"ಹೊನಲು"ವಿನಲ್ಲಿ ಪ್ರಕಟವಾದ ನನ್ನ ಇತ್ತೀಚಿಗಿನ ಸಣ್ಣ ಕಥೆ, ( ಇದು ನಲ್ಗನ್ನಡದಲ್ಲಿದೆ )
ಆಗಸದಲ್ಲಿ ನುಸುಳಲೂ ಜಾಗವಿಲ್ಲದಂತೆ ಮೋಡ ಮುಸುಕಿತ್ತು. ಇನ್ನೇನು ಮತ್ತೊಮ್ಮೆ ಮುಸಲಧಾರೆ ಸುರಿಯುವ ಎಲ್ಲಾ ಲಕ್ಷಣಗಳಿದ್ದುವು. ಬೆಳಗ್ಗಿನಿಂದ ಎಶ್ಟು ಸುರಿದರೂ, ಮಳೆರಾಯನಿಗೆ ತೃಪ್ತಿಯಾದಂತಿರಲಿಲ್ಲ. ಪುಣೆಯ ಮೇಲೆ ಎಡಬಿಡದೆ ಸುರಿದು, ಸುತ್ತಲ ಪರಿಸರವನ್ನು ಅರಳಿಸಿದ್ದ ಮಳೆರಾಯ. ಪ್ರತಿ ಹನಿ ಚುಂಬಿಸಿದಾಗಲೂ ಹಸಿರ ಲತೆ ನಾಚಿ, ಬಳುಕಿ ಮುಸು ಮುಸು ನಗುತ್ತಿತ್ತು. ಮಳೆಗಾಲ ಎಂದರೆ ಹೀಗೆಯೇ. ಸುತ್ತ ನೋಡಿದಲ್ಲೆಲ್ಲಾ ಹಸಿರು, ಎಲ್ಲೆಡೆ ನಗು, ನವಿರು. ನನ್ನ ಅಚ್ಚು ಮೆಚ್ಚಿನ ಸಮಯ ಎಂದರೆ ಮಳೆಗಾಲವೇ. ರಾಡಿಯಲ್ಲಿ ಮಿಂದು ಬಂದು ಅಮ್ಮನ ಬೈಗುಳ ತಿನ್ನುತ್ತಿದ್ದದ್ದು ಇನ್ನೂ ನೆನಪಿನ ಬುತ್ತಿಯಲ್ಲಿ ಹಚ್ಚ ಹಸಿರಾಗಿದೆ. ನನ್ನ ಇನ್ಸ್ಟಿಟ್ಯೂಟ್ ಇಂದ ಹೊರಟಾಗ ಸುಮಾರು ಸಮಯ ೧೧:೩೦ ಆಗಿತ್ತು. ಸೂರ್ಯ ಕೂಡ ಚಳಿ ಎಂದು ಮೋಡಗಳ ಬೆಚ್ಚಗಿನ ಮುಸುಕಲ್ಲಿ ಅಡಗಿ ಕುಳಿತಿದ್ದ. ಬಸ್ಸ್ ಸ್ಟಾಪಿಗೆ ಬಂದಾಗ ಮಳೆ ಜಿನುಗುತ್ತಿತ್ತು. ನನ್ನ ಬಳಿ ಅಶ್ಟೇನೂ ಲಗೇಜ್ ಇಲ್ಲದಿದ್ದರಿಂದ, ಓಡಿ ಬಂದು ಬಸ್ ಸ್ಟಾಪಿನ ಚಾವಣಿಯ ಶರಣು ಹೋಗಲು ಬಹಳ ಕಾಲ ಹಿಡಿಯಲಿಲ್ಲ. ನಾನು ಅಲ್ಲಿಗೆ ಬಂದಾಗ, ಬಸ್ ಸ್ಟಾಪಿನಲ್ಲಿ ಒಬ್ಬಳು ಹೆಂಗಸು ತನ್ನೆರಡು ಮಕ್ಕಳೊಂದಿಗೆ ಕುಳಿತಿದ್ದಳು. ಒಂದು ಮಗು ೫-೬ ವರ್ಷದ ಹುಡುಗಿ ಇರಬಹುದು. ಇನ್ನೊಂದು ವರ್ಷವೂ ದಾಟದ ಕೂಸನ್ನು ಎದೆಗೆ ಅಪ್ಪಿ ಕುಳಿತಿದ್ದಳು. 'ಇಶ್ಟು ಮಳೆಯಲ್ಲಿ, ಚಳಿಯಲ್ಲಿ ಅ ಪುಟ್ಟ ಮಗುವನ್ನು ಕರೆದುಕೊಂಡು ಹೋಗುತ್ತಿದ್ದಾಳಲ್ಲಾ... ಅದರ ಆರೋಗ್ಯದ ಪಾಡೇನು ??? ' ಎಂದುಕೊಂಡೆ. ಕಾಲಿಗೆ ಚಪ್ಪಲಿ ಇರಲಿಲ್ಲ, ಮಾಸಿದ ಸೀರೆ ಅಲ್ಲಲ್ಲಿ ಹರಿದಿತ್ತು. ಅದಕ್ಕೆ ತೇಪೆ ಹಾಕುವ ಪ್ರಯತ್ನ ನಡೆದಿದ್ದರೂ ಅದು ಪ್ರಯೋಜನ ಆದಂತೆ ತೋರಲಿಲ್ಲ. ಆಕೆಯ ಪಕ್ಕದಲ್ಲೇ ಒಂದು ಹಳೆಯ ಬ್ಯಾಗು ಇತ್ತು. ಅದರಲ್ಲೇನಿದೆ ಎನ್ನುವ ಕುತೂಹಲ ಇದ್ದರೂ, ಆಕೆ ಏನೆಂದುಕೊಳ್ಳುವಳೋ ಎಂದು ಅತ್ತ ಕಡೆ ತಿರುಗದೆ ಬಸ್ಸು ಕಾಯುತ್ತಾ ನಿಂತೆ.
ಪುಣೆಯಲ್ಲಿ ಸಿಟಿ ಬಸ್ಸು ಸರಿಯಾದ ಸಮಯಕ್ಕೆ ಸಿಗುವುದು, ನಮ್ಮ ಅರಸೀಕೆರೆಯಲ್ಲಿ ಮಳೆಯದಶ್ಟೇ ವಿರಳ. ನನಗೆ ಅಶ್ಟೇನೂ ಸಮಯದ ಒತ್ತಡ ಇರಲಿಲ್ಲ. ೨:೩೦ಕ್ಕೆ ಬೆಂಗಳೂರಿಗೆ ಹೊರಡುವ ಬಸ್ ಬುಕ್ ಮಾಡಿದ್ದೆ. ಪುಣೆಯ ಹಣೆಬರಹ ಗೊತ್ತಿದ್ದೇ ಇಶ್ಟು ಬೇಗ ಹೊರಟಿದ್ದು. ಆದರೆ ಬಸ್ಸಿಗಾಗಿ ಕಾಯುವುದು ಇದೆಯಲ್ಲಾ .. ಅದಕ್ಕಿಂತ ಬೇಸರ ತರಿಸುವ ಸಂಗತಿಯೇ ಇಲ್ಲ . ನಾನು ನಿರಾಳವಾಗಿ ಬಸ್ಸಿಗಾಗಿ ಕಾಯುತ್ತಾ, ಮನದೊಳಗೆ ಶಪಿಸುತ್ತಾ ನಿಂತಿದ್ದೆ. ಆದರೆ, ಆಕೆ ಹೆಚ್ಚು ಆತಂಕಗೊಂಡಂತೆ ಕಂಡಳು. ಮಗುವನ್ನು ಅಪ್ಪಿಕೊಂಡೇ ತನ್ನ ಬಟ್ಟಲು ಕಂಗಳಲ್ಲಿ ಕಾತರತೆಯಿಂದ ಬಸ್ಸಿಗಾಗಿ ನೋಡುತ್ತಿದ್ದಳು. ಕೈ ಗಡಿಯಾರ ನೋಡಿಕೊಂಡೆ. ೧:೦೦ ಘಂಟೆ ತೋರಿಸುತ್ತಿತ್ತು. ಇನ್ನೂ ತಡವಾದರೆ ನನ್ನ ಬಸ್ಸು ಹೊರಟುಬಿಡುತ್ತದೆ ಎಂದೂ, ಇನ್ನು ಹದಿನೈದು ನಿಮಿಶ ನೋಡಿ ಆಟೋ ಹಿಡಿಯುವುದು ಎಂದೂ ಯೋಚಿಸಿ ರಸ್ತೆಯ ಅತ್ತ ಬದಿ ತಿರುಗಿದೆ. ಬಾಗಿ ಬಳುಕಿ ಬರುತ್ತಿರುವ ಬಸ್ಸು ಕಂಡಿತು. "ಅಬ್ಬಾ !! .. ಬಂತಲ್ಲಾ .. " ಎಂದುಕೊಂಡು ಬಸ್ಸು ಹತ್ತಿದೆ. ಬಹುಪಾಲು ಖಾಲಿ ಇದ್ದ ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟು ಹಿಡಿದು ಕುಳಿತೆ. ನನ್ನ ಮುಂದಿನ ಸೀಟಿನಲ್ಲೇ ಆ ಹೆಂಗಸು ತನ್ನೆರಡು ಕಂದಮ್ಮಗಳನ್ನು ಕರೆದುಕೊಂಡು ಬಂದು ಕುಳಿತಳು. ಹರಿದ ಸೀರೆಯಿಂದ ಮೈ ಕಾಣುತಿತ್ತು. ಚಳಿಯಿಂದ ತನ್ನ ಕಂದನನ್ನು ಕಾಪಾಡಲು, ಹರಿದ ಸೀರೆಯನ್ನೇ ಅದಕ್ಕೂ ಹೊದಿಸಿ ಅಪ್ಪಿ ಕುಳಿತಿದ್ದಳು. ಕಂಡೆಕ್ಟರಿಗೆ " ಸ್ವಾರ್ ಗೇಟ್ " ಎಂದು ತನ್ನ ಕೈಲಿ ಮಡಚಿ ಹಿಡಿದಿದ್ದ ೨೦ರೂಗಳ ಎರಡು ನೋಟಲ್ಲಿ ಒಂದು ನೋಟನ್ನು ಅವನ ಕೈಗಿತ್ತಳು. ಈ ಪುಟ್ಟ ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೊರಟಿದ್ದಾಳೆ ಈ ಹೆಂಗಸು ಎಂದುಕೊಂಡೆ. ಮಗುವಿನ ಕೈಯಲ್ಲಿ ಒಂದು ಬಿಸ್ಕತ್ತಿನ ಪುಟ್ಟ ಪ್ಯಾಕಿತ್ತು. ಅಮ್ಮನ ತೊಡೆಯ ಪಕ್ಕದಿ ಕುಳಿತು ಬಿಸ್ಕತ್ತು ಚಪ್ಪರಿಸುತ್ತಿತ್ತು ಮಗು. ಅದರ ಬಟ್ಟೆಯೂ ಅಮ್ಮನ ಬಟ್ಟೆಯಂತೆಯೇ ಇತ್ತು.
ಸ್ವಾರ್ ಗೇಟಿನ ಮುಂದೆ ಬಸ್ಸು ನಿಲ್ಲಿಸಿದಾಗ ಘಂಟೆ ೧:೩೦. ಸ್ವಾರ್ ಗೇಟ್ ಪುಣೆಯ ಮುಖ್ಯ ಬಸ್ಸು ನಿಲ್ದಾಣ ಇರುವ ಜಾಗ. ಬಸ್ಸಿನಿಂದ ಕೆಳಗೆ ಇಳಿದ ಕೂಡಲೇ ರಾಡಿಯ ಸಮುದ್ರದಲ್ಲಿ ಧುಮುಕಿದಂತೆ ಭಾಸವಾಯಿತು. ಮೇಲುಸೇತುವೆ ಕಟ್ಟುತ್ತಿದ್ದರಿಂದ ರಸ್ತೆಯೆಲ್ಲಾ ರಾಡಿಮಯವಾಗಿತ್ತು. ಹೇಗೆ ಹೇಗೋ ದಾಟಿಕೊಂಡು ರಾಡಿಯ ಸಮುದ್ರೋಲ್ಲಂಗನ ಮಾಡುತ್ತಾ ಮುಂದೆ ಹೋಗುತ್ತಿದ್ದ ನನಗೆ, ಆ ಯುವತಿ ಅಲ್ಲಿನ ಮೇಸ್ತ್ರಿಯ ಬಳಿ ಏನನ್ನೋ ಹೇಳುತ್ತಿದ್ದಿದ್ದು ಕಂಡಿತು. ಮೇಸ್ತ್ರಿಯ ಮತ್ತು ಅವಳ ಮುಖಭಾವ ಗುರುತಿಸಿ ಯಾರೂ ಮೇಸ್ತ್ರಿ ಅವಳನ್ನು ಬೈಯುತ್ತಿದ್ದಾನೆಂದು ಊಹಿಸಬಹುದಿತ್ತು. ಪ್ರಾಯಶಃ ಸಮಯಕ್ಕೆ ಸರಿಯಾಗಿ ಬರಲಿಲ್ಲ ಎಂದು ಬಯುತ್ತಿದ್ದಾನೆಂದು ತೋರುತ್ತದೆ. ಅವರನ್ನೇ ನೋಡುತ್ತಾ ನಿಂತೆ. ಕೈ ಕೈ ಮುಗಿದು ಯುವತಿ, ಏನನ್ನೋ ಬಿನ್ನಹಪಡಿಸಿ ಕೊನೆಗೂ ತನ್ನೆರಡು ಮಕ್ಕಳನ್ನು ಕರೆದುಕೊಂಡು ಬ್ಯಾಗು ಹಿಡಿದು ಅಲ್ಲಿದ್ದ ಪುಟ್ಟ ಚಾವಣಿಯ ಬಳಿಗೆ ಬಂದಳು. ಅದರ ಕೆಳಗೆ ಒಂದನ್ನು ಕೂರಿಸಿ, ಇನ್ನೊಂದನ್ನು ಮಲಗಿಸಿ, ಬ್ಯಾಗಿನಿಂದ ಕಲ್ಲು ಹೊರುವ ಬಾಣಲೆಯನ್ನು ಹೊತ್ತಿ ಎಲ್ಲರೊಡನೆ ಕೆಲಸದಲ್ಲಿ ಲೀನವಾದಳು. ಆ ಪುಟ್ಟ ಮಕ್ಕಳ ನೋಡಿದೆ. ತನ್ನ ತಾಯಿ ಏನು ಮಾಡುತ್ತಿರುವಳು ಎನ್ನುವುದನ್ನೂ ಅರಿಯದೆ ಕುಳಿತಿದ್ದ ಮುಗ್ದ ಮುಕ ನನ್ನ ಕರುಳ ಕಿವುಚಿತು. ಅವಳ ಮಾತ್ರು ಹೃದಯಕ್ಕೆ ಸಲಾಂ ಹೇಳಲೋ, ಅಥವಾ ಅವಳಂತಹ ಪರಿಸ್ಥಿತಿಯಲ್ಲಿ ಸೊರಗುತ್ತಿರುವ ಹೆಣ್ಣು ಮಕ್ಕಳಿಗೆ ಮರುಗಲೋ ತಿಳಿಯಲಿಲ್ಲ. ಅವಳ ಹರಕು ಬಟ್ಟೆ ಕಂಡು " ಹುಡುಗಿಯರು ಬಟ್ಟೆ ಹಾಕುವ ರೀತಿಯೇ ಈಗಿನ ಅತ್ಯಾಚಾರ ಪ್ರಕರಣಗಳಿಗೆ ಮೂಲ ಕಾರಣ" ಎಂದ ಮಹಾನುಭಾವನ ಮಾತು ಸ್ಮ್ರುತಿಪಟಲದಲ್ಲಿ ಹಾದು ಹೋಯಿತು. ಬಟ್ಟೆಯ ಮೇಲಿನ ವ್ಯಾಮೋಹ ಹೊಟ್ಟೆಯ ನಂತರದ್ದು. ಇದನ್ನು ನೋಡಿಯೂ ಹುಡುಗರ ಅತ್ಯಾಚಾರದ ಮನ ಜಾಗ್ರುತವಾಗುವುದಾದರೆ ಮನುಶ್ಯತ್ವದ ಮೇಲೆಯೇ ದೊಡ್ಡ ಪ್ರಶ್ನೆಯ ನೆರಳು ಬೀಳುವುದಿಲ್ಲವೇ ಎಂದುಕೊಂಡೆ. ಅವಳನ್ನೇ ನೋಡುತ್ತಾ ನಿಂತ ನನ್ನ ತಲೆಯ ಮೇಲೆ ಚಿಟ ಚಿಟನೆ ಮಳೆ ಬೀಳಲು ಆರಂಭಿಸಿತು. ಮಳೆಯಿಂದ ರಕ್ಷಿಸಲು ಬಸ್ ಸ್ಟಾಂಡಿನ ದಾರಿ ಹಿಡಿದೆ. ಆಕೆ ಮಾತ್ರ ಮಳೆಯನ್ನೂ ಅಲಕ್ಷಿಸಿ ದುಡಿಯುತ್ತಲೇ ಇದ್ದಳು.
No comments:
Post a Comment