Saturday, 9 December 2017

ಮೌನ

ಮೌನ ... ಮುಗಿಯದ ಮೌನ
ಎಷ್ಟು ದೂರ ನಡೆದರೂ, ಓಡಿ ದಣಿದರೂ
ಖಾಲಿಯಾಗದ ಮೌನ,

ಗಾವುದ ಗಾವುದ ದೂರದಲ್ಲಿ ಎಲ್ಲೋ
ಸಮುದ್ರದ ಮೊರೆತ,
ಧ್ವನಿ ಕ್ಷೀಣ ... ಕ್ಷೀಣ,
ಕಾಲದ ಗರ್ಭ ಸೀಳಿ ಬಂದ ವರ್ಷಗಳ ಹಿಂದಿನ ಸದ್ದು ,
ಮಳೆ ಬಂದು , ಹನಿಯಾಗಿ
ದಾರಿ ಉದ್ದಕ್ಕೂ ಉಜ್ಜಿ ಹರಿದು
ಸಾಗರ ಸೇರಿದ ಸದ್ದು ,
ಗಾವುದ ಗಾವುದ ದೂರದ ಸದ್ದು .

ಕಾಲದ ಸರಹದ್ದು ನನ್ನ ಕಿವಿಗಳು ...
ಅಷ್ಟೇ ಏಕೆ ನೆನಪಿನ ಕೈಗೆಟುಕದ್ದು ,
ಅದರ ಹಿಂದೆ ಓದಿದಷ್ಟು ದೂರ ಕತ್ತಲು ,
ಅದು ನನ್ನ ದೂಡಿ ಮುಂದೋಡುವ ನನ್ನದೇ ನೆರಳು.

ನನ್ನ ಮುಂದಿರುವುದು ಬಿಗಿಯಾದ ಮೌನ,
ವಿಸ್ತಾರವಾದ ಮೌನ ,
ಅಳು, ನಗು, ಭಯ, ಬೆದರು
ಎಲ್ಲವನ್ನೂ ಒಂದೇ ಏಟಿಗೆ ನುಂಗಿ ಹಾಕಿದ ಮೌನ,
ಬೆನ್ನಿಗೆ ಹಾಕಿದ ನೆನಪಿನ ಬ್ಯಾಗಿನಲ್ಲಿ
ಅಲ್ಲಲ್ಲಿ ಡಬ್ಬಿಗಳ, ಬಾಟ್ಲಿಗಳ ಸದ್ದು

ಮೊರೆತ ಮತ್ತೆ ಕ್ಷೀಣ ಕ್ಷೀಣ
ಮತ್ತಷ್ಟು ಮೌನ , ಮತ್ತಷ್ಟು ಮೌನ 

No comments:

Post a Comment