Sunday 13 September 2015

ಅವಶೇಷ

"ಅವಧಿ" ಮತ್ತು "ರೀಡೂ" ನಲ್ಲಿ ಪ್ರಕಟವಾದ ನನ್ನ ಸಣ್ಣಕಥೆ .... 

ಅವಶೇಷ 

ಯಾವಾಗಲೂ ಗಿಜಿಗುಡುತ್ತಿದ್ದ ದೇರಣ್ಣನ ಚಾ ಅಂಗಡಿ, ಅಂದೇಕೋ ಬಿಮ್ಮೆಂದು ಕೂತಿತ್ತು. ಅಂಗಡಿಯೆಂದರೆ ನಾಲ್ಕು ಮೇಜುಗಳು, ಅದಕ್ಕೆ ಒತ್ತೊತ್ತಾಗಿ ಇಟ್ಟಿರುವ ಎಂಟು ಕುರ್ಚಿಗಳು, ಒಂದೆರಡು ಗಾಜಿನ ಡಬ್ಬಿ . ಅದರಲ್ಲಿ ಪೆಪ್ಪೆರ್ಮೆಂಟು, ಹಾಲ್ಕೊವ ಇತ್ಯಾದಿ. ಒಳಗೆ ದೇರಣ್ಣ ಕುಳಿತುಕೊಳ್ಳಲು ಒಂದು ಕುರ್ಚಿ, ಒಂದು ಮೇಜು. ಚಾ ಕಾಯಿಸುವ ಪಾತ್ರೆ ಇತ್ಯಾದಿ...  ಹತ್ತಾರು ಜನ ಗಿರಾಕಿಗಳು , ಅವರ ಚಿಟ-ಪಟ ಮಾತುಗಳು , " ನಂಗೊಂದು ಕಾಫಿ .. " , " ಎರಡ್ ಪ್ಲೇಟ್ ಇಡ್ಲಿ ಹಾಕು ದೇರಣ್ಣ .. " ಎಂದು ಕೇಳಿ ಬರುತಿದ್ದ ಯಾವುದೇ ಶಬ್ದಗಳ ಗೋಜಿರಲಿಲ್ಲ. ಸೂರ್ಯ ಬಾನಿನ ಅಂಚಲ್ಲಿ ಇಣುಕಿನೋಡಿ , ಮೈ ಮುರಿದು, ನಿಧಾನಕ್ಕೆ ನಡೆದು ಬಾನಿನ ಮೇಲೆ ಬಂದಾಗಲೂ ದೇರಣ್ಣನ ಅಂಗಡಿ ನಿದ್ರಿಸುತ್ತಲೇ ಇತ್ತು. ಎದುರಿಗೆ ಕರಿಯ ಕಂಬಳಿಯಂತೆ ಚಾಚಿ ಮಲಗಿದ್ದ ರಸ್ತೆಯೂ ನಿದ್ದೆ ಹೋಗಿತ್ತು. ಆಗ್ಗೀಗೆ ರೊಯ್ಯೆಂದು ಹೋಗುವ ವಾಹನಗಳನ್ನು ಬಿಟ್ಟರೆ ಎಂದಿನ ಉತ್ಸಾಹ ಇರಲಿಲ್ಲ. ನೇಸರ ಮೂಡಣದಿ ಕೆಂಪು ಚೆಲ್ಲಿ , ಅದನ್ನು ಹೆಕ್ಕಿಕೊಂಡು ಬಾನಿನಲ್ಲಿ ಇಣುಕುವ ಮೊದಲೇ ಲವಲವಿಕೆಯ ಮದುವೆಮನೆಯಂತೆ ಆಗುತ್ತಿದ್ದ ಮಹಾನಗರಿ , ಇಂದೇಕೋ ದುಗುಡ - ದುಮ್ಮಾನಗಳಿಂದ ಕೂಡಿದ, ಮೌನ ಧರಿಸಿದ ಸುಂದರಿಯ ಮುಖದಂತೆ ಬಾಡಿತ್ತು. ಎಲ್ಲೆಲ್ಲೂ ಸ್ಮಶಾನ ಮೌನ. 

ದೇರಣ್ಣ ಅಂಗಡಿಯೊಳಗಿನಿಂದ ಹೊರಗೆ ಇಣುಕಿದ. ಗಾಢ ಮೌನದೊಂದಿಗಿನ ರಣ ಬಿಸಿಲು ಮುಖಕ್ಕೆ ರಾಚಿತು. ಎಲ್ಲೋ ದೂರದಲ್ಲಿ ಸುಟ್ಟ ಟೈರಿನ ವಾಸನೆ ಮೂಗಿಗೆ ಮೆಲ್ಲಗೆ ಬಡಿಯುತ್ತಿತ್ತು. ಬೆಳಗ್ಗಿನಿಂದ ಒಬ್ಬನೂ ಅಂಗಡಿಯ ಕಡೆ ಮುಖ ಕೂಡ ಹಾಕಿರಲಿಲ್ಲ. ಎದುರಿಗಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಯವರೂ ಕೂಡ ಅಂದು ರಜೆ ಘೋಷಿಸಿದ್ದರು. ಎಲ್ಲರಿಗೂ ತಮ್ಮ ತಮ್ಮ ಜೀವ-ಜೀವನದ ಮೇಲೆ ಆಸೆಯಿರುವುದಿಲ್ಲವೇ ? ... ಹೌದು... ಅಂದು ಮಹಾನಗರ ಬಂದ್ . ಯಾವ ವಿಶೇಷತೆಗೆಂದು ಬಂದ್ ಆಚರಿಸಲಾಗುತ್ತಿದೆ ಎಂದು ದೇರಣ್ಣನಿಗೆ ತಿಳಿದಿರಲಿಲ್ಲ. ತಿಳಿದುಕೊಳ್ಳುವ ಗೋಜಿಗೆ ಹೋಗುವುದೂ ದೇರಣ್ಣನ ಮನಸ್ಥಿತಿಗೆ ಸಾಧ್ಯವಾಗುತ್ತಿರಲಿಲ್ಲ. ದಿನದ ಕೂಳಿಗೆ ಹೋರಾಡುವ ಮನಕ್ಕೆ ಹೊಟ್ಟೆಯ ಆರ್ತ ಧ್ವನಿ ಬಿಟ್ಟು ಬೇರೆ ಕೂಗು ಕೇಳುವುದು ಕಷ್ಟ ಸಾಧ್ಯ. ಪ್ರತಿದಿನ ಬೆಳಗ್ಗೆ ಆರು ಘಂಟೆಗೆ, ತನ್ನ ಕಬ್ಬಿಣದ ಸರಳನ್ನು ಎಳೆದುಕೊಂಡು , ಬಾಗಿಲನ್ನು ಮುಚ್ಚಿಕೊಂಡು ನಿದ್ರಿಸುತ್ತಿರುವ ತನ್ನ ಅಂಗಡಿಯನ್ನು ದೇರಣ್ಣ ಎಚ್ಚರಿಸುತ್ತಾನೆ. ಅನಂತರ ಮಧ್ಯಾಹ್ನ ಸುಮಾರು ಮೂರು ಘಂಟೆಗೊಮ್ಮೆ ಮನೆಯ ಮುಖ ನೋಡಿದರಷ್ಟೇ ಭಾಗ್ಯ. ಮತ್ತೆ ಮನೆ ಕಡೆ ಹೋಗುವುದು ನಿಷೆ ಆವರಿಸಿದ ಮೇಲೆಯೇ. ಐದು ಹಸಿದ ಹೊಟ್ಟೆಗೆ ಅನ್ನ ಹಾಕುವ ಕೈ ದೇರಣ್ಣ. ಅಂಗಡಿಯ ಕೆಲಸಕಾರ್ಯಗಳಲ್ಲಿ ಗಾಢವಾಗಿ ಮುಳುಗಿ ಹೋದರೂ , ಮಗಳ ಮದುವೆಗೆ ಬೀಗರು ಕೇಳಿರುವ ಒಡವೆಗಳು , ಛತ್ರ , ಅಪ್ಪನ ಖಾಯಿಲೆ, ಈ ತಿಂಗಳ ಮನೆ ಬಾಡಿಗೆ, ಹೆಂಡತಿಯ ಒಡವೆ ಗಿರವಿ ಇಟ್ಟಿರುವುದು, ಅದರ ಬಡ್ಡಿ, ಎಲ್ಲವೂ ಅಮೂರ್ತ ಭೂತಗಳಾಗಿ ದೇರಣ್ಣನ ಎದುರು ನೃತ್ಯ ಮಾಡುತ್ತವೆ. ಇವೆಲ್ಲದರ ಎದುರು ಅವನು ನಿತ್ಯವೂ ಹೋರಾಡುತ್ತಲೇ ಇರುತ್ತಾನೆ. 

ಮೇಜಿನ ಮೇಲೆ ಮೊಣಕೈ  ಊರಿ ಹೊರಗಿನ ನಿರ್ವಾತ ಪ್ರಪಂಚವನ್ನೊಮ್ಮೆ ದಿಟ್ಟಿಸಿದ ದೇರಣ್ಣ. ಅರ್ಧ ಖಾಲಿಯಾಗಿ ಉಳಿದಿರುವ ಪೆಪ್ಪರ್ಮೆಂಟಿನ ಡಬ್ಬಿಗಳು, ಬೆಳಿಗ್ಗೆಯೇ ಗಿರಾಕಿಗಳಿಗಾಗಿ ಕಾಯಿಸಿಟ್ಟಿದ್ದ ಚಾ , ಬೇಯಿಸಿಟ್ಟಿದ್ದ ಇಡ್ಲಿಗಳು ಎಲ್ಲವೂ ಒಂದು ವಿಚಿತ್ರ ರೀತಿಯ ಘಮ ಸೂಸಲಾರಂಭಿಸಿದ್ದುವು. ' ಅವು ಹಾಳಾಗಿ ಹೋಗುವುದಲ್ಲಾ ... ಅದರಿಂದಾಗುವ ನಷ್ಟ ಹೇಗೆ ತುಂಬಿಕೊಳ್ಳಲಿ ... ' ಎಂದು ಯೋಚಿಸುತ್ತಾ, 'ಯಾರಾದರೂ ಇತ್ತ ಸುಳಿಯಬಹುದೇನೋ ... ಸ್ವಲ್ಪವಾದರೂ ವ್ಯಾಪಾರ ಆಗಬಹುದೇನೋ ... ' ಎನ್ನುವ ಭರವಸೆಯೇ ದೇರಣ್ಣನ ಆ ದೃಷ್ಟಿಯ ಹಿಂದಿನ ಶಕ್ತಿಯಾಗಿತ್ತು. ಎಲ್ಲರೂ ನಾಳೆಯ ರಾಜಕುಮಾರರೇ ... ಇಂದಿಗಿಂತ ಹೆಚ್ಚು ನಾಳೆ ವ್ಯಾಪಾರವಾಗಬಹುದು... ನಾಳೆ ಇಂದಿಗಿಂತ ಒಳ್ಳೆಯ ಜೀವನ ನಮ್ಮದಾಗಬಹುದು ಎನ್ನುವುದು ಕೆಲ ಮಧ್ಯಮ ವರ್ಗದ ಆಶಾಬೆಳಕು.. 

ಬಿಸಿಲಿನ ಝಳಕ್ಕೂ, ಮಂದವಾಗಿದ್ದ ಅಂಗಡಿಯೊಳಗಿನ ಘಮಕ್ಕೂ ದೇರಣ್ಣನಿಗೆ ಜೋಂಪು ಹತ್ತಿದಹಾಗಾಯಿತು. ಮೇಜಿನ ಮೇಲೆ  ತನ್ನ ತಲೆಯೊರಗಿಸಿ ಕಣ್ಣು ಮುಚ್ಚಿದ. ನಿದ್ರಾದೇವಿ ಅವನನ್ನು ಆವರಿಸಿಕೊಳ್ಳಲು ತನ್ನ ಕೋಮಲವಾದ, ಮಬ್ಬು-ಮಬ್ಬಾದ ಬಲೆಯನ್ನು ಹರವಿಹಾಕುತ್ತಿರುವಾಗಲೇ "ಬಚಾವೋ ... ಬಚಾವೋ ... " ಎಂದು ಕಿರುಚಿಕೊಂಡಂತಹ ಧ್ವನಿಯಿಂದ ಅವನಿಗೆ ಎಚ್ಚರವಾಯಿತು. ದೇರಣ್ಣ ಗಾಬರಿಗೊಂಡ. ಕನಸೇನೋ ಎಂದುಕೊಂಡು ತನ್ನ ತಲೆ ಕೊಡವಿಕೊಂಡ. ತುಸು ಕ್ಷಣದ ನಂತರ ಮತ್ತದೇ ಪುನರಾವರ್ತನೆ ಆಯಿತು ಅದೇ ಜೋರಾಗಿ, ಕರ್ಕಶವಾಗಿ, ಆರ್ತತೆಯನ್ನು ಗರ್ಭೀಕರಿಸಿಕೊಂಡ ಕೀರಲು ಸ್ವರ. ದಿಗಿಲುಗೊಂಡ ದೇರಣ್ಣ , ಅಂಗಡಿಯಿಂದ ಹೊರಬಿದ್ದು ಅತ್ತಿತ್ತ ನೋಡಲಾರಂಭಿಸಿದ.

ತುಸು ದೂರದಲ್ಲಿ ಹೊಗೆಯು ತನ್ನ ಚಕ್ರಾಧಿಪತ್ಯ ಸಾಧಿಸಿತ್ತು. 'ಹೋ .. ಹೋ ..' ಎನ್ನುವ ಏರುದನಿಯ ಸ್ವರ ಕೇಳಲಾರಂಭಿಸಿತು. ಯಾರೋ ಆ ಮಬ್ಬಿನಿಂದ ದೇರಣ್ಣನತ್ತಲೇ ಓಡಿ ಬರುತ್ತಿದ್ದ. ಅವನ ಹಿಂದೆ ಗುಂಪು ಗುಂಪಾಗಿ ಜನ ಅವನನ್ನು ಓಡಿಸಿಕೊಂಡು ಬರುತಿದ್ದರು. ಅವರೆಲ್ಲ ಈ ವ್ಯಕ್ತಿಯನ್ನು ಅಟ್ಟಿಸಿಕೊಂಡು ಬರುತ್ತಿರುವುದು ಸ್ಪಷ್ಟ ಗೋಚರವಾಗಿತ್ತು. ಆ ವ್ಯಕ್ತಿಯ ಬಟ್ಟೆಯೆಲ್ಲಾ ರಕ್ತದಿಂದ  ತೊಯ್ದಿತ್ತು. ದೇರಣ್ಣ ಹೆದರಿದ. ಅವನ ಕಾಲುಗಳು ನಡುಗತೊಡಗಿದವು. ತಾನು ಎಲ್ಲಿದ್ದೇನೆ ಎನ್ನುವ ಅರಿವೂ ಅವಿನಿಗಾಗಲಿಲ್ಲ. ಕಾಲುಗಳು ತನ್ನ ಸ್ವಸ್ಥಾನ ಬಿಟ್ಟು ಹೋಗಲು ನಿರಾಕರಿಸುತ್ತಿದ್ದವು. ಅಟ್ಟಿಸಿಕೊಂಡು ಬರುತ್ತಿದ್ದವರ ಕೈಯಲ್ಲಿ ಹರಿತವಾದ ಮಚ್ಚು, ಕತ್ತಿಗಳಿದ್ದವು... ಹಾಕಿ ಸ್ಟಿಕ್ ಗಳಿದ್ದುವು. " ಎಳ್ಕಳೊ ಬಡ್ಡಿಮಗನ್ನಾ ... ನಮ್ಮೋರನ್ನೆಲ್ಲ ಹೊಡಿತಿದಾರೆ ಅವ್ರು .. ಸಿಕ್ಕಿರೋ ಈ ಮಗನ್ನ ಬಿಡಬಾರದು .. ", ಎಂದು ಗುಂಪಿನಿಂದ ಯಾರೋ ಕೋಗಿದ. ತಕ್ಷಣವೇ .. " ಕತ್ತರ್ಸೋ ...  ಬಾಡಿನೂ ಉಳಿಬಾರ್ದು  " ಎನ್ನುವ ಹತ್ತಾರು ಧ್ವನಿಗಳು ಮೊಳಗಿದುವು. ಆ ವ್ಯಕ್ತಿ ದೇರಣ್ಣನಿಗೆ ಹತ್ತಿರಾಗುತ್ತಿದ್ದ. ದೇರಣ್ಣನ ಎದೆಬಡಿತ ಜೋರಾಗತೊಡಗಿತು. ತುಟಿಗಳು ಅದುರಿದವು. ಕಿರುಚಿಕೊಳ್ಳಬೇಕು ಎಂದೆನಿಸಲು ಆರಂಭಿಸಿತು. ಆದರೆ ನಾಲಗೆ ಹೊರಡುತ್ತಿರಲಿಲ್ಲ. ಹಿಂದೆ ಬರುತ್ತಿದ್ದ ಗುಂಪು ತನ್ನ ಓಟದ ವೇಗ ಹೆಚ್ಚಿಸಿಕೊಳ್ಳುತ್ತಿತ್ತು. ವ್ಯಕ್ತಿ ಸುಸ್ತಾಗಿದ್ದ, ಕಾಲುಗಳು ಕುಂಟಲು ಆರಂಭವಾಗಿದ್ದುವು. ಅವನು ದೇರಣ್ಣನ ಹತ್ತಿರ ಬಂದೇ ಬಿಟ್ಟ. ದೇರಣ್ಣನ ಅಂಗಡಿಯ ಹೊಸ್ತಿಲ ಬಳಿಯೇ ಅವನ ಕಾಲಬಳಿ ಬಂದು ಧೊಪ್ಪನೆ ಬಿದ್ದ. ... ತನ್ನ ಅರ್ಧತೆರೆದ ಕಣ್ಣುಗಳಲ್ಲಿ ಮನದೊಳಗಿನ ಎಲ್ಲಾ ಭಯ, ನೋವು, ಸಂಕಟ ಕೂಡಿಕೊಂಡು , " ಭಾಯ್ .. ಬಚಾವೋ .. " ಎಂದಷ್ಟೇ ತೊದಲಿ ಎವೆ ಮುಚ್ಚಿದ.

ದೇರಣ್ಣ ಸ್ಥಂಭೀಭೂತನಾದ. ಅವನ ತಲೆಯೊಳಗೆ ಸಾವಿರ ಯೋಚನೆಗಳು ಹರಿದಾಡತೊಡಗಿದುವು. ' ಇವನ್ಯಾರು... ಯಾಕೆ ಇಷ್ಟು ಗಾಯಗೊಂಡಿದ್ದಾನೆ... ಏನಾಗಿದೆ .. ಇವನನ್ನು ಯಾಕೆ ಅಟ್ಟಿಸಿಕೊಂಡು ಬರುತಿದ್ದಾರೆ ... ' ಎಂದೆಲ್ಲಾ ಪ್ರಶ್ನೆಗಳು ಒಮ್ಮೆಲೇ ದೇರಣ್ಣನ ತಲೆ ತುಂಬಿದವು. ಗೊಂದಲದಲ್ಲಿದ್ದ ದೇರಣ್ಣನನ್ನು ಯಾರೋ ಎಳೆದು ಕೆಳಗೆ ಕೆಡವಿದರು. ಅಂಗಡಿಯಿಂದ ದೂರ ಬಿದ್ದ ದೇರಣ್ಣ. ಸಾವರಿಸಿಕೊಂಡು ತನ್ನ ಅಂಗಡಿಯತ್ತ ದೃಷ್ಟಿ ಬೀರಿದ. ಹತ್ತಾರು ಜನ ಅಂಗಡಿಯೊಳಗೆ ನುಗ್ಗಿ, ಗಾಜಿನ ಡಬ್ಬಗಳನ್ನು ಎತ್ತಿ ಆ ವ್ಯಕ್ತಿಯ ಮೇಲೆ ಬೀಸಿದರು. ಅದು ಒಡೆದು ಚೂರಾಯಿತು . ಅವನ ತಲೆಯಿಂದ ರಕ್ತ ಹರಿಯತೊಡಗಿತು. " ಒದಿ .. ಬಿಡಬೇಡ " ... " ಹೊಡಿ ... ", "ಕಡಿ ... " ಇವುಗಳ ಝೇಂಕಾರದಿಂದ ಇಡೀ ವಾತಾವರಣ ತುಂಬಿಹೋಯಿತು. ಗಿರಾಕಿಗಳಿಗೆಂದು ಇಟ್ಟಿದ್ದ ಇಡ್ಲಿ, ಚಾ ಎಲ್ಲವೂ ನೆಲದ ಮೇಲೆ ಬಿದ್ದು ಹೊರಳಾಡತೊಡಗಿದುವು. ಕುರ್ಚಿಗಳು ಕಾಲು ಮುರಿದುಕೊಂಡವು. ಬೆಳಗ್ಗೆ ದೇವರ ಫೋಟೋ ಮುಂದೆ ಹತ್ತಿಸಿಟ್ಟಿದ್ದ ದೀಪವೂ ಕೆಳಗೆ ಬಿದ್ದು ಆರಿ ಹೋಗಿ ಸಣ್ಣಗೆ ಹೊಗೆ ಸೂಸತೊಡಗಿತ್ತು. " ಮತ್ತೆ .. ನಮ್ ದೇವರ ಬಗ್ಗೆ ಮಾತಾಡಿದ್ರೆ .. ಬಿಡ್ತೀವಾ ... " ಎನ್ನುತ್ತಾ ಮಲಗಿದ್ದವನ ಹೊಟ್ಟೆಗೊಬ್ಬ ಜೋರಾಗಿ ಒದ್ದ. ಆ ವ್ಯಕ್ತಿಯ ಚಲನೆ ನಿಂತಿತು. ಅವನ ಆರ್ತ ಚೀರಾಟ ನಿಂತಿತು. ದೇರಣ್ಣ ತನ್ನ ಕನಸು, ತನ್ನ ಜೀವನ ತನ್ನ ಕಣ್ಣು ಮುಂದೆಯೇ ಒಡೆದುಹೊಗುವುದನ್ನು ನೋಡುತ್ತಾ ಕೂತ. ಸ್ವಲ್ಪ ಹೊತ್ತು ಚೀರಾಡಿದ ಗುಂಪು , ಮೆಲ್ಲಗೆ ಚದುರತೊಡಗಿತು. ದೇರಣ್ಣನ ಇರುವಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತೆ ಅಲ್ಲಿ ಉಳಿದಿದ್ದ ಕುರ್ಚಿಗಳನ್ನೂ, ಮೆಜನ್ನೂ ಒದ್ದು ಧ್ವಂಸಗೊಳಿಸಿ ಗುಂಪು ಅಲ್ಲಿಂದ ನಿರ್ಗಮಿಸಿತು. ಮತ್ತೆ 'ಹೋ ... ' ಎನ್ನುತ್ತಾ ಮುಂದುವರೆಯಿತು.

ಮೆಲ್ಲಗೆ ಕುಳಿತಲ್ಲಿಂದ ದೇರಣ್ಣ ಎದ್ದ. ತನ್ನ ಅಂಗಡಿಯನ್ನೊಮ್ಮೆ ದಿಟ್ಟಿಸಿದ. ಆಗಸ ಮೇಘಗಳ ಸಾಲಿಂದ ಆವೃತವಾಯಿತು. ಕಡು ಕಪ್ಪು ಮೋಡಗಳು ತನ್ನ ಮಿಂಚಿನ ನಾಲಗೆಯನ್ನೊಮ್ಮೆ ಚಾಚಿ, ದೇರಣ್ಣನನ್ನು ನೋಡಿ ಬಿಕ್ಕಿದಂತೆ ಗುಡುಗಿ ವರ್ಷಾಭಿಷೇಕ ಆರಂಭಿಸಿದುವು. ದೇರಣ್ಣ ಮಳೆಯಲ್ಲಿ ತೊಯ್ಯುತ್ತಲೇ, ಆ ವ್ಯಕ್ತಿಯ ದೇಹವನ್ನು ನೋಡುತ್ತಾ ಉಸಿರುಗಟ್ಟಿ ಕುಕ್ಕುರು ಕೂತ. ಸುತ್ತಲೂ ಹೊಗೆಯ ಮಬ್ಬು ಕವಿದಿತ್ತು. ನಿರ್ಭಾವದ ಅವನ ಮುಖದ ಮೇಲೆ ಮಳೆಯ ಹನಿಗಳು ನಾಟ್ಯ ಆರಂಭಿಸಿದವು. ದೂರದಲ್ಲೆಲ್ಲೋ  ಕೂಗಾಡುವ ಶಬ್ದ , ಪೋಲಿಸ್ ಜೀಪಿನ ಸೈರನ್ ಶಬ್ದ ಕೇಳತೊಡಗಿತು. ದೇರಣ್ಣ ನಿರುಮ್ಮಳನಾಗಿ ಅವಶೇಷದೊಂದಿಗೆ ಒಂದಾಗಿಬಿಟ್ಟ.
   

No comments:

Post a Comment