ಹೊಸ ಬ್ರಶ್ಶನ್ನು ತೆರೆದು ಗೀಚುವೆ,
ನೇರ ಮುಖದ ಮೇಲೆ ಬರೆವೆ,
ಕೆಂಪು, ಹಸಿರು, ಹಳದಿ ಬಣ್ಣಗಳ ಮುಖವಾಡ,
ಒಂದು ಕಣ್ಣಿನಿಂದ ನೇರ ಇನ್ನೊಂದಕ್ಕೆ ಗೀರು,
ನಾಸಿಕದ ಬಳಿ , ಕಿವಿಗಳ ಮಧ್ಯೆ , ಮೀಸೆ ದಾಡಿಗಳೆಲ್ಲದರ ಮೇಲೆ
ಸುಕ್ಕುಗಟ್ಟಿದ ಮುಖ ಇದರ ಹಿಂದೆ ಅಡಗಿ ಹೋಗುವಂತೆ ...
ಹೊಸ ಬ್ರಶ್ಶನ್ನು ತೆರೆದು ಗೀಚುವೆ...
ನಂಗೀಗ ಅರವತ್ತು ವರ್ಷ,
ಎಪ್ಪತ್ತೇ ? ಎಂಭತ್ತೇ ? .. ಗೊತ್ತಿಲ್ಲ !
ಬಣ್ಣ ಹಚ್ಚಿದ್ದು, ಕುಣಿದದ್ದಷ್ಟೇ ಲೆಖ್ಖ ,
ಎದುರಿದ್ದವನ ಮೋರೆಯ ಆಧರಿಸಿ ಬಣ್ಣ
ಹಚ್ಚಿಕೊಳ್ಳುವುದು ಸಾಮಾನ್ಯವಲ್ಲ ,
ಅವನ ಮುಖದ ಸುಕ್ಕು ಸುಕ್ಕುಗಳಿಗೊಂದೊಂದು ಬಣ್ಣ
ಬಳಿದುಕೊಂಡು ನಾನು ರಂಗು-ರಂಗು
ಅಳು, ನಗು, ಸಿಟ್ಟು, ಸೆಡವು
ಎಲ್ಲವನ್ನೂ ಅಭಿನಯಿಸುತ್ತೇನೆ
ಸೆಟ್ಟಿನ ಲೈಟೆಲ್ಲವೂ ಆರುವವರೆಗೆ ,
ಆಮೇಲೆ ಬಾನಿನ ಲಾಟೀನಿನಡಿ ಬೀಡಿ ಹಚ್ಚಿ ಮಲಗುವೆ
ಅದರ ಹೊಗೆಯ ಬೆಚ್ಚಗಿನ ಮಬ್ಬಿನಲಿ ಕಣ್ಣು ಮುಚ್ಚಿ ,
ತಲೆಯ ತಪ್ಪಲೆಯಲ್ಲಿ ಅದೇ ಯೋಚೆನೆಯ ಗಿರಗಿಟ್ಟಲೆ ಸುತ್ತಿ ,
ನಾಳೆ ಮತ್ತೆ ಬಣ್ಣ ಹಚ್ಚಬೇಕು, ಕುಣಿಯಬೇಕು
No comments:
Post a Comment