Wednesday 23 September 2015

ಹಿಂದಿರುಗಿ ನೋಡಿದಾಗ ...

"ಅವಧಿ" ಯಲ್ಲಿ ಪ್ರಕಟವಾದ ನನ್ನ ಲೇಖನ 

ಹಿಂದಿರುಗಿ ನೋಡಿದಾಗ ... 

ಹೀಗೆಯೇ ಎಚ್ಚೆಸ್ವಿ ಅವರ "ಅನಾತ್ಮ ಕಥನ " ಓದುತ್ತಾ ಕುಳಿತಿದ್ದೆ. ಯಾವುದೊ ಸಣ್ಣ ಕಥೆಯ ಮಧ್ಯದಲ್ಲಿ ಅವರು ಯು. ಆರ್. ಅನಂತಮೂರ್ತಿಯವರ " ಸಂಸ್ಕಾರ " ಕಾದಂಬರಿಯ ಬಗ್ಗೆ ಉಲ್ಲೇಖಿಸಿದ್ದರು. ತಕ್ಷಣವೇ ಏನೋ ಹೊಳೆದಂತಾಗಿ ಇಂಟರ್ ನೆಟ್ನಲ್ಲಿ ಸಂಸ್ಕಾರ ಮೊದಲು ಬಿಡುಗಡೆ ಆದ ವರ್ಷ ಯಾವುದೆಂದು ಹುಡುಕಿದೆ. ವರ್ಷ ೧೯೬೫ ನೋಡಿದ ಕೂಡಲೇ ಮುಖದಲ್ಲೊಂದು ಮಂದಾಹಾಸ. ' ಅರೆ, ಸಂಸ್ಕಾರ ಮುದ್ರಣಗೊಂಡು ೫೦ ವರ್ಷ ಆಗಿಹೊಯ್ತಾ ?? ' ಎಂದುಕೊಂಡೆ. ತಕ್ಷಣವೇ ಇಂತಹದೊಂದು ಅದ್ಭುತ ಕಲಾಕೃತಿ ಸೃಷ್ಟಿಸಿದ ಮೇಷ್ಟ್ರ  ಬಗ್ಗೆ ಏನಾದರೂ ಬರೆಯಬೇಕೆಂಬ ಹಂಬಲ ಉಂಟಾಯಿತು. ನಾನು 'ಸಂಸ್ಕಾರ' ಓದಿದ್ದು ಇತ್ತೀಚೆಗೆ. ಅದನ್ನು ಓದಿ ಇನ್ನೂ ವರ್ಷವೂ ಕಳೆದಿಲ್ಲ. ಅನಂತಮೂರ್ತಿಯವರ ಕಟ್ಟಾ ಅಭಿಮಾನಿ ನಾನೇನೂ ಆಗಿದ್ದವನಲ್ಲ. ನನಗೆ ಗೊತ್ತಿದ್ದ ಸಾಹಿತ್ಯವೆಂದರೆ ಪೂ. ಚಂ. ತೇ ಯವರ ಕೆಲವು ಕಥೆಗಳು, ಮತ್ತು ಎಚ್ಚೆಸ್ವಿ ಯವರ ಕೆಲವು ಕವಿತೆಗಳು ಅಷ್ಟೇ. ಪುಣೆಗೆ ಬರುವ ಮುನ್ನ ಸಾಹಿತ್ಯದ ಬಗ್ಗೆ ಒಲವಿದ್ದರೂ ಓದುವ ಹಂಬಲವಂತೂ ಇರಲಿಲ್ಲ.

ರಾತ್ರಿ ಸುಮಾರು ೮ ಘಂಟೆ ಆಗಿದ್ದಿರಬಹುದು, ಅಮ್ಮ ಫೋನ್ ಮಾಡಿದವರು, " ಲೋ .. ಅನಂತಮೂರ್ತಿ ಹೋಗ್ಬಿಟ್ರಂತೆ ಕಣೋ ... " ಎಂದರು. ನಾನೂ ಅದನ್ನೇನು ಬಹಳ ಹತ್ತಿರವಾಗಿ ಸ್ವೀಕರಿಸದೇ , " ಹೌದಾ ... "ಎಂದಷ್ಟೇ ಉತ್ತರಿಸಿ ಫೋನಿಟ್ಟಿದ್ದೆ . ಆಮೇಲೆ ಯಾವಾಗಲೋ ಹೀಗೆಯೇ ಯೂಟ್ಯೂಬಿನಲ್ಲಿ ಏನೋ ಹುಡುಕುತ್ತಾ ಇದ್ದಾಗ ಅಕಸ್ಮಾತಾಗಿ ಸಿಕ್ಕ ಅನಂತಮೂರ್ತಿಯವರ ಒಂದು ವೀಡಿಯೋ ನೋಡಿದೆ. ಭಾರತದ ಫಿಲಮ್ಸ್ ಡಿವಿಷನ್ ರ ಆ ವೀಡಿಯೊ ನೋಡಿ, ಅನಂತಮೂರ್ತಿ ಎಂದರೆ ಏನೋ ಒಂದು ರೀತಿಯ ಆತ್ಮೀಯ ಭಾವನೆ ಹುಟ್ಟತೊಡಗಿತ್ತು. ' ಈ ಮನುಷ್ಯ ಮಾತನಾಡುವ ರೀತಿ ನೋಡಿದರೆ , ಬಹಳ ಭಾವುಕ ಎಂದೆನುಸುತ್ತೆ. ಒಮ್ಮೆ ಇವರ ಯಾವುದಾದರೂ ಕೃತಿ ಓದಬೇಕಲ್ಲಾ ... ' ಎಂದುಕೊಂಡೇ ಸಪ್ನ ಆನ್ ಲೈನ್ ನಲ್ಲಿ ತರಿಸಿಕೊಂಡದ್ದು 'ಸಂಸ್ಕಾರ'. ತರಿಸಿಕೊಂಡದ್ದಷ್ಟೇ ...  ಬಹಳ ದಿನ ನನ್ನ ಮೇಜಿನ ಒಂದು ಮೂಲೆಯಲ್ಲಿಯೇ ಕುಳಿತಿತ್ತು ಪುಸ್ತಕ. ಓದುವ ಮನಸೂ ಆಗಿರಲಿಲ್ಲ, ಸಮಯವೂ ಸಿಕ್ಕಿರಲಿಲ್ಲ. ಇದ್ದಕ್ಕಿದ್ದಂತೆ ಹಾಸನಕ್ಕೆ ಹೊರಡುವ ಪ್ರಮೇಯವೊಂದು ಒದಗಿಬಂತು. ಬಸ್ಸಿನ ದಾರಿ ಖರ್ಚಿಗೆಂದು ವೀಡಿಯೊ ಮೊಬೈಲ್ ಗೆ  ಹಾಕಿಕೊಳ್ಳೋಣ ಎಂದು ಲ್ಯಾಪ್ ಟಾಪ್ ಬಿಚ್ಚಿಟ್ಟವನಿಗೆ ಮೇಜಿನ ಮೇಲೆ ಧೂಳಲ್ಲಿ ಅದ್ದ " ಸಂಸ್ಕಾರ" ಕಾಣಿಸಿತು. ' ಈ ಬಾರಿ ಪುಸ್ತಕ ದಾರಿ ಖರ್ಚಿಗೆ... '  ಎಂದುಕೊಂಡು  'ಸಂಸ್ಕಾರ' ವನ್ನು ಬ್ಯಾಗಿಗೆ ಹಾಕಿಕೊಂಡೆ.

ಅರಸೀಕೆರೆಯಿಂದ ಹಾಸನಕ್ಕೆ ಪಯಣಿಸುವ ಒಂದೂವರೆ ಘಂಟೆ ಅವಧಿಯಲ್ಲೇ ಸಂಸ್ಕಾರದ ೫೦ ಪುಟಗಳನ್ನು ಓದಿ ಮುಗಿಸಿಬಿಟ್ಟೆ. ಎಷ್ಟರ ಮಟ್ಟಿಗೆ 'ಸಂಸ್ಕಾರ' ನನ್ನನ್ನು ಆವರಿಸಿಕೊಂಡುಬಿಟ್ಟಿತು ಎಂದರೆ, ಇದಾದ ಮೇಲೆ ಮೇಷ್ಟ್ರ ಎಲ್ಲಾ ಸಣ್ಣ ಕಥೆಗಳನ್ನೂ , ಅವರ ಕಾದಂಬರಿಗಳನ್ನೂ ಮೂರು ತಿಂಗಳೊಳಗೆ ಕೊಂಡು ಓದಿ ಬಿಟ್ಟೆ. ಸಮಾಜ ಮತ್ತು ವ್ಯಕ್ತಿಯ ನಡುವೆ ನಿಂತು ಕಥೆ ಹೆಣೆಯುವ ಮೇಷ್ಟ್ರ ಕಥಾಶೈಲಿ ನನ್ನ ಮನಸ್ಸಿನ ಮೇಲೆ ಅತ್ಯಂತ ಆಳವಾಗಿ ಪ್ರಭಾವ ಬೀರಿತು. ಕನ್ನಡ ನವ್ಯ ಸಾಹಿತ್ಯದ ನೆಲೆಗಟ್ಟಿನಲ್ಲಿ ಸಾಹಿತ್ಯಿಕವಾಗಿ ಬಹಳ ಜತನದಿಂದ , ನಾಜೂಕಿನಿಂದ ಬಚ್ಚಿಟ್ಟಿದ್ದ ಹಲವಾರು ವಿಚಾರಗಳ ಬಗ್ಗೆ ಬರವಣಿಗೆ ಹೊಮ್ಮಿತು. ಈ ನಿಟ್ಟಿನಲ್ಲಿ 'ಸಂಸ್ಕಾರ' ಒಂದು ಬಹಳ ಮುಖ್ಯ ಕೃತಿ. ವೈಯಕ್ತಿಕ ಆಸೆಗಳು, ಮತ್ತು ಹೊರಗಿನ ಪ್ರಪಂಚಕ್ಕಾಗಿ ಹಾಕುವ ಮುಖವಾಡಕ್ಕೆ ನೈತಿಕವಾಗಿ ಏರ್ಪಡುವ ತಿಕ್ಕಾಟವನ್ನು ಬಹಳ ಸೂಕ್ಷ್ಮವಾಗಿ ಬಿಂಬಿಸುತ್ತೆ. ಈ ತರಹದ 'ಇಬ್ಬಂದಿ'ತನ ಮೇಷ್ಟ್ರ ಸಾಹಿತ್ಯದ ಒಂದು ಬಲವಾದ ಅಭಿವ್ಯಕ್ತಿಯಾಗಿ ಬಂದಿರುವುದನ್ನು ನಾವು ಕಾಣಬಹುದು. 'ಸಂಸ್ಕಾರ' ದ ಹಿಂದೆ ಪ್ರಕಟವಾದ ಅವರ ಸಣ್ಣ ಕಥೆಗಳಲ್ಲೂ ಈ ವಿಚಾರ ವಿದಿತ. ಅವರ "ಖೋಜರಾಜ ", " ಪ್ರಶ್ನೆ", "ಕಾರ್ತೀಕ", "ಘಟಶ್ರಾದ್ಧ"  ಮತ್ತು ಅದರ ನಂತರ ಹೊರ ಬಂದ "ಸೂರ್ಯನ ಕುದುರೆ " ಯಲ್ಲೂ ಬಹಳ ಶ್ರೇಷ್ಠವಾಗಿ ಹೊರಹೊಮ್ಮಿದೆ. ನಂಬಿಕೆ ಮತ್ತು ಆಚರಣೆಯ ತೊಡಕಿನಲ್ಲೇ ಸಿಕ್ಕಿಹಾಕಿಕೊಳ್ಳುವನು ಪ್ರಾಣೇಶಾಚಾರ್ಯ. ಅಂದಿನ ಸಾಮಾಜಿಕ ವ್ಯವಸ್ಥೆ, ಪ್ಲೇಗ್ ತರಹದ ಖಾಯಿಲೆಗಳು ಮತ್ತು ಅದರಂತೆಯೇ ಜನರ ಜೀವಾಳದಲ್ಲಿ ಬಿಗಿ ಬೇರು ಬಿಟ್ಟಿದ್ದ ಜಾತಿ ವ್ಯವಸ್ಥೆಯನ್ನು ಒಂದೇ ತಕ್ಕಡಿಯಲ್ಲಿ ತೂಗುವ ಅದ್ಭುತ ಸಮೀಕರಣೆ 'ಸಂಸ್ಕಾರ'ದ್ದು. ಪ್ರಾಣೇಶಾಚಾರ್ಯನ ಪಾತ್ರ, ಸಿಕ್ಕರೂ ಸಿಗದ ಒಂದು ದಿವ್ಯಕ್ಕೆ ಧ್ಯಾನಸ್ಥನಾಗಿ ಕೂರುವ ಸನ್ಯಾಸಿಯಂತೆ ತೋರುತ್ತದೆ. ಎಲ್ಲವನ್ನೂ ಬಿಟ್ಟುಬಿಡುವೆ ಎನ್ನುವ ಹುಚ್ಚು ಧೈರ್ಯ, ಸಮಾಜದ ಎಲ್ಲ ಕಟ್ಟುಪಾಡುಗಳನ್ನು ಕಿತ್ತೆಸೆಯುತ್ತೇನೆ ಎನ್ನುವ ಮನೋಧೈರ್ಯ ಎಲ್ಲವನ್ನೂ ಮೇಳೈಸಿಕೊಂಡೇ , ಅದರ ಬಗ್ಗೆಯೂ ಮತ್ತೊಮ್ಮೆ ಅನುಮಾನದ ದೃಷ್ಟಿ ಬೀರುವ ಪಾತ್ರ ಮೇಷ್ಟ್ರ "ಸ್ವ" ಚಿಂತನೆಯ ಫಲವಿದ್ದಿರಬಹುದೋ ಏನೋ !!!

ಸಾಹಿತ್ಯಿಕವಾಗಿ ನೋಡಿದಾಗ 'ಸಂಸ್ಕಾರ' ಹೊಸ ರೀತಿಯ ಕಥೆಗಾರಿಕೆಯನ್ನು ಕನ್ನಡಕ್ಕೆ ತಂದ ಕೃತಿ ಎನ್ನಬಹುದು. ಆ ಹಿಂದೆ ಬಂದಿದ್ದ ಯಾವುದೇ ಕೃತಿಗಳು, ಸಮಾಜದ ಕೊಳಕು ವ್ಯವಸ್ಥೆಯನ್ನೂ, ಅದರೊಂದಿಗೆ ದಾರ್ಶನಿಕ ತತ್ವಜ್ಞಾನವನ್ನು ಒಂದೇ ತಟ್ಟೆಯಲ್ಲಿ ಉಣಬಡಿಸಿದ್ದಿಲ್ಲ. ಆ ಕೆಲಸವನ್ನು ಬಹಳ ಒಪ್ಪವಾಗಿ 'ಸಂಸ್ಕಾರ' ದಲ್ಲಿ ಮೇಷ್ಟ್ರು ಮಾಡಿದರು. ಅದರಲ್ಲಿನ ವೈಚಾರಿಕ ಶ್ರೇಷ್ಠತೆ ಎಷ್ಟು ಆಳವಾಗಿತ್ತು ಎಂದರೆ, ಮುಂದಿನ ಹಲವಾರು ಪೀಳಿಗೆಯವರು ಅದರಿಂದ ಪ್ರಭಾವಿತರಾಗಿದ್ದು ಸುಳ್ಳಲ್ಲ. ಮೇಷ್ಟ್ರು ತಮ್ಮ ನಂತರದ ಕೃತಿಗಳಲ್ಲಿ  ಇಷ್ಟು ಪ್ರಭಾವ ಬೀರಲಿಲ್ಲವಾದರೂ , "ಸೂರ್ಯನ ಕುದುರೆ"ಯಂತಹ ಅದ್ಭುತ ಸಣ್ಣಕಥೆಗಳನ್ನು ಸೃಷ್ಟಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ, ಹೇಳಬೇಕು ಎನಿಸಿದ್ದನ್ನು ಬಹಳ ನೇರವಾಗಿ ಹೇಳುವ ಅವರ ಕಥನ ಶೈಲಿ, ಮತ್ತು ವಿಚಾರವನ್ನು ಬಿಡಿಸಿಡುವ ರೀತಿ , ಆಂಗ್ಲ ಕಥೆಗಾರ ಲಾರೆನ್ಸನ ನೆನಪು ತರಿಸುತ್ತೆ.

ಸಮಾಜಮುಖಿಯಾಗಿ ತಮ್ಮನ್ನು ತೆರೆದುಕೊಳ್ಳುವ ಆಕಾಂಕ್ಷೆಯಲ್ಲಿ ಅವರ ಕಥೆಗಳ ರೀತಿಯೂ ಬದಲಾಯಿತು ಎಂದೇ ಹೇಳಬೇಕು. ಅವರ ನಂತರದ ರಚನೆಗಳಾದ "ಆಕ್ರಮಣ " , " ರೂತ್ ಮತ್ತು ರಸುಲ್ " ಇವೆಲ್ಲವೂ ಅವರ ರಾಜಕೀಯ ದೃಷ್ಟಿಯಿಂದ ಹೊಸಥರದವು ಎನ್ನಿಸಿದರೂ ಒಬ್ಬ ಸಾಮಾನ್ಯ ಓದುಗನಿಗೆ ಮುಟ್ಟುವುದು ಕಷ್ಟಸಾಧ್ಯವೇ. ಅವರ "ಅವಸ್ಥೆ", ಯೂ ಅದೇ ದಾರಿಯದ್ದು. ಆ 'ಇಬ್ಬಂದಿ'ತನ ಎಷ್ಟರ ಮಟ್ಟಿಗೆ  ಅವರ ಮನಸ್ಸಿನ ಧ್ಯಾನಕೇಂದ್ರವಾಗಿತ್ತೆಂದರೆ ಅವರು ಪೂರ್ವ ಮತ್ತು ಪಶ್ಚಿಮ ದ ವ್ಯತ್ಯಾಸವನ್ನೂ "ಕ್ಲಿಪ್ ಜಾಯಿಂಟ್" ಅಲ್ಲಿ ಬರೆದರು. "ಮೌನಿ"ಯಲ್ಲಿ ಯೋಚನೆ ಮತ್ತು ಕ್ರಿಯೆಯ ನೈತಿಕ ತಿಕ್ಕಾಟವನ್ನು ವರ್ಣಿಸಿದರು, "ಭವ" ದಲ್ಲಿಯೂ "ದಿವ್ಯ" ದಲ್ಲಿಯೂ ... ಹೀಗೆ ಆಂತರಿಕ ತಿಕ್ಕಾಟವನ್ನು ಮತ್ತು ಅದರ ಹೊರಗಿನ ಅಭಿವ್ಯಕ್ತಿಯನ್ನು ಸಮೀಕರಿಸಿ ನೋಡುವ ದೃಷ್ಟಿ ಇವರ ಎಲ್ಲ ಕೃತಿಗಳಲ್ಲೂ ಕಂಡುಬರುತ್ತೆ. ಆದ್ದರಿಂದಲೇ ನನ್ನ ಅತ್ಯಂತ ಇಷ್ಟದ ಹತ್ತು ಕಥೆಗಳು ಎಂದು ನಾನೇನಾದರೂ ಎಣಿಸಲು ಹೊರಟರೆ, ಅದರಲ್ಲಿ ಮೇಷ್ಟ್ರ "ಘಟಶ್ರಾದ್ಧ ", " ಸಂಸ್ಕಾರ" ಮತ್ತು ಪೂ. ಚಂ. ತೇ ಯವರ " ತಬರನ ಕಥೆ " ಇಲ್ಲದೆ ಆ ಲಿಸ್ಟ್ ಸಂಪೂರ್ಣ ಆಗುವುದೇ ಇಲ್ಲ. ಸಮಾಜಮುಖಿಯಾಗಿ ಬದುಕಬೇಕಾದವನು ಪ್ರಶ್ನೆ ಕೇಳದೇ ಯಾವ ವಿಷಯವನ್ನೂ ಒಪ್ಪಬಾರದು  ಎನ್ನುವ ಬಹಳ ಉತ್ತಮ ಮಾರ್ಗ ಹಾಕಿಕೊಟ್ಟ ಮೇಷ್ಟ್ರು ಇಂದು ನಮ್ಮೊಂದಿಗಿಲ್ಲ. ಅವರೇ ಹೇಳುವಂತೆ , " ಒಂದು ಕಾಲವನ್ನು ಬದುಕಿಸಿಡುವ ಕಾಯಕಕ್ಕೆ ನಾವು ಬರೆಯಬೇಕು .. ". ಚಿಂತನಪರ ಸಮಾಜವನ್ನು ಜೀವಂತವಾಗಿರಿಸಿ,  ಬದುಕಿಸಿಟ್ಟ ಅವರ ಕಥೆಗಳು ಇನ್ನೂ ಅವರ ಇರವನ್ನು ನಮ್ಮ ಎದೆಯಾಳದಲ್ಲಿ ಮೂಡಿಸುತ್ತದೆ.  ಮೇಷ್ಟ್ರು ನಮ್ಮನ್ನು ಬಿಟ್ಟು ಹೋದ ರೀತಿ , ಈಗಲೂ ಮೇಳಿಗೆಯಿಂದ  ಅಗ್ರಹಾರಕ್ಕೆ ಗಾಡಿ ಹತ್ತಿ ತಣ್ಣಗೆ ಮಾತನಾಡುತ್ತಲೇ ಹೋದ ಪ್ರಾಣೇಶಾಚಾರ್ಯರ ನೆನಪನ್ನು ತರಿಸದೇ ಇರುವುದಿಲ್ಲ.

Happy 50th anniversary  to "ಸಂಸ್ಕಾರ" ... 

No comments:

Post a Comment