Monday, 22 December 2014

ಆಗಂತುಕ

ನಾವೆಲ್ಲರೂ ತಾಯ್ತಂದೆಯರ, ಅಜ್ಜಿ-ಅಜ್ಜಂದಿರ ಕಥೆಗಳನ್ನೇ ಕೇಳಿ ಬೆಳೆದವರು. ರಾಜ-ರಾಣಿ ಕಥೆಗಳು, ಪಂಚತಂತ್ರದ ಕಥೆಗಳು, ಕಾಗಕ್ಕ-ಗುಬ್ಬಕ್ಕನ ಕಥೆ... ಎಲ್ಲವೂ ನನ್ನ ನೆನಪಿನ ಬುತ್ತಿಯಲ್ಲಿ ಇನ್ನೂ ಹಚ್ಚ  ಹಸಿರಾಗಿದೆ. ನಾನೀಗ ಬರೆಯ ಹೊರಟಿರುವ ಕಥೆಯ ಮೂಲ ಕರ್ತೃ ನನ್ನ ತಂದೆ. ಚಿಕ್ಕಂದಿನಲ್ಲಿ ನನ್ನ ಮಲಗಿಸಲು ನಮ್ಮಪ್ಪ ಹತ್ತು ಹಲವು ಕಥೆಗಳ ಸೃಷ್ಟಿಕರ್ತರಾಗುತ್ತಿದ್ದರು. ನಾನು ಕೇಳಿದ ತಕ್ಷಣ ಕಥೆ ಹೇಳಲು ಅನುವಾಗುತಿದ್ದ ನನ್ನ ತಂದೆ, ಒಬ್ಬ ಅದ್ಭುತ ಆಶುಕಥೆಗಾರ. ಇಂದಿಗೂ ಅವರ ಕಥೆಗಳನ್ನು ಕೇಳಲು ನಾನು ಹಾತೊರೆಯುವುದು ನಿಜ. ಕಥೆಯ ಮೂಲ ವಸ್ತುವನ್ನು ತುಸು ಭಿನ್ನವಾಗಿ ಪ್ರಸ್ತುತಪಡಿಸುತಿದ್ದೇನೆ.

ಆಗಂತುಕ 
"ಥೂ... ಈ ದರಿದ್ರ ಮಳಿ ಎಂತಕ್ ಬರ್ತದೋ... " ಎಂದು ಗೊಣಗುಡುತ್ತಾ ಸೋಮಯ್ಯ ರಾಜೇಶನ ಹೋಟೆಲಿನ ಒಳಗೆ  ಬಂದವನೇ ಛತ್ರಿ ಮಡಿಸುತ್ತಾ ಮಳೆಗೆ ಹಿಡಿ ಶಾಪ ಹಾಕಿದ. ಹೊರಗೆ 'ಧೋ' ಎಂದು ಮಳೆ ಸುರಿಯುತ್ತಿತ್ತು. ಮಲೆನಾಡಿನ ಪ್ರಚಂಡ ಮಳೆಯ ಆರ್ಭಟಕ್ಕೆ ಸೋಮಯ್ಯನ ಛತ್ರಿ ಕ್ಷುದ್ರ ಕೀಟದಂತೆ ಕಂಡಿರಬೇಕು, ಆಚೆ ಈಚೆ ಎಲ್ಲ ಕಡೆಯಿಂದ ರಭಸವಾಗಿ ಬೀಸಿದ ಎರಚಲಿಂದ ಛತ್ರಿ ಹಿಡಿದೂ ಅವನಿಗೆ ಕೊಂಚವೂ ಉಪಯೋಗವಾದಂತಿರಲಿಲ್ಲ. ಬಂದವನೇ ಹೆಗಲಲ್ಲಿದ್ದ ಒದ್ದೆ ಟವಲಿನಿಂದ ತಲೆ ಒರೆಸಿಕೊಳ್ಳುವ ನಿರರ್ಥಕ ಸಾಹಸ ಮಾಡುತ್ತಿದ್ದ. ಸುತ್ತಲೂ ಗವ್ವನೆ ಕತ್ತಲು ಕವಿದಿತ್ತು. ಮಳೆಗಾಲ ಅಂದರೆ ಹೀಗೆಯೇ, ಕಾಡಿನ ಮಧ್ಯೆ ಇಣುಕಿ ಬರುವ ಪವರ್ ಲೈನಿನ ಮೇಲೆ ಮರದ ರೆಂಬೆಯೋ, ಅಥವಾ ಇನ್ನೇನೋ ಬಿದ್ದು ತುಂಡಾಗಿರುತ್ತದೆ. ಅದನ್ನು ಕಂಡುಹಿಡಿಯಲು ಹೋಗುವ ಲೈನ್ಮನ್ ಸುಲ್ತಾನ, " ಕರೆಂಟು ಯಾವಾಗ ಬರುತ್ತೋ ?? " ಎಂದು ಕೇಳಿದ ಎಲ್ಲರಿಗೂ, ಶೆರ್ಲಾಕ್ ಹೊಲ್ಮ್ಸಿನ ರೇಂಜಿನಲ್ಲಿ, "ಎಲ್ಲೋ ಲೈನ್ ತುಂಡಾಗಿದೆ ಅನ್ಸತ್ತೆ, ನಾನು ಹೋಗಿ ಹುಡುಕಿ ಇವತ್ ರಾತ್ರಿ ಒಳಗೆ ಛಾರ್ಜ್ ಮಾಡ್ಸ್ಬಿಡ್ತೀನಿ ಅಣ್ಣ...  " ಎಂದು ಕರೆಂಟು ಹೋದ ನಾಲ್ಕು ದಿವಸದಿಂದಲೂ ಹೇಳುತ್ತಲೇ ಇರುವುದು ನಾವು ಕಾಣುವ ಸಾಮಾನ್ಯ ಸಂಗತಿ. ಸೂರಂಚಿನಿಂದ ಬೀಳುತ್ತಿದ್ದ ನೀರನ್ನು ಸಂಗ್ರಹಿಸಲು ರಾಜೇಶ ಎರಡೂ ಕೈಲಿ ಬಕೆಟ್ ಹಿಡಿದು, ತಲೆಗೊಂದು ರುಮಾಲು ಬಿಗಿದು, ಪಂಚೆ ಮೇಲೆ ಎತ್ತಿ ಕಟ್ಟಿ, ಮಳೆಯ ವಿರುದ್ಧ ಯುದ್ಧ ಮಾಡಲು ಸನ್ನದ್ಧನಾಗಿ ಬರುವ ಯೋಧನಂತೆ ಬಂದವನೇ , " ಏನ್ ಸೋಮಣ್ಣ... ಇಲ್ಲೇ ಇದ್ದೀಯ, ಕೂಡ್ರಸ್ತೆ ಜೀಪ್ ಹೋಯ್ತಲ್ಲ " ಎಂದು ಮಳೆಯನ್ನು ಬೈಯುತ್ತಾ ಛಳಿಯಿಂದ ನಡುಗುತ್ತಿದ್ದ ಸೋಮಣ್ಣನನ್ನು ಕೇಳಿದ. " ಹೂ ಕಣ್ ರಾಜೇಶ, ಅಯ್ಯೋ ಅದು ಮೂಲೆ ಮನೆ ಶೇಖರನ್ ಹತ್ರ ಮಾತಾಡ್ತಾ ಕುಂತ್ ಬಿಟ್ಟೆ, ಟೇಮು ಓಗಿದ್ದೆ ಗೊತಾಗ್ಲಿಲ್ ನೋಡು.. ಗುಳ್ಳೆ ನರಿ ಬಸ್ಸಲ್ ಹೊದ್ರಾತ್ ಬುಡು.. ಅದಿರ್ಲಿ, ಒಂದು ಒಳ್ಳೆ ಕಾಪಿ ಕೊಡು " ಎಂದು ತಾನು ಇನ್ನೂ ಇಲ್ಲೇ ಇರುವುದಕ್ಕೆ ಸಮಜಾಯಿಷಿ ಕೊಟ್ಟ. " ಸುಬ್ಬೂ.. ಸೋಮಣ್ಣಗೆ ಒಂದು ಬಿಸಿ ಬಿಸಿ ಕಾಪಿ ಕೊಡು " ಎಂದು ಕೂಗಿದ ರಾಜೇಶನ ಧ್ವನಿಗೆ "ಹಾ ... ಬಂದೆ " ಎನ್ನುವ ಸಣ್ಣ ಪ್ರತಿಧ್ವನಿ ಒಳಗಿನಿಂದ ಬಂತು. ಸುಬ್ಬೂ ರಾಜೇಶನ ಹೋಟೆಲಿಗೆ ಬಂದಾಗ ಅವನಿಗೆ ಆರೇಳು ತಿಂಗಳಿರಬೇಕು. ಯಾರೋ ರಾಮೋತ್ಸವದ ಟೈಮ್ ನೋಡಿಕೊಂಡು ಬೇಡದ ಕೂಸನ್ನು ಹೋಟೆಲಿನಲ್ಲೇ ಬಿಟ್ಟು ಹೋಗಿದ್ದರು. ರಾಜೇಶ ಎಷ್ಟೇ ಹುಡುಕಿದರೂ ಅವರ ಪತ್ತೆ ಆಗಲಿಲ್ಲ. ಆದ್ದರಿಂದ ಹೋಟೆಲಿನ ಮಾಣಿಯಾಗಿ ಮಾರ್ಪಾಡಾದ ಸುಬ್ಬು, ರಾಜೇಶನ ಬಲಗೈ ಅಂದರೂ ತಪ್ಪೇನಿಲ್ಲ. ಬಿಸಿ ಬಿಸಿ ಕಾಫಿ ಹಿಡಿದು ಹತ್ತು ಹನ್ನೊಂದರ ಹರೆಯದ ಹುಡುಗ ಬಂದು ಸೋಮಣ್ಣನ ಮುಂದೆ ಕಾಫಿ ತುಂಬಿದ ಲೋಟ ಇಟ್ಟ. ಹೋಟೆಲಿನಲ್ಲಿ ಇನ್ನ್ಯಾರೂ ಇರಲಿಲ್ಲ. ಇನ್ನೇನು ಮುಚ್ಚುವ ಹೊತ್ತಾಗಿತ್ತು. ರಾಜೇಶ ಒಳಗೆ ಬಂದವನೇ ಸೋಮಣ್ಣನ ಮುಂದೆ ಕುರ್ಚಿ ಎಳೆದುಕೊಂಡು ಕುಳಿತ. ಆ ವೇಳೆಗೆ ಮಳೆಯೂ ತನ್ನ ಆರ್ಭಟ ನಿಲ್ಲಿಸಿತ್ತು. ತುಂತುರಾಗಿ ಹೊರಗಿನ ವಾತಾವರಣದ ತೇವ ಹೆಚ್ಚಿಸುತ್ತಿತ್ತು. ಸುಬ್ಬೂ ಹೊರಗೆ ಬಂದು, ಸೂರಿಂದ ತೊಟ್ಟಿಕ್ಕಿ ಬಳುಕುತ್ತಾ ಬಾಗುತ್ತಾ ಧರೆಗೆ ಇಳಿಯುವ ನೀರಿನ ಹನಿಗಳೊಂದಿಗೆ ಕೇರಂ ಆಡಬಹುದೋ ಎಂದು ಕೈ ಬೆರಳಿನಿಂದ ಹೊಡೆಯುತ್ತಲೇ ಇದ್ದ. ಇವನು ಇತ್ತ ಗಮನ ಕೇಂದ್ರೀಕರಿಸಿ ಹನಿಯ ನೋಡ ಹೋದಂತೆಲ್ಲಾ, " ಏ... ಏಲಕ್ಕಿ ಎಷ್ಟಾದರೂ ನಮ್ ಕೈಗೆ ಹತ್ತಲ್ಲ ಬುಡು... ", " ನೀನ್ಯಾಕ್ ಅವನ್ ಹತ್ರ ಹೋದೋ... " ಎಂದು ಲೋಕಲ್ ರಾಜಕೀಯ ಮಾತಾಡುತ್ತಿದ್ದ ಸೋಮಯ್ಯ ಮತ್ತು ರಾಜೇಶನ ಧ್ವನಿ ಸುಬ್ಬೂಗೆ ಬರಬರುತ್ತಾ ಕ್ಷೀಣವಾಗುತ್ತಾ ಹೋಯಿತು. ಕಣ್ಣಿಗೆ ರಾಡಿ ಎರಚಿದಂತೆ ಬಂದ ಬೆಳಕಿನ ಕಿರಣದ ಜೊತೆ ಪೊಂ ಪೊಂ ಸದ್ದು ಮಾಡಿ ಗುಳ್ಳೆ ನರಿ ಬಸ್ಸು ರಾಜೇಶನ ಹೋಟೆಲಿನ ಮುಂದೆ ಬಂದು ನಿಂತಿತು. ಇದಕ್ಕೆ ಏಕೆ ಗುಳ್ಳೆನರಿ ಬಸ್ಸು ಎಂದು ಕರೆಯುತ್ತಾರೆ ಎನ್ನುವುದು ಸುಬ್ಬೂಗೆ ಗೊತ್ತಿರಲಿಲ್ಲ. ರಾತ್ರೋ ರಾತ್ರಿ ಗುಳ್ಳೆ ನರಿ ಹಾಗೆ ಕೆಲವೊಮ್ಮೆ ಬರುವ, ಹಲವು ಬರಿ ಕೈ ಕೊಡುವುದಕ್ಕೋ ಏನೋ ಅದಕ್ಕೆ ಈ ಹೆಸರು ಇಟ್ಟಿದಾರೆ ಎಂದುಕೊಂಡಿದ್ದ. ಒಂದು ರೀತಿಯಲ್ಲಿ ಅವನ ಊಹೆಯೂ ನಿಜವೇ ಆಗಿತ್ತು. ಕಿಟಕಿ ಬಾಗಿಲಿಲ್ಲದ ಆ ಬಸ್ಸು ಯಾವಾಗ ಬೇಕಿದ್ದರೂ, ಎಲ್ಲಿ ಬೇಕಿದ್ದರೂ ' ನಾನಿನ್ನು ಮುಂದೆ ಹೋಗಲಾರೆ... ' ಎಂದು ಕುಳಿತುಕೊಂಡು ಬಿಡುತಿತ್ತು. ಅಷ್ಟೆಲ್ಲಾ ಅವಾಂತರ ಮಾಡಿದರೂ ರಾತ್ರಿ ಸಂಚಾರ ವ್ಯವಸ್ಥೆಯೇ ಇಲ್ಲದೆ ದ್ವೀಪವಾಗುವ ಉಚ್ಚಂಗಿಯಿಂದ ಕೂಡುರಸ್ತೆಗೆ ಹೊರಡುವ ಎಲ್ಲ ಪ್ರಯಾಣಿಕರಿಗೂ ಜೀವನಾಡಿ ಆಗಿದ್ದಿತು.

ಬಸ್ಸಿನ ಕಂಡೆಕ್ಟರ್ ವೆಂಕು ರಾಜೇಶನ ಸ್ನೇಹಿತ, ಇಳಿದು ಬಂದವನೇ ರಾಜೇಶನ ಹೋಟೆಲಿನೊಳಗೆ, " ಬೇಗ ಕಾಫಿ ಕೊಡೊ ... " ಎಂದು ಹೇಳುತ್ತಲೇ ನುಗ್ಗಿದ. ಒಳಗೆ ಬಿಸಿ ಬಿಸಿ ಚರ್ಚೆ ನಡೆಸುತ್ತಿದ್ದ ಸೋಮಯ್ಯ, ರಾಜೇಶರಿಬ್ಬರೂ ಅವನ ನಿರೀಕ್ಷಿಸದ ಆಗಮನದಿಂದ ಬೆಚ್ಚಿ ಬಿದ್ದರು. " ಸ್ವಲ್ಪ ನಿಧಾನ ಮಾರಾಯ... ಯಾಕ್ ಅಷ್ಟು ಅರ್ಜೆಂಟು... ಸುಬ್ಬೂ ...  " ಎಂದು ಸೋಮಯ್ಯನಿಗೆ ವಿದಾಯ ಹೇಳಿ, ಕಾಣದ ಸುಬ್ಬೂನನ್ನು ಕರೆದ. ಸುಬ್ಬೂ " ಬಂದೆ ಅಣ್ಣಾ.. "ಎನ್ನುತ್ತಾ ತನ್ನ ಆಟಕ್ಕೆ ಕುತ್ತು ತಂದ ಬಸ್ಸಿಗೂ, ಕಂಡೆಕ್ಟರಿಗೂ ಮನದೊಳಗೆ ಹಿಡಿ ಶಾಪ ಹಾಕುತ್ತಾ ಒಳ ನಡೆದ. ಪೊಂ ಪೊಂ ಸದ್ದು ಮಾಡುತ್ತಿದ್ದ ಡ್ರೈವರ್ ವಸೀಮ್ ಸಾಬನಿಗೆ, " ಬಂದೆ ಕಣೋ ... ಬಂದೆ " ಎನ್ನುತ್ತಾ ಅವಸರ ಅವಸರದಲ್ಲಿ ಅರ್ಧ ಕಾಫಿ ಕುಡಿದು ವೆಂಕು ಬಸ್ಸು ಹತ್ತಿ "ರೈಟ್ ... " ಅಂದ. ಸಾಮಾನ್ಯವಾಗಿ ಗುಳ್ಳೆ ನರಿ ಬಸ್ಸಿನಲ್ಲಿ ಉಚ್ಚಂಗಿಗೆ ಬರುವ ಎಲ್ಲಾ ಪ್ರಯಾಣಿಕರೂ ರಾಜೇಶನಿಗೆ ಗೊತ್ತಿದ್ದವರೇ ಆಗಿರುತ್ತಾರೆ. ಶನಿವಾರಸಂತೆಗೋ, ಚಂಗ್ರಳ್ಳಿಗೋ ಹೋಗಿ ಬರುವ ಉಚ್ಚಂಗಿಯ ಗ್ರಮಸ್ಥರೆ ಹೆಚ್ಚು... ಆಗೊಮ್ಮೆ ಈಗೊಮ್ಮೆ ಊರ ನೆಂಟರು ಬಂದರೂ, ಅಲ್ಲೇ ಹುಟ್ಟಿ ಬೆಳೆದ ರಾಜೇಶನಿಗೆ ಗೊತ್ತಿಲ್ಲದ ಮುಖವಂತೂ ಆಗಿರುವುದಿಲ್ಲ. ಆದರೆ, ಅಪರಿಚಿತ ಮುಖವೊಂದು ಕೈಲಿ ಕಪ್ಪು ಸೂಟ್ಕೇಸ್ ಹಿಡಿದು ರಾಜೇಶನ ಹೋಟೆಲಿನ ಕಡೆಗೆ ನಡೆದು ಬರುತಿತ್ತು. ನೀಟಾಗಿ ಕ್ರಾಪು ಬಾಚಿದ್ದ ಯುವಕ ಸುಮಾರು ೨೫ ಹರೆಯದವನಂತೆ ಕಂಡ. ಮತ್ತೆ ಮಳೆ ಸುರಿಯಲು ಆರಂಭವಾಯಿತು. ಆ ವ್ಯಕ್ತಿ ಓಡಿ ಬಂದು ಹೋಟೆಲಿನೊಳಗೆ ಮಳೆಯಿಂದ ಪಾರಾಗಲು ಬಂದು ನಿಂತ. " ನಿಮ್ಮನ್ನು ಇಲ್ಲಿ ನೋಡಿಲ್ವಲ್ಲ ನಾನು .. ಹೊಸಬರ ಥರ ಕಾಣಿಸ್ತೀರ... ಕಾಫಿ ಗೇಫಿ ಕೊಡ್ಲಾ.. ಎಲ್ಲಿಗೆ ಹೋಗ್ಬೇಕು ... " ಎನ್ನುತ್ತಾ ಆಶ್ಚರ್ಯಚಕಿತ ಪ್ರಶ್ನಾರ್ಥಕ ಚಿಹ್ನೆಗಳು ರಾಜೇಶನ ಬಯ್ಬಿಲ್ಲಿನಿಂದ ವಾಗ್ಬಾಣಗಳಾಗಿ ಆ ವ್ಯಕ್ತಿಯ ಕಡೆ ತೂರಿ ಬಂದವು. ಅದೆಲ್ಲಕ್ಕೂ ಅವನ ಮೌನವೇ ಉತ್ತರವಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ, " ಛತ್ರಿ ಇದ್ರೆ ಕೊಡ್ತೀರಾ, ನಾಳೆ ಬೆಳಗ್ಗೆ ಹಾಗೆ ವಾಪಸ್ ಕೊಡ್ತೀನಿ... " ಎಂದು ಮೌನ ಮುರಿಯುತ್ತಾ ವ್ಯಕ್ತಿ ಮಾತನಾಡತೊಡಗಿದ. " ಎಲ್ಲಿಗೆ ಹೋಗ್ಬೇಕು ನೀವು... ಈ ಮಳೆಲೀ... ಸ್ವಲ್ಪ ತಡಿರಿ, ಕಮ್ಮಿ ಆದ್ಮೇಲೆ ಹೋಗೋರಂತೆ " ಎಂದ ರಾಜೇಶ. " ಇಲ್ಲಾ.. ಈಗ್ಲೇ ಹೊತ್ತಾಗಿದೆ. ಮೇಲ್ಮನೆ ಸುಬ್ರಹ್ಮಣ್ಯ ಭಟ್ಟರ ಮನೆಗೆ ಹೋಗ್ಬೇಕು... ಛತ್ರಿ ಕೊಟ್ರೆ ತುಂಬಾ ಉಪಯೋಗ ಆಗತ್ತೆ " ಎಂದು ತಾನು ಹೋಗಬೇಕಾದ ಸ್ಥಳ ಯಾವುದೆಂದು ನುಡಿದ ಆ ಆಗಂತುಕ. " ಅಯ್ಯೋ.. ಮಳೆಲಿ ಒಬ್ಬರೇ ಯಾಕೆ ಅಷ್ಟು ದೂರ ಹೋಗ್ತೀರಾ... ಸೂಟ್ಕೇಸು ಬೇರೆ ಇದೆ.. ನಮ್ ಸುಬ್ಬೂನ ಜೊತೆಗೆ ಕಳಿಸ್ತೀನಿ, ನಿಮಗೂ ಟಾರ್ಚು ಹಿಡ್ಯೋದಾದ್ರೂ ತಪ್ಪತ್ತೆ... " ಎಂದು ಹೇಳಿ, " ಸುಬ್ಬೂ... ಭಟ್ರ ಮನೆಗೆ ಇವರನ್ನ ಬಿಟ್ಬಾ ... " ಎಂದು ಸುಬ್ಬೂವಿಗೆ ಅಧಿಕಾರಯುಕ್ತ ಧ್ವನಿಯಲ್ಲಿ ಹೇಳಿದ ರಾಜೇಶ. " ಅಣ್ಣಾ.. ಈಗ್ಲ.. ಛಳಿ ಹೊರಗೆ... " ಎಂದ ಸುಬ್ಬೂವಿಗೆ ಕಣ್ಣಿನಲ್ಲೇ ಪ್ರಳಯ ರುದ್ರನ ಪ್ರತಿರೂಪ ತೋರಿ ಹೋಗುವಂತೆ ಸನ್ನೆ ಮಾಡಿದ ರಾಜೇಶ. ಒಲ್ಲದ ಮನಸ್ಸಿನಿಂದ ಟಾರ್ಚು ಮತ್ತು ಕೊಡೆ ಹಿಡಿದು ಸುಬ್ಬೂ ಆಗಂತುಕನ ಜೊತೆ ಸುರಿಯುತ್ತಿದ್ದ ಜೋರು ಮಳೆಯಲ್ಲಿ ಹೊರನಡೆದ.

ಸುಬ್ಬೂವೋ ಬಹಳ ಮಾತುಗಾರ. ಈ ವ್ಯಕ್ತಿ ಸಂಪೂರ್ಣ ಮೌನಿ. ಇವನು ಹತ್ತು ಮಾತಾಡಿದರೆ, ಅವನಿಂದ ಒಂದು " ಹೂ .. " ಎನ್ನುವ ಹೂಂಕಾರ ಬರುತ್ತಿತ್ತು. " ನಿಮ್ಮೂರಲ್ಲೂ ಹೀಗೇ ಮಳೆ ಬರುತ್ತಾ... " , " ನಿಮ್ ಸೂಟ್ಕೇಸು ಪಸಂದಾಗಿದೆ.. ", " ನಿಮ್ ಊರು ಯಾವುದು ... " ಎಂದು ಹತ್ತು ಹಲವು ಪ್ರಶ್ನೆಗಳ ಬಾಣ ಹೊರಡುತ್ತಲೇ ಇತ್ತು. ಎಲ್ಲವೂ ಅವನ ಗಾಢ ಮೌನದಲ್ಲಿ ಕರಗಿ ಹೋಗುತ್ತಿದ್ದವು. ಸುತ್ತಲೂ ಹಬ್ಬಿದ ಹಚ್ಚ ಹಸುರಿನ ಪರ್ವತ ಶ್ರೇಣಿ, ಭೋ ಎಂದು ಎಲ್ಲೋ ದೂರದಲ್ಲಿ ಧುಮುಕುವ ಸಣ್ಣ ಜಲಪಾತ, ಹಕ್ಕಿಗಳ ಚಿಲಿ ಪಿಲಿ... ಎಲ್ಲವೂ ಮಲೆನಾಡಿನ ಈ ಸುಂದರ ಊರು ಉಚ್ಚಂಗಿಯ ಪರಿಸರದ ಭಾವಗಳು. ರಾತ್ರಿಯ ಕತ್ತಲು ಎಲ್ಲೆಲ್ಲೂ ಮೆತ್ತಿಕೊಂಡಿತ್ತು. ಇದರ ಜೊತೆ ಸುರಿಯುತ್ತಿರುವ ಮಳೆ. ಮಲೆನಾಡಿನ ಮಳೆಯೇ ಹಾಗೆ. ಎಷ್ಟೇ ಬೇಡವೆಂದರೂ ನಿಲ್ಲುವಂತದ್ದಲ್ಲ. ಇಡೀ ಊರಿಗೆ ಏಕೈಕ ಹೋಟೆಲು ಅಂದರೆ ರಾಜೇಶನದ್ದೇ. ಊರಿಗೊಬ್ಬಳೇ ಪದ್ಮಾವತಿಯಂತೆ, ಅವನೇ ಪ್ರಯಾಣಿಕರ, ಗ್ರಾಮಕ್ಕೆ ಹೊಸತಾಗಿ ಬರುವವರ ಅನ್ನದಾತ. " ಅಗೋ ನೋಡಿ.. ಅಲ್ಲಿ ಮಿಣಿ ಮಿಣಿ ದೀಪ ಉಂಟಲ್ಲ..  ಅದೇ ಭಟ್ಟರ ಮನೆ .. " ಎಂದ ಸುಬ್ಬೂ.

ಭಟ್ಟರ ಮನೆಯ ಮುಂದೆ ಹಾಕಿದ್ದ ಹಸುಕಲ್ಲಿನ ಮೇಲೆ ಯತೇಚ್ಛವಾಗಿ ಹಸುರು ಪಾಚಿ ಬೆಳೆದಿತ್ತು. ಭಟ್ಟರ ಮಗ ರಂಗನಾಥ ಸತ್ತ ನಂತರ ಅವರ ಹೆಂಡತಿ ಸುಂದರಮ್ಮ ಖಾಯಿಲೆ ಬಿದ್ದರು. ಮನೆಯ ಎಲ್ಲಾ ಕೆಲಸ ಭಟ್ಟರದ್ದೇ ಆಗಿತ್ತು. ಅವರು ತಾನೆ ಎಷ್ಟೆಂದು ಮಾಡಿಯಾರು, ವಯಸ್ಸು ಅರವತ್ತರ ಆಸು ಪಾಸು. ಮನೆಯ ಮುಂದಿನ ಅಂಗಳ ತೊಳೆಯುವಷ್ಟು ಶಕ್ತಿ ಅವರಲ್ಲಿ ಇರಲಿಲ್ಲ. ಸುಬ್ಬೂ ಮನೆಯ ಬಳಿ ಬಂದವನೇ " ಭಟ್ಟರೇ... "ಎಂದು ಕೂಗು ಹಾಕಿದ. ಒಳಗಿನಿಂದ " ಯಾರೂ... ಬಂದೇ " ಎನ್ನುವ ಧ್ವನಿ ಹೊರಬಂತು. ಆಗ ತಾನೇ ಊಟ ಮುಗಿಸಿ ಕೈ ತೊಳೆದು, ತನ್ನ ಪಂಚೆಯಿಂದ ಕೈ ಒರೆಸಿಕೊಳ್ಳುತ್ತ ಮನೆಯ ಬಾಗಿಲು ತೆಗೆದರು ಭಟ್ಟರು. " ಏನೋ ಸುಬ್ಬೂ... ಈ ರಾತ್ರಿಲಿ ಒಬ್ಬನೇ ... " ಎಂದರು. ಸುಬ್ಬೂ, " ಏ ಇಲ್ಲಪ್ಪ... ಇವರನ್ನ ಕರ್ಕೊಂಡು ಹೋಗು ಅಂತ ಅಣ್ಣ ಕಳಿಸ್ದ... " ಎಂದು ಕೈ ತೋರಿಸಲು ಹಿಂದೆ ತಿರುಗಿದ. ಅವನ ಹಿಂದೆ ಗಾಢ ಕತ್ತಲು ಬಿಟ್ಟು ಇನ್ನೇನೂ ಇರಲಿಲ್ಲ. ಸುಬ್ಬೂವಿನ ಹೃದಯ ಧಸಕ್ಕೆಂದಿತು. ಅವನ ಪಕ್ಕದಲ್ಲಿ ಆ ಆಗಂತುಕನ ಸೂಟ್ಕೇಸು ಒಂಟಿಯಾಗಿ ನಿಂತಿತ್ತು. ಸುಬ್ಬೂ ಒಮ್ಮೆ " ಓ .. ಎಲ್ಲಿದ್ದೀರಿ ... "ಎಂದು ಕೂಗು ಹಾಕಿದ. ಯಾವುದೇ ಉತ್ತರ ಬರಲಿಲ್ಲ. ಮಳೆಯ ಕಾಯುವ ಕಪ್ಪೆಯ "ಟರ್ರ್ ಟರ್ರ್ ... " ಬಿಟ್ಟರೆ ಗವ್ವನೆ ಕವಿದ ಕತ್ತಲಲ್ಲಿ ಇನ್ನೊಂದು ಧ್ವನಿ ಇರಲಿಲ್ಲ. " ಅದೇನಿದೆ.. ನೋಡೋಣ ... ಸೂಟ್ಕೇಸು ತೆಗಿ ... " ಎಂದು ಭಟ್ಟರು ಸುಬ್ಬೂ ಗೆ ಹೇಳಿದರು. ಹೆದರಿಕೆಯಿಂದಲೇ ಸುಬ್ಬೂ ತೆಗೆದ ಸೂಟ್ಕೇಸಲ್ಲಿ ಮಿಲಿಟರಿಯವರ ಬಟ್ಟೆ ಮತ್ತು ಅದರ ಜೊತೆ ಒಂದು ಕಾಗದ ಇತ್ತು. ಕಾಗದ ತೆಗೆದು ಗಟ್ಟಿಯಾಗಿ ಓದಲು ಪ್ರಾರಂಭಿಸಿದರು ಭಟ್ಟರು, " Clothes of Late Mr. Ranganath S/o S. Bhatt ... need to be sent" .  ೧೦-೧೨-೧೯೯೯ ರ ಡೇಟಿನ ಕೆಳಗಿದ್ದ ಅಕ್ಷರಗಳು ಸುಬ್ಬೂವಿಗೆ ಸ್ಪಷ್ಟ ಗೋಚರವಾದುವು. 'ಅಬ್ಬಾ... ಹದಿನೈದು ವರ್ಷ ಹಿಂದಿನ ಲೆಟರು... ಯಾರೀತ.. ಯಾಕೆ ಬಂದ... ಇವನೇನಾದ್ರೂ ರಂಗನಾಥನೇ ನಾ ... " ಎಂದು ಹೆದರಿಕೆಯ ಸಮುದ್ರದಲ್ಲಿ ಹುಯ್ದಾಡುತ್ತ ಇದ್ದ ಸುಬ್ಬೂವಿನ ಮನಸ್ಸಿನ ದೋಣಿಯನ್ನು " ಸುಬ್ಬೂ... " ಎಂದು ಭಟ್ಟರು ಕರೆದು ಲಂಗರು ಹಾಕಿ ನಿಲ್ಲಿಸಿದರು. " ಯಾರೋ ಕೊಟ್ಟಿದ್ದು ಈ ಸೂಟ್ಕೇಸು ನಿಂಗೆ ... "ಎಂದು ಕಣ್ಣೀರು ತುಂಬಿದ ಮೊಗದಿಂದ , ಗದ್ಗದಿತವಾದ ಭಟ್ಟರ ಧ್ವನಿ ಸುಬ್ಬೂವಿನ ಹೆದರಿಕೆ ಇಮ್ಮಡಿಗೊಳಿಸಿತು. "ಅವರು .. ಅವರು .... " ಎಂದು ಸುಬ್ಬೂ ತೊದಲುತ್ತಲೇ ಇದ್ದ.