎಲ್ಲಿಗೆ ಮತ್ತು ಏಕೆ ಹೋಗುತ್ತಿದೇನೆ ಎಂಬ ಪರಿವನ್ನು ಕಿತ್ತುಹಾಕಿ ಕಾಲು ಸೀಟಲಾರಂಭಿಸಿದೆ. ' ಕ್ಷಮಾಳನ್ನು ನಾನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಕ್ಕೆ ಅದೇನು ಕಾರಣವಿರಬಹುದು? ರೀನಾ ಕೂಡ ಕ್ಷಮಾಳಂತೆ ಮುದ್ದಾಗಿಯೇ ಇದ್ದವಳು. ನಾನು ಅವಳ ಅಂದಕ್ಕೆ ಮಾರುಹೋಗ್ಗಿದ್ದೆ ಎಂದೇ ಹೇಳಬೇಕು. ಸುಕೊಮಲವಾದ ಅವಳ ಕೈಗಳ ಮೃದು ಅನುಭೂತಿ ಈಗಲೂ ಬೇಕೆನ್ನಿಸುವ ಭಾವನೆಯೇ. ರೀನಾ ಬಾಹ್ಯದಲ್ಲಿ ನನ್ನೊಳಗೆ ಎಷ್ಟೇ ನಂಟು ಬೆಸೆದುಕೊಂಡರೂ ಆಂತರ್ಯದಲ್ಲಿ ನನ್ನ ಮನದೊಳಗೆ ಕಟ್ಟಿಕೂತಿರುವ ಜಾತಿಯ ಕೋಟೆಯ ಒಳಗೆ ಅವಳು ನುಗ್ಗಿ ಬರಲಾರಳು. ಕ್ಷಮಾಳಿಗೆ ಆ ತಡೆಯಿಲ್ಲವಲ್ಲಾ. ಅವಳು ಈ ಕೋಟೆಯ ಮುಂಬಾಗಿಲಿನಿಂದಲೇ ಒಳಗೆ ರಾಜಾರೋಷವಾಗಿ ಒಳಬರಬಹುದು. ಕ್ರಮೇಣ ನಾನು ಅವಕಾಶವಾದಿ ಆಗುತ್ತಿದ್ದೆನೆಯೇ? ಕ್ಷಮಾಳ ಜತೆಯಲ್ಲಿ ಮಾತನಾಡುತ್ತಾ ದೇವನೂರರನ್ನೋ, ಲಂಕೇಶರನ್ನೋ ಹೊಗಳುತ್ತಾ, ಮೇಷ್ಟ್ರ ಸಾಹಿತ್ಯವನ್ನು ಚರ್ಚಿಸುತ್ತಾ ನನ್ನ ಒಣ ಜಂಭವನ್ನು ವೃದ್ಧಿಸಿಕೊಳ್ಳುತ್ತಿದ್ದೇನೆಯೇ? ಕ್ಷಮಾಳಿಗಾಗಿ ಈ ನಾಟಕವೇ? ಅಥವಾ ನನ್ನ ಗರ್ಭದಲ್ಲಿ ಬೀಜವಾಗಿ ಬಿದ್ದು, ಮೊಳೆತು, ಬೇರುಬಿಟ್ಟು ಗಟ್ಟಿ ಬೆಳೆದುಬಿಟ್ಟಿರುವ 'ಅಪ್ಪ ಹಾಕಿದ ಆಲದಮರ'ದಂತಿರುವ ನನ್ನ ಜಾತಿಯ ಅಹಂಕಾರವೇ ? ತೊರಲೊಲ್ಲದು. ನಾ ಒಪ್ಪಲೊಲ್ಲೆನು. " ನಾ ಜಾತಿವಾದಿಯಾಗಲಾರೆ ... " ಎಂದು ಒಳಗಿನಿಂದ ಯಾರೋ ಕಟ್ಟಿದ ಗಂಟಲಿನಲ್ಲಿ ಕಿರುಚಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಒಳಗಿನ ಮಾತು ಹೊರಬರಲೊಲ್ಲದು. 

ಮತ್ತೆ ಮಳೆ ಹನಿ ಹಾಕಲು ಆರಂಭಿಸಿತು. ಛತ್ರಿ ಹರಡಿಕೊಂಡು ಇನ್ಸ್ಟಿಟ್ಯೂಟ್ ನಿಂದ ಹೊರಬಿದ್ದೆ. ಹೊರಗೆಲ್ಲಾ ಕೊಡೆಯ ಆರ್ಭಟವೇ ಆರ್ಭಟ. ' ದಾಸ್ ಒಳ್ಳೆಯ ಹುಡುಗನೇ ತಾನೇ . ನಿಮ್ಮನೆಯವರೆಲ್ಲರೂ educated ಅಲ್ವೇನೆ! ಏನು ಪ್ರಾಬ್ಲಂ actually ? ' ಕ್ಷಮಾಳಿಗೆ ಒಮ್ಮೆ ಹೀಗೆ ಕೇಳಿದ್ದೆ. ' ಇದು ಅವರ ಇಷ್ಟ-ಕಷ್ಟದ ಪ್ರಶ್ನೆಗಿಂತ ಸಮಾಜದಲ್ಲಿ ಅವರ ಸ್ಥಾನದ ಪ್ರಶ್ನೆ. ನಾನೀಗ ಅವನನ್ನು ಮದುವೆ ಆದ್ರೆ ಸುತ್ತಮುತ್ತಲಿನ ನಾಲ್ಕು ಜನರ ಮಾತಿನ ಪ್ರಶ್ನೆ. ಮರ್ಯಾದಸ್ಥ ಕುಟುಂಬ ನಮ್ಮದು. ಬೇರೆಯವರ ಮಾತಿಗೆ ಬೀಳಬಾರದು ನೋಡು ... ' ತೇವವಾದ ಕಣ್ಣಾಲಿಗಳನ್ನು ನನ್ನೆಡೆಯೇ ನೆಟ್ಟು ಹೇಳಿದ್ದಳು ಕ್ಷಮಾ. ನಡುಗುವ ಇಳಿ ದನಿಯಲ್ಲಿ ' ಅವರಿಗೆ ದಾಸ್ ನ ಬಗ್ಗೆ personal problems ಇಲ್ಲ ಕಣೋ. ಎಷ್ಟೇ ಆದರೂ ಮೇಷ್ಟ್ರಲ್ವಾ, ಒಳ್ಳೆತನದ ಪರಿಚಯ ಇದ್ದೇ ಇರತ್ತೆ. ' ಎಂದೂ ಸೇರಿಸಿದ್ದಳು. ನಾನು ' ಊಟಕ್ಕೆ ಕುಳಿತಾಗ, ಆಟಕ್ಕೆ ಒಗ್ಗಿಕೊಂಡಾಗ, ಮನೆಯ ಹಜಾರದಲ್ಲಿ ಹರಟುವಾಗ, ಜತೆಗೆ ಓದುವಾಗ ಇಲ್ಲದ ಜಾತಿ, ಮಗಳ ಮದುವೆಯಲ್ಲಿ ಮಾತ್ರ ಇಷ್ಟು ದೊಡ್ಡದಾಗಿ ಭೂತಾಕಾರ ತಾಳಿ ಮನಗಳನ್ನು ಕದಡುವ, ನಡುವೆ ಗೋಡೆ ಕಟ್ಟುವ ಶಕ್ತಿಯಾಗಿ ಪರಿಣಮಿಸುತ್ತೆ. ನಾವು ಬಾಹ್ಯದಿಂದಷ್ಟೇ modern, liberal.' ಎಂದು ಝಾಡಿಸಿ ಬೈದಿದ್ದೆ. ಇಷ್ಟೆಲ್ಲಾ ಹೇಳುವಾಗಲೂ ಕ್ಷಮಾ ಮುಂದೊಮ್ಮೆ ನನ್ನವಳಾಗಬೇಕೆಂಬ ಬಯಕೆ ಇದ್ದಿಲ್ಲವೆ! ನನ್ನ ಟೊಳ್ಳು ಮನಸ್ಥಿತಿ ನನ್ನ ಅರಿವಿಗೆ ಅಂದು ಬರಲಿಲ್ಲವೇನೋ! ಇನ್ನೂ ಅರ್ಧಮರ್ಧ ಧರ್ಮಪಾಲನೆಯ ವ್ರತ ಹೊತ್ತ ಕ್ಷಮಾಳ ತಂದೆಗಿಂತಲೂ ನಾನೇ ಹೆಚ್ಚು dangerous ಅಲ್ಲವೇ. ಅವರು ನಿತ್ಯ ದೇವತಾರಾಧನೆ, ಸಂಧ್ಯಾವಂದನೆ ಮಾಡದಿರಬಹುದು. ವರ್ಷಕ್ಕೊಮ್ಮೆ ಮನೆದೇವರ ದರ್ಶನದಲ್ಲೋ, ಗಣಪತಿ ವ್ರತ, ಉಪಾಕರ್ಮದಲ್ಲೋ ತಮ್ಮ ಧರ್ಮಪ್ರೀತಿಯನ್ನು ತಣಿಸಿಕೊಳ್ಳುತ್ತಿರಬಹುದು. ಆದರೆ ನನ್ನಂತೆ ಅದನ್ನು ವಿರೋಧಿಸಿ, ಒಳಗೊಳಗೇ ಹುಳುಕಾಗಿ ಕರಗಿಹೋಗಿದ್ದಿಲ್ಲ. ರೀನಾಳಿಗೂ ಕ್ಷಮಾಳಿಗೂ ಅವರಲ್ಲಿ ಇರುವ ವ್ಯತ್ಯಾಸ ಬಾಹ್ಯದ್ದು. ದಾಸ ಭಗವದ್ಗೀತೆಯ ಶ್ಲೋಕವನ್ನು ಸ್ಪಷ್ಟ ಉಚ್ಚಾರ ಮಾಡಿ, ದೈವ ಭಕ್ತಿಯನ್ನು ಮೈಗೂಡಿಸಿ ಬಂದರೆ ಮುಂದೊಮ್ಮೆ ಅವರ ಮನೆಯ ಭಾಗವಾಗಬಹುದು. ಅವನನ್ನು ಇವರು ತನ್ನವನಾಗಿ ಒಪ್ಪಿಕೊಳ್ಳಬಹುದು. ಅವರ ಬಾಹ್ಯದ ಪರದೆಯನ್ನು ಹರಿದು ಒಳನುಗ್ಗಿ ಆಂತರ್ಯದ ಕೋಣೆಯನ್ನು ದಾಸ್ ಪ್ರವೇಶಿಸಿಬಿಡಬಹುದು. ಆದರೆ ನನ್ನಲ್ಲಿ ಅದು ಸಾಧ್ಯವೇ ಇಲ್ಲ. ಏಕೆಂದರೆ, ನನ್ನ ಅಂತರಂಗ ಬೀಜ ಬಿದ್ದರೂ ಮೊಳೆಯಲು ಅವಕಾಶ ಮಾಡಿಕೊಡದ ಬರಡು ಭೂಮಿ. ಬಾಹ್ಯಕ್ಕಷ್ಟೇ ಇಲ್ಲಿ ಪ್ರಾಸಂಗಿಕ ಬೆಲೆ. 

ಸಮುದ್ರದ ಅಲೆಗಳು ದಾಸ್ ಮತ್ತು ಕ್ಷಮಾಳ ಹೆಜ್ಜೆಗುರುತುಗಳನ್ನು, ಮಳಲಲ್ಲಿ ಅವರು ಬರೆದ ಚಿತ್ರಗಳನ್ನು ಬಾಚಿ ತನ್ನಲ್ಲಿ ಗರ್ಭೀಕರಿಸಿಕೊಳ್ಳಬಹುದು. ಅವರಿಬ್ಬರು ಮತ್ತೆ ಮತ್ತೆ ಅದನ್ನು ಬಿಡಿಸುವ ಸಾಹಸ ಪಟ್ಟಾರು. ಕ್ಷಮಾಳ ತಂದೆ ಮುಂದೊಮ್ಮೆ ದಾಸ್ ನನ್ನು ಒಪ್ಪಿಕೊಳ್ಳಲೂಬಹುದು. ಆದರೆ ನಾನು.... "ಕ್ಷಮಾಳಿಗೆ ನಾನು ಏನಾಗಬೇಕು?" ಎಂಬ ಕನಸಿನ ಪ್ರಶ್ನೆಯಲ್ಲೇ ಹಾದಿ ಸವೆಸಿದೆ. ಇನ್ನೂ ಅದಕ್ಕೆ ನೇರ ಉತ್ತರವಿಲ್ಲ. ಪಾಪಪ್ರಜ್ಞೆ ಈಗಲೂ ಕಾಡುತ್ತೆ... ರೀನಾಳನ್ನು ದೂಡಿ ಕ್ಷಮಾಳನ್ನು ಬಯಸಿದ್ದಕ್ಕೆ, ರೀನಳನ್ನು ದೂಡಲು ಇದ್ದ ಕಾರಣವೇ ಕ್ಷಮಾಳನ್ನು ಬಯಸಲು ಒತ್ತಾಸೆ ಆಗಿದ್ದಕ್ಕೆ. 

ವಾಚ್ ನೋಡಿಕೊಂಡೆ. ಸಮಯ ಸಂಜೆ ೬ ಘಂಟೆ ಆಗುತ್ತಾ ಇದೆ. ಸೂರ್ಯ ಪ್ರಾಯಶಃ ಮೋಡದ ಮುಸುಕಿನ ಒಳಗಿಂದಲೇ ತನ್ನ ಯಾನವನ್ನು ಆರಂಭಿಸಿರಬೇಕು. ಬೆಳಕು ಕ್ಷೀಣವಾಗುತ್ತಾ ಸಾಗಿದೆ. ಮಿರಿ ಮಿರಿ ದೀಪಗಳು ಲೈಟ್ ಕಂಬಗಳಲ್ಲಿ ಸಿಕ್ಕಿಕೊಂಡು ಬೆಳಕನ್ನು ಉಗುಳುತ್ತಿವೆ. ' ಒಹ್ ಇಂದು ಜೂನ್ ೨೦... ಮುಂದಿನ ವಾರ ಕ್ಷಮಾಳ ಬರ್ತ್ ಡೇ ಅಲ್ವಾ !!! ' ಅಚಾನಕ್ ಆಗಿ ಹೊಳೆಯಿತು. ಅವಳಿಗೆ ಕಾಫ್ಕನ 'ಮೆಟಾಮಾರ್ಫಾಸಿಸ್' ಎಂದರೆ ಇಷ್ಟ ಅಲ್ವಾ. ಕಾಫ್ಕನ ಇನ್ನಷ್ಟು ಕಥೆಗಳನ್ನು ಅವಳಿಗೆ ಗಿಫ್ಟ್ ಕೊಡೋಣ ಎಂದುಕೊಳ್ಳುತ್ತಾ ದಾರಿ ಬದಲಿಸಿದೆ. ನನ್ನ-ರೀನಾಳ ಸತ್ತ ಸಂಬಂಧದ ಮೂಟೆ ಹೊತ್ತು, ನಡು ಬಗ್ಗಿಸಿ ಕ್ಷಮಾಳ ಬರುವಿಕೆಗಾಗಿ ಕಾಯುತ್ತಾ, ಅವಳಿಗೆ ಈ ಸತ್ತ ಸಂಬಂಧ ಕೊಳೆಯುವ ವಾಸನೆ ಮೂಗಿಗೆ ತಟ್ಟಬಾರದೆಂದು ನನ್ನ 'ಜಾತ್ಯಾತೀತ' ವಾದದ perfume ಸಿಂಪಡಿಸಿಕೊಂಡು ಅವಳ ಮುಂದೆ ನಿಲ್ಲುವ ತಯ್ಯಾರಿ ಮಾಡಿಕೊಳ್ಳತೊಡಗಿದೆ. ಇಳೆಯ ಮೇಲೆ ಹರಡಿದ್ದ ಮಳೆಯ ನೀರನ್ನು ಪಚಕ್... ಪಚಕ್... ಎಂದು ತುಳಿಯುತ್ತಾ crossword ನ ಕಡೆಗೆ ಮುಖಮಾಡಿದೆ.     

  

No comments:

Post a Comment