Tuesday 5 February 2019

ಮೊದಲಸಲವಲ್ಲ

ಮೊದಲಸಲವಲ್ಲ ...
ಇರುಳ ಮಬ್ಬಿನಲಿ ನಿನ್ನ ಕೈ ಹಿಡಿದು  ನಡೆವಾಗ ಈ ಪ್ರಶ್ನೆ ಮೂಡಿದ್ದು ಮೊದಲಸಲವಲ್ಲ  ,
" ಈಗಲಾದರೂ  ... " ಎನ್ನುವ ಈ ಪ್ರಶ್ನೆ ಮೊದಲಸಲವೇನಲ್ಲ,
ಬಲಿತು, ಹಣ್ಣಾಗಿ, ಬಿರಿದು , ತಿರುಳು ತಿರುಳಾಗಿ ಮತ್ತೆ ಮತ್ತೆ ಸುರುಳಿ ಸುತ್ತಿ ನನ್ನತ್ತಲೇ ಬರುವುದು ಈ ಪ್ರಶ್ನೆ .

ಹಣೆಯಲ್ಲಿ ಜೋರು ಜೋರು ಕುಂಕುಮವಿಟ್ಟು , ಹೂ ಮುಡಿದು, ಕೈಗೊಂದಷ್ಟು ಬಳೆ
 ಹಾಕಿ ಬೂಟ್ಸಿನೊಂದಿಗೆ ನೀನು ನನ್ನೊಟ್ಟಿಗೆ ವಾಕಿಂಗ್ ಮಾಡಲು ಆರಂಭಿಸಿ ಒಂದಷ್ಟು ಸಂವತ್ಸರಗಳೇ ಕಳೆದಿರಬೇಕಲ್ಲವೇ ?
 ನನಗೂ ತಲೆಯಲ್ಲಿರುವ ನೆರೆಕೂದಲು ಒಂದೊಂದಾಗಿ ಉದುರಿ, ಬೋಳಾಗಿ,
ಧ್ವನಿ ನಡುಗುವ ಸಮಯವಾಗಿದೆ.

ಕುಂಟುತ್ತಾ ನಡೆದು ,  ನಿನ್ನ ಕೈಹಿಡಿದು, ಮುವ್ವತ್ತಮೂರು ವರ್ಷಗಳನ್ನು ದೂಡಿದ್ದೇನೆ ,
ಬೆಳೆಗ್ಗೆಗೊಂದು, ಸಾಯಂಕಾಲಕ್ಕೊಂದು ಗುಳಿಗೆ ನುಂಗಿ ಈ ಕಾಯದೊಳಗೆ ಸಣ್ಣಗೆ
ಬಡಿವ, ಮುಷ್ಟಿಯಷ್ಟಿರುವ ಹೃದಯವನ್ನು ಕಾಯ್ದುಕೊಂಡಿದ್ದೇನೆ.

ನಿನ್ನನ್ನೇನು ಕಂಡು , ನೋಡಿ, ಮೆಚ್ಚಿ ಕೈಹಿಡಿದದ್ದೇನಲ್ಲ ,
ಅಮ್ಮನ ಕಣ್ಣಿಗೆ ಅಂದವಾಗಿ ಕಂಡೊ, ಮನೆಗೆಲಸ ಚೊಕ್ಕವಾಗಿ ಮಾಡುವೆಯೆಂದೋ
ನನ್ನೊಟ್ಟಿಗೆ ಕಟ್ಟಿ ಕೋಣೆಗೆ ದಬ್ಬಿದ್ದರು,
"ಭಯವಾಗುತ್ತಿದೆಯೇ ?" ಎಂದು ಕೇಳುವ ಸೌಜನ್ಯವೂ ನನ್ನಲ್ಲಿರಲಿಲ್ಲ,
ವರ್ಷತುಂಬುವುದರೊಳಗೆ ತೊಟ್ಟಿಲು ತೂಗಿದ್ದೇ ಸಾಧನೆ.

ಸೆಟೆದುಕೊಂಡ ಮರದ ದಿಮ್ಮಿಯಂತೆ ನೀ ನನ್ನ ಕರೆವಾಗ ಅತ್ತ ತಿರುಗಿ ಮಲಗಿದ್ದೇನೆ
ನಿನ್ನ ಕಣ್ಣು ಜಿನುಗುತ್ತಿದ್ದರೂ ' ನನ್ನದೇ ಸರಿ ' ಎಂದು ಬೀಗಿದ್ದೇನೆ , ತೋರಿದ್ದೇನೆ ,
ನೀನು ಕೈಗೊಂದಷ್ಟು ಬಳೆ ಹಾಕಿ " ರೀ .. ಮಾತ್ರೆ ತೆಗೊಳ್ಳಿ !" ಎನ್ನುವಾಗ
" ನಾನು ನಿನಗೆ ಸರಿಹೊಂದುವ ಗಂಡೇ ? " ಎನ್ನುವ ಪ್ರಶ್ನೆ ಕಾಡುವುದು,

ಖಂಡಿತಾ ಹೇಳುವೆ , ಮೊದಲಸಲವೇನಲ್ಲ !


No comments:

Post a Comment