Monday 24 August 2015

ತೆರೆ

"ರೀಡೂ " ನಲ್ಲಿ ಪ್ರಕಟವಾದ ನನ್ನ ಸಣ್ಣಕಥೆ .... 

ತೆರೆ 

"ಮತ್ತೆ ಮುಂದೇನು ಅಂತ ... "ಕಾಫಿ ಹೀರುತ್ತಾ ಎದುರು ಕುಳಿತಿದ್ದ ಕ್ಷಮಾಳ ಮುಖ ನೋಡಿದೆ. ಸುತ್ತಲಿನ ಪರಿಸರದಲ್ಲಿ ಕರಗಿ ಹೋದಂತೆ, ಎಲ್ಲೋ ದೂರದ ಪರ್ವತಗಳಿಂದ ಕೂಗಿ ಕರೆದ ಅನುಭವವಾಗುವಂತೆ ಅವಳು ಮಾತನಾಡತೊಡಗಿದಳು. "ನೋಡೋಣ ... ಹೊರಗೆ ಹೋಗ್ಬೇಕು ಅಂತ ಹೇಳಿದ್ನಲ್ಲಾ ... Europe ಗೆ ಅಪ್ಲೈ ಮಾಡ್ತಾ ಇದ್ದೀನಿ ... ". ಅವಳ ಮಾತಿನಲ್ಲಿ ಕಾಣುವುದನ್ನು ಮೀರಿ ನೋಡುವ, ಒಳ ಹೊಕ್ಕು ಅರಸುವ ಆಸೆಯಿತ್ತು. ಕಳೆದುಹೋಗಿದ್ದನ್ನೇನೋ ಹುಡುಕುವ ಇರಾದೆಯಿತ್ತು. "Professor ಬರೆದುಕೊಡಬೇಕು ಅಷ್ಟೇ .. Reco letter ನ ... ಕೇಳಿದ್ದೀನಿ .. " , ವರ್ಷದಿಂದ ಮೈ ಬಗ್ಗಿಸಿ, ದುಡಿಯುತ್ತಿದ್ದ ಕೆಲಸವನ್ನು ಮನಸ್ಸಿನಲ್ಲಿ ಮತ್ತೆ ಮರುಕಳಿಸಿಕೊಂಡು ಇಷ್ಟವಿದ್ದೋ , ಇಲ್ಲದೆಯೋ ಮಾಡಲೇಬೇಕಾದ ಕಾರ್ಯವೊಂದನ್ನು ಎಸಗಿದಂತೆ ಮಾತನಾಡಿದಳು. ವರ್ಷದ ಹಿಂದೆ ಅವಳನ್ನು ಇಲ್ಲೇ ಭೇಟಿಯಾದಾಗ ಇದ್ದ ಆ ತುಂಟ ಕಣ್ಣುಗಳು ಇಂದು ಎಲ್ಲೋ ದೂರದ ದಿವ್ಯವನ್ನು ಅರಸುತ್ತಿರುವಂತೆ ಕಾಣುತ್ತಿತ್ತು. ಮಾತಿನಲ್ಲಿ ಹಿಂದಿದ್ದ ಹುರುಪಿರಲಿಲ್ಲ. ಉತ್ಸಾಹದ ಪುಟಿಯುವಿಕೆ ಇರಲಿಲ್ಲ. 'ಇವಳೇ ... ನಾನು ನೋಡಿ ಮೆಚ್ಚಿದ ಹುಡುಗಿ ??? 'ಎಂದುಕೊಂಡು ಅನ್ಯಮನಸ್ಕನಾದೆ. "ಇದೇನು ಜುಬ್ಬಾ ... ನಿಲುವಂಗಿ ... " ಎಂದು ಕಿಸಕ್ಕೆನೆ ನಕ್ಕಳು. ಹಳೆಯ ಹುರುಪು ಮತ್ತೆ ಬಂದಂತಾಗಿ ಅವಳತ್ತ ತಿರುಗಿದೆ. ಕೈಲಿದ್ದ Lay's ಪ್ಯಾಕೆಟ್ ತೆಗೆದು ಚಿಪ್ಸ್ ತುಟಿಗೆ ಒತ್ತಿಕೊಂಡು ನನ್ನತ್ತ ನೋಡುತ್ತಿದ್ದಳು.  "I don't like this flavour... " ಎಂದೆ. ಬಾಯಿಂದ ಅಪ್ರಯತ್ನವಾಗಿ ಇಂಗ್ಲಿಷ್ ಹೊರಡಿತ್ತು. ಇದು ಅವಳನ್ನು ಆಕರ್ಷಿಸಲು ಮಾಡಿದ ಕ್ಷುದ್ರ ಪ್ರಯತ್ನದಂತೆ ತೋರಿ ಹೇಸಿಕೊಂಡೆ. ಅವಳಿಗೆ ಇದು ತನ್ನನ್ನು ಆಕರ್ಷಿಸಲು ಮಾಡಿದ್ದು ಎಂದು ಗೊತ್ತಾಗದೆ ಇರಬಹುದು. ಆದರೆ ನಾನು ಮತ್ತದೇ ಕ್ಷುದ್ರತೆಯ ಉಸುಕಿನೊಳಗೆ ಮುಳುಗಿಹೋಗುತ್ತಿರುವಂತೆ ಅನಿಸತೊಡಗಿತು. ಅವಳಾಗಲೇ ನನ್ನ ಬಯಕೆಯನ್ನು ಅಲ್ಲಗಳೆದು ವರ್ಷವೇ ಕಳೆದಿದೆ. ಆದರೂ ಮನಸ್ಸಿನ ಮೂಲೆಯಲ್ಲೊಂದು ಸಣ್ಣ ಆಸೆ. ಅದನ್ನು ವ್ಯಕ್ತಪಡಿಸಲು ಸಾಧ್ಯವಾಗದಾಗ ಹೀಗೆ ಕ್ಷುದ್ರತೆಯ ಮೊರೆ ಹೊಕ್ಕು ಅವಳನ್ನು ಗೆಲ್ಲಲೆತ್ನಿಸುವುದು.

ಕೆಲ ನಿಮಿಷಗಳ ಮೌನ ಇಬ್ಬರನ್ನೂ ಆವರಿಸಿತು. ವರ್ಷದ ನಂತರದ ಭೇಟಿ. ಅದೂ ಭಾವಸುಂದರಿಯ ಜತೆ. ಹೇಳಬೇಕೆಂದು ಉರು ಹೊಡೆದುಕೊಂಡು ಬಂದ ಮಾತೆಲ್ಲವೂ ಅವಳ ಕಣ್ಣಿನ ತಣ್ಣನೆಯ ದಿವ್ಯ ನೋಟಕ್ಕೆ ಹೊತ್ತುರಿದು ಭಾಸ್ಮವಾಗಿದ್ದವು. ನನ್ನ ಮೆಚ್ಚುಗೆಗೆ ಅರ್ಥವೇ ಇಲ್ಲದಂತೆ ಫಟಾರನೆ ತಿರಸ್ಕರಿಸಿದ ಕ್ಷಮಾಳ ಅಂದಿನ ಮಾತುಗಳು ಮಾರ್ದನಿಸ ತೊಡಗಿದವು. ತಿರಸ್ಕಾರದ ಹಿಂದೆ ಸಿಟ್ಟು, ಆಕ್ರೋಶ ಇದ್ದಿದ್ದರೆ ಇಷ್ಟು ಬಗ್ಗುಡವಾಗುತ್ತಿರಲಿಲ್ಲವೇನೋ ಮನಸ್ಸು. ಬಹಳ ಗಾಂಭೀರ್ಯದಿಂದ , ಗೌರವಯುಕ್ತವಾಗಿ ನನ್ನ ಕೋರಿಕೆಯನ್ನು ಬದಿಗೊತ್ತಿ ಸಿನಿಮಾ ದಾಟಿಯಲ್ಲಿ , "ನೀನೊಬ್ಬ ಬಹಳ ಒಳ್ಳೆಯ ಫ್ರೆಂಡ್ ಕಣೋ ... "ಎಂದಿದ್ದ ಆ ಕ್ಷಮಾ ಮತ್ತೆ ಮತ್ತೆ ನೆನಪಾದಳು . ನನ್ನ ಜೀವನದಲ್ಲಿ ಅವಳ ಪಾತ್ರವನ್ನೂ ನಾನೇ ಆಡುತಿದ್ದೇನೆಂದುಕೊಂಡು ಅಧೀರನಾದೆ. ವರ್ಷದಿಂದ ಈಚೆಗೆ ಮಾತು ಅಷ್ಟಕ್ಕಷ್ಟೆ. ಭಾವದಿಂದ ಅವಳನ್ನು ಅಳೆಯಲೆತ್ನಿಸಿದ್ದು ಮಾತ್ರ ಸತ್ಯ. ಸಮುದ್ರದ ಹೊಡೆತ ತಿಂದಷ್ಟೂ ತೆರೆದುಕೊಳ್ಳುವ ತೀರದ ಬಂಡೆಗಳಂತೆ ಅವಳತ್ತ ಮತ್ತೆ ಮತ್ತೆ ವಾಲಿದ್ದೆ., ಇನ್ನಷ್ಟು ತೆರೆದುಕೊಂಡಿದ್ದೆ. ನಾನು ಬಿಚ್ಚಿಕೊಂದಷ್ಟೂ ಅವಳು ಅಂತರ್ಮುಖಿಯಾಗುತ್ತಾ ಹೋಗಿದ್ದಳು. ತನ್ನದೇ ಬೆಚ್ಚಗಿನ ಲೋಕದಲ್ಲಿ ಸದ್ದಿಲ್ಲದೇ ಅರಳಿಕೊಂಡಳು. ಹೊಸ ದಿವ್ಯದ ಅರಸುವಿಕೆಗೆ ಹೊರಟಂತೆ ಇಂದು ನನ್ನ ಮುಂದೆ ಕುಳಿತಿದ್ದಾಳೆ.

ಮತ್ತೆ ನಾನೇ ಮುಂದುವರೆದು , "ಖಾದಿ ಭಂಡಾರದಲ್ಲಿ ತಗೊಂಡಿದ್ದು ... ಜುಬ್ಬಾ "ಎಂದೆ. ಅಪ್ರಯತ್ನವಾಗಿ ಈ ನುಡಿಗಳು ಹೊರಬಿದ್ದವು. ಮತ್ತೆ ಅವಳನ್ನು ಮೆಚ್ಚಿಸಲು ತೋರುಗಾಣಿಕೆಗೆ ಆಡಿದೆನೆಂದು ಅವಳು ತಿಳಿಯಬಾರದೆಂದು ನನ್ನ ಸಾಮಾಜಿಕ ನಿಲುವುಗಳನ್ನು ಸಮರ್ಥಿಸಿಕೊಳ್ಳಲಾರಂಭಿಸಿದೆ. ಮಾಲ್ ಸಂಸ್ಕೃತಿಯ ವಿರುದ್ದ ಮಾತನಾಡಿದೆ. ಮಾತಾಡುತ್ತಾ ಬಿಚ್ಚಿಕೊಳ್ಳುತ್ತಾ ಹೋದೆ . " ಇಂಥೋರಿಂದಲೇ ನಮ್ಮ ಜನರ ಹೊಟ್ಟೆ ಇನ್ನೂ ತುಂಬದೆ ಇರೋದು. ಇವರುಗಳು ತಮ್ಮ ತಮ್ಮ ಬೆಳವಣಿಗೆಗೆ ಸಣ್ಣ ವ್ಯಾಪಾರಿಗಳನ್ನೂ , ರೈತರನ್ನೂ ಮೆಟ್ಟಿಲು ಮಾಡ್ಕೊಂಡು ತುಳಿದು, ಮೇಲಕ್ಕೆ ಹತ್ತಿ ಬರ್ತಾರೆ ,... " ಎಂದೆ. ' ಇವನು ಹೊಸತನ ಗೊತ್ತಿಲ್ಲದ ಗೊಡ್ಡು .. ಖಾದಿಯಂತೆ .. ಜುಬ್ಬಾವಂತೆ .. ಕ್ರಾಂತಿಯಂತೆ ... ' ಎಂದುಕೊಂಡಳೇನೋ ಎಂದು ಅವಳ ಮುಖ ಗಮನಿಸಿದೆ. ಒಂದಿಷ್ಟೂ ಬದಲಾವಣೆ ಇರಲಿಲ್ಲ. ಅದೇ ನಿರ್ವಿಕಾರ, ನಿರ್ಭಾವ ವದನ. ನೇರವಾಗಿ , " I am not politically oriented " ಎಂದುಬಿಟ್ಟಳು. ಗರ್ಭದಲ್ಲಿ ದೇಸೀ ನೇಕಾರರ , ಸಣ್ಣ ವ್ಯಾಪಾರಿಗಳ , ರೈತರ ಬಿಸಿ ಉಸಿರು ಗಟ್ಟಿಯಾಗಿಹೋಗಿತ್ತು. ಅವಳ ಮೈಮೇಲಿರುವ ಸುಂದರ Arrow jersey ಯ ಹೊಳಪಿನ ಮುಂದೆ ನನ್ನ ಜನರ ಬಟ್ಟೆಗಳು ಮಂಕಾದವಲ್ಲಾ , ಜೀವಕ್ಕಿಂತ , ಜೀವನಕ್ಕಿಂತ ತೋರುಗಾಣಿಕೆಯೇ ಜನರ ಭಾವತಕ್ಕಡಿಯಲ್ಲಿ ಹೆಚ್ಚು ತೂಕದ್ದಾಯಿತಲ್ಲಾ ಎಂದುಕೊಂಡೆ. ಎಲ್ಲರೂ ಒಂದಲ್ಲಾ ಒಂದು ರೀತಿಯ ತೋರುಗಾಣಿಕೆಗೆ ನೇತುಹಾಕಿಕೊಂಡಿದ್ದೇವೆ, ಎದುರು ಕುಳಿತವನಿಗೋ, ಬೀದಿಯಲ್ಲಿ ಹೋಗುವ ದಾರಿಹೋಕನಿಗೋ , ಪ್ರಿಯತಮನಿಗೋ, ಪ್ರೇಯಸಿಗೋ, ಸ್ನೇಹಿತರಿಗೋ , ವೈರಿಗೋ , ಕೊನೆಗೆ ತನ್ನ ಒಳಗೇ ಕುಳಿತು ತನ್ನ ನಡವಳಿಕೆಗೆ ಪ್ರಶ್ನೆ ಹಾಕುವ  ತನ್ನ ಆತ್ಮಸಾಕ್ಷಿಗೋ...

ಇಷ್ಟು ದಿನಗಳು ನನ್ನ ಆತ್ಮಸಾಕ್ಷಿಯ ಮುಂದೆ ಆಡಿದ ನಾಟಕದಲ್ಲಿ ಅವಳ ಪಾತ್ರವನ್ನೂ ನಾನೇ ಆಡಿದೆನೇ ? ಎನ್ನುವ ಪ್ರಶ್ನೆ ಮತ್ತೆ ಮತ್ತೆ ನನ್ನ ಮನದಲ್ಲಿ ಏಳಲಾರಂಭಿಸಿತು. ಅದಕ್ಕೆ ಉತ್ತರ ಗೊತ್ತಿದ್ದರೂ ಅದನ್ನು ಒಪ್ಪಿಕೊಳ್ಳುವ ಧೈರ್ಯ ನನಗಿರಲಿಲ್ಲ. ಮತ್ತೆ ಮುಸುಕು ಹಾಕಿ ಕೂತೆ.  ನನ್ನಿಂದ ಅವಳು ಬಹಳ ದೂರ ಹೋಗಿ ಕೈ ಬೀಸುತ್ತಿರುವಂತೆ ಭಾಸವಾಗತೊಡಗಿತು. ವಾಚು ನೋಡಿಕೊಂಡೆ. ಘಂಟೆ ಆರು ತೋರಿಸುತ್ತಿತ್ತು. ಪಡುವಣದಲ್ಲಿ ನೇಸರ ಆಗಸದ ತುಂಬ ರಂಗು ಚೆಲ್ಲಿ ಹೋಗಿದ್ದ. " ನಿನ್ನ ಬಸ್ ಬರುತ್ತೆ .. ಹೋಗುವ " ಎಂದಳು. " ಹಾ !!! ... " ಎಂದು ಕಾಫಿಯ ಕೊನೆಯ ಸಿಪ್ ಹೀರಿದೆ. ಇಬ್ಬರೂ ಒಟ್ಟಿಗೆ ಹೆಜ್ಜೆ ಹಾಕಿದೆವು. ಇದು ಪ್ರಾಯಶಃ ನಮ್ಮ ಕೊನೆಯ ಮಿಲನವಿರಬಹುದು, ಅವಳು ಹಕ್ಕಿಯಂತೆ ಹೆತ್ತ ಮರವ ತೊರೆದು ಹಾರಬಹುದು. ಆಗಲೂ ನನ್ನೊಳಗೆ ನಾನೇ ಆಡುತ್ತಿರುವ ಈ ನಾಟಕಕ್ಕೆ ತೆರೆ ಎಳೆಯಬಲ್ಲೆನೇ ? ಎಂದುಕೊಂಡೇ , " ಮದುವೆ ?? " ಎಂದೆ. " ಇನ್ನೇನು... ಅಡ್ಮಿಶನ್ ಸಿಕ್ಲಿಲ್ಲ ಅಂದ್ರೆ ಡಿಸೆಂಬರ್ ಲಿ " ಎಂದಳು. ಇನ್ಸ್ಟಿಟ್ಯೂಟ್ ನ ಹೊರಗೆ ನಿಂತಿದ್ದ ಬಸ್ಸಿನ ಒಳ ಹೊಕ್ಕು ಕುಳಿತೆವು.

ಬಸ್ ಹೊರಡಲು ಇನ್ನೂ ಹತ್ತು ನಿಮಿಷ ಬಾಕಿ ಇತ್ತು. " Reaction ಒಂದಕ್ಕೆ ಹಾಕಿ ಬಂದಿದ್ದೇನೆ ... ಬರ್ತೀನಿ ... ಗುಡ್ ಲಕ್ .. " ಎಂದು ಹೇಳಿ ನನ್ನ ಉತ್ತರಕ್ಕೂ ಕಾಯದೆ ತಣ್ಣಗೆ ಎದ್ದು ಹೋದಳು. ಇನ್ನೂ ಮಾತಾಡಬೇಕು ಎಂದು ಅಂದುಕೊಂಡ ಎಷ್ಟೋ ಮಾತುಗಳು ಮನದ ಒಳಗೇ ಹೂತುಹೋದವು. ತುಟಿಗಳು ಅದುರಿದವು. ಕಿಟಕಿಯಿಂದ ಅವಳನ್ನೇ ನೋಡುತ್ತಾ ಕುಳಿತೆ, ಅವಳ ತೆಳು ನೀಲಿ ಬಣ್ಣದ ಅಂಗಿ ದೂರದ ಕತ್ತಲಲ್ಲಿ ಕರಗಿಹೋಗುವ ತನಕ.  ಅವಳನ್ನು ಪಡೆಯುವ ಆತುರ, ಕಾತರದಿಂದ ಬಂದ ನನಗೆ, ನಾನು ಹತ್ತಿರ ಹೋಗಲು ಪ್ರಯತ್ನಿಸಿದಷ್ಟೂ ಅವಳು ದೂರ ದೂರ ಸಾಗುತ್ತಿರುವಂತೆ ಭಾಸವಾಯಿತು. ಅವಳ ಇಲ್ಲದಿರುವಿಕೆಯನ್ನು ಮರೆಮಾಚಲು ಅನ್ಯಮಸ್ಕನಾಗಲು ಪ್ರಯತ್ನಿಸತೊಡಗಿದೆ. ಕಂಡಕ್ಟರ್ ಬಸ್ ಹತ್ತಿ , ಒಮ್ಮೆ ಹಿಂದೆ ತಿರುಗಿ , " ಮೆಜೆಸ್ಟಿಕ್... " ಎಂದು ಕೋಗಿದ. ಶಬ್ದ ಮಾಡುತ್ತಾ ಬಸ್ಸು ಮುಂದುವರೆಯಿತು. ಇನ್ಸ್ಟಿಟ್ಯೂಟ್ ನನ್ನಿಂದ ದೂರ ಸರಿಯುತ್ತಾ ಇತ್ತು... ಕಣ್ಣ ನೋಟ ಮಂಜಾಗುತ್ತಾ ಹೋಯಿತು. ಹಗಲಿಗೆ ಇರುಳಿನ ತೆರೆ ಇಳಿಯಿತು. 

No comments:

Post a Comment