Wednesday, 9 December 2015

Rumble

Rumble

( A vague translation of my poem " Ninne male banditte " to english )


Did it rain yesterday, my dear one,
did it rain ?

Roses in the yard are glittering,
Petals of flowers are as soft as you,
My lass with silky lissom hair
which dangles with breezy air

Did it rain yesterday, my dear one,
did it rain?

Did you hear that enchanting
voice of the bird sitting over the leaf?
Did you notice the pearly beads
of water on the picture you've drawn?

Sky is rumbling,
look at the sleeping sun skulked inside
warmth of clouds,
you'l echo me, I know, when I say

Did it rain yesterday, my dear one,
did it rain ?

Oh my dear, let it rain,
let the rumbles hit the earth,
my dear one has a fear of it,
Oh lovely sky,
if you rumble, if you thunder
she will hug me tighter, still tighter,

Why is it not raining?
Oh my god, why it is not?  

Monday, 16 November 2015

ನಿನ್ನೆ ಮಳೆ ಬಂದಿತ್ತೇ?

ನಿನ್ನೆ ಮಳೆ ಬಂದಿತ್ತೇನೇ, ಗೆಳತಿ
ನಿನ್ನೆ ಮಳೆ ಬಂದಿತ್ತೇ?

ಅಂಗಳದ ಗುಲಾಬಿ ನಿನ್ನಂತೆ ಕಂಗೊಳಿಸುತ್ತಿದೆ,
ಹೂವಿನ ಎಸಳಿನ ಮೃದುಲತೆಯೂ ನಿನ್ನನೇ ಹೋಲುತಿವೆ,
ಸಣ್ಣನೆ ಬೀಸುವ ತಣ್ಣನೆ ಗಾಳಿಗೆ
ತೇಲುವ ರೇಶಿಮೆ ಕೂದಲ ಚೆಲುವೆ ,

ನಿನ್ನೆ ಮಳೆ ಬಂದಿತ್ತೇನೇ, ಗೆಳತಿ

ನಿನ್ನೆ ಮಳೆ ಬಂದಿತ್ತೇ?

ಎಲೆಗಳ ಮೇಗಡೆ ಕುಳಿತಿಹ ಹಕ್ಕಿಯ
ಚಿಲಿಪಿಲಿ ದನಿಯನು ಕೇಳಿದೆಯಾ ?
ನೀನೇ ಬಿಡಿಸಿದ ಚಿತ್ರದ ಮೇಲೆ
ಬಿದ್ದಿಹ ಹನಿಯನು ನೋಡಿದೆಯಾ ?
ಇನ್ನೂ ಗುಡುಗಿದೆ ಆಕಾಶ, ನೋಡು,
ಮೇಘದ ಬೆಚ್ಚನೆ ಹೊದ್ದಿಗೆ ಹೊದ್ದು ಮಲಗಿಹ ದಿನಮಣಿಯ,
ನನಗೋ ಆತುರ ಕೇಳಲು ಪ್ರಶ್ನೆ

 ನಿನ್ನೆ ಮಳೆ ಬಂದಿತ್ತೇನೇ, ಗೆಳತಿ

ನಿನ್ನೆ ಮಳೆ ಬಂದಿತ್ತೇ?

ಅಯ್ಯೋ ಮಳೆಯೇ ಬೇಗ ಸುರಿ,
ಗುಡು ಗುಡು ಗುಡುಗೇ ಬಾ ಬೇಗ,
ನನ್ನಯ ಗೆಳತಿಗೆ  ಬಲು ದಿಗಿಲು,
ನೀ ಬಂದೊಡೆ ನನ್ನ ಬಿಗಿದಪ್ಪುವಳು... ಬಿಗಿದಪ್ಪುವಳು

ಮತ್ತೆ ಮಳೆ ಬರಬಾರದೇನೇ ಗೆಳತಿ ... ಮತ್ತೆ ಮಳೆ ಬರಬಾರದೇನೇ ? 

Monday, 9 November 2015

ನಮ್ಮ ಕಾಲದ ಸಮಸ್ಯೆಗಳು ಇವಲ್ಲ...

ನಮ್ಮ ಕಾಲದ ಸಮಸ್ಯೆಗಳು ಇವಲ್ಲ... 

"Misplaced priorities can, sometimes, be more dangerous than having no priorities", ಆತ್ಮೀಯಳಾದ ಗೆಳತಿಯೊಬ್ಬಳ ಜತೆ ಕಾಫಿ ಹೀರುತ್ತಾ ಹರಟೆ ಕೊಚ್ಚುತ್ತಿದ್ದಾಗ ಅವಳು ಹೇಳಿದ ಈ ಮಾತು ಇನ್ನೂ ಮನದ ಕೋಣೆಯೊಳಗೆ ಮಾರ್ದನಿಸುತ್ತಲೇ ಇದೆ. ಪ್ರತಿಯೊಂದು ಬಾರಿ ಈ ಮಾತನ್ನು ನೆನೆದಾಗಲೂ ಇದು ಹೊಸ ಹೊಸ ಅರ್ಥಗಳನ್ನು ನೀಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಸೂಕ್ಷ್ಮಸಂವೇದನೆ ಇರುವ ಯಾರಿಗಾದರೂ , ' ಇವೆಲ್ಲವೂ ಸಧ್ಯದ ಅಗತ್ಯವೇ ? ' ಎನ್ನುವ ಪ್ರಶ್ನೆ ಉದ್ಭವಿಸದೇ ಇರದು. ಬೇಡದ ವಿಷಯಗಳ ಬಗ್ಗೆ ತಿಂಗಳುಗಟ್ಟಲೆಯಿಂದ ಚರ್ಚೆಗಳು ನಡೆಯುತ್ತಿವೆ. ರಾಮನ ಹುಟ್ಟು-ಗುಟ್ಟಿನ ಬಗ್ಗೆ, ನಾವೇನು ತಿನ್ನಬಾರದು ? ನಾವು ಯಾವುದರ ಬಗ್ಗೆ ಬರೆಯಬೇಕು ? ನಾವು ಏನನ್ನು ನೋಡಬೇಕು ? ಇಂತಹದ್ದೇ ಪ್ರಚಾರಗಮ್ಯವಾದ ವಿಚಾರಗಳ ಬಗ್ಗೆ ಒಂದಲ್ಲಾ ಒಂದು ರೀತಿಯ ವಿವಾದಗಳು ಹುಟ್ಟಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ಜೀವಂತ ಸಮಾಜದ ಕುರುಹು " ಚರ್ಚೆಗಳು" ಎಂಬುದನ್ನು ನಾನು ಖಡಾಖಂಡಿತವಾಗಿ ಒಪ್ಪುತ್ತೇನೆ. ಅಂತೆಯೇ ಚರ್ಚೆಯ ಹೆಸರಿನಲ್ಲಿ ಒಬ್ಬರನ್ನೋಬ್ಬರ ಮೇಲೆ ಸಗಣಿ ಎರಚುವುದು ಒಂದು ರೋಗಗ್ರಸ್ಥ ಸಮಾಜದ ಲಕ್ಷಣ. facebook, twitter ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಿದಿನ abusive ಎನ್ನುವಂತಹ ಭಾಷೆ ಉಪಯೋಗಿಸಿ ಜನ ಟೀಕಿಸುತ್ತಿದ್ದಾರೆ. ವೈಚಾರಿಕ ಸಂಪ್ರದಾಯಕ್ಕೆ ಇದು ತದ್ವಿರುದ್ಧ. ಹೀಗೆ ಪರಸ್ಪರ ವೈಯುಕ್ತಿಕ ಅವಹೇಳನಕಾರಿಯಾಗಿ ಮಾತನಾಡುತ್ತಾ ನಾವು ಸಮಾಜದ ಧ್ರುವೀಕರಣ (polarize) ಮಾಡುತ್ತಾ ಇದ್ದೇವೇನೋ ಎನ್ನುವ ಭಯ ಇತ್ತೀಚೆಗೆ ಹೆಚ್ಚಾಗಿ ಆಗುತ್ತಿದೆ. ಏಕೆಂದರೆ ಧ್ರುವೀಕರಣಗೊಂಡ ಸಮಾಜದ ಮುಂದಿನ ಹೆಜ್ಜೆ ಹಿಂಸಾತ್ಮಕವಾಗಿರುವುದರಲ್ಲಿ ಸಂದೇಹವಿಲ್ಲ. ಸ್ವಾತಂತ್ರ್ಯೋತ್ತರ ಹಿಂಸಾಚಾರ, ಸಿಖ್ ಹತ್ಯಾಖಾಂಡ, ಗೋಧ್ರಾ ಹತ್ಯಾಖಾಂಡ ಎಲ್ಲದರಲ್ಲೂ ಈ ರೀತಿಯ ಒಂದು ಸಾಮಾಜಿಕ ಧ್ರುವೀಕರಣವಿತ್ತು. ಅದು ಸಹಜವೂ ಕೂಡ. ವೈಚಾರಿಕವಾಗಿ ಇಬ್ಭಾಗವಾದ ಸಮಾಜ ತನ್ನ ಆಂತರ್ಯದಲ್ಲಿ ಹುಟ್ಟಿಸಿಕೊಂಡ ಆಕ್ರೋಶವನ್ನು ಹಿಂಸೆಗೆ ತಿರುಗಿಸಿಕೊಳ್ಳುವುದರಲ್ಲಿ ಹೆಚ್ಚು ಸಮಯ ಬೇಕಾಗಿಲ್ಲ. ಅದಕ್ಕೆ ಇತ್ತೀಚಿಗೆ ಮುಖ್ಯಮಂತ್ರಿಗಳ ಮೇಲೆ ಬಂದಂತಹ " ತಲೆ ಕಡಿಯಲು ಸಿದ್ಧ " ಎನ್ನುವ ಹೇಳಿಕೆ ಒಂದು ಸಣ್ಣ ಉದಾಹರಣೆ ಅಷ್ಟೇ. ಯಾವುದೇ ರೀತಿಯಲ್ಲಿ ಒಡೆದರೂ,  ಎರಡೂ ಪಂಥಗಳಲ್ಲಿ ತಮ್ಮ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಯಾವುದೇ ರೀತಿಯ ಕೆಲಸವನ್ನೂ ಮಾಡಲು ಕಟ್ಟಾಪಂಥಿಗಳು ಸಿದ್ಧರಿರುತ್ತಾರೆ. ಆದ್ದರಿಂದಲೇ ನಾವು ಇಂದಿನ ಸಾಮಾಜಿಕ ಸ್ಥಿತಿಯನ್ನು ಬಹಳ ಎಚ್ಚರದಿಂದ ತಿಳಿಗೊಳಿಸಬೇಕಾದ ಅಗತ್ಯತೆಯಿದೆ.

ಇನ್ನೊಂದು ಮುಖ್ಯವಾದ ವಿಚಾರವೇನೆಂದರೆ, ಈ ಗೋಮಾಂಸ ನಿಷೇಧ, ರಾಮನ ಬಗ್ಗೆಗಿನ ಚರ್ಚೆ, ಪೋರ್ನ್ ಬ್ಯಾನ್, ವಿದೇಶಾಂಗ ಸ್ಥಿತಿಯನ್ನು ಗಟ್ಟಿಗೊಳಿಸುವಿಕೆ, ಇವೆಲ್ಲಕ್ಕಿಂತ ಹೆಚ್ಚು ಮೂಲಭೂತವಾದ ಸಮಸ್ಯೆಗಳು ಭಾರತದಲ್ಲಿ ಇನ್ನೂ ತಾಂಡವವಾಡುತ್ತಿದೆ. ರಾಜ್ಯ ಸರ್ಕಾರದ 'ಅನ್ನಭಾಗ್ಯ' ಯೋಜನೆಯ ಬಗ್ಗೆ ಕೆಲವು ದಿನಗಳು ಚರ್ಚೆಯಾಗುತ್ತಿರುವುದನ್ನು ನೋಡಿ ಒಂದು ರೀತಿಯ ಸಮಾಧಾನವಾಗಿತ್ತು. ಚರ್ಚೆಯಲ್ಲಿ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿರುವ ಹಿರಿಯರಾದ ಶ್ರೀ ಭೈರಪ್ಪನವರು ಇಡೀ ಯೋಜನೆಯೇ ಸರಿಯಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದು ಸ್ವಲ್ಪ ಬೇಸರ ತರಿಸಿದ್ದರೂ, ಆರೋಗ್ಯಕರ ಚರ್ಚೆ ಆಗುತ್ತಿದೆಯಲ್ಲಾ ಎಂದು ಖುಷಿಯಾಗಿತ್ತು. ಯೋಜನೆಯ implementation ನ ಬಗ್ಗೆ ಕಳವಳ ಪಡಬೇಕಾದ್ದು ಸಹಜ. ಏಕೆಂದರೆ, ಬಹಳ ಅಗ್ಗವಾಗಿ ಅನ್ನ-ಧಾನ್ಯಗಳನ್ನು ಹಂಚುವ ಪ್ರಕ್ರಿಯೆಯಲ್ಲಿ ದುರುಪಯೋಗ ಪಡೆದುಕೊಳ್ಳಲು ಕಾದುಕುಳಿತ ಹಲವಾರು ಕೈಗಳು ಕೆಲಸ ಮಾಡುತ್ತವೆ. ಹೀಗೆ ಅವು ಕೆಲಸ ಮಾಡುತ್ತವೆ ಅಂದ ಮಾತ್ರಕ್ಕೆ ಇಡೀ ಯೋಜನೆಯೇ ತಪ್ಪು ಎಂದಾಗುವುದಿಲ್ಲ. ಭಾರತದಂತಹ ಪೌಷ್ಟಿಕ ಆಹಾರ ಕೊರತೆಯಿಂದ ಮಕ್ಕಳು ಸಾಯುತ್ತಿರುವಂತಹ ದೇಶದಲ್ಲಿ ಇಂತಹ ಯೋಜನೆಯಿಂದ 'ಸೋಮಾರಿತನ' ಹೆಚ್ಚಾಗುತ್ತದೆ ಎಂದು ಹೇಳುವುದು ವಿಷಾದನೀಯವಷ್ಟೇ ಅಲ್ಲ ಅಮಾನವೀಯ ಕೂಡ. ಅತ್ಯಂತ ಪೌಷ್ಟಿಕ ಆಹಾರ ಬೇಕಾಗಿರುವುದು ದುಡಿಯುವ ಶ್ರಮಿಕ ವರ್ಗಕ್ಕೆ. ಆದರೆ ಅವರಿಗೆ ಸಿಗುತ್ತಿರುವ ಆಹಾರವಾದರೂ substandard ಎನ್ನುವಂತಹದ್ದು. ಅಪೌಷ್ಟಿಕವಾದ ಆಹಾರದ ಜತೆಗೆ ದೈಹಿಕ ಶ್ರಮವೂ ಸೇರುವುದರಿಂದ ಆ ವರ್ಗದ ಕ್ಷಮತೆ ಕುಗ್ಗುತ್ತದೆ. ಇನ್ನಷ್ಟು ಆಹಾರ ಹುಟ್ಟಿಸಿಕೊಳ್ಳುವ ಆರ್ಥಿಕ ಸಬಲೀಕರಣದ ತರಬೇತಿ ಕೊಡುವುದು ನಂತರದ ವಿಷಯ. ಮೊದಲು ತನ್ನ ದೈನಿಕ ಹೊಟ್ಟೆಪಾಡನ್ನು ಸಂಭಾಳಿಸಿದ ಮೇಲಲ್ಲವೇ ವರ್ಗದ ಮುಂದುವರಿಕೆಯ ಮತ್ತು ಕೌಶಲ್ಯದ ಬಗ್ಗೆ ಯೋಚಿಸಲು ಸಾಧ್ಯ! ಬಹುರಾಷ್ಟ್ರೀಯ ಕಂಪನಿಗಳಿಗೆ ಈಗಲೂ ನಾವು ಜೋತುಬಿದ್ದರೆ, ಈ ದುಡಿಯುವ ವರ್ಗವನ್ನೆಲ್ಲಾ ( ಇಲ್ಲಿ ನಾನು ಸಣ್ಣ ರೈತರನ್ನೂ ಸೇರಿಸುತ್ತೇನೆ ) ಇನ್ನೊಂದು ಕಂಪನಿಯ ಅಡಿಯಾಳಾಗಿ ಮಾಡಿಬಿಡುವ ಸಂಭವವಿರುತ್ತೆ. ಇದರಿಂದ ನಾವು ನಮ್ಮತನವನ್ನು ಕಳಕೊಳ್ಳುವುದು ಸಾಧ್ಯ. ನಾವು ಈ ಸ್ಥಿತಿಯನ್ನು ಈಗಾಗಲೇ ತಲುಪಿಬಿಡುವ ಹಂತದಲ್ಲಿದ್ದೇವೆ. ಚನ್ನಪಟ್ಟಣದ ಬೊಂಬೆಗಳ ಜಾಗದಲ್ಲಿ Chinese ಆಟಿಕೆಗಳು ಬಂದಿವೆ, ಖಾದಿಯಂತೂ ಮಂಗಮಾಯವಾಗಿದೆ, ಇಳಕಲ್ ಸೀರೆಗಳು ಅಳಿವಿನಂಚಿನಲ್ಲಿವೆ. ಹೀಗೆ ನಾವೇ ಉದ್ಯೋಗಾವಕಾಶ ಕಲ್ಪಿಸಲು ನೂರಾರು ಗಾರ್ಮೆಂಟ್ ಫ್ಯಾಕ್ಟರಿಗಳನ್ನು ತೆಗೆದು ನಮ್ಮವೇ ಆದ ಅದ್ಭುತ ಕಲೆಯನ್ನು ತುಳಿದು ನಿರ್ನಾಮ ಮಾಡುತ್ತಿದ್ದೇವೆ. ಒಂದರ್ಥದಲ್ಲಿ ಸೃಜನಶೀಲತೆ ಸತ್ತ ಹೈಟೆಕ್ ಆಳುಗಳನ್ನು ತಯಾರು ಮಾಡುತ್ತಾ ಇದ್ದೇವೆ ಎಂದರೆ ಅತಿಶಯೋಕ್ತಿ ಅಲ್ಲ. 

ನನ್ನ ಪ್ರಕಾರ ಇಂದಿನ ಜ್ವಲಂತ ಸಮಸ್ಯೆಗಳು ಇವು... ಆಹಾರ ಮತ್ತು ಸಾಮಾಜಿಕ ಭದ್ರತೆಯೇ ಹೊರತು ವಿಶ್ವಸಂಸ್ಥೆಯಲ್ಲೋ ಅಥವಾ ಇನ್ನೆಲ್ಲೋ ನಮ್ಮ ದೇಶಕ್ಕೆ ಎಷ್ಟು ಗೌರವ ಸಿಕ್ಕುತ್ತದೆ ಎನ್ನುವಂತಹದಲ್ಲ. ನಾನು ಅದರ ಬಗ್ಗೆ ಯೋಚನೆಯೇ ಮಾಡಬೇಡಿ ಎಂದೆನ್ನುತ್ತಿಲ್ಲ. ಇಂದು ಆ ವಿಚಾರಗಳಿಗೆ ಸಿಗುತ್ತಿರುವ priority ಆಹಾರ ಭದ್ರತೆಗೆ ಸಿಗಬೇಕು ಎಂದು ಹೇಳುತ್ತಿದ್ದೇನೆ ಅಷ್ಟೇ. ನಾವು ಇದನ್ನು ಸರಿಪಡಿಸಿಕೊಳ್ಳದೇ ದೇಶ-ವಿದೇಶಗಳ ಬಗ್ಗೆ ಮಾತನಾಡುತ್ತಾ ಇರುವುದು ನನಗೆ, ಹೊಲದೊಳಗೆ ನುಗ್ಗಿ ಕುಳಿತಿರುವ ಹುಲಿಯ ಬಗ್ಗೆ ಚಿಂತಿಸುವುದನ್ನು ಬಿಟ್ಟು ಹೊರಗಿನಿಂದ ಯಾರೋ ಬರುತ್ತಾರೆ ಎಂದು ಕಾಂಪೌಂಡ್ ಹಾಕಿಸಿಕೊಳ್ಳುತ್ತಿರುವಂತೆ ಇದೆ. ಧರ್ಮ, ಜಾತಿ, ವೈಚಾರಿಕ ಇಸಮ್ಮುಗಳಿಂದ polarize ಆಗಿದ್ದು ಸಾಕು. ಈಗ "ವ್ಯಕ್ತಿ ಭಕ್ತಿ" ಯಿಂದ ಬೇರೆ ಆಗಬೇಕೇ !

Saturday, 31 October 2015

ಕನ್ನಡಕ್ಕೆ ಭವಿಷ್ಯವಿದೆಯೇ ? 

ಮತ್ತೆ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಹರಡಿಕೊಂಡಿದೆ. ನವೆಂಬರ್ ತಿಂಗಳು ಬಂದೊಡನೆಯೇ ನಮ್ಮೆಲ್ಲರ ಕನ್ನಡ ಪ್ರೇಮ ನೊರೆಹಾಲಾಗಿ ಉಕ್ಕಿ ಉಕ್ಕಿ ಹರಿಯಲಾರಂಭಿಸುತ್ತದೆ. ಎಲ್ಲರೂ, ಹಲವರು ಎಂದಿಟ್ಟುಕೊಳ್ಳೋಣ, ಕನ್ನಡ-ಕರ್ನಾಟಕದ ಹಿರಿಮೆ-ಗರಿಮೆಯ ದ್ಯೋತಕದ ಗರಿಗರಿ ಟೀ-ಶರ್ಟ್ ಗಳು, ಜೆರ್ಸಿ ಗಳನ್ನು ಮೈ ಮೇಲೆ ಹಾಕಿಕೊಂಡು ಅರೆಬರೆ ಕನ್ನಡ ಮಾತನಾಡುತ್ತಾ ತಿರುಗಾಡುತ್ತಾರೆ. ಇತ್ತೀಚಿಗೆ ಯೂಟ್ಯೂಬ್ ನಲ್ಲಿ ಏನೋ ಜಾಲಾಡುತ್ತಿದ್ದಾಗ ಯು. ಆರ್. ಅನಂತಮೂರ್ತಿಯವರ ಯಾವುದೋ ಸಂದರ್ಶನವೊಂದು ಸಿಕ್ಕಿತು. ಮೇಷ್ಟ್ರು ಹೇಳಿದ, " ಕನ್ನಡ ಇನ್ನೂ ಜೀವಂತವಾಗಿದೆ ಎಂದರೆ, ಅದಕ್ಕೆ ಕಾರಣರು ಓದು ಬರಹ ಗೊತ್ತಿಲ್ಲದ ಹಳ್ಳಿಯ ಅನಕ್ಷರಸ್ಥರು. ಓದು ಬರಹ ಬಂಡ ಬಹುತೇಕರು ಇಂಗ್ಲಿಷ್ ಗೆ ಮೊಹಿತರಾಗಿಬಿಡುತ್ತಾರೆ.  ", ಈ ಮಾತುಗಳು ಅತ್ಯಂತ ಸತ್ಯವೆಂದೆನಿಸಿತು. ನಾವೆಲ್ಲರೂ ಕನ್ನಡ ಪ್ರೇಮವನ್ನು ಫೇಸ್ಬುಕ್ ನ ಕಾಮೆಂಟ್ ಗೋ, ಅಥವ ನಮ್ಮ ಡ್ರೆಸ್ಸಿಂಗ್ ಗೋ ಸೀಮಿತವಾಗಿಸಿಬಿಡುತ್ತೇವೆ. ಒಮ್ಮೆ ಬೆಂಗಳೂರಿನಲ್ಲಿ ಸುತ್ತಾಡಿ ಬನ್ನಿ, ನಮ್ಮ ರಾಜಧಾನಿಯಲ್ಲೇ ನಮ್ಮ ಭಾಷೆಯ ಸ್ಥಿತಿ ಬಹಳ ಹತ್ತಿರದಿಂದ ಅರ್ಥವಾಗುತ್ತದೆ. " ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೋಳ್ , ಭಾವಿಸಿದ ಜನಪದಂ ... "ಎಂದು ಹಾಡಿ ಹೊಗಳಿಸಿಕೊಂಡಿದ್ದ ನಮ್ಮ ಭಾಷೆ- ಸಮೂಹಕ್ಕೆ ಇಂದು ಬಂದಿರುವ ಚಿಂತಾಜನಕ ಸ್ಥಿತಿ ನಮಗೆಲ್ಲ ಎಚ್ಚರಿಕೆಯ ಕರಘಂಟೆಯಲ್ಲದೆ ಮತ್ತೇನು?

ಇದಕ್ಕೆಲ್ಲಾ ಮೂಲಭೂತವಾದ ಪ್ರಶ್ನೆ, "ಭಾಷೆಯ ಬಗ್ಗೆ ಇಷ್ಟೊಂದು ತಲೆಕೆರೆದುಕೊಳ್ಳಬೇಕು ? ". ಭಾಷೆ ಕೇವಲ ಸಂವಹನ ಮಾಧ್ಯಮವಷ್ಟೇ ಅಲ್ಲ. ಅದು ನಮ್ಮ ಭಾವನೆಗಳ ಮೂರ್ತಸ್ವರೂಪ. ಅಮೂರ್ತವಾದ ಮನೋಲೋಕದ ತಲ್ಲಣಗಳನ್ನು ಘನೀಕರಿಸಿ ಕೊಡುವ ಕೆಲಸ ಭಾಷೆಯದು. ಆದ್ದರಿಂದ, ಅದು ನಮ್ಮ ಜೀವನದ ಬಹಳ ಮುಖ್ಯ ಅಂಗ. ಯಾವುದೇ ವಸ್ತು ನಮ್ಮ ಭಾವಪ್ರಪಂಚದ ಭಾಗವಾಗುವುದೋ , ಅದು ನಮ್ಮ ಜನಾಂಗದ ಸಾಂಸ್ಕೃತಿಕ ಮತ್ತು ಬೌದ್ಧಿಕ ವಿಕಾಸದಲ್ಲಿ ಬಹಳ ದೊಡ್ಡ ಪಾತ್ರವಹಿಸುತ್ತದೆ. ಆದ್ದರಿಂದ 'ಕನ್ನಡ' ನಮ್ಮ ಸಾಮಾಜಿಕ ಸ್ಥಿತ್ಯಂತರಗಳ ಮುಖ್ಯ ವಾಹಿನಿಯಾಗಿ ಹರಿದು ಸಾಂಸ್ಕೃತಿಕ ಶ್ರೀಮಂತಿಕೆಗೆ ಕಾರಣವಾಗಿದೆ. ಅದರೊಟ್ಟಿಗೆ ಭಾವಸೂಕ್ಷ್ಮತೆಯ ಒಂದು ಪ್ರತಿಬಿಂಬವೂ ಆಗಿದೆ. ಶ್ರೀ ತೇಜಸ್ವಿಯವರು ಮರಣವನ್ನಪ್ಪಿದಾಗ ನನಗೆ ಸುಮಾರು ೧೩-೧೪ ವರ್ಷ ವಯಸ್ಸಾಗಿರಬೇಕು. ಅವರ ಯಾವುದೇ ಕೃತಿಗಳನ್ನೂ ಓದಿಲ್ಲದ ನನಗೆ ಅವರ ಸಾವಿನ ದುಃಖ ಮತ್ತು ಬಿಸಿ ತಟ್ಟಿದ್ದು ನಿಜ. ಈ ರೀತಿಯ ಮನಸುಗಳನ್ನು ಬೆಸೆಯುವ ಕೆಲಸ ಭಾಷೆ ಮಾಡಬಲ್ಲುದು. ಪುಣೆಯಲ್ಲಿ ಎಲ್ಲಾದರೂ 'ಕನ್ನಡ' ಕೇಳಿದ ಕೂಡಲೇ ಕುವೆಂಪುರವರ " ಕನ್ನಡ ಏನೆ ಕಿವಿ ನಿಮಿರುವುದು ... " ಅಕ್ಷರಶಃ ಅನುಭವವಾಗುತ್ತದೆ. ಆದ್ದರಿಂದಲೇ ಭಾಷೆಯ ಬಗ್ಗೆ ನಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಇಡುವುದು ಬಹಳ ಅವಶ್ಯಕ. ಭಾರತ ಧರ್ಮ ಮತ್ತು ಜಾತಿಯ ಹೆಸರಲ್ಲಿ ಎಷ್ಟು ವಿವಿಧತೆಯನ್ನು ಸಂಪಾದಿಸಿದೆಯೋ ಭಾಷೆಯ ಹೆಸರಲ್ಲೂ ಅಷ್ಟೇ ವಿವಿಧತೆಯನ್ನು ಸಂಪಾದಿಸಿದೆ. ಅದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. 

ಭಾಷೆಯ ಉಳಿವನ್ನು ನೇರವಾಗಿ ಅದನ್ನು ಮಾತನಾಡುವ ಸಮೂಹ ನಿರ್ಧರಿಸುತ್ತದೆ. ಲಾಟಿನ್, ಪಾಳಿ, ಸಂಸ್ಕೃತ ಹೀಗೆ ಈ ಎಲ್ಲಾ ಭಾಷೆಗಳನ್ನು ಬಳಕೆಯಿಂದ ನಾಶಮಾಡಿದ್ದು ಅದನ್ನು ಮಾತನಾಡುತ್ತಿದ್ದ ಜನಸಮೂಹವೇ. ಹಾಗೆಯೇ ಯೂರೋಪಿನ ಸಣ್ಣ ಮೂಲೆಯಲ್ಲಿ ಪುಟ್ಟ ದೇಶದ ಭಾಷೆಯಾಗಿದ್ದ ಇಂಗ್ಲೀಷನ್ನು ಸಾರ್ವತ್ರಿಕವಾಗಿ ಬಳಸುವಂತಹದ್ದಾಗಿ ಮಾಡಿದ್ದೂ ಅದೇ ಜನತೆಯೇ. ಇಂದು ಇಂಗ್ಲೀಷ್ ವಿಶ್ವದ ಅತ್ಯಂತ ಹೆಚ್ಚು ಬಳಸುವ ಭಾಷೆಯಾಗಿ ಪರಿವರ್ತಿತವಾಗಿರುವುದಕ್ಕೆ ಮೂಲ ಕಾರಣ, ವಿಜ್ಞಾನವನ್ನು ಆ ಭಾಷೆಯಲ್ಲಿ ಗರ್ಭೀಕರಿಸಲು ಸಾಧ್ಯವಾಗಿದ್ದು. ಆಂಗ್ಲರು ಎಲ್ಲೆಲ್ಲಿ ತಮ್ಮ ತಳವೂರಿದರೋ, ಅಲ್ಲೆಲ್ಲಾ ತಮ್ಮ ಭಾಷೆಯ ಬೀಜವನ್ನು ಜನರ ಲೌಕಿಕಪ್ರಪಂಚದ ಬಿತ್ತಿದರು. ಇಂದು ಆ ಬೀಜವೇ ಮೊಳೆತು, ಹೆಮ್ಮರವಾಗಿ ಬೆಳೆದು ನಿಂತಿದೆ. ಕನ್ನಡವೂ ಇಷ್ಟೆಲ್ಲಾ ಸಾಧಿಸಿರುವ ಆಂಗ್ಲದಷ್ಟೇ ಸಮೃದ್ಧ ಭಾಷೆ. ಇದಕ್ಕೂ ಬೆಳೆಯುವ-ಬೆಸೆಯುವ ಶಕ್ತಿಯಿದೆ. ಆದರೆ, ಬಳಸದೆ ಇದ್ದಲ್ಲಿ ಯಾವ ಭಾಷೆಯೂ ಬೆಳೆಯಲು ಸಾಧ್ಯವಿಲ್ಲ. ಜೀವಂತ ಭಾಷೆಯ ಸಂಕೇತ, ಬಳಸುವಿಕೆ. ಸೋದರ ಭಾಷೆಗಳಿಂದ ಪದಪುಂಜಗಳನ್ನು ಎರವಲು ಪಡೆದುಕೊಳ್ಳುವಿಕೆ. ಆಗಲೇ ನಾನು ಹೇಳಿದಂತೆ, ಆಂಗ್ಲದಂತೆ ಕನ್ನಡದಲ್ಲಿಯೂ ವಿಜ್ಞಾನವನ್ನು ಅಭ್ಯಸಿಸುವ ಅವಕಾಶ ನಮ್ಮದಾಗಬೇಕು. ಆಗಲೇ ನಾವು ಪ್ರಗತಿಶೀಲ ಭಾಷೆಯ ವಾರಸುದಾರರಾಗಲು ಸಾಧ್ಯ. ಇದಕ್ಕೆ ಬಹಳ ಮುಖ್ಯ ಹೆಜ್ಜೆ, ಶಿಕ್ಷಣದ ಸಾರ್ವಜನೀಕರಣ. ಎಲ್ಲಾ ಮಕ್ಕಳೂ ಒಂದೇ ತೆರನಾದ ಶಾಲೆಯಲ್ಲಿ ಮಾತೃಭಾಷೆಯಲ್ಲಿ ಒಂದೇ ರೀತಿಯ ಶಿಕ್ಷಣ ಪಡೆಯಬೇಕು. ಸಂವಹನಕ್ಕೆ ಅಗತ್ಯವಾದ ಇಂಗ್ಲೀಷೂ ಪ್ರವಚನದ ಭಾಗವಾಗಬೇಕು. ಹೀಗಾದಲ್ಲಿ ಭಾಷೆಯನ್ನು ಕಟ್ಟುವ ಕಾರ್ಯ ಬಹಳ ತಳಮಟ್ಟ ದಲ್ಲಿ ಆಗುತ್ತದೆ. ಅದಕ್ಕೆ ಪೋಷಕವಾದ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಹೊಣೆ. ಇತ್ತೀಚೆಗಿನ ದಿನಗಳಲ್ಲಿ ನಗರವಾಸಿಗಳಾದವರು ಕರ್ತವ್ಯಭ್ರಷ್ಟರಾಗುತ್ತಿದ್ದಾರೆ. ಹಳ್ಳಿಗಳಲ್ಲಷ್ಟೇ ಕನ್ನಡ ಭಾಷೆ ತನ್ನ ಸೊಗಡನ್ನು ಉಳಿಸಿಕೊಂಡಿರುವುದು. ಏಕೆಂದರೆ ಅಲ್ಲಿನ ಜನಪದ ಇನ್ನೂ 'ಆಧುನಿಕ'ಗೊಂಡಿಲ್ಲ. ಆದ್ದರಿಂದಲೇ, ನಮಗೆ ಕಂಬಾರರು, ದೇವನೂರು, ಲಂಕೇಶ್ ರಂತಹ ಲೇಖಕರು ಸಿಕ್ಕಲು ಸಾಧ್ಯವಾಗಿದ್ದು. ತೇಜಸ್ವಿ, ಕಾಯ್ಕಿಣಿ, ಅನಂತಮೂರ್ತಿ  ಯವರಂತಹ  ಹಳ್ಳಿ ಮತ್ತು ಪಟ್ಟಣದ ನಡುವೆ ನಿಂತು ಕಥೆ ಹೆಣೆಯುವ ಪ್ರತಿಭಾಶಾಲಿಗಳು ನಮ್ಮ ಪಾಲಿಗೆ ದೊರಕಿದ್ದು! ಕನ್ನಡ ಭಾಷೆಯ ಮೂಲ ಮೂರ್ತತ್ವವನ್ನು ವಿರೂಪಗೊಳಿಸದೇ ಇಂದಿನ ಐಟಿ- ಬಿಟಿ ಕಾಲಕ್ಕೆ ತಕ್ಕಂತೆ ಅಲ್ಲಿ-ಇಲ್ಲಿ ಸಿಂಗರಿಸಿಕೊಂಡು ಮುಂದಕ್ಕೆ ಕರಕೊಂಡು ಹೋಗುವ ಹೊಣೆ ನಮ್ಮೆಲ್ಲರ ಮೇಲಿದೆ. ಆಡಂಬರದ ರಾಜ್ಯೋತ್ಸವದ ಆಚರಣೆಯ ಹಿಂದಿನ ಯೋಚನಾಲಹರಿಯನ್ನು ತಿದ್ದುವ ಸಂದರ್ಭವಿದು.  

ಮೇಷ್ಟ್ರು ಇದನ್ನು ಬಹಳ ಹಿಂದೆಯೇ ಹೇಳಿದ್ದರು. " ಕನ್ನಡ ಸಾಹಿತ್ಯಕ್ಕೆ ಉಜ್ವಲ ಭವಿಷ್ಯವಿದೆ. ಆದರೆ ಕನ್ನಡಕ್ಕಿದ್ದಾಗ ಮಾತ್ರ ... " ಎಂದು.  

Monday, 28 September 2015

Veil

My first translation attempt...  
English translated version of my short story "Tere", published in "Readoo kannada"..

Veil

"So.. what next ?? ... ", I asked Kshama sipping coffee. She was absorbed in greenery of the institute. She talked... Her voice came to me as a whisper of standing lush green trees echoed by sleeping mountains. "Lets see... I want to go abroad .... " , she trembled as she uttered these words. It was as though, she was in search of something which was lost since ages. " I have asked my prof... for reco letter,... ", she resentfully remembered her work, which had gulped her from an year and half. Those eyes... which I saw an year back ...those impish eyes... were in search of some divine thing which, probably, didn't exist in the world in which I lived. Her voice had lost that ebullience it possessed, the warmth it encompassed.  ' Is it the same Kshama ...  whom I wanted ... ?? ' ... thoughts started to rush up and fill my mind. " What is this.... ??? ...  gown !!!! ", she laughed impishly as she spoke. Those words caught my immediate attention and I looked her, thinking her voice retook her usual path. She kept on staring my eyes having a packet of wafers in her hand. She slowly, effortlessly took a piece and pressed it on her shiny lips. I replied, " I don't like this flavour ... ", unknowingly English peeped in our conversation. It generated odium in me, for me, probably, trying to attract her. She may not understand this. But I felt, I am drowning in the same old trifle marsh. It had been an year since she rejected my proposal.. proposal to have her as a companion of my dreams. Nevertheless, a tiny hope still lived on inside me. When I couldn't talk my heart out in the right sense, I leaned to this turpitude and try to win her.

Silence embraced both of us for minutes.That meeting was auspicious to me and I was meeting my dream-mate. Those parrot-fashioned sentences which I mugged up to articulate in front of her were burned into ashes by acumen sight of her cold eyes. Those words started ringing in my ears... through which  she rejected my place making my words meaningless. My mind would not have turned so turbid if she had rebuked me... with anger, irritation. She placed my proposal away from her life silently, in cinema-tone saying, " You are a great friend of mine dear... " . Those words came and hit me again and again. I became diffident by thinking, ' Am I playing her character in my life... ??? ' . Words seldom got chance to traverse between us these days. Its through emotions that I tried to weigh her inside me. I opened up to her as a seashore which gets itself unfolded by staggering blow of mammoth waves... I leaned towards her... I spread out... But, she started to fold up and tried to live in the warmth of introversion. She blossomed silently inside the warmth of her own world. Now, she is sitting in front of me as a one who is in search of something ethereal.  

I continued... " Bought it from Khaadi Bhandar... the kurta... " . These words relentlessly flowed. I started to justify my social stand to make her feel that I am not trumpeting to attract her. I spoke against Mall-culture. I started unfolding myself as I went on speaking. " These are the ones responsible for empty tummies of my fellowmen... They use petty shopkeepers, farmers as steps to climb up.. literally stepping on them.. their life... and they grow big ... ". After uttering this small portion of political speech, I cautiously looked her face presuming she might think as, ' This guy is obscurantist... knows nothing about freshness... odour of life... '. But, her face was unmoved. It was the same emotionless one with bright eyes. Straightly, she arrowed me saying " I am not politically oriented... " Wombing the sigh of poor farmers... shopkeepers... , I saw her shiny 'bright' "Reebok" jersey , whose glare masked clothes of my poor countrymen.. Khadi.... I unsettled thinking that the gloating of these companies weighed more in the hearts of people. All of us hang to pretension... we pretend everywhere... everyday.. in front of neighbour, mate, stranger, beloved, enemy.. finally even in front of conscience, which questions our deportment.

'Did I played her part of acting in the play... in front of my conscience... ?'.... This question started haunting me. I knew the answer, but was not in a position to accept it. I masked myself again. She seemed to stand far away from me waving her hands... I looked down.. saw my watch... It was six o'clock .. Sun had already left the western sky strewing behind the red hue. "Let's start.. you bus will be here in 10 min.. ", she stood up saying so. I just nodded and gulped the last sip of coffee. We stepped out of the coffee outlet together. I asked her, " Marriage... ?? " thinking, ' This, probably, will be our last meet. She will fly away from the tree which gave her the warmth of being home. Can I put an end to the drama which is going on unstopped?? Can I kneel down infront of my conscience and confess... ?? ' .. Lot of questions started dancing around me. I was not in a position to cast them away. " If I dont get admission... it will be in December... " She replied. We came out of the institute walking, stepped in and sat in the bus.

Bus was about to start. " I have to look after a reaction ... good luck... ", whispering these lines, she calmly stood up and stepped out of the bus without even listening to my reply. All those words , which wanted to get liberated stalled deep inside my heart. My lips trembled. I riveted  my eyes to her back and watched her till her light blue coloured dress was absorbed by the darkness of night. I started trying to mask the void created by her absence. Again the same drama... me ,Kshama, conscience ... Conductor got into the bus and shouted, "Majestic... ". Bus started moving. Institute started to appear as if, it is moving away from me. My vision blurred. Night spread a veil on daylight.

Wednesday, 23 September 2015

ಹಿಂದಿರುಗಿ ನೋಡಿದಾಗ ...

"ಅವಧಿ" ಯಲ್ಲಿ ಪ್ರಕಟವಾದ ನನ್ನ ಲೇಖನ 

ಹಿಂದಿರುಗಿ ನೋಡಿದಾಗ ... 

ಹೀಗೆಯೇ ಎಚ್ಚೆಸ್ವಿ ಅವರ "ಅನಾತ್ಮ ಕಥನ " ಓದುತ್ತಾ ಕುಳಿತಿದ್ದೆ. ಯಾವುದೊ ಸಣ್ಣ ಕಥೆಯ ಮಧ್ಯದಲ್ಲಿ ಅವರು ಯು. ಆರ್. ಅನಂತಮೂರ್ತಿಯವರ " ಸಂಸ್ಕಾರ " ಕಾದಂಬರಿಯ ಬಗ್ಗೆ ಉಲ್ಲೇಖಿಸಿದ್ದರು. ತಕ್ಷಣವೇ ಏನೋ ಹೊಳೆದಂತಾಗಿ ಇಂಟರ್ ನೆಟ್ನಲ್ಲಿ ಸಂಸ್ಕಾರ ಮೊದಲು ಬಿಡುಗಡೆ ಆದ ವರ್ಷ ಯಾವುದೆಂದು ಹುಡುಕಿದೆ. ವರ್ಷ ೧೯೬೫ ನೋಡಿದ ಕೂಡಲೇ ಮುಖದಲ್ಲೊಂದು ಮಂದಾಹಾಸ. ' ಅರೆ, ಸಂಸ್ಕಾರ ಮುದ್ರಣಗೊಂಡು ೫೦ ವರ್ಷ ಆಗಿಹೊಯ್ತಾ ?? ' ಎಂದುಕೊಂಡೆ. ತಕ್ಷಣವೇ ಇಂತಹದೊಂದು ಅದ್ಭುತ ಕಲಾಕೃತಿ ಸೃಷ್ಟಿಸಿದ ಮೇಷ್ಟ್ರ  ಬಗ್ಗೆ ಏನಾದರೂ ಬರೆಯಬೇಕೆಂಬ ಹಂಬಲ ಉಂಟಾಯಿತು. ನಾನು 'ಸಂಸ್ಕಾರ' ಓದಿದ್ದು ಇತ್ತೀಚೆಗೆ. ಅದನ್ನು ಓದಿ ಇನ್ನೂ ವರ್ಷವೂ ಕಳೆದಿಲ್ಲ. ಅನಂತಮೂರ್ತಿಯವರ ಕಟ್ಟಾ ಅಭಿಮಾನಿ ನಾನೇನೂ ಆಗಿದ್ದವನಲ್ಲ. ನನಗೆ ಗೊತ್ತಿದ್ದ ಸಾಹಿತ್ಯವೆಂದರೆ ಪೂ. ಚಂ. ತೇ ಯವರ ಕೆಲವು ಕಥೆಗಳು, ಮತ್ತು ಎಚ್ಚೆಸ್ವಿ ಯವರ ಕೆಲವು ಕವಿತೆಗಳು ಅಷ್ಟೇ. ಪುಣೆಗೆ ಬರುವ ಮುನ್ನ ಸಾಹಿತ್ಯದ ಬಗ್ಗೆ ಒಲವಿದ್ದರೂ ಓದುವ ಹಂಬಲವಂತೂ ಇರಲಿಲ್ಲ.

ರಾತ್ರಿ ಸುಮಾರು ೮ ಘಂಟೆ ಆಗಿದ್ದಿರಬಹುದು, ಅಮ್ಮ ಫೋನ್ ಮಾಡಿದವರು, " ಲೋ .. ಅನಂತಮೂರ್ತಿ ಹೋಗ್ಬಿಟ್ರಂತೆ ಕಣೋ ... " ಎಂದರು. ನಾನೂ ಅದನ್ನೇನು ಬಹಳ ಹತ್ತಿರವಾಗಿ ಸ್ವೀಕರಿಸದೇ , " ಹೌದಾ ... "ಎಂದಷ್ಟೇ ಉತ್ತರಿಸಿ ಫೋನಿಟ್ಟಿದ್ದೆ . ಆಮೇಲೆ ಯಾವಾಗಲೋ ಹೀಗೆಯೇ ಯೂಟ್ಯೂಬಿನಲ್ಲಿ ಏನೋ ಹುಡುಕುತ್ತಾ ಇದ್ದಾಗ ಅಕಸ್ಮಾತಾಗಿ ಸಿಕ್ಕ ಅನಂತಮೂರ್ತಿಯವರ ಒಂದು ವೀಡಿಯೋ ನೋಡಿದೆ. ಭಾರತದ ಫಿಲಮ್ಸ್ ಡಿವಿಷನ್ ರ ಆ ವೀಡಿಯೊ ನೋಡಿ, ಅನಂತಮೂರ್ತಿ ಎಂದರೆ ಏನೋ ಒಂದು ರೀತಿಯ ಆತ್ಮೀಯ ಭಾವನೆ ಹುಟ್ಟತೊಡಗಿತ್ತು. ' ಈ ಮನುಷ್ಯ ಮಾತನಾಡುವ ರೀತಿ ನೋಡಿದರೆ , ಬಹಳ ಭಾವುಕ ಎಂದೆನುಸುತ್ತೆ. ಒಮ್ಮೆ ಇವರ ಯಾವುದಾದರೂ ಕೃತಿ ಓದಬೇಕಲ್ಲಾ ... ' ಎಂದುಕೊಂಡೇ ಸಪ್ನ ಆನ್ ಲೈನ್ ನಲ್ಲಿ ತರಿಸಿಕೊಂಡದ್ದು 'ಸಂಸ್ಕಾರ'. ತರಿಸಿಕೊಂಡದ್ದಷ್ಟೇ ...  ಬಹಳ ದಿನ ನನ್ನ ಮೇಜಿನ ಒಂದು ಮೂಲೆಯಲ್ಲಿಯೇ ಕುಳಿತಿತ್ತು ಪುಸ್ತಕ. ಓದುವ ಮನಸೂ ಆಗಿರಲಿಲ್ಲ, ಸಮಯವೂ ಸಿಕ್ಕಿರಲಿಲ್ಲ. ಇದ್ದಕ್ಕಿದ್ದಂತೆ ಹಾಸನಕ್ಕೆ ಹೊರಡುವ ಪ್ರಮೇಯವೊಂದು ಒದಗಿಬಂತು. ಬಸ್ಸಿನ ದಾರಿ ಖರ್ಚಿಗೆಂದು ವೀಡಿಯೊ ಮೊಬೈಲ್ ಗೆ  ಹಾಕಿಕೊಳ್ಳೋಣ ಎಂದು ಲ್ಯಾಪ್ ಟಾಪ್ ಬಿಚ್ಚಿಟ್ಟವನಿಗೆ ಮೇಜಿನ ಮೇಲೆ ಧೂಳಲ್ಲಿ ಅದ್ದ " ಸಂಸ್ಕಾರ" ಕಾಣಿಸಿತು. ' ಈ ಬಾರಿ ಪುಸ್ತಕ ದಾರಿ ಖರ್ಚಿಗೆ... '  ಎಂದುಕೊಂಡು  'ಸಂಸ್ಕಾರ' ವನ್ನು ಬ್ಯಾಗಿಗೆ ಹಾಕಿಕೊಂಡೆ.

ಅರಸೀಕೆರೆಯಿಂದ ಹಾಸನಕ್ಕೆ ಪಯಣಿಸುವ ಒಂದೂವರೆ ಘಂಟೆ ಅವಧಿಯಲ್ಲೇ ಸಂಸ್ಕಾರದ ೫೦ ಪುಟಗಳನ್ನು ಓದಿ ಮುಗಿಸಿಬಿಟ್ಟೆ. ಎಷ್ಟರ ಮಟ್ಟಿಗೆ 'ಸಂಸ್ಕಾರ' ನನ್ನನ್ನು ಆವರಿಸಿಕೊಂಡುಬಿಟ್ಟಿತು ಎಂದರೆ, ಇದಾದ ಮೇಲೆ ಮೇಷ್ಟ್ರ ಎಲ್ಲಾ ಸಣ್ಣ ಕಥೆಗಳನ್ನೂ , ಅವರ ಕಾದಂಬರಿಗಳನ್ನೂ ಮೂರು ತಿಂಗಳೊಳಗೆ ಕೊಂಡು ಓದಿ ಬಿಟ್ಟೆ. ಸಮಾಜ ಮತ್ತು ವ್ಯಕ್ತಿಯ ನಡುವೆ ನಿಂತು ಕಥೆ ಹೆಣೆಯುವ ಮೇಷ್ಟ್ರ ಕಥಾಶೈಲಿ ನನ್ನ ಮನಸ್ಸಿನ ಮೇಲೆ ಅತ್ಯಂತ ಆಳವಾಗಿ ಪ್ರಭಾವ ಬೀರಿತು. ಕನ್ನಡ ನವ್ಯ ಸಾಹಿತ್ಯದ ನೆಲೆಗಟ್ಟಿನಲ್ಲಿ ಸಾಹಿತ್ಯಿಕವಾಗಿ ಬಹಳ ಜತನದಿಂದ , ನಾಜೂಕಿನಿಂದ ಬಚ್ಚಿಟ್ಟಿದ್ದ ಹಲವಾರು ವಿಚಾರಗಳ ಬಗ್ಗೆ ಬರವಣಿಗೆ ಹೊಮ್ಮಿತು. ಈ ನಿಟ್ಟಿನಲ್ಲಿ 'ಸಂಸ್ಕಾರ' ಒಂದು ಬಹಳ ಮುಖ್ಯ ಕೃತಿ. ವೈಯಕ್ತಿಕ ಆಸೆಗಳು, ಮತ್ತು ಹೊರಗಿನ ಪ್ರಪಂಚಕ್ಕಾಗಿ ಹಾಕುವ ಮುಖವಾಡಕ್ಕೆ ನೈತಿಕವಾಗಿ ಏರ್ಪಡುವ ತಿಕ್ಕಾಟವನ್ನು ಬಹಳ ಸೂಕ್ಷ್ಮವಾಗಿ ಬಿಂಬಿಸುತ್ತೆ. ಈ ತರಹದ 'ಇಬ್ಬಂದಿ'ತನ ಮೇಷ್ಟ್ರ ಸಾಹಿತ್ಯದ ಒಂದು ಬಲವಾದ ಅಭಿವ್ಯಕ್ತಿಯಾಗಿ ಬಂದಿರುವುದನ್ನು ನಾವು ಕಾಣಬಹುದು. 'ಸಂಸ್ಕಾರ' ದ ಹಿಂದೆ ಪ್ರಕಟವಾದ ಅವರ ಸಣ್ಣ ಕಥೆಗಳಲ್ಲೂ ಈ ವಿಚಾರ ವಿದಿತ. ಅವರ "ಖೋಜರಾಜ ", " ಪ್ರಶ್ನೆ", "ಕಾರ್ತೀಕ", "ಘಟಶ್ರಾದ್ಧ"  ಮತ್ತು ಅದರ ನಂತರ ಹೊರ ಬಂದ "ಸೂರ್ಯನ ಕುದುರೆ " ಯಲ್ಲೂ ಬಹಳ ಶ್ರೇಷ್ಠವಾಗಿ ಹೊರಹೊಮ್ಮಿದೆ. ನಂಬಿಕೆ ಮತ್ತು ಆಚರಣೆಯ ತೊಡಕಿನಲ್ಲೇ ಸಿಕ್ಕಿಹಾಕಿಕೊಳ್ಳುವನು ಪ್ರಾಣೇಶಾಚಾರ್ಯ. ಅಂದಿನ ಸಾಮಾಜಿಕ ವ್ಯವಸ್ಥೆ, ಪ್ಲೇಗ್ ತರಹದ ಖಾಯಿಲೆಗಳು ಮತ್ತು ಅದರಂತೆಯೇ ಜನರ ಜೀವಾಳದಲ್ಲಿ ಬಿಗಿ ಬೇರು ಬಿಟ್ಟಿದ್ದ ಜಾತಿ ವ್ಯವಸ್ಥೆಯನ್ನು ಒಂದೇ ತಕ್ಕಡಿಯಲ್ಲಿ ತೂಗುವ ಅದ್ಭುತ ಸಮೀಕರಣೆ 'ಸಂಸ್ಕಾರ'ದ್ದು. ಪ್ರಾಣೇಶಾಚಾರ್ಯನ ಪಾತ್ರ, ಸಿಕ್ಕರೂ ಸಿಗದ ಒಂದು ದಿವ್ಯಕ್ಕೆ ಧ್ಯಾನಸ್ಥನಾಗಿ ಕೂರುವ ಸನ್ಯಾಸಿಯಂತೆ ತೋರುತ್ತದೆ. ಎಲ್ಲವನ್ನೂ ಬಿಟ್ಟುಬಿಡುವೆ ಎನ್ನುವ ಹುಚ್ಚು ಧೈರ್ಯ, ಸಮಾಜದ ಎಲ್ಲ ಕಟ್ಟುಪಾಡುಗಳನ್ನು ಕಿತ್ತೆಸೆಯುತ್ತೇನೆ ಎನ್ನುವ ಮನೋಧೈರ್ಯ ಎಲ್ಲವನ್ನೂ ಮೇಳೈಸಿಕೊಂಡೇ , ಅದರ ಬಗ್ಗೆಯೂ ಮತ್ತೊಮ್ಮೆ ಅನುಮಾನದ ದೃಷ್ಟಿ ಬೀರುವ ಪಾತ್ರ ಮೇಷ್ಟ್ರ "ಸ್ವ" ಚಿಂತನೆಯ ಫಲವಿದ್ದಿರಬಹುದೋ ಏನೋ !!!

ಸಾಹಿತ್ಯಿಕವಾಗಿ ನೋಡಿದಾಗ 'ಸಂಸ್ಕಾರ' ಹೊಸ ರೀತಿಯ ಕಥೆಗಾರಿಕೆಯನ್ನು ಕನ್ನಡಕ್ಕೆ ತಂದ ಕೃತಿ ಎನ್ನಬಹುದು. ಆ ಹಿಂದೆ ಬಂದಿದ್ದ ಯಾವುದೇ ಕೃತಿಗಳು, ಸಮಾಜದ ಕೊಳಕು ವ್ಯವಸ್ಥೆಯನ್ನೂ, ಅದರೊಂದಿಗೆ ದಾರ್ಶನಿಕ ತತ್ವಜ್ಞಾನವನ್ನು ಒಂದೇ ತಟ್ಟೆಯಲ್ಲಿ ಉಣಬಡಿಸಿದ್ದಿಲ್ಲ. ಆ ಕೆಲಸವನ್ನು ಬಹಳ ಒಪ್ಪವಾಗಿ 'ಸಂಸ್ಕಾರ' ದಲ್ಲಿ ಮೇಷ್ಟ್ರು ಮಾಡಿದರು. ಅದರಲ್ಲಿನ ವೈಚಾರಿಕ ಶ್ರೇಷ್ಠತೆ ಎಷ್ಟು ಆಳವಾಗಿತ್ತು ಎಂದರೆ, ಮುಂದಿನ ಹಲವಾರು ಪೀಳಿಗೆಯವರು ಅದರಿಂದ ಪ್ರಭಾವಿತರಾಗಿದ್ದು ಸುಳ್ಳಲ್ಲ. ಮೇಷ್ಟ್ರು ತಮ್ಮ ನಂತರದ ಕೃತಿಗಳಲ್ಲಿ  ಇಷ್ಟು ಪ್ರಭಾವ ಬೀರಲಿಲ್ಲವಾದರೂ , "ಸೂರ್ಯನ ಕುದುರೆ"ಯಂತಹ ಅದ್ಭುತ ಸಣ್ಣಕಥೆಗಳನ್ನು ಸೃಷ್ಟಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ, ಹೇಳಬೇಕು ಎನಿಸಿದ್ದನ್ನು ಬಹಳ ನೇರವಾಗಿ ಹೇಳುವ ಅವರ ಕಥನ ಶೈಲಿ, ಮತ್ತು ವಿಚಾರವನ್ನು ಬಿಡಿಸಿಡುವ ರೀತಿ , ಆಂಗ್ಲ ಕಥೆಗಾರ ಲಾರೆನ್ಸನ ನೆನಪು ತರಿಸುತ್ತೆ.

ಸಮಾಜಮುಖಿಯಾಗಿ ತಮ್ಮನ್ನು ತೆರೆದುಕೊಳ್ಳುವ ಆಕಾಂಕ್ಷೆಯಲ್ಲಿ ಅವರ ಕಥೆಗಳ ರೀತಿಯೂ ಬದಲಾಯಿತು ಎಂದೇ ಹೇಳಬೇಕು. ಅವರ ನಂತರದ ರಚನೆಗಳಾದ "ಆಕ್ರಮಣ " , " ರೂತ್ ಮತ್ತು ರಸುಲ್ " ಇವೆಲ್ಲವೂ ಅವರ ರಾಜಕೀಯ ದೃಷ್ಟಿಯಿಂದ ಹೊಸಥರದವು ಎನ್ನಿಸಿದರೂ ಒಬ್ಬ ಸಾಮಾನ್ಯ ಓದುಗನಿಗೆ ಮುಟ್ಟುವುದು ಕಷ್ಟಸಾಧ್ಯವೇ. ಅವರ "ಅವಸ್ಥೆ", ಯೂ ಅದೇ ದಾರಿಯದ್ದು. ಆ 'ಇಬ್ಬಂದಿ'ತನ ಎಷ್ಟರ ಮಟ್ಟಿಗೆ  ಅವರ ಮನಸ್ಸಿನ ಧ್ಯಾನಕೇಂದ್ರವಾಗಿತ್ತೆಂದರೆ ಅವರು ಪೂರ್ವ ಮತ್ತು ಪಶ್ಚಿಮ ದ ವ್ಯತ್ಯಾಸವನ್ನೂ "ಕ್ಲಿಪ್ ಜಾಯಿಂಟ್" ಅಲ್ಲಿ ಬರೆದರು. "ಮೌನಿ"ಯಲ್ಲಿ ಯೋಚನೆ ಮತ್ತು ಕ್ರಿಯೆಯ ನೈತಿಕ ತಿಕ್ಕಾಟವನ್ನು ವರ್ಣಿಸಿದರು, "ಭವ" ದಲ್ಲಿಯೂ "ದಿವ್ಯ" ದಲ್ಲಿಯೂ ... ಹೀಗೆ ಆಂತರಿಕ ತಿಕ್ಕಾಟವನ್ನು ಮತ್ತು ಅದರ ಹೊರಗಿನ ಅಭಿವ್ಯಕ್ತಿಯನ್ನು ಸಮೀಕರಿಸಿ ನೋಡುವ ದೃಷ್ಟಿ ಇವರ ಎಲ್ಲ ಕೃತಿಗಳಲ್ಲೂ ಕಂಡುಬರುತ್ತೆ. ಆದ್ದರಿಂದಲೇ ನನ್ನ ಅತ್ಯಂತ ಇಷ್ಟದ ಹತ್ತು ಕಥೆಗಳು ಎಂದು ನಾನೇನಾದರೂ ಎಣಿಸಲು ಹೊರಟರೆ, ಅದರಲ್ಲಿ ಮೇಷ್ಟ್ರ "ಘಟಶ್ರಾದ್ಧ ", " ಸಂಸ್ಕಾರ" ಮತ್ತು ಪೂ. ಚಂ. ತೇ ಯವರ " ತಬರನ ಕಥೆ " ಇಲ್ಲದೆ ಆ ಲಿಸ್ಟ್ ಸಂಪೂರ್ಣ ಆಗುವುದೇ ಇಲ್ಲ. ಸಮಾಜಮುಖಿಯಾಗಿ ಬದುಕಬೇಕಾದವನು ಪ್ರಶ್ನೆ ಕೇಳದೇ ಯಾವ ವಿಷಯವನ್ನೂ ಒಪ್ಪಬಾರದು  ಎನ್ನುವ ಬಹಳ ಉತ್ತಮ ಮಾರ್ಗ ಹಾಕಿಕೊಟ್ಟ ಮೇಷ್ಟ್ರು ಇಂದು ನಮ್ಮೊಂದಿಗಿಲ್ಲ. ಅವರೇ ಹೇಳುವಂತೆ , " ಒಂದು ಕಾಲವನ್ನು ಬದುಕಿಸಿಡುವ ಕಾಯಕಕ್ಕೆ ನಾವು ಬರೆಯಬೇಕು .. ". ಚಿಂತನಪರ ಸಮಾಜವನ್ನು ಜೀವಂತವಾಗಿರಿಸಿ,  ಬದುಕಿಸಿಟ್ಟ ಅವರ ಕಥೆಗಳು ಇನ್ನೂ ಅವರ ಇರವನ್ನು ನಮ್ಮ ಎದೆಯಾಳದಲ್ಲಿ ಮೂಡಿಸುತ್ತದೆ.  ಮೇಷ್ಟ್ರು ನಮ್ಮನ್ನು ಬಿಟ್ಟು ಹೋದ ರೀತಿ , ಈಗಲೂ ಮೇಳಿಗೆಯಿಂದ  ಅಗ್ರಹಾರಕ್ಕೆ ಗಾಡಿ ಹತ್ತಿ ತಣ್ಣಗೆ ಮಾತನಾಡುತ್ತಲೇ ಹೋದ ಪ್ರಾಣೇಶಾಚಾರ್ಯರ ನೆನಪನ್ನು ತರಿಸದೇ ಇರುವುದಿಲ್ಲ.

Happy 50th anniversary  to "ಸಂಸ್ಕಾರ" ... 

Sunday, 13 September 2015

ಅವಶೇಷ

"ಅವಧಿ" ಮತ್ತು "ರೀಡೂ" ನಲ್ಲಿ ಪ್ರಕಟವಾದ ನನ್ನ ಸಣ್ಣಕಥೆ .... 

ಅವಶೇಷ 

ಯಾವಾಗಲೂ ಗಿಜಿಗುಡುತ್ತಿದ್ದ ದೇರಣ್ಣನ ಚಾ ಅಂಗಡಿ, ಅಂದೇಕೋ ಬಿಮ್ಮೆಂದು ಕೂತಿತ್ತು. ಅಂಗಡಿಯೆಂದರೆ ನಾಲ್ಕು ಮೇಜುಗಳು, ಅದಕ್ಕೆ ಒತ್ತೊತ್ತಾಗಿ ಇಟ್ಟಿರುವ ಎಂಟು ಕುರ್ಚಿಗಳು, ಒಂದೆರಡು ಗಾಜಿನ ಡಬ್ಬಿ . ಅದರಲ್ಲಿ ಪೆಪ್ಪೆರ್ಮೆಂಟು, ಹಾಲ್ಕೊವ ಇತ್ಯಾದಿ. ಒಳಗೆ ದೇರಣ್ಣ ಕುಳಿತುಕೊಳ್ಳಲು ಒಂದು ಕುರ್ಚಿ, ಒಂದು ಮೇಜು. ಚಾ ಕಾಯಿಸುವ ಪಾತ್ರೆ ಇತ್ಯಾದಿ...  ಹತ್ತಾರು ಜನ ಗಿರಾಕಿಗಳು , ಅವರ ಚಿಟ-ಪಟ ಮಾತುಗಳು , " ನಂಗೊಂದು ಕಾಫಿ .. " , " ಎರಡ್ ಪ್ಲೇಟ್ ಇಡ್ಲಿ ಹಾಕು ದೇರಣ್ಣ .. " ಎಂದು ಕೇಳಿ ಬರುತಿದ್ದ ಯಾವುದೇ ಶಬ್ದಗಳ ಗೋಜಿರಲಿಲ್ಲ. ಸೂರ್ಯ ಬಾನಿನ ಅಂಚಲ್ಲಿ ಇಣುಕಿನೋಡಿ , ಮೈ ಮುರಿದು, ನಿಧಾನಕ್ಕೆ ನಡೆದು ಬಾನಿನ ಮೇಲೆ ಬಂದಾಗಲೂ ದೇರಣ್ಣನ ಅಂಗಡಿ ನಿದ್ರಿಸುತ್ತಲೇ ಇತ್ತು. ಎದುರಿಗೆ ಕರಿಯ ಕಂಬಳಿಯಂತೆ ಚಾಚಿ ಮಲಗಿದ್ದ ರಸ್ತೆಯೂ ನಿದ್ದೆ ಹೋಗಿತ್ತು. ಆಗ್ಗೀಗೆ ರೊಯ್ಯೆಂದು ಹೋಗುವ ವಾಹನಗಳನ್ನು ಬಿಟ್ಟರೆ ಎಂದಿನ ಉತ್ಸಾಹ ಇರಲಿಲ್ಲ. ನೇಸರ ಮೂಡಣದಿ ಕೆಂಪು ಚೆಲ್ಲಿ , ಅದನ್ನು ಹೆಕ್ಕಿಕೊಂಡು ಬಾನಿನಲ್ಲಿ ಇಣುಕುವ ಮೊದಲೇ ಲವಲವಿಕೆಯ ಮದುವೆಮನೆಯಂತೆ ಆಗುತ್ತಿದ್ದ ಮಹಾನಗರಿ , ಇಂದೇಕೋ ದುಗುಡ - ದುಮ್ಮಾನಗಳಿಂದ ಕೂಡಿದ, ಮೌನ ಧರಿಸಿದ ಸುಂದರಿಯ ಮುಖದಂತೆ ಬಾಡಿತ್ತು. ಎಲ್ಲೆಲ್ಲೂ ಸ್ಮಶಾನ ಮೌನ. 

ದೇರಣ್ಣ ಅಂಗಡಿಯೊಳಗಿನಿಂದ ಹೊರಗೆ ಇಣುಕಿದ. ಗಾಢ ಮೌನದೊಂದಿಗಿನ ರಣ ಬಿಸಿಲು ಮುಖಕ್ಕೆ ರಾಚಿತು. ಎಲ್ಲೋ ದೂರದಲ್ಲಿ ಸುಟ್ಟ ಟೈರಿನ ವಾಸನೆ ಮೂಗಿಗೆ ಮೆಲ್ಲಗೆ ಬಡಿಯುತ್ತಿತ್ತು. ಬೆಳಗ್ಗಿನಿಂದ ಒಬ್ಬನೂ ಅಂಗಡಿಯ ಕಡೆ ಮುಖ ಕೂಡ ಹಾಕಿರಲಿಲ್ಲ. ಎದುರಿಗಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಯವರೂ ಕೂಡ ಅಂದು ರಜೆ ಘೋಷಿಸಿದ್ದರು. ಎಲ್ಲರಿಗೂ ತಮ್ಮ ತಮ್ಮ ಜೀವ-ಜೀವನದ ಮೇಲೆ ಆಸೆಯಿರುವುದಿಲ್ಲವೇ ? ... ಹೌದು... ಅಂದು ಮಹಾನಗರ ಬಂದ್ . ಯಾವ ವಿಶೇಷತೆಗೆಂದು ಬಂದ್ ಆಚರಿಸಲಾಗುತ್ತಿದೆ ಎಂದು ದೇರಣ್ಣನಿಗೆ ತಿಳಿದಿರಲಿಲ್ಲ. ತಿಳಿದುಕೊಳ್ಳುವ ಗೋಜಿಗೆ ಹೋಗುವುದೂ ದೇರಣ್ಣನ ಮನಸ್ಥಿತಿಗೆ ಸಾಧ್ಯವಾಗುತ್ತಿರಲಿಲ್ಲ. ದಿನದ ಕೂಳಿಗೆ ಹೋರಾಡುವ ಮನಕ್ಕೆ ಹೊಟ್ಟೆಯ ಆರ್ತ ಧ್ವನಿ ಬಿಟ್ಟು ಬೇರೆ ಕೂಗು ಕೇಳುವುದು ಕಷ್ಟ ಸಾಧ್ಯ. ಪ್ರತಿದಿನ ಬೆಳಗ್ಗೆ ಆರು ಘಂಟೆಗೆ, ತನ್ನ ಕಬ್ಬಿಣದ ಸರಳನ್ನು ಎಳೆದುಕೊಂಡು , ಬಾಗಿಲನ್ನು ಮುಚ್ಚಿಕೊಂಡು ನಿದ್ರಿಸುತ್ತಿರುವ ತನ್ನ ಅಂಗಡಿಯನ್ನು ದೇರಣ್ಣ ಎಚ್ಚರಿಸುತ್ತಾನೆ. ಅನಂತರ ಮಧ್ಯಾಹ್ನ ಸುಮಾರು ಮೂರು ಘಂಟೆಗೊಮ್ಮೆ ಮನೆಯ ಮುಖ ನೋಡಿದರಷ್ಟೇ ಭಾಗ್ಯ. ಮತ್ತೆ ಮನೆ ಕಡೆ ಹೋಗುವುದು ನಿಷೆ ಆವರಿಸಿದ ಮೇಲೆಯೇ. ಐದು ಹಸಿದ ಹೊಟ್ಟೆಗೆ ಅನ್ನ ಹಾಕುವ ಕೈ ದೇರಣ್ಣ. ಅಂಗಡಿಯ ಕೆಲಸಕಾರ್ಯಗಳಲ್ಲಿ ಗಾಢವಾಗಿ ಮುಳುಗಿ ಹೋದರೂ , ಮಗಳ ಮದುವೆಗೆ ಬೀಗರು ಕೇಳಿರುವ ಒಡವೆಗಳು , ಛತ್ರ , ಅಪ್ಪನ ಖಾಯಿಲೆ, ಈ ತಿಂಗಳ ಮನೆ ಬಾಡಿಗೆ, ಹೆಂಡತಿಯ ಒಡವೆ ಗಿರವಿ ಇಟ್ಟಿರುವುದು, ಅದರ ಬಡ್ಡಿ, ಎಲ್ಲವೂ ಅಮೂರ್ತ ಭೂತಗಳಾಗಿ ದೇರಣ್ಣನ ಎದುರು ನೃತ್ಯ ಮಾಡುತ್ತವೆ. ಇವೆಲ್ಲದರ ಎದುರು ಅವನು ನಿತ್ಯವೂ ಹೋರಾಡುತ್ತಲೇ ಇರುತ್ತಾನೆ. 

ಮೇಜಿನ ಮೇಲೆ ಮೊಣಕೈ  ಊರಿ ಹೊರಗಿನ ನಿರ್ವಾತ ಪ್ರಪಂಚವನ್ನೊಮ್ಮೆ ದಿಟ್ಟಿಸಿದ ದೇರಣ್ಣ. ಅರ್ಧ ಖಾಲಿಯಾಗಿ ಉಳಿದಿರುವ ಪೆಪ್ಪರ್ಮೆಂಟಿನ ಡಬ್ಬಿಗಳು, ಬೆಳಿಗ್ಗೆಯೇ ಗಿರಾಕಿಗಳಿಗಾಗಿ ಕಾಯಿಸಿಟ್ಟಿದ್ದ ಚಾ , ಬೇಯಿಸಿಟ್ಟಿದ್ದ ಇಡ್ಲಿಗಳು ಎಲ್ಲವೂ ಒಂದು ವಿಚಿತ್ರ ರೀತಿಯ ಘಮ ಸೂಸಲಾರಂಭಿಸಿದ್ದುವು. ' ಅವು ಹಾಳಾಗಿ ಹೋಗುವುದಲ್ಲಾ ... ಅದರಿಂದಾಗುವ ನಷ್ಟ ಹೇಗೆ ತುಂಬಿಕೊಳ್ಳಲಿ ... ' ಎಂದು ಯೋಚಿಸುತ್ತಾ, 'ಯಾರಾದರೂ ಇತ್ತ ಸುಳಿಯಬಹುದೇನೋ ... ಸ್ವಲ್ಪವಾದರೂ ವ್ಯಾಪಾರ ಆಗಬಹುದೇನೋ ... ' ಎನ್ನುವ ಭರವಸೆಯೇ ದೇರಣ್ಣನ ಆ ದೃಷ್ಟಿಯ ಹಿಂದಿನ ಶಕ್ತಿಯಾಗಿತ್ತು. ಎಲ್ಲರೂ ನಾಳೆಯ ರಾಜಕುಮಾರರೇ ... ಇಂದಿಗಿಂತ ಹೆಚ್ಚು ನಾಳೆ ವ್ಯಾಪಾರವಾಗಬಹುದು... ನಾಳೆ ಇಂದಿಗಿಂತ ಒಳ್ಳೆಯ ಜೀವನ ನಮ್ಮದಾಗಬಹುದು ಎನ್ನುವುದು ಕೆಲ ಮಧ್ಯಮ ವರ್ಗದ ಆಶಾಬೆಳಕು.. 

ಬಿಸಿಲಿನ ಝಳಕ್ಕೂ, ಮಂದವಾಗಿದ್ದ ಅಂಗಡಿಯೊಳಗಿನ ಘಮಕ್ಕೂ ದೇರಣ್ಣನಿಗೆ ಜೋಂಪು ಹತ್ತಿದಹಾಗಾಯಿತು. ಮೇಜಿನ ಮೇಲೆ  ತನ್ನ ತಲೆಯೊರಗಿಸಿ ಕಣ್ಣು ಮುಚ್ಚಿದ. ನಿದ್ರಾದೇವಿ ಅವನನ್ನು ಆವರಿಸಿಕೊಳ್ಳಲು ತನ್ನ ಕೋಮಲವಾದ, ಮಬ್ಬು-ಮಬ್ಬಾದ ಬಲೆಯನ್ನು ಹರವಿಹಾಕುತ್ತಿರುವಾಗಲೇ "ಬಚಾವೋ ... ಬಚಾವೋ ... " ಎಂದು ಕಿರುಚಿಕೊಂಡಂತಹ ಧ್ವನಿಯಿಂದ ಅವನಿಗೆ ಎಚ್ಚರವಾಯಿತು. ದೇರಣ್ಣ ಗಾಬರಿಗೊಂಡ. ಕನಸೇನೋ ಎಂದುಕೊಂಡು ತನ್ನ ತಲೆ ಕೊಡವಿಕೊಂಡ. ತುಸು ಕ್ಷಣದ ನಂತರ ಮತ್ತದೇ ಪುನರಾವರ್ತನೆ ಆಯಿತು ಅದೇ ಜೋರಾಗಿ, ಕರ್ಕಶವಾಗಿ, ಆರ್ತತೆಯನ್ನು ಗರ್ಭೀಕರಿಸಿಕೊಂಡ ಕೀರಲು ಸ್ವರ. ದಿಗಿಲುಗೊಂಡ ದೇರಣ್ಣ , ಅಂಗಡಿಯಿಂದ ಹೊರಬಿದ್ದು ಅತ್ತಿತ್ತ ನೋಡಲಾರಂಭಿಸಿದ.

ತುಸು ದೂರದಲ್ಲಿ ಹೊಗೆಯು ತನ್ನ ಚಕ್ರಾಧಿಪತ್ಯ ಸಾಧಿಸಿತ್ತು. 'ಹೋ .. ಹೋ ..' ಎನ್ನುವ ಏರುದನಿಯ ಸ್ವರ ಕೇಳಲಾರಂಭಿಸಿತು. ಯಾರೋ ಆ ಮಬ್ಬಿನಿಂದ ದೇರಣ್ಣನತ್ತಲೇ ಓಡಿ ಬರುತ್ತಿದ್ದ. ಅವನ ಹಿಂದೆ ಗುಂಪು ಗುಂಪಾಗಿ ಜನ ಅವನನ್ನು ಓಡಿಸಿಕೊಂಡು ಬರುತಿದ್ದರು. ಅವರೆಲ್ಲ ಈ ವ್ಯಕ್ತಿಯನ್ನು ಅಟ್ಟಿಸಿಕೊಂಡು ಬರುತ್ತಿರುವುದು ಸ್ಪಷ್ಟ ಗೋಚರವಾಗಿತ್ತು. ಆ ವ್ಯಕ್ತಿಯ ಬಟ್ಟೆಯೆಲ್ಲಾ ರಕ್ತದಿಂದ  ತೊಯ್ದಿತ್ತು. ದೇರಣ್ಣ ಹೆದರಿದ. ಅವನ ಕಾಲುಗಳು ನಡುಗತೊಡಗಿದವು. ತಾನು ಎಲ್ಲಿದ್ದೇನೆ ಎನ್ನುವ ಅರಿವೂ ಅವಿನಿಗಾಗಲಿಲ್ಲ. ಕಾಲುಗಳು ತನ್ನ ಸ್ವಸ್ಥಾನ ಬಿಟ್ಟು ಹೋಗಲು ನಿರಾಕರಿಸುತ್ತಿದ್ದವು. ಅಟ್ಟಿಸಿಕೊಂಡು ಬರುತ್ತಿದ್ದವರ ಕೈಯಲ್ಲಿ ಹರಿತವಾದ ಮಚ್ಚು, ಕತ್ತಿಗಳಿದ್ದವು... ಹಾಕಿ ಸ್ಟಿಕ್ ಗಳಿದ್ದುವು. " ಎಳ್ಕಳೊ ಬಡ್ಡಿಮಗನ್ನಾ ... ನಮ್ಮೋರನ್ನೆಲ್ಲ ಹೊಡಿತಿದಾರೆ ಅವ್ರು .. ಸಿಕ್ಕಿರೋ ಈ ಮಗನ್ನ ಬಿಡಬಾರದು .. ", ಎಂದು ಗುಂಪಿನಿಂದ ಯಾರೋ ಕೋಗಿದ. ತಕ್ಷಣವೇ .. " ಕತ್ತರ್ಸೋ ...  ಬಾಡಿನೂ ಉಳಿಬಾರ್ದು  " ಎನ್ನುವ ಹತ್ತಾರು ಧ್ವನಿಗಳು ಮೊಳಗಿದುವು. ಆ ವ್ಯಕ್ತಿ ದೇರಣ್ಣನಿಗೆ ಹತ್ತಿರಾಗುತ್ತಿದ್ದ. ದೇರಣ್ಣನ ಎದೆಬಡಿತ ಜೋರಾಗತೊಡಗಿತು. ತುಟಿಗಳು ಅದುರಿದವು. ಕಿರುಚಿಕೊಳ್ಳಬೇಕು ಎಂದೆನಿಸಲು ಆರಂಭಿಸಿತು. ಆದರೆ ನಾಲಗೆ ಹೊರಡುತ್ತಿರಲಿಲ್ಲ. ಹಿಂದೆ ಬರುತ್ತಿದ್ದ ಗುಂಪು ತನ್ನ ಓಟದ ವೇಗ ಹೆಚ್ಚಿಸಿಕೊಳ್ಳುತ್ತಿತ್ತು. ವ್ಯಕ್ತಿ ಸುಸ್ತಾಗಿದ್ದ, ಕಾಲುಗಳು ಕುಂಟಲು ಆರಂಭವಾಗಿದ್ದುವು. ಅವನು ದೇರಣ್ಣನ ಹತ್ತಿರ ಬಂದೇ ಬಿಟ್ಟ. ದೇರಣ್ಣನ ಅಂಗಡಿಯ ಹೊಸ್ತಿಲ ಬಳಿಯೇ ಅವನ ಕಾಲಬಳಿ ಬಂದು ಧೊಪ್ಪನೆ ಬಿದ್ದ. ... ತನ್ನ ಅರ್ಧತೆರೆದ ಕಣ್ಣುಗಳಲ್ಲಿ ಮನದೊಳಗಿನ ಎಲ್ಲಾ ಭಯ, ನೋವು, ಸಂಕಟ ಕೂಡಿಕೊಂಡು , " ಭಾಯ್ .. ಬಚಾವೋ .. " ಎಂದಷ್ಟೇ ತೊದಲಿ ಎವೆ ಮುಚ್ಚಿದ.

ದೇರಣ್ಣ ಸ್ಥಂಭೀಭೂತನಾದ. ಅವನ ತಲೆಯೊಳಗೆ ಸಾವಿರ ಯೋಚನೆಗಳು ಹರಿದಾಡತೊಡಗಿದುವು. ' ಇವನ್ಯಾರು... ಯಾಕೆ ಇಷ್ಟು ಗಾಯಗೊಂಡಿದ್ದಾನೆ... ಏನಾಗಿದೆ .. ಇವನನ್ನು ಯಾಕೆ ಅಟ್ಟಿಸಿಕೊಂಡು ಬರುತಿದ್ದಾರೆ ... ' ಎಂದೆಲ್ಲಾ ಪ್ರಶ್ನೆಗಳು ಒಮ್ಮೆಲೇ ದೇರಣ್ಣನ ತಲೆ ತುಂಬಿದವು. ಗೊಂದಲದಲ್ಲಿದ್ದ ದೇರಣ್ಣನನ್ನು ಯಾರೋ ಎಳೆದು ಕೆಳಗೆ ಕೆಡವಿದರು. ಅಂಗಡಿಯಿಂದ ದೂರ ಬಿದ್ದ ದೇರಣ್ಣ. ಸಾವರಿಸಿಕೊಂಡು ತನ್ನ ಅಂಗಡಿಯತ್ತ ದೃಷ್ಟಿ ಬೀರಿದ. ಹತ್ತಾರು ಜನ ಅಂಗಡಿಯೊಳಗೆ ನುಗ್ಗಿ, ಗಾಜಿನ ಡಬ್ಬಗಳನ್ನು ಎತ್ತಿ ಆ ವ್ಯಕ್ತಿಯ ಮೇಲೆ ಬೀಸಿದರು. ಅದು ಒಡೆದು ಚೂರಾಯಿತು . ಅವನ ತಲೆಯಿಂದ ರಕ್ತ ಹರಿಯತೊಡಗಿತು. " ಒದಿ .. ಬಿಡಬೇಡ " ... " ಹೊಡಿ ... ", "ಕಡಿ ... " ಇವುಗಳ ಝೇಂಕಾರದಿಂದ ಇಡೀ ವಾತಾವರಣ ತುಂಬಿಹೋಯಿತು. ಗಿರಾಕಿಗಳಿಗೆಂದು ಇಟ್ಟಿದ್ದ ಇಡ್ಲಿ, ಚಾ ಎಲ್ಲವೂ ನೆಲದ ಮೇಲೆ ಬಿದ್ದು ಹೊರಳಾಡತೊಡಗಿದುವು. ಕುರ್ಚಿಗಳು ಕಾಲು ಮುರಿದುಕೊಂಡವು. ಬೆಳಗ್ಗೆ ದೇವರ ಫೋಟೋ ಮುಂದೆ ಹತ್ತಿಸಿಟ್ಟಿದ್ದ ದೀಪವೂ ಕೆಳಗೆ ಬಿದ್ದು ಆರಿ ಹೋಗಿ ಸಣ್ಣಗೆ ಹೊಗೆ ಸೂಸತೊಡಗಿತ್ತು. " ಮತ್ತೆ .. ನಮ್ ದೇವರ ಬಗ್ಗೆ ಮಾತಾಡಿದ್ರೆ .. ಬಿಡ್ತೀವಾ ... " ಎನ್ನುತ್ತಾ ಮಲಗಿದ್ದವನ ಹೊಟ್ಟೆಗೊಬ್ಬ ಜೋರಾಗಿ ಒದ್ದ. ಆ ವ್ಯಕ್ತಿಯ ಚಲನೆ ನಿಂತಿತು. ಅವನ ಆರ್ತ ಚೀರಾಟ ನಿಂತಿತು. ದೇರಣ್ಣ ತನ್ನ ಕನಸು, ತನ್ನ ಜೀವನ ತನ್ನ ಕಣ್ಣು ಮುಂದೆಯೇ ಒಡೆದುಹೊಗುವುದನ್ನು ನೋಡುತ್ತಾ ಕೂತ. ಸ್ವಲ್ಪ ಹೊತ್ತು ಚೀರಾಡಿದ ಗುಂಪು , ಮೆಲ್ಲಗೆ ಚದುರತೊಡಗಿತು. ದೇರಣ್ಣನ ಇರುವಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತೆ ಅಲ್ಲಿ ಉಳಿದಿದ್ದ ಕುರ್ಚಿಗಳನ್ನೂ, ಮೆಜನ್ನೂ ಒದ್ದು ಧ್ವಂಸಗೊಳಿಸಿ ಗುಂಪು ಅಲ್ಲಿಂದ ನಿರ್ಗಮಿಸಿತು. ಮತ್ತೆ 'ಹೋ ... ' ಎನ್ನುತ್ತಾ ಮುಂದುವರೆಯಿತು.

ಮೆಲ್ಲಗೆ ಕುಳಿತಲ್ಲಿಂದ ದೇರಣ್ಣ ಎದ್ದ. ತನ್ನ ಅಂಗಡಿಯನ್ನೊಮ್ಮೆ ದಿಟ್ಟಿಸಿದ. ಆಗಸ ಮೇಘಗಳ ಸಾಲಿಂದ ಆವೃತವಾಯಿತು. ಕಡು ಕಪ್ಪು ಮೋಡಗಳು ತನ್ನ ಮಿಂಚಿನ ನಾಲಗೆಯನ್ನೊಮ್ಮೆ ಚಾಚಿ, ದೇರಣ್ಣನನ್ನು ನೋಡಿ ಬಿಕ್ಕಿದಂತೆ ಗುಡುಗಿ ವರ್ಷಾಭಿಷೇಕ ಆರಂಭಿಸಿದುವು. ದೇರಣ್ಣ ಮಳೆಯಲ್ಲಿ ತೊಯ್ಯುತ್ತಲೇ, ಆ ವ್ಯಕ್ತಿಯ ದೇಹವನ್ನು ನೋಡುತ್ತಾ ಉಸಿರುಗಟ್ಟಿ ಕುಕ್ಕುರು ಕೂತ. ಸುತ್ತಲೂ ಹೊಗೆಯ ಮಬ್ಬು ಕವಿದಿತ್ತು. ನಿರ್ಭಾವದ ಅವನ ಮುಖದ ಮೇಲೆ ಮಳೆಯ ಹನಿಗಳು ನಾಟ್ಯ ಆರಂಭಿಸಿದವು. ದೂರದಲ್ಲೆಲ್ಲೋ  ಕೂಗಾಡುವ ಶಬ್ದ , ಪೋಲಿಸ್ ಜೀಪಿನ ಸೈರನ್ ಶಬ್ದ ಕೇಳತೊಡಗಿತು. ದೇರಣ್ಣ ನಿರುಮ್ಮಳನಾಗಿ ಅವಶೇಷದೊಂದಿಗೆ ಒಂದಾಗಿಬಿಟ್ಟ.
   

Monday, 24 August 2015

ತೆರೆ

"ರೀಡೂ " ನಲ್ಲಿ ಪ್ರಕಟವಾದ ನನ್ನ ಸಣ್ಣಕಥೆ .... 

ತೆರೆ 

"ಮತ್ತೆ ಮುಂದೇನು ಅಂತ ... "ಕಾಫಿ ಹೀರುತ್ತಾ ಎದುರು ಕುಳಿತಿದ್ದ ಕ್ಷಮಾಳ ಮುಖ ನೋಡಿದೆ. ಸುತ್ತಲಿನ ಪರಿಸರದಲ್ಲಿ ಕರಗಿ ಹೋದಂತೆ, ಎಲ್ಲೋ ದೂರದ ಪರ್ವತಗಳಿಂದ ಕೂಗಿ ಕರೆದ ಅನುಭವವಾಗುವಂತೆ ಅವಳು ಮಾತನಾಡತೊಡಗಿದಳು. "ನೋಡೋಣ ... ಹೊರಗೆ ಹೋಗ್ಬೇಕು ಅಂತ ಹೇಳಿದ್ನಲ್ಲಾ ... Europe ಗೆ ಅಪ್ಲೈ ಮಾಡ್ತಾ ಇದ್ದೀನಿ ... ". ಅವಳ ಮಾತಿನಲ್ಲಿ ಕಾಣುವುದನ್ನು ಮೀರಿ ನೋಡುವ, ಒಳ ಹೊಕ್ಕು ಅರಸುವ ಆಸೆಯಿತ್ತು. ಕಳೆದುಹೋಗಿದ್ದನ್ನೇನೋ ಹುಡುಕುವ ಇರಾದೆಯಿತ್ತು. "Professor ಬರೆದುಕೊಡಬೇಕು ಅಷ್ಟೇ .. Reco letter ನ ... ಕೇಳಿದ್ದೀನಿ .. " , ವರ್ಷದಿಂದ ಮೈ ಬಗ್ಗಿಸಿ, ದುಡಿಯುತ್ತಿದ್ದ ಕೆಲಸವನ್ನು ಮನಸ್ಸಿನಲ್ಲಿ ಮತ್ತೆ ಮರುಕಳಿಸಿಕೊಂಡು ಇಷ್ಟವಿದ್ದೋ , ಇಲ್ಲದೆಯೋ ಮಾಡಲೇಬೇಕಾದ ಕಾರ್ಯವೊಂದನ್ನು ಎಸಗಿದಂತೆ ಮಾತನಾಡಿದಳು. ವರ್ಷದ ಹಿಂದೆ ಅವಳನ್ನು ಇಲ್ಲೇ ಭೇಟಿಯಾದಾಗ ಇದ್ದ ಆ ತುಂಟ ಕಣ್ಣುಗಳು ಇಂದು ಎಲ್ಲೋ ದೂರದ ದಿವ್ಯವನ್ನು ಅರಸುತ್ತಿರುವಂತೆ ಕಾಣುತ್ತಿತ್ತು. ಮಾತಿನಲ್ಲಿ ಹಿಂದಿದ್ದ ಹುರುಪಿರಲಿಲ್ಲ. ಉತ್ಸಾಹದ ಪುಟಿಯುವಿಕೆ ಇರಲಿಲ್ಲ. 'ಇವಳೇ ... ನಾನು ನೋಡಿ ಮೆಚ್ಚಿದ ಹುಡುಗಿ ??? 'ಎಂದುಕೊಂಡು ಅನ್ಯಮನಸ್ಕನಾದೆ. "ಇದೇನು ಜುಬ್ಬಾ ... ನಿಲುವಂಗಿ ... " ಎಂದು ಕಿಸಕ್ಕೆನೆ ನಕ್ಕಳು. ಹಳೆಯ ಹುರುಪು ಮತ್ತೆ ಬಂದಂತಾಗಿ ಅವಳತ್ತ ತಿರುಗಿದೆ. ಕೈಲಿದ್ದ Lay's ಪ್ಯಾಕೆಟ್ ತೆಗೆದು ಚಿಪ್ಸ್ ತುಟಿಗೆ ಒತ್ತಿಕೊಂಡು ನನ್ನತ್ತ ನೋಡುತ್ತಿದ್ದಳು.  "I don't like this flavour... " ಎಂದೆ. ಬಾಯಿಂದ ಅಪ್ರಯತ್ನವಾಗಿ ಇಂಗ್ಲಿಷ್ ಹೊರಡಿತ್ತು. ಇದು ಅವಳನ್ನು ಆಕರ್ಷಿಸಲು ಮಾಡಿದ ಕ್ಷುದ್ರ ಪ್ರಯತ್ನದಂತೆ ತೋರಿ ಹೇಸಿಕೊಂಡೆ. ಅವಳಿಗೆ ಇದು ತನ್ನನ್ನು ಆಕರ್ಷಿಸಲು ಮಾಡಿದ್ದು ಎಂದು ಗೊತ್ತಾಗದೆ ಇರಬಹುದು. ಆದರೆ ನಾನು ಮತ್ತದೇ ಕ್ಷುದ್ರತೆಯ ಉಸುಕಿನೊಳಗೆ ಮುಳುಗಿಹೋಗುತ್ತಿರುವಂತೆ ಅನಿಸತೊಡಗಿತು. ಅವಳಾಗಲೇ ನನ್ನ ಬಯಕೆಯನ್ನು ಅಲ್ಲಗಳೆದು ವರ್ಷವೇ ಕಳೆದಿದೆ. ಆದರೂ ಮನಸ್ಸಿನ ಮೂಲೆಯಲ್ಲೊಂದು ಸಣ್ಣ ಆಸೆ. ಅದನ್ನು ವ್ಯಕ್ತಪಡಿಸಲು ಸಾಧ್ಯವಾಗದಾಗ ಹೀಗೆ ಕ್ಷುದ್ರತೆಯ ಮೊರೆ ಹೊಕ್ಕು ಅವಳನ್ನು ಗೆಲ್ಲಲೆತ್ನಿಸುವುದು.

ಕೆಲ ನಿಮಿಷಗಳ ಮೌನ ಇಬ್ಬರನ್ನೂ ಆವರಿಸಿತು. ವರ್ಷದ ನಂತರದ ಭೇಟಿ. ಅದೂ ಭಾವಸುಂದರಿಯ ಜತೆ. ಹೇಳಬೇಕೆಂದು ಉರು ಹೊಡೆದುಕೊಂಡು ಬಂದ ಮಾತೆಲ್ಲವೂ ಅವಳ ಕಣ್ಣಿನ ತಣ್ಣನೆಯ ದಿವ್ಯ ನೋಟಕ್ಕೆ ಹೊತ್ತುರಿದು ಭಾಸ್ಮವಾಗಿದ್ದವು. ನನ್ನ ಮೆಚ್ಚುಗೆಗೆ ಅರ್ಥವೇ ಇಲ್ಲದಂತೆ ಫಟಾರನೆ ತಿರಸ್ಕರಿಸಿದ ಕ್ಷಮಾಳ ಅಂದಿನ ಮಾತುಗಳು ಮಾರ್ದನಿಸ ತೊಡಗಿದವು. ತಿರಸ್ಕಾರದ ಹಿಂದೆ ಸಿಟ್ಟು, ಆಕ್ರೋಶ ಇದ್ದಿದ್ದರೆ ಇಷ್ಟು ಬಗ್ಗುಡವಾಗುತ್ತಿರಲಿಲ್ಲವೇನೋ ಮನಸ್ಸು. ಬಹಳ ಗಾಂಭೀರ್ಯದಿಂದ , ಗೌರವಯುಕ್ತವಾಗಿ ನನ್ನ ಕೋರಿಕೆಯನ್ನು ಬದಿಗೊತ್ತಿ ಸಿನಿಮಾ ದಾಟಿಯಲ್ಲಿ , "ನೀನೊಬ್ಬ ಬಹಳ ಒಳ್ಳೆಯ ಫ್ರೆಂಡ್ ಕಣೋ ... "ಎಂದಿದ್ದ ಆ ಕ್ಷಮಾ ಮತ್ತೆ ಮತ್ತೆ ನೆನಪಾದಳು . ನನ್ನ ಜೀವನದಲ್ಲಿ ಅವಳ ಪಾತ್ರವನ್ನೂ ನಾನೇ ಆಡುತಿದ್ದೇನೆಂದುಕೊಂಡು ಅಧೀರನಾದೆ. ವರ್ಷದಿಂದ ಈಚೆಗೆ ಮಾತು ಅಷ್ಟಕ್ಕಷ್ಟೆ. ಭಾವದಿಂದ ಅವಳನ್ನು ಅಳೆಯಲೆತ್ನಿಸಿದ್ದು ಮಾತ್ರ ಸತ್ಯ. ಸಮುದ್ರದ ಹೊಡೆತ ತಿಂದಷ್ಟೂ ತೆರೆದುಕೊಳ್ಳುವ ತೀರದ ಬಂಡೆಗಳಂತೆ ಅವಳತ್ತ ಮತ್ತೆ ಮತ್ತೆ ವಾಲಿದ್ದೆ., ಇನ್ನಷ್ಟು ತೆರೆದುಕೊಂಡಿದ್ದೆ. ನಾನು ಬಿಚ್ಚಿಕೊಂದಷ್ಟೂ ಅವಳು ಅಂತರ್ಮುಖಿಯಾಗುತ್ತಾ ಹೋಗಿದ್ದಳು. ತನ್ನದೇ ಬೆಚ್ಚಗಿನ ಲೋಕದಲ್ಲಿ ಸದ್ದಿಲ್ಲದೇ ಅರಳಿಕೊಂಡಳು. ಹೊಸ ದಿವ್ಯದ ಅರಸುವಿಕೆಗೆ ಹೊರಟಂತೆ ಇಂದು ನನ್ನ ಮುಂದೆ ಕುಳಿತಿದ್ದಾಳೆ.

ಮತ್ತೆ ನಾನೇ ಮುಂದುವರೆದು , "ಖಾದಿ ಭಂಡಾರದಲ್ಲಿ ತಗೊಂಡಿದ್ದು ... ಜುಬ್ಬಾ "ಎಂದೆ. ಅಪ್ರಯತ್ನವಾಗಿ ಈ ನುಡಿಗಳು ಹೊರಬಿದ್ದವು. ಮತ್ತೆ ಅವಳನ್ನು ಮೆಚ್ಚಿಸಲು ತೋರುಗಾಣಿಕೆಗೆ ಆಡಿದೆನೆಂದು ಅವಳು ತಿಳಿಯಬಾರದೆಂದು ನನ್ನ ಸಾಮಾಜಿಕ ನಿಲುವುಗಳನ್ನು ಸಮರ್ಥಿಸಿಕೊಳ್ಳಲಾರಂಭಿಸಿದೆ. ಮಾಲ್ ಸಂಸ್ಕೃತಿಯ ವಿರುದ್ದ ಮಾತನಾಡಿದೆ. ಮಾತಾಡುತ್ತಾ ಬಿಚ್ಚಿಕೊಳ್ಳುತ್ತಾ ಹೋದೆ . " ಇಂಥೋರಿಂದಲೇ ನಮ್ಮ ಜನರ ಹೊಟ್ಟೆ ಇನ್ನೂ ತುಂಬದೆ ಇರೋದು. ಇವರುಗಳು ತಮ್ಮ ತಮ್ಮ ಬೆಳವಣಿಗೆಗೆ ಸಣ್ಣ ವ್ಯಾಪಾರಿಗಳನ್ನೂ , ರೈತರನ್ನೂ ಮೆಟ್ಟಿಲು ಮಾಡ್ಕೊಂಡು ತುಳಿದು, ಮೇಲಕ್ಕೆ ಹತ್ತಿ ಬರ್ತಾರೆ ,... " ಎಂದೆ. ' ಇವನು ಹೊಸತನ ಗೊತ್ತಿಲ್ಲದ ಗೊಡ್ಡು .. ಖಾದಿಯಂತೆ .. ಜುಬ್ಬಾವಂತೆ .. ಕ್ರಾಂತಿಯಂತೆ ... ' ಎಂದುಕೊಂಡಳೇನೋ ಎಂದು ಅವಳ ಮುಖ ಗಮನಿಸಿದೆ. ಒಂದಿಷ್ಟೂ ಬದಲಾವಣೆ ಇರಲಿಲ್ಲ. ಅದೇ ನಿರ್ವಿಕಾರ, ನಿರ್ಭಾವ ವದನ. ನೇರವಾಗಿ , " I am not politically oriented " ಎಂದುಬಿಟ್ಟಳು. ಗರ್ಭದಲ್ಲಿ ದೇಸೀ ನೇಕಾರರ , ಸಣ್ಣ ವ್ಯಾಪಾರಿಗಳ , ರೈತರ ಬಿಸಿ ಉಸಿರು ಗಟ್ಟಿಯಾಗಿಹೋಗಿತ್ತು. ಅವಳ ಮೈಮೇಲಿರುವ ಸುಂದರ Arrow jersey ಯ ಹೊಳಪಿನ ಮುಂದೆ ನನ್ನ ಜನರ ಬಟ್ಟೆಗಳು ಮಂಕಾದವಲ್ಲಾ , ಜೀವಕ್ಕಿಂತ , ಜೀವನಕ್ಕಿಂತ ತೋರುಗಾಣಿಕೆಯೇ ಜನರ ಭಾವತಕ್ಕಡಿಯಲ್ಲಿ ಹೆಚ್ಚು ತೂಕದ್ದಾಯಿತಲ್ಲಾ ಎಂದುಕೊಂಡೆ. ಎಲ್ಲರೂ ಒಂದಲ್ಲಾ ಒಂದು ರೀತಿಯ ತೋರುಗಾಣಿಕೆಗೆ ನೇತುಹಾಕಿಕೊಂಡಿದ್ದೇವೆ, ಎದುರು ಕುಳಿತವನಿಗೋ, ಬೀದಿಯಲ್ಲಿ ಹೋಗುವ ದಾರಿಹೋಕನಿಗೋ , ಪ್ರಿಯತಮನಿಗೋ, ಪ್ರೇಯಸಿಗೋ, ಸ್ನೇಹಿತರಿಗೋ , ವೈರಿಗೋ , ಕೊನೆಗೆ ತನ್ನ ಒಳಗೇ ಕುಳಿತು ತನ್ನ ನಡವಳಿಕೆಗೆ ಪ್ರಶ್ನೆ ಹಾಕುವ  ತನ್ನ ಆತ್ಮಸಾಕ್ಷಿಗೋ...

ಇಷ್ಟು ದಿನಗಳು ನನ್ನ ಆತ್ಮಸಾಕ್ಷಿಯ ಮುಂದೆ ಆಡಿದ ನಾಟಕದಲ್ಲಿ ಅವಳ ಪಾತ್ರವನ್ನೂ ನಾನೇ ಆಡಿದೆನೇ ? ಎನ್ನುವ ಪ್ರಶ್ನೆ ಮತ್ತೆ ಮತ್ತೆ ನನ್ನ ಮನದಲ್ಲಿ ಏಳಲಾರಂಭಿಸಿತು. ಅದಕ್ಕೆ ಉತ್ತರ ಗೊತ್ತಿದ್ದರೂ ಅದನ್ನು ಒಪ್ಪಿಕೊಳ್ಳುವ ಧೈರ್ಯ ನನಗಿರಲಿಲ್ಲ. ಮತ್ತೆ ಮುಸುಕು ಹಾಕಿ ಕೂತೆ.  ನನ್ನಿಂದ ಅವಳು ಬಹಳ ದೂರ ಹೋಗಿ ಕೈ ಬೀಸುತ್ತಿರುವಂತೆ ಭಾಸವಾಗತೊಡಗಿತು. ವಾಚು ನೋಡಿಕೊಂಡೆ. ಘಂಟೆ ಆರು ತೋರಿಸುತ್ತಿತ್ತು. ಪಡುವಣದಲ್ಲಿ ನೇಸರ ಆಗಸದ ತುಂಬ ರಂಗು ಚೆಲ್ಲಿ ಹೋಗಿದ್ದ. " ನಿನ್ನ ಬಸ್ ಬರುತ್ತೆ .. ಹೋಗುವ " ಎಂದಳು. " ಹಾ !!! ... " ಎಂದು ಕಾಫಿಯ ಕೊನೆಯ ಸಿಪ್ ಹೀರಿದೆ. ಇಬ್ಬರೂ ಒಟ್ಟಿಗೆ ಹೆಜ್ಜೆ ಹಾಕಿದೆವು. ಇದು ಪ್ರಾಯಶಃ ನಮ್ಮ ಕೊನೆಯ ಮಿಲನವಿರಬಹುದು, ಅವಳು ಹಕ್ಕಿಯಂತೆ ಹೆತ್ತ ಮರವ ತೊರೆದು ಹಾರಬಹುದು. ಆಗಲೂ ನನ್ನೊಳಗೆ ನಾನೇ ಆಡುತ್ತಿರುವ ಈ ನಾಟಕಕ್ಕೆ ತೆರೆ ಎಳೆಯಬಲ್ಲೆನೇ ? ಎಂದುಕೊಂಡೇ , " ಮದುವೆ ?? " ಎಂದೆ. " ಇನ್ನೇನು... ಅಡ್ಮಿಶನ್ ಸಿಕ್ಲಿಲ್ಲ ಅಂದ್ರೆ ಡಿಸೆಂಬರ್ ಲಿ " ಎಂದಳು. ಇನ್ಸ್ಟಿಟ್ಯೂಟ್ ನ ಹೊರಗೆ ನಿಂತಿದ್ದ ಬಸ್ಸಿನ ಒಳ ಹೊಕ್ಕು ಕುಳಿತೆವು.

ಬಸ್ ಹೊರಡಲು ಇನ್ನೂ ಹತ್ತು ನಿಮಿಷ ಬಾಕಿ ಇತ್ತು. " Reaction ಒಂದಕ್ಕೆ ಹಾಕಿ ಬಂದಿದ್ದೇನೆ ... ಬರ್ತೀನಿ ... ಗುಡ್ ಲಕ್ .. " ಎಂದು ಹೇಳಿ ನನ್ನ ಉತ್ತರಕ್ಕೂ ಕಾಯದೆ ತಣ್ಣಗೆ ಎದ್ದು ಹೋದಳು. ಇನ್ನೂ ಮಾತಾಡಬೇಕು ಎಂದು ಅಂದುಕೊಂಡ ಎಷ್ಟೋ ಮಾತುಗಳು ಮನದ ಒಳಗೇ ಹೂತುಹೋದವು. ತುಟಿಗಳು ಅದುರಿದವು. ಕಿಟಕಿಯಿಂದ ಅವಳನ್ನೇ ನೋಡುತ್ತಾ ಕುಳಿತೆ, ಅವಳ ತೆಳು ನೀಲಿ ಬಣ್ಣದ ಅಂಗಿ ದೂರದ ಕತ್ತಲಲ್ಲಿ ಕರಗಿಹೋಗುವ ತನಕ.  ಅವಳನ್ನು ಪಡೆಯುವ ಆತುರ, ಕಾತರದಿಂದ ಬಂದ ನನಗೆ, ನಾನು ಹತ್ತಿರ ಹೋಗಲು ಪ್ರಯತ್ನಿಸಿದಷ್ಟೂ ಅವಳು ದೂರ ದೂರ ಸಾಗುತ್ತಿರುವಂತೆ ಭಾಸವಾಯಿತು. ಅವಳ ಇಲ್ಲದಿರುವಿಕೆಯನ್ನು ಮರೆಮಾಚಲು ಅನ್ಯಮಸ್ಕನಾಗಲು ಪ್ರಯತ್ನಿಸತೊಡಗಿದೆ. ಕಂಡಕ್ಟರ್ ಬಸ್ ಹತ್ತಿ , ಒಮ್ಮೆ ಹಿಂದೆ ತಿರುಗಿ , " ಮೆಜೆಸ್ಟಿಕ್... " ಎಂದು ಕೋಗಿದ. ಶಬ್ದ ಮಾಡುತ್ತಾ ಬಸ್ಸು ಮುಂದುವರೆಯಿತು. ಇನ್ಸ್ಟಿಟ್ಯೂಟ್ ನನ್ನಿಂದ ದೂರ ಸರಿಯುತ್ತಾ ಇತ್ತು... ಕಣ್ಣ ನೋಟ ಮಂಜಾಗುತ್ತಾ ಹೋಯಿತು. ಹಗಲಿಗೆ ಇರುಳಿನ ತೆರೆ ಇಳಿಯಿತು. 

Wednesday, 17 June 2015

ಭಾವ

' ಅವಧಿ ' ಯಲ್ಲಿ ಮತ್ತು  'Readoo'   ವಿನಲ್ಲಿ ಪ್ರಕಟಗೊಂಡ ನನ್ನ ಸಣ್ಣ ಕಥೆ .... 

ಈ "ಸಣ್ಣ ಕಥೆ"  3K ಬಳಗದ "ಹೊಂಗೆಮರದಡಿ : ನಮ್ಮ ನಿಮ್ಮ ಕಥೆಗಳು "ಕಥಾ ಸಂಕಲನದಲ್ಲಿ ಪ್ರಕಟಗೊಂಡಿದೆ.  

ಭಾವ 


" ಹೊರಟಿರುವುದು ಎಲ್ಲಿಗೆ .... ? ", ಜೀನ್ಸ್ ಏರಿಸಿಕೊಳ್ಳುತಿದ್ದ  ಭಟ್ಟನನ್ನು ಕೇಳಿದೆ. " ಗೊತ್ತಿಲ್ಲ ಕಣೋ ... ನೇಹಾ ಏನೋ ಹೇಳ್ತಾ ಇದ್ಲು ... ನಂಗ್ ಮರ್ತೋಯ್ತು " ಅಂದ.  ಅಂದು ಶನಿವಾರ. ಸುಮಾರು ಏಳು ಘಂಟೆಯ ಸಮಯ. ಆಗ ತಾನೇ ಪಡುವಣದ ಕೆಂಪು ಕರಗಿ ಎಲ್ಲೆಡೆ ನಿಷೆ ಆವರಿಸುತ್ತಿದ್ದಳು. ಹೊರಗೆ ಕೊರೆಯುವ ಚಳಿ. ಬೆಚ್ಚಗಿನ ರುಮಾಲು ಕುತ್ತಿಗೆಗೆ ಸುತ್ತಿ, ಸ್ವೆಟ್ ಶರ್ಟ್ ಒಂದನ್ನು ನೇತುಹಾಕಿಕೊಂಡು ಭಟ್ಟ, ತನ್ನ ಎರಡು ದಿನಗಳಿಂದ ತೊಳೆಯದ ಮೈಗೆ ಡಿಯೋಡರೆಂಟ್ ಸಿಂಪಡಿಸಿಕೊಳ್ಳುತಿದ್ದ. ಅಡ್ಡಾದಿಡ್ಡಿಯಾಗಿ ಹರಡಿಕೊಂಡಿದ್ದ ಹಾಸ್ಟೆಲ್ ರೂಮಿನ ಕಿಟಕಿಯ ಬಳಿ ನಿಂತಿದ್ದ ನಾನು ಆ ' ಪುಸ್ .. ಪುಸ್ .. ' ಶಬ್ದಕ್ಕೆ ತಿರುಗಿ ನೋಡಿದೆ. ಅಸಾಧ್ಯ ಘಮ, ಘಾಟು .... .  " ಇದ್ಯಾಕೋ ... ಎರಡು ದಿನ ಸ್ನಾನ ಆಗಿಲ್ಲಾಂತಾನಾ... " ಎಂದು ಕಾಲೆಳೆಯಲು ಪ್ರಯತ್ನಿಸಿದೆ. ನನ್ನ ಮಾತು ಕಿವಿಗೆ ಹಾಕಿಕೊಳ್ಳದೇ ತಿರುಗಿ ಬಾಗಿಲೆಳೆದುಕೊಂಡು ಹೊರನೆಡೆದ ಭಟ್ಟ. ನಾನು ಕಿಟಕಿಯಿಂದ ಹೊರ ಜಗತ್ತನ್ನು ದಿಟ್ಟಿಸತೊಡಗಿದೆ. ಆರನೆಯ ಮಹಡಿಯಲ್ಲಿದ್ದ ನನ್ನ ರೂಮಿನ ಕಿಟಕಿಯಿಂದ ಹೆಚ್ಚು ಕಡಿಮೆ ಪೂರಾ ಔಂದ್ ಕಾಣುತ್ತೆ. ಇಲ್ಲಿಂದ ಕೆಲವೇ ನಿಮಿಷಗಳ ಹಾದಿ, ನನ್ನ ಇನ್ಸ್ಟಿಟ್ಯೂಟ್, ಪಾಷಾನ್ ಗೆ. ಥಂಡಿಯಿಂದ ಕೊರೆಯುತ್ತಿದ್ದ ಕಿಟಕಿಯ ಸರಳುಗಳ ಮೇಲೆ ಕೈಯಿಟ್ಟು, ಅದರ ಮೇಲೆ ಮುಖವನ್ನೊರಗಿಸಿ ನೇರ ನೋಡತೊಡಗಿದೆ. ನನ್ನ ಕೈಯ ನೇರಕ್ಕೆ ಕಾಣುವಷ್ಟೂ ದೂರ ರಸ್ತೆ ಮಲಗಿತ್ತು. ಅದರ ಇಕ್ಕೆಲಗಳಲ್ಲೂ ಒತ್ತೊತ್ತಾಗಿ ಹುಗಿದ ದೀಪದ ಕಂಬಗಳು ಬೆಳಕನ್ನು ಕಕ್ಕುತ್ತಾ ನಿಂತಿದ್ದವು. " ಎಷ್ಟು lively ಅಲ್ವಾ ಈ ರೋಡು ... " ಪಕ್ಕದಲ್ಲೇ ನಿಂತಿದ್ದ ಭಟ್ಟ ಅಂದ. ಅವನು ಯಾವಾಗ ಬಂದನೋ, ನನ್ನ ಪಕ್ಕ ಯಾವಾಗ ನಿಂತನೋ ಒಂದೂ ಗೊತ್ತಾಗಿರಲಿಲ್ಲ.  ' ಹೌದು ' ಎನ್ನುವಂತೆ ತಲೆಯಾಡಿಸಿದೆ. ' ಎಷ್ಟು ಜನಸಂದಣಿ ... ಕಾರುಗಳು .. ಬಸ್ಸುಗಳು ... ಎಲ್ಲವೂ ಮೂಡಣದಲ್ಲಿ ನೇಸರ ಮೂಡುವ ಮುಂಚೆಯಿಂದ ನಿಷೆ ಆವರಿಸಿಕೊಳ್ಳುವವರೆಗೂ ಓಡಾಡಿ, ಹಾರಾಡಿ ಹೋಗುವ ದಾರಿ ... ಅದರೊಟ್ಟಿಗೆ ಸ್ಥಬ್ಧ ಕಂಬಗಳು ... ಸ್ಥಾಯಿತ್ವ ಮತ್ತು ಜಂಗಮಗಳ ಸಂಗಮ ನೋಟ ... ಓಡಾಡುವ ಕಾರುಗಳಿಗೆ , ಜನರಿಗೆ ಹೇಗೆ ರಸ್ತೆ ಮಾರ್ಗದರ್ಶಕವೋ , ಹಾಗೇ ಜಂಗಮತ್ವಕ್ಕೆ ಸ್ಥಾಯಿತ್ವ ಮಾರ್ಗದರ್ಶಕ... ಸ್ಥಾವರಿಯೂ ಆಗಬೇಕು .. ಮುಂದೂ ಹೋಗಬೇಕು ... '  ಮೇಷ್ಟ್ರು ಹೇಳಿದ್ದು ನೆನಪಾಯಿತು. " ಹೀಗೇ ಬರ್ತೀಯಾ ... ??? ಡ್ರೆಸ್ ಚೇಂಜ್ ಮಾಡ್ಕೊಳೋ ...  " ಎಂದ ಭಟ್ಟ. " ಇಲ್ಲಾ ... ನಾನ್ಯಾವಾಗ ಹೊರಗೆ ಹೋಗೋದಕ್ಕೆ ಅಂತ ಬೇರೆ ಬಟ್ಟೆ ಹಾಕೊಂಡಿದೀನಿ ಹೇಳು ... ನೋಡು, ನಮ್ಮನ್ನು ನಾವು ಪ್ರದರ್ಶನದ ವಸ್ತು ಮಾಡ್ಕೊಬಾರದು ಕಣೋ . ಯಾರೋ ನೋಡ್ತಾರೆ ,ಇಷ್ಟ ಪಡ್ತಾರೆ ಅಂತ ಅಂತೆಲ್ಲಾ ನಿನ್ನತನನಾ ಯಾಕ್ ಬಿಟ್ಕೊಡ್ತಿಯ !!! ... " ಎನ್ನುವಷ್ಟರಲ್ಲೇ "ಸಾಕು ಮಾಡು ಮಾರಾಯಾ ... ನಿನ್ನ ಪುರಾಣ ಕೇಳೋದಕ್ಕೆ ಟೈಮ್ ಇಲ್ಲ ... ನೀನೊಂದು idealism ನ specimen ... ಡ್ರೆಸ್ ಚೇಂಜ್ ಮಾಡ್ಕೊಳೋ ಅಂದ್ರೆ ಐಡಿಯಾಲಜಿ ಅದು ಇದು ಅಂತ ಪುರಾಣ ಕೆತ್ತಾನೆ .. ಅವಳು ಅದೇನು ಅಂದ್ಲೋ ... ಮುಖ ನೋಡು ಹೇಗ್ ಆಗಿದೆ ... ನಾನ್ ಮಾತಾಡಲಾ ಒಮ್ಮೆ ... " ಅಂದ. ತಕ್ಷಣವೇ ಕ್ಷಮಾಳ ನೆನಪು ಬಂದು ಮುಖ ಅತ್ತ ತಿರುಗಿಸಿ ನಿಂತೆ. " ಕಾಲಕ್ಕೆ ತಕ್ಕಂತೆ ಚೇಂಜ್ ಆಗ್ಬೇಕು ಕಣೋ ... ನೀನ್ ಹೀಗ್ ಇದ್ರೆ ಯಾವ್ ಹುಡುಗಿಗೂ ಸಹ್ಯ ಆಗಲ್ಲ ಕಣೋ ... " ಭಟ್ಟ ಹತ್ತಿರ ಬಂದು ಹೆಗಲ ಮೇಲೆ ಕೈ ಹಾಕಿ ಅಂದ. ಮತ್ತೆ ಕಿಟಕಿಯ ಕಡೆ ಮುಖಮಾಡಿ ನಿರ್ವಿಕಾರವಾಗಿ ನಿಂತುಬಿಟ್ಟೆ . ಆಗಸದಲ್ಲಿ ಕತ್ತಲು ಮೆತ್ತಿಕೊಂಡಿತ್ತು . ರೊಯ್ಯನೆ ಬೀಸುವ ಗಾಳಿ, ಎಲ್ಲಿಂದಲೋ ತೂರಿ ಬರುವ ಹೊಗೆಯ ವಾಸನೆ, ರೂಮಿನಲ್ಲಿನ ಕೊಳೆತ ಹಣ್ಣಿನ ಘಾಟು, ಕ್ಷಮಾಳ ನೆನಪು, ಭಟ್ಟನ ಮಾತುಗಳು ಎಲ್ಲವೂ ಪಂಚೇದ್ರಿಯಗಳನ್ನೂ ತುಂಬಿಕೊಂಡಿತ್ತು . ಅವನ ಮಾತಿಗೆ ತಿರುಗಿಸಿ ಹೇಳಬೇಕೆಂಬ ಆಸೆಯಿದ್ದರೂ, ಯಾಕೋ ಎದೆಯಲ್ಲೇ ಮಾತು ಉಳಿದುಹೋಯಿತು.

"Come.. come.. Neha is waiting... " ಎಂದು ಕೂಗುತ್ತಲೇ ದಾಸ್ ರೂಮಿನ ಒಳನುಗ್ಗಿದ. ಭಟ್ಟ, " ya .. ya .. ನೀ ಹೋಗು .. ನಾವ್ ಬರ್ತೀವಿ  " ಎಂದು ಹೇಳಿಕಳುಹಿಸಿದ. ಇವೆಲ್ಲಕ್ಕೂ ಸಂಬಂಧವೇ ಇಲ್ಲದಂತೆ ಕಿಟಕಿಗೆ ಒರಗಿ ನಿಂತಿದ್ದ ನನ್ನನ್ನು ಭಟ್ಟ ತಳ್ಳಿ ಎಬ್ಬಿಸಿದ. ಅವನೊಟ್ಟಿಗೆ ಹೆಜ್ಜೆ ಹಾಕಿದೆ. ಕ್ಷಮಾಳ ಮುಖ, ಅವಳ ಮಾತು ಮನ ತುಂಬಿತ್ತು...  " You need to change dear... ಹೀಗೆ ಇದ್ದರೆ ಆಗಲ್ಲ ... ಐ ಡೋಂಟ್ ಸೂಟ್ ಯು ... ನಿನ್ನ ಥರ ನನಗೆ ಬದುಕೋಕ್ಕೆ ಆಗಲ್ಲ . ಸುಮ್ಮನೆ ಜಗಳ, ಗಲಾಟೆ ಯಾಕೆ ಹೇಳು ... " . 'ಹೌದಾ ?? ನಾನು ಬದುಕುವ ರೀತಿ ಅಸಹ್ಯವೇ ? ' ಸಿಟಿಯಲ್ಲಿನ ಜೀವನಕ್ಕೆ ನಾ ಹೊರೆಯಾದಂತೆ ಮನಸು ಭಾರವಾಗತೊಡಗಿತು. ಎಲ್ಲಿಂದಲೋ ಬಂದು ಎರಗುವ ಸಮುದ್ರದ ಅಲೆಗಳಂತೆ ಅವಳ ಮಾತು ನನ್ನ ಮನಸ್ಸಿನ ಮೂಲೆಗಳಲ್ಲಿ ಮಾರ್ದನಿಸಿತು. ' ಬದುಕುವ ರೀತಿಯ ಬದಲಾಯಿಸಬೇಕೆ ?? ಅಂದರೆ ಹೇಗೆ ? ಅವಳೊಟ್ಟಿಗೆ 'ವೀಕೆಂಡ್ ಮಸ್ತಿ' ಗೆ ಹೋಗಬೇಕೆ ? ಅವಳಾಡುವ ಎಲ್ಲ ಮಾತಿಗೆ ಕಿವಿಯಾಗಬೇಕೇ ? ..  ತನ್ನ ಭಾವಪ್ರಪಂಚದಲ್ಲಿ ಅವಳು ಸುಖಿ. ತಾನು ಮಾಡುವ ಎಲ್ಲಾ ಕೆಲಸ ಅವಳಿಗೆಂದೂ ತೋರುಗಾಣಿಕೆಯ ಅಥವಾ ಅಸ್ವಾಭಾವಿಕ ಎಂದೆನಿಸಿಲ್ಲ ... ನನ್ನದೋ ಎಂದಿಗೂ ಪ್ರಶ್ನೆ ಹಾಕಿ ದ್ವಂದ್ವದಲ್ಲೇ ಜೀವನ. ನಾ ಮಾಡುವ, ಓದುವ ಎಲ್ಲ ಹವ್ಯಾಸಗಳಿಗೂ ಇಡಿಯಾಗಿ ನನ್ನ ಸಮರ್ಪಿಸಿಕೊಂಡಿಲ್ಲ. ಎಲ್ಲವೂ ಸ್ವಾಭಾವಿಕವಾಗಿದೆ ಎಂದೇ ತೊರ್ಪಡಿಸಿಕೊಳ್ಳುತ್ತೇನೆ ಅಷ್ಟೇ ... ' ಎಂದೆನಿಸಿ ತೊಟ್ಟಿದ್ದ ಜುಬ್ಬಾ ಮುಳ್ಳಿನ ಸಂಕೊಲೆಯಾಗಿ, ಹಾರಾಡಲು ಬಿಡದ ಮನಕ್ಕೆ ಪಂಜರವಾಗಿ ಕಾಣತೊಡಗಿತು. ಮತ್ತೆ ಇಹಕ್ಕೆ ಇಳಿದಾಗ ಒಂದು restaurant ನಲ್ಲಿದ್ದೆವು. ಸುತ್ತಲೂ ಮಬ್ಬು .. ಮಬ್ಬು .. ಮಂದ ಬೆಳಕು. ಹಿಂದಿನಿಂದ ಸಾವಕಾಶವಾಗಿ ಕಿವಿಗೆ ಬಡಿಯುತ್ತಿರುವ ಸಣ್ಣ ಸಂಗೀತ. ಎಲ್ಲರ ಖುಷಿಯ ನಗುವಿನ ಲಲ್ಲೆಯ ನಡುವೆ ದಿಗಂಬರನಂತೆ ನಿರ್ಲಿಪ್ತತೆಯನ್ನು ಘನೀಕರಿಸಿಕೊಂಡಿದ್ದೆ. " 4 smirnoff... " ಎಂದು ಕೋಟು,ಟೈ ಹಾಕಿಕೊಂಡು ಮುಖದ ಮೇಲೊಂದು ಪ್ಲಾಸ್ಟಿಕ್ ನಗುವನ್ನು ನೇತುಹಾಕಿಕೊಂಡ ವೈಟರ್ ಗೆ ದಾಸ್ ಹೇಳಿದ. ಮತ್ತೆ ನನ್ನ ಕಡೆ ತಿರುಗಿ, " Get a mocktail... " ಅಂದ. 'ಹೂ .. ' ಎನ್ನುವಂತೆ ಬೇಡದ, ಕೇವಲ ಸಾಂದರ್ಭಿಕವಾದ ಒಂದು ನಗುವನ್ನು ಮುಖದಲ್ಲಿ ಮಿಂಚಿಸಿದೆ. ಕೈಲಿದ್ದ ಫೋನೊಮ್ಮೆ ರಿಂಗಣಿಸಿತು. ಎತ್ತಿ ... " ಅಮ್ಮ ... ಮತ್ತೆ ಮಾಡ್ತೀನಿ ... ಹೊರಗಿದ್ದೀನಿ ... " ಎಂದು ಉತ್ತರಕ್ಕೂ ಕಾಯದೆ ಫೋನಿಟ್ಟೆ. 

ನನ್ನ ಮುಂದೆ ನೇಹಾ ಕುಳಿತಿದ್ದಳು. ಅವಳ ಪಕ್ಕ ಭರತ್, ಎಡಕ್ಕೆ ದಾಸ್ . ಭಟ್ಟ ನನ್ನ ಪಕ್ಕ ಕುಳಿತು ಮೆನು ಕಾರ್ಡ್ ತಿರುವುತ್ತಿದ್ದ. ಕುಳಿತದ್ದ ಆಸನ ಮೆತ್ತಗಿತ್ತು. ಬಿಳಿ ಬಣ್ಣದ ಶರ್ಟಿನೊಂದಿಗೆ ಕಂಗೊಳಿಸುತಿದ್ದ ನೇಹಾ ತನ್ನ ಮುಂದೆ ಆಗತಾನೆ ತಂದಿಟ್ಟಿದ್ದ ಬಾಟಲೊಂದನ್ನು ತನ್ನ ಮೃದುವಾದ , ಕೆಂಪಾದ ಕೈಗಳಿಂದ ಎತ್ತಿಕೊಂಡು ತನ್ನ ಕೆಂಪು ಕೆಂಪು ತುಟಿಗಳತ್ತ ನಿಧಾನವಾಗಿ ತಂದು ಒತ್ತಿಕೊಂಡಳು. ದಾಸ್ ಮಾಡುತಿದ್ದ ಜೋಕಿಗೆ ನಗುನಗುತ್ತಲೇ ಬಾಟಲಿನಿಂದ ವರ್ಣರಹಿತ ದ್ರವವನ್ನು ತುಟಿಯ ಸವರಿ ಒಳಗಿಳಿಸಿದಳು. ನಾನೂ ಹೀಗೆಯೇ ನಗು ನಗುತ್ತಲೇ, ಸಹಜವಾಗಿ ಇವರೊಟ್ಟಿಗೆ ಬೆರೆತುಬಿಡಲು ಸಾಧ್ಯವೇ ಎಂದು ಯೋಚಿಸತೊಡಗಿದೆ. ನನ್ನ ಬೆಳವಣಿಗೆಯೇ ನನ್ನ ಜೀವನರೀತಿಗೆ ಕಾರಣವೆಂದೆನಿಸಿತು. ಮನೆಯಲ್ಲಿನ ಬಡತನ, ಸದಾ ಕುಡಿಯುವ, ಕುಡಿದು ಬಂದು ನನ್ನ ಪೂರ್ವಜರನ್ನೆಲ್ಲಾ ನಾಲಿಗೆಯಿಂದ ಹೊರಗೆಳೆದು ಅಮ್ಮನ್ನ ಬೈಯುವ ಅಪ್ಪ, ಹುಟ್ಟುತ್ತಲೇ ಹೆಳವೆಯಾದ ತಂಗಿ, ಈ ಎಲ್ಲರನ್ನೂ ತನ್ನ ಮಡಿಲಲ್ಲಿಟ್ಟು ಸಾಕುವ ಮಾಸಿದ ಸೀರೆಯ ಅಮ್ಮ ... ಇವೆಲ್ಲಾ ಮನದಲ್ಲಿ ಒಂದು ರೀತಿಯ ಭಾವಸ್ಥಿತಿ ಹುಟ್ಟುಹಾಕಿದ್ದುಂಟು. 

ಅಪ್ಪನ ಕಂಡರೆ ಭಯ. ಎಲ್ಲಿ ಅಮ್ಮನನ್ನು ಹೊಡೆದು ಕೊಂದುಬಿಡುತ್ತಾನೋ ಎಂದು. ಆ ದಿನ ಮನೆಯಲ್ಲಾದ ಘಟನೆ .. ಮರೆಯುವುದುಂಟೆ .. !!! . ಅಮ್ಮ ಆಗ ತಾನೇ ಇಟ್ಟಿಗೆ ಮಂಡಿಯಿಂದ ಮನೆಗೆ ಬಂದಿದ್ದಳು. ನಾನೂ ಕೂಡ ಶಾಲೆಯಿಂದ ಬಂದವನೇ ಮಾದ, ಕರಿಯನೊಡನೆ ಆಡಲು ಹೋಗಿದ್ದೆ. ಅಮ್ಮನ ಬರುವಿಕೆ ನೋಡಿ  ' ಸಂಜೆ ಆರಾಯಿತು... ಇನ್ನೂ ಓದಲು ಕೂರದಿದ್ದರೆ ಅಮ್ಮ ಹೊಡೆಯುತ್ತಾಳೆ ' ಎಂದುಕೊಂಡು ಮಾದನಿಗೂ, ಕರಿಯನಿಗೂ ಹೇಳದೆ ಕೇಳದೆ ಓಡಿ ಬಂದು ಮನೆಯ ಹೊಕ್ಕು, ಪುಸ್ತಕ ಹಿಡಿದು ಕೂತೆ. ಅವಳಿಗೆ ನನ್ನ ಓದಿನ ಮೇಲೆ ಬಹಳ ಕಾಳಜಿಯಿತ್ತು. ತನಗೆ ಸಾಧ್ಯವಾಗದ್ದು ತನ್ನ ಮಕ್ಕಳಿಗೆ ಆಗಬೇಕೆಂಬ ಹಂಬಲವಿತ್ತು. ಈಗಲೂ ಇದೆ. ಇಷ್ಟೆಲ್ಲಾ ಓಡಾಟದಲ್ಲಿ ಭಾರತಿಗೆ ಔಷಧ ಕುಡಿಸುವುದು ಮರೆತುಹೋಗಿತ್ತು. ಬೆಳಗ್ಗೆ ಕೊಟ್ಟಿದ್ದೆ ಅಷ್ಟೇ... ಎರಡು ದಿನಗಳಿಂದ ಅಪ್ಪನ ಸುಳಿವಿರಲಿಲ್ಲ. ಪುಸ್ತಕ ಹಿಡಿದು ಕೂತಿದ್ದರೂ, ಕಣ್ಣು ಮನೆಯ ಬಾಗಿಲ ಕಡೆ ಓರೆಯಾಗಿತ್ತು. ಅಮ್ಮ ಇಟ್ಟಿಗೆ ಮಂಡಿಯಿಂದ ಬಂದವಳೇ ಭಾರತಿ ಇದ್ದ ಹಾಸಿಗೆಯ ಬಳಿ ಹೋದಳು. ಒಳಗೆ ಏನಾಗಿರಬಹುದು  ಎಂದು ಕಾಯುತ್ತಾ ಕೂತೆ. ಸ್ವಲ್ಪ ಹೊತ್ತಿನ ನಂತರ, " ದೀಪೂ ... ದೀಪೂ ... " ಎಂದು ಸಿಟ್ಟು ಮಿಶ್ರಿತ ಗಾಬರಿಯಿಂದ ಕರೆದಳು. ಹೆದರುತ್ತಲೇ ಒಳ ಹೋದವನ ಕೆನ್ನೆಗೆ, ಚೆನ್ನಾಗಿ ಕಾದ ಕಾವಲಿಯ ಮೇಲೆ ನೀರು ಎರಚಿದಂತೆ, ಚಟಾರ್ ಎಂದು ಬಿದ್ದಿತ್ತು ಏಟು. " ಮಧ್ಯಾಹ್ನ ಔಷಧಿ ಕೊಟ್ಯಾ .. " ಎಂದು ಕೇಳಿದಳು. ' ಇಲ್ಲಾ ... ' ಎನ್ನುವಂತೆ ತಲೆಯಾಡಿಸಿದೆ. " ಹೋಗು ... ಡಾಕ್ಟರ್ ಕರ್ಕೊಂಡ್ ಬಾ ... " ಅಂತ ಕಳುಹಿಸಿದಳು ಅಮ್ಮ.  ನಾನು ಓಡಿ ಓಡಿ ಡಾಕ್ಟರ್ ನ ಮನೆ ತಲುಪಿದೆ. ಅವರ ಮನೆ ಪೇಟೆಯಲ್ಲಿತ್ತು. ನಮ್ಮ ಮನೆಗೂ, ಅವರ ಮನೆಗೂ ಸುಮಾರು ಅರ್ಧ ಕಿಲೋಮೀಟರು ಆದಾತು. ಡಾಕ್ಟರ್ ಗೆ, " ಅಮ್ಮ ಹೇಳಿದಾಳೆ... ಭಾರತಿಗೆ ಹುಷಾರಿಲ್ಲ .. ಜ್ವರ ಜಾಸ್ತಿಯಾಗಿದೆ .. ಬೇಗ ಬನ್ನಿ ... "ಎಂದು ಏದುಸಿರು ಬಿಡುತ್ತಾ ಹೇಳಿ ಅವರನ್ನು ಕರಕೊಂಡು ಬಂದೆ. ಬರುವಾಗಲೂ ನನಗೆ ಅನ್ನಿಸಿದ್ದು, ' ಅಮ್ಮ ಹೊಡೆಯುತ್ತಾಳೆ  ಎಂದು ... ನಾನೇನು ತಪ್ಪು ಮಾಡಿದೆ ಎಂದು ... ಹೊರತು ಭಾರತಿಗೆ ಹೀಗೆ  ಆಗಿದೆಯಲ್ಲಾ' ಎಂದು ಅನಿಸಿದ್ದಿಲ್ಲ . ಅದೇನು ಮುಗ್ದತೆಯ ಮೂರ್ಖತನವೋ... ಇಂದಿಗೂ ಗಂಟಾಗಿದೆ. 

ಡಾಕ್ಟರ್ ಭಾರತಿಯ ಕಣ್ಣು, ಮೂಗು, ಬಾಯಿ, ಎಲ್ಲಕ್ಕೂ ಟಾರ್ಚ್ ಹಾಕಿ ನೋಡುತಿದ್ದರು. ದೂರದಲ್ಲಿ ಬಾಗಿಲ ಬಳಿ ನಾ ನಿಂತಿದ್ದೆ. ಅಮ್ಮನ ಮುಖ ಆತಂಕದಿಂದ ಬೆವರುತಿತ್ತು. ಕೈಗಳನ್ನು ಎದೆಗೆ ಅವುಚಿಕೊಂಡು ಡಾಕ್ಟರ್ ನ ಮುಖ ನೋಡುತಿದ್ದಳು. ಗಂಭೀರವದನರಾದ ಡಾಕ್ಟರ್ ಸ್ವಲ್ಪ ಹೊತ್ತು, ಭಾರತಿಯ ಕೈ ಹಿಡಿದು , ಕಣ್ಣು ಮುಚ್ಚಿ ಧ್ಯಾನಸ್ಥರಾದರು. ನಾನು ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಲೇ ಇದ್ದೆ. ಸ್ವಲ್ಪ ಹೊತ್ತಿನ ನಂತರ, " ಸೀತಮ್ಮ ... ನಿನಗೆ ಹೇಳಿದ್ದೆ ಅಲ್ವ... ಮಗುವಿಗೆ ನ್ಯುಮೋನಿಯಾ ಅಂತ . ಈಗ ಜ್ವರ ತುಂಬಾ ಜಾಸ್ತಿ ಆಗಿದೆ. ಹಾಸನಕ್ಕೆ ಕರ್ಕೊಂಡು ಹೊಗು... ಬೇಗ.. ದೊಡ್ದಾಸ್ಪತ್ರೆಲಿ ತೋರ್ಸು...  ಇಲ್ಲಾಂದ್ರೆ ಉಳಿಯೋದು ಕಷ್ಟ ... " ಎಂದರು. ಅಮ್ಮನ ಸ್ಥಿತಿ ಅದನ್ನು ಕೇಳಿದ ಮೇಲೆ ಹೇಗಿದ್ದಿರಬಹುದು ಎಂದು ಈಗ ನೆನೆಸಿಕೊಂಡರೂ ಕಣ್ಣು ತೇವವಾಗುತ್ತೆ. ಡಾಕ್ಟರ್ ಅಷ್ಟು ಹೇಳಿ, ಒಂದು ಇಂಜೆಕ್ಷನ್ ಚುಚ್ಚಿ , " ಬೇಗ ಕರ್ಕೊಂಡು ಹೋಗು ... " ಎಂದು ಇನ್ನೊಮ್ಮೆ ಹೇಳಿ ಹೊರಟುಹೋದರು. ಅಮ್ಮನ ಮುಖ ಗಾಬರಿಯಿಂದ ಕೂಡಿತ್ತು. " ಇವ್ನು ಎಲ್ಲಿ ಕುಡಿಯಕ್ ಹೋದನೋ ... ಹಾಳಾದೊನು ... ಮಗೂಗೆ ಬೇರೆ ಹುಷಾರಿಲ್ಲ ... " ಎಂದು ಗೊಣಗಿಕೊಳ್ಳುತ್ತಾ ಮನೆಯಿಂದ ಹೊರ ಹೋಗಿ ನಿಂತಳು. ಅವಳ ಮುಖದಲ್ಲಿ ಅಪ್ಪನಿಗಾಗಿ ಕಾಯುವ ಕಾತರವಿತ್ತು. ದೂರ ದೂರದೂರದಲ್ಲೆಲ್ಲೂ ಅವನ ಸುಳಿವಿರಲಿಲ್ಲ. ವಾಪಸ್ಸು ಬಂದವಳೇ, " ದೀಪು ... ಭಾರತಿ ಪಕ್ಕ ಕೂತಿರು .. ಎದ್ದು ಹೋದ್ರೆ ಕಾಲು ಮುರೀತೀನಿ . ನಾನು ಇಟ್ಟಿಗೆ ಮಂಡಿ ಸಾವ್ಕಾರರ ಹತ್ತಿರ ಹೋಗಿ ಬರ್ತೀನಿ " ಎಂದು ಹೇಳಿ ದಡ ಬಡ ಓಡಿದಳು. 

ನಾನು ಭಾರತಿಯ ಎದುರು ಹೋಗಿ ಕೂತೆ. ಅವಳ ಹಣೆ ಮುಟ್ಟಿ ನೋಡಿದೆ. ಸುಡುತಿತ್ತು. ಪ್ರಜ್ಞೆ ಇರಲಿಲ್ಲ. ಅವಳ ಮುಖವನ್ನೇ ನೋಡುತ್ತಾ ಕೂತೆ. ನಿರುಮ್ಮಳಳಾಗಿ ಹೇಳಲು ಏನೂ ಇಲ್ಲದವಳಂತೆ ಭಾವನಾಶೂನ್ಯವಾಗಿ ನಿದ್ರಿಸುತ್ತಿರುವಳೋ ಎಂಬಂತೆ ಮಲಗಿದ್ದಳು. ಬಾಗಿಲ ಬಳಿ ಏನೋ ಸದ್ದಾಯಿತು. ಎದ್ದು ನೋಡಲು ಹೋದೆ. ತೂರಾಡಿಕೊಂಡು ಬಂದಿದ್ದ ಅಪ್ಪ ಮನೆಯ ಬಾಗಿಲ ನಡುವೆ ಕುಸಿದು ಬಿದ್ದಿದ್ದ. ಅಸ್ಪಷ್ಟವಾಗಿ ಏನೇನೋ ಒದರಲಾರಂಭಿಸಿದ.  " ಆ ಮಂಡಿ ಸಾವ್ಕಾರನ ತಾವ್ ಹೋಗ್ತಾಳೆ ... ಕಳ್ಲೌಡಿ.. ಮಾಡ್ತೀನಿ .. ಬರಲಿ ಇವತ್ತು ... " ಎಂದು ಅಮ್ಮನ್ನ ಬಯ್ಯತೊಡಗಿದ. ಅಮ್ಮ ಕತ್ತಲಿನಲ್ಲಿ ಕೈಯನ್ನು ಎದೆಯ ಮೇಲೆ ಒತ್ತಿಟ್ಟುಕೊಂಡು ಓಡೋಡುತ್ತ ಮನೆಗೆ ಬಂದಳು. ಅಪ್ಪ ಏನೇನೋ ಒದರಿ ಪ್ರಜ್ಞಾಶೂನ್ಯನಾದ. ಅವನನ್ನು ಎಬ್ಬಿಸುವ ಎಲ್ಲಾ ಪ್ರಯತ್ನ ಮಾಡಿ ಸೋತ ಅಮ್ಮ ಒಳಹೋಗಿ ಭಾರತಿಯನ್ನು ಎತ್ತಿಕೊಂಡು , " ನಾನು ಸಾವ್ಕಾರರ ಗಾಡಿಲಿ ದೊಡ್ದಾಸ್ಪತ್ರೆಗೆ ಕರ್ಕೊಂಡು ಹೋಗ್ತೀನಿ... ಬೆಳಗ್ಗೆ ಬಂದ್ಬಿಡ್ತೀನಿ ... ಮನೆ ಜೊಪಾನ... " ಎಂದು ಹೇಳಿ ಏದುಸಿರು ಬಿಡುತ್ತಾ ಕತ್ತಲಿನಲ್ಲಿ ಕರಗಿಹೋದಳು . ನಾನು ಅವಳು ಹೋದ ದಾರಿಯನ್ನೇ ನೋಡುತ್ತಾ ನಿಂತೆ.  ಅದಾದ ಮೇಲೆ ಭಾರತಿಯ ಮುಖ ನೋಡುವ ಭಾಗ್ಯವೂ ನನ್ನದಾಗಲಿಲ್ಲ. ಅಪ್ಪ ಸಣ್ಣಗೆ ಗೊಣಗುತ್ತಲೇ ಇದ್ದ. 

' ನೇಹಾಳಿಗೂ ಅಂದು ಅಮ್ಮನಿಗಾದಷ್ಟೇ ವಯಸ್ಸಾಗಿರಬೇಕು ... ಅಲ್ವಾ ... ' ಎಂದುಕೊಳ್ಳುತ್ತಲೇ ಫಿಂಗರ್ ಬೌಲ್ ನಲ್ಲಿ ಕೈಯಾಡಿಸಿದೆ.  ಚಳಿಗೆ ಬಿಸಿ ಬಿಸಿ ನೀರು ಆಪ್ಯಾಯಮಾನವಾಗಿತ್ತು. ಅಮ್ಮನ ಆ ಸ್ಥಿತಿಗೆ ಅಪ್ಪನ ಚಪಲ, ಚಟವೇ ಕಾರಣವೆಂದು ಗಟ್ಟಿಯಾಗಿ ನಂಬಿದ್ದ ನನಗೆ ನೇಹಾಳ ನಗು, ಇಚ್ಛೆಯಿಂದ ಅವಳು ಇದರೊಂದಿಗೆ ಪಳಗುವ ರೀತಿ ಒಂದು ರೀತಿಯ ವಿಚಿತ್ರ ಭಯ ಮತ್ತು ಆಶ್ಚರ್ಯ ಎರಡನ್ನೂ ಉಂಟುಮಾಡಿತ್ತು. ಸಿರಿವಂತಿಕೆಯ ಕುಡಿತಕ್ಕೂ ಬಡತನದಕ್ಕೂ ವ್ಯತ್ಯಾಸವಿದೆಯೇ ?? ... ಚಟಕ್ಕೂ ಆಸೆಗೂ ಇದ್ದಷ್ಟು ಇರಬಹುದೇನೋ ... ಎಂದುಕೊಂಡು ಸುಮ್ಮನಾದೆ. Prestige ಗೆ, trend ಗೆ ಹೊಂದಿಕೊಳ್ಳುವ ಸಲುವಾಗಿ ಕುಡಿದ ಭಟ್ಟ ನಿರರ್ಗಳವಾಗಿ ಏನೇನೋ ಒದರುತಿದ್ದ. ಅವನನ್ನು ಒಂದು ಕೈಲಿ ಹಿಡಿದು ಎದ್ದು ನಿಂತೆ. ನೇಹಾ ದಾಸ್ ನ ಹೆಗಲ ಮೇಲೆ ಕೈಹಾಕಿ ನಡೆಯತೊಡಗಿದಳು. ಅವಳ ಕಣ್ಣಿನ ಮಾದಕತೆ ಕಮ್ಮಿಯಾದಂತೆ ಇರಲಿಲ್ಲ. ಮತ್ತೆ ಫೋನು ರಿಂಗಣಿಸಿತು ... " ಹಾ !!! ಹೇಳು ಅಮ್ಮ ... ಈಗ ಹೊರಟೆ ... " ಎನ್ನುತ್ತಾ ಮುಂದುವರೆದೆ.    

Friday, 29 May 2015

ಸ್ಥಾನ

'ಅವಧಿ' ಯಲ್ಲಿ ಪ್ರಕಟವಾದ ನನ್ನ ಸಣ್ಣ ಕಥೆ "ಸ್ಥಾನ" 

ಸ್ಥಾನ 

ಅಂದು ಭಾನುವಾರ. ಬೆಳಗ್ಗೆ ಮನೆಯಿಂದ ಹೊರಬಿದ್ದು, ಸೀದಾ, ತನ್ನ ಅಡಿಕೆ ತೋಟದ ಕಡೆ ಶಾಮಣ್ಣ ಹೊರಟ. ಊರ  ಬಸ್ ಸ್ಟಾಪಿನಿಂದ ನೇರ ಕೆಳಗೆ ಒಂದು ಮೈಲಿ ನಡೆದು, ಅನಂತರ ಕಾಲುದಾರಿಯ ಹತ್ತು ನಿಮಿಷದ ನಡಿಗೆಗೆ ಶಾಮಣ್ಣನ ಹತ್ತು ಎಕರೆಯ ಅಡಿಕೆ ತೋಟ ಸಿಗುತ್ತದೆ. ಮಳೆಗಾಲ ಆಗ ತಾನೇ ಆರಂಭವಾಗಿತ್ತು. ಸಣ್ಣಗೆ ಜಿನುಗುವ ಜಡಿಮಳೆಯಲ್ಲಿ  ಕೊಡೆ ಹಿಡಿದು, ಶುಭ್ರವಾದ ಬಿಳಿ ಪಂಚೆಯನ್ನು ಮೇಲಕ್ಕೆ ಕಟ್ಟಿ, ಹೆಗಲ ಮೇಲೊಂದು ಪಾಣಿಪಂಚೆಯ ಹಾಕಿ ಈ ಜಗತ್ತಿಗೇ ಸಲ್ಲದವನಂತೆ ಎಲ್ಲೋ ಧ್ಯಾನಮಗ್ನನಾಗಿ ನಡೆದು ಬರುತ್ತಿದ್ದ ಶಾಮಣ್ಣನನ್ನು  ಶ್ರೀನಿವಾಸ ತಡೆದು, "ಏನ್ ಶಾಮ.. ತೋಟದ ಕಡೆಗಾ... ಇಕಾ.. ಪೇಪರ್ ತಗೋ ... "ಎಂದು ಬೆಳ್ಳಂಬೆಳಗ್ಗೆಯೇ ಹೊಗೆಸೊಪ್ಪು ತುಂಬಿದ ಬಾಯಿಯಿಂದ ಅದು ಸೋರದಂತೆ ಕಷ್ಟ ಪಟ್ಟು ಮಾತನಾಡುತ್ತಾ,  ಸುರುಳಿ ಸುತ್ತಿ ಕೈಲಿಟ್ಟುಕೊಂಡಿದ್ದ ಪೇಪರನ್ನು ಕೊಡಲು ಮುಂದೆ ಬಂದ. ಶ್ರೀನಿವಾಸ ಗೊಬ್ಬರದ ವ್ಯಾಪಾರಿ. ಸುತ್ತಮುತ್ತಲ ಹಳ್ಳಿಗಳಿಗೆ ಇದ್ದದ್ದು ಒಂದೇ ಗೊಬ್ಬರದ ಅಂಗಡಿಯಾದ್ದರಿಂದ, ಸುತ್ತಲಿನ ಹತ್ತು ಹಳ್ಳಿಯ ರೈತರು ದೂರ್ವೆಹಳ್ಳಿಗೆ ಬಂದು, ಇವನ ಅಂಗಡಿಯಿಂದಲೇ ಗೊಬ್ಬರ ಖರೀದಿಸಬೇಕಾಗಿತ್ತು. ಇವನು ಒಂದಕ್ಕೆ ನಾಲ್ಕು ಬೆಲೆ ಹೇಳಿದರೂ ಯಾರೂ ತುಟಿಕ್-ಪಿಟಿಕ್ ಅನ್ನುವಂತೆ ಇರಲಿಲ್ಲ. ಇವನ ಮೇಲೆ ಆಗಲೇ ಹತ್ತು ಹಲವು ಕಂಪ್ಲೇಂಟ್ ಬರೆದು ತಹಸೀಲ್ದಾರರಿಗೆ ಕೊಟ್ಟು ಬಂದಿದ್ದರೂ ಯಾವುದೇ ಪ್ರಯೋಜನವೂ ಆಗಿದ್ದಿರಲಿಲ್ಲ. ಊರಿಗೊಬ್ಬಳೇ ಪದ್ಮಾವತಿಯಂತಿತ್ತು ಅವನ ಅಂಗಡಿ. ಇದರೊಟ್ಟಿಗೆ news paper ಹಂಚುವ ಬ್ಯುಸಿನೆಸ್ಸೂ ಮಾಡುತ್ತಿದ್ದ. ಸುಮಾರು ೯ ಘಂಟೆಗೆ ಬರುವ ಮಾರ್ನಿಂಗ್ ಬಸ್ಸಿನಲ್ಲಿ ಸಕಲೇಶಪುರದಿಂದ ಪೇಪರ್ ತರಿಸಿ ಇಲ್ಲಿ ಎಲ್ಲರಿಗೂ ೫೦ ಪೈಸೆ ಹೆಚ್ಚಿನ ಬೆಲೆಗೆ ಹಂಚುತ್ತಿದ್ದ. ಶಾಮಣ್ಣನೂ ಶ್ರೀನಿವಾಸನೂ 'ಚಡ್ಡಿ ದೋಸ್ತಿ'ಗಳು. ಇಬ್ಬರೂ ಇಂಟರ್ಮೀಡಿಯೇಟ್ ವರೆಗೆ ಒಟ್ಟಿಗೆ ಓದಿದವರು. ಶಾಮಣ್ಣ ಪಾಸಾಗಿ ದೂರ್ವೆಹಳ್ಳಿಯಲ್ಲಿ ಆಗ ತಾನೇ ಆರಂಭವಾಗಿದ್ದ ಶಾಲಿಯಲ್ಲಿ ಮೇಷ್ಟರಾದ. ಕಗ್ಗಾಡಿನ ಮೂಲೆಯಾದ ಈ ದೂರ್ವೆಹಳ್ಳಿಗೆ ಯಾರೂ ಮೇಷ್ಟರಾಗಿ ಬರಲು ತಯ್ಯಾರಿರಲಿಲ್ಲ. ಆದ್ದರಿಂದ ಇವನ ಕೆಲಸ ಸಲೀಸಾಗಿ ಆಗಿಹೋಯಿತು. ಆದರೆ ಏನೇ ಸಾಹಸ ಮಾಡಿದರೂ ಶ್ರೀನಿವಾಸನಿಗ ಇಂಗ್ಲೀಷಿನಲ್ಲಿ ಪಾಸಾಗಲು ಸಾಧ್ಯವಾಗದ್ದರಿಂದ, ತಂದೆಯಿಂದ ವರದಂತೆ ಬಂದ  ಅಂಗಡಿಯನ್ನು ನೋಡಿಕೊಳ್ಳಲು ಆರಂಭಿಸಿದ.

ಶಾಮಣ್ಣ, "ಇಲ್ಲ ಸೀನು... ತೋಟದಿಂದ ವಾಪಸ್ ಬರ್ತಾ ಇಸ್ಕೊತೇನೆ... "ಎಂದು ಹೇಳಿ ತೋಟದ ಕಡೆಗೆ ಹೋರಟ. ನಿನ್ನೆ ಬಂದ ಪತ್ರದ ಗುಂಗು ಇನ್ನೂ ಮಾಸಿರಲಿಲ್ಲ. ಇದ್ದ ಒಬ್ಬ ಮಗ ಹೀಗೆ ಮಾಡಿಕೊಂಡನಲ್ಲಾ... ಎಂಬುದೇ ಶಾಮಣ್ಣನ ಚಿಂತೆಯಾಗಿತ್ತು. ಇನ್ನು ಊರಿನವರ ಮುಂದೆ ಹೇಗೆ ಮುಖ ತೋರಿಸಲಿ ಎನ್ನುವುದೇ ಗೊತ್ತಾಗದ ವಿಷಯವಾಗಿತ್ತು ಶಾಮಣ್ಣನಿಗೆ. ಅವನ ಮಗ ಸಿದ್ಧಾರ್ಥ ಬೆಂಗಳೂರಿನಲ್ಲಿ ಇಂಜಿನೀರಿಂಗ್ ಮುಗಿಸಿ ಅಲ್ಲೇ  ಒಂದು ಮಲ್ಟಿನ್ಯಾಷಿನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶಾಮಣ್ಣನಿಗೆ ಮಗನನ್ನು ಇಂಜಿನಿಯರ್ ಮಾಡಬೇಕೆಂಬ ಹಂಬಲ ಮೊದಲಿನಿಂದಲೂ ಇತ್ತು. ಊರಿನಲ್ಲಿ ತನಗೊಂದು ಸ್ಥಾನ-ಮಾನ, ಗೌರವ  ತಂದುಕೊಡುತ್ತಾನೆ ಎಂಬ ಕಾರಣವೂ ಹೌದು. ಆದರೆ, ಸಿದ್ಧಾರ್ಥನಿಗೆ ಚಿಕ್ಕ ವಯಸ್ಸಿನಿಂದಲೂ ಸಾಹಿತ್ಯದ ಮೇಲೆ ಆಸಕ್ತಿ. ಲಾರೆನ್ಸ್, ಬ್ಲೇಕ್, ರೇಮಂಡ್ ವಿಲ್ಲಿಯಮ್ಸ್ ರಂತಹ ಹೊಸಕಾಲದ ಚಿಂತಕರ ಪುಸ್ತಕಗಳನ್ನು ಓದಿ "ಅಣ್ಣಾ... ನೀವು ಹೀಗೆ ಪ್ರತಿ ದಿನ ನಿಂಗಿಗೆ ಹಿತ್ತಲಿನಲ್ಲಿ ನಿಲ್ಲಿಸಿ ಕಾಫಿ ಕೊಡ್ತೀರ.. ಇದು ತಪ್ಪು.. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಬೇಕು ... "ಎಂದು ವಿರೋಧಿಸುತ್ತಿದ್ದ. ದಿನೇ ದಿನೇ ಅವನ ವ್ಯಕ್ತಿತ್ವ ಒಬ್ಬ ಕ್ರಾಂತಿಕಾರಿಯಾಗುವತ್ತ ಜಾರುತ್ತಿತ್ತು. 'ಇದೇನಾದರೂ ಹೀಗೆಯೇ ಮುಂದುವರೆದರೆ ನನ್ನ ಗತಿಯೇನು? ... ಇವನು ಯಾವುದೊ ಜಾತಿಯವಳನ್ನು ಕಟ್ಟಿಕೊಂಡರೆ, ಊರಿನವರ ಮುಂದೆ ಮುಖ ಸಣ್ಣಗಾಗುವುದಲ್ಲಾ... ರಾಮೋತ್ಸವದ ಸಮಯದಲ್ಲಿ ರುದ್ರಾಭಿಷೇಕಕ್ಕೆ, ವೇದ ಪಾರಾಯಣಕ್ಕೆ,  ಸಂಜೆ ಮಂಗಳಾರತಿಗೆ ನನ್ನನ್ನು ಯಾರೂ ಕರೆಯುವುದಿಲ್ಲ.. ಅದರೊಟ್ಟಿಗೆ, ಎಲ್ಲರ ಮುಖ... ಮುಖದ ಹಿಂದಿನ ಮಾತು... ಒಂದು ರೀತಿಯ ಅಲಿಖಿತ ಬಹಿಷ್ಕಾರ ... ' ಎಂದು ಶಾಮಣ್ಣ ಯೋಚಿಸುತ್ತಿದ್ದ. 'ಹೇ.. ಇವನು ಇನ್ನೂ ಚಿಕ್ಕವನು... ಯೌವ್ವನದ ಭರ... ಹೀಗಾಡುತ್ತಾನೆ... ನಾನೊಬ್ಬ ಮದುವೆಯವರೆಗೂ ಹೋದೆ...  'ಎಂದುಕೊಂಡು ಸುಮ್ಮನಾಗುತ್ತಿದ್ದ.  ಆದರೆ, ಮನಸ್ಸಿನ ಮೂಲೆಯಲ್ಲಿ ಕೂತಿದ್ದ ಆ ವಿಚಾರ ಮತ್ತೆ ಮತ್ತೆ ಅವನನ್ನು ಕಾಡುತ್ತಲೇ ಇತ್ತು.

ಇದೇ ವೇಳೆಗೆ ಸರಿಯಾಗಿ ಸಿದ್ಧಾರ್ಥನ ಸೆಕಂಡ್ ಪಿ. ಯು ಪರೀಕ್ಷೆಯ ರಿಸಲ್ಟ್ ಕೂಡ ಬಂತು. ಅತ್ಯುನ್ನತ ದರ್ಜೆಯಲ್ಲಿ ಪಾಸಾಗಿದ್ದನಲ್ಲದೆ ಸಿ. ಇ. ಟಿ ಯಲ್ಲಿ ಉತ್ತಮ ರಾಂಕ್ ಗಳಿಸಿದ್ದ. ಇದೇ ಸರಿಯಾದ ಸಮಯವೆಂದೂ, ಅವನ ಮನಸ್ಸು ಬೆಂಗಳೂರಿಗೆ ಹೋದರೆ ಬದಲಾಗುತ್ತೆ ಎಂದೂ , ಅವನನ್ನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿ , ತನ್ನ ಸಂಬಂಧಿ ವೆಂಕಟೇಶನ ಮನೆಯ ಮೇಲಿನ ಒಂದು ರೂಮ್ ಖಾಲಿ ಇದ್ದರಿಂದ, ಅಲ್ಲೇ ಅವನಿಗೆ ಉಳಿದುಕೊಳ್ಳಲೂ ಅವಕಾಶ ಕಲ್ಪಿಸಿದ ಶಾಮಣ್ಣ . ಈಗ ಸಿದ್ಧಾರ್ಥನ ವಿರೋಧಕ್ಕೆ ಮುಲಾಮು ಹಚ್ಚುವಂತೆ, ತನ್ನ ಎಲ್ಲಾ ಸಂಬಂಧಿಗಳಿಂದಲೂ ಉಪದೇಶ ಮಾಡಿಸಿದ. "ನೋಡು ಸಿದ್ಧಾರ್ಥ... ಈ ಸಾಹಿತ್ಯ .. ಅದು ಇದು ಎಲ್ಲಾ ಹೊಟ್ಟೆ ತುಂಬಿಸಲ್ಲ ಕಣೋ... ಅದನ್ನು ನೋಡು ಮೊದಲು... ಆಮೇಲೆ ಈ ಸಾಹಿತ್ಯ, ಕ್ರಾಂತಿ ಎಲ್ಲ .. ", "ಸಿದ್ದು... ಇಂಜಿನಿಯರಿಂಗ್ ಓದ್ತಾನೆ ಸಾಹಿತ್ಯಾಭ್ಯಾಸ ಮಾಡಬಹುದು ಕಣೋ.. ಅದಕ್ಕೊಂದು ಡಿಗ್ರಿ ಬೇರೆ ಬೇಕ ? "... ಎಂದು ಸಾಹಿತ್ಯದ ಗಂಧ- ಗಾಳಿ ಗೊತ್ತಿಲ್ಲದ ಎಲ್ಲರೂ ಪ್ರಖಾಂಡ ವಿಮರ್ಶಕರಂತೆ ಅವನಿಗೆ ಸಾಹಿತ್ಯದ ಕಲಿಕೆಯ ಮೇಲೆ ಬೋಧನೆ ಮಾಡಿ ಒಲ್ಲದ ಮನಸ್ಸಿನ ಅವನನ್ನು ಬೆಂಗಳೂರಿಗೆ ಕಳುಹಿಸಿದರು.

ಇತ್ತ ಶಾಮಣ್ಣನಿಗೆ ಸಿದ್ಧಾರ್ಥ ನಿಜವಾಗಿಯೂ ಬದಲಾಗುವನೇ? ಎಂಬ ಸಂಶಯ ಒಂದು ಕಡೆಯಾದರೆ, ಅವನ ಆಸೆ ಚಿಗುರುವ ಮೊದಲೇ ಚಿವುಟಿ ಹಾಕಿಬಿಟ್ಟೆನಲ್ಲ ಎನ್ನುವ ಪಾಪಪ್ರಜ್ಞೆ ಇನ್ನೊಂದು ಕಡೆ ಕಾಡತೊಡಗಿತು. ಆದರೆ, ಅವನ ಮಾತು ನೆನೆಸಿಕೊಂಡ ತಕ್ಷಣವೇ ಊರಿನವರ, ಸಂಬಂಧಿಕರ ಮುಖ, ನಿಂಗಿ, ತೋಟ, ಸೀನ, ರಾಮೋತ್ಸವ, ರುದ್ರಾಭಿಷೇಕ, ಪ್ರಸಾದ.... ಎಲ್ಲಾ ನೆನಪಿಗೆ ಬಂದು ತಲೆ ತಿರುಗಿದಂತಾಗಿ ಆ ಯೋಚನೆಯನ್ನೇ ಮರೆಯಲು ಪ್ರಯತ್ನಿಸತೊಡಗಿದ. ಇವನ ಯೋಚನೆಗೆ ಪುಷ್ಟಿ ನೀಡುವಂತೆ ಶಾಮಣ್ಣ ಕ್ಲಾಸಿನಲ್ಲಿ ಪಾಠ ಮಾಡುವಾಗ "ಸಮಾನತೆ.. ಪ್ರತಿಯೊಬ್ಬರ ಹಕ್ಕು... ನಮ್ಮ ಸಂವಿಧಾನ ಸಮಾನತೆ ಸಾರುತ್ತದೆ .. "ಎನ್ನುವಾಗ ನಿಂಗಿಯ ನೆನಪು ಆಗದೇ ಇರುವುದಿಲ್ಲ. ಮಾಯಾನಗರಿ ಬೆಂಗಳೂರಿನ ಮಾಯೆಯ ಮಡಿಲಿನಲ್ಲಿ ಬಿದ್ದ ಸಿದ್ಧಾರ್ಥ, ಹಳ್ಳಿಯಲ್ಲಿ ಬೆಳೆಸಿಕೊಂಡ ಎಲ್ಲ ಸಿದ್ಧಾಂತಗಳನ್ನೂ ಮರೆಯತೊಡಗಿದ. ಅವನಿಗೆ ಲಾರೆನ್ಸ್, ಕೀಟ್ಸ್ ಗಿಂತ Infosys, Microsoft  ಹೆಚ್ಚು ಪ್ರಿಯವಾದ ಶಬ್ದಗಳಾದವು. ಎಂದೋ ಊರಿಗೆ ಬಂದವನು, "ಅಣ್ಣಾ... ಎಲ್ಲ materialistic world ಅಣ್ಣ.. ನೋಡು ಚೀನಾ, ಜಪಾನ್, US, ಎಲ್ಲರ GDP ಹೇಗೆ ಮೇಲೆ ಹೋಗ್ತಾ ಇದೆ.. ನಾವು ಅವರನ್ನ ಬೀಟ್ ಮಾಡ್ಬೇಕು ಅಂದ್ರೆ ಈ ಹಾಳು agriculture ನಂಬಿಕೊಂಡರೆ ಆಗಲ್ಲ... ನೋಡು .. ನೀನೂ ತೋಟವನ್ನ ಯಾರಿಗಾದರೂ ಮಾರಿಬಿಡು.. Waste land... " ಎಂದು ಹೇಳಿದ್ದ. ಆಗ ಶಾಮಣ್ಣನಿಗೆ ಒಂದು ವಿಚಿತ್ರ ಅನುಭವವಾಗಿತ್ತು. ಈಗ ಮತ್ತೊಂದು ಥರದ ಚಕ್ರದೊಳಗೆ ಮಗ ಸಿಕ್ಕಿಹಾಕಿಕೊಳ್ಳುತಿದ್ದಾನೆ ಎಂದು ಭಯವಾಗತೊಡಗಿತು. ಇದೆಲ್ಲಾ ಸರಿಹೋಗಬೇಕಾದರೆ ಒಂದೇ ಉಪಾಯ. ಮಗನಿಗೆ ಮದುವೆ ಮಾಡುವುದು... ಶಾಮಣ್ಣನೂ ತನ್ನ ಭಾವಮೈದುನ  ರಮೇಶನೂ ಸಕಲೇಶಪುರಕ್ಕೆ ಹೋಗಿ, ರಮೇಶನ ಹೆಂಡತಿಯ ಕಡೆ ಒಂದು ಸಂಬಂಧವನ್ನು ಕುದುರಿಸಿ ಬಂದಿದ್ದರು. ಅದನ್ನು ಹೇಳಲೆಂದು ಫೋನ್ ಮಾಡಿದಾಗ ಒಂದು ರಾಮಾಯಣವೇ ನಡೆದುಹೋಗಿತ್ತು.  ಮದುವೆಯನ್ನು ಖಡಾಖಂಡಿತವಾಗಿ ವಿರೋಧಿಸಿದ ಸಿದ್ಧಾರ್ಥನಿಗೆ ಶಾಮಣ್ಣನೂ ಸ್ವಲ್ಪ ಏರಿದ ದನಿಯಲ್ಲೇ ಹೇಳಿದ್ದ... ' ಮದುವೆ ಅನ್ನೋದು ನಿನ್ನ ಒಬ್ಬನ ನಿರ್ಧಾರವಲ್ಲ ಕಣೋ... ಎರಡು ಕುಟುಂಬಗಳ ಮಿಲನಕ್ಕೆ ಒಂದು ನೆವ ಅಷ್ಟೇ ... ನಾವು ಸಂಪ್ರದಾಯ, ಎಲ್ಲ ಬಿಟ್ಟು ನೀ ಹೇಳ್ದಾಗೆಲ್ಲ ಕುಣಿಯಕ್ ಆಗಲ್ಲ ಕಣೋ ... ನಾವು ಹೇಳಿದ್ದನ್ನು ಕೇಳು ಮೊದಲು ... .. ತುಂಬಾ ಒಳ್ಳೆ ಹುಡುಗಿ ಕಣೋ ... ' ಎಂದೆಲ್ಲಾ ಒಲ್ಲದ ಅವನಿಗೆ ಹೇಳಿದ್ದರು. ಇತ್ತ ಸಿದ್ಧಾರ್ಥ, ' ಸಂಪ್ರದಾಯ, ಸ್ಥಾನ ... ಅದು ಇದು ಹೇಳ್ಕೊಂಡು ಯಾರನ್ನೋ ಹೇಗೆ ಕಟ್ತಾರೆ ... ಎರಡು ದಿನ ಮುಖ ನೋಡಿದ್ರೆ ಹೇಗೆ ಗೊತ್ತಾಗತ್ತೆ, ಒಳ್ಳೆಯವಳು  ಅಂತ ... '. ಎಂದು ಕೈ ಕೈ ಹಿಸುಕಿಕೊಂಡ.  ಕೆಲಸ ಸಿಕ್ಕಿದ ಮೇಲಂತೂ ತಿಂಗಳಿಗೆ ಒಮ್ಮೆಯಾದರೂ ಕಾಣುತಿದ್ದ ಸಿದ್ಧಾರ್ಥನ ಮುಖ, ಈಗಂತೂ ಕಾಣುವುದೇ ಅಪರೂಪ. ಏನೋ ಕೆಲಸ, ಅದು ಇದು  ಅನ್ನುತ್ತಾನೆ... ಈಗ ಈ  ಪತ್ರ ....

"ಶಾಮ ... ನಿಂತ್ಕೋ "ಶ್ರೀನಿವಾಸ ಕೂಗಿದ. ಬಳಿಗೆ ಬಂದು ಮೆಲುದನಿಯಲ್ಲಿ "ನನ್ನ ಮಗನಿಗೆ ಮದುವೆ settle ಆಯ್ತು ಕಣೋ... ಮೈಸೂರಿನವಳು ಹುಡುಗಿ.. ಅವಳೂ ಇಂಜಿನಿಯರ್ .. ನೀನು ತೋಟದಿಂದ ಬಾ .. ಆಮೇಲೆ ಮಾತಾಡೋಣ.. ಬಹಳ ಶ್ರೋತ್ರೀಯರ ಕುಟುಂಬ.. ಎಲ್ಲರೂ ಒಳ್ಳೆಯವರು ಕಣೋ ಮನೇಲಿ... ಇನ್ನೂ ಯಾರಿಗೂ ಹೇಳಿಲ್ಲ.. ನೀ ಬಾ.. ಆಮೇಲೆ ಸಿಕ್ತೀನಿ ... "ಎಂದು ಛತ್ರಿ ಸರಿಪಡಿಸಿಕೊಂಡು ಶ್ರೀನಿವಾಸ ಬೆನ್ನು ತಿರುಗಿಸಿ ನೆಟ್ಟ ನಡೆಯ ತೊಡಗಿದ. ಅವನ ಮುಖದಲ್ಲಿ ಗೆದ್ದ ಹುಂಜನ ತರಹದ ನಿಲುವಿತ್ತು, ಏನನ್ನೋ ಸಾಧಿಸಿದ ಮಂದಹಾಸವಿತ್ತು. ಶಾಮಣ್ಣನಿಗೆ  'ನೀನೇ ಹುಡುಕಿದೆಯೋ .. ಅಥವಾ .. ಅವನೇ .. 'ಎನ್ನುವ ಮಾತು ಗಂಟಲಿನಲ್ಲೇ ಸಿಕ್ಕು ಸತ್ತುಹೋಗಿತ್ತು. ಶರ್ಟಿನ ಜೇಬಿನಲ್ಲಿದ್ದ ಪತ್ರವನ್ನು ಮತ್ತೆ ತೆಗೆದು ನೋಡಿದ. ಮಳೆ ಜೋರಾಗಿ ಹೊಯ್ಯಲು ಆರಂಭವಾಯಿತು. ಅದನ್ನು ಲೆಕ್ಕಿಸದೇ ನಡು ಬೀದಿಯಲ್ಲಿ ಕಲ್ಲಾಗಿ ನಿಂತು ಪತ್ರ ಓದತೊಡಗಿದ. ಎಲ್ಲಾ ಸಾಲುಗಳನ್ನು ಓದಲು ಧೈರ್ಯ ಸಾಲದೇ ಹೋಯ್ತು. 'ಅಣ್ಣಾ... Rose ತುಂಬಾ ಒಳ್ಳೆಯವಳು. ಅವಳ ತಂದೆಯೂ ಅಷ್ಟೇ. ತುಂಬಾನೇ ದೊಡ್ಡ Industrialist.. ನಮ್ಮ ದೇಶದ ಬೆಳವಣಿಗೆ ಇಂತಹ ದೊಡ್ಡ ಮನುಷ್ಯರಿಂದಲೇ ಸಾಧ್ಯ.. ಅವರದ್ದೇ ಆದ ಒಂದು consultancy ಇದೆ... ನಾನೂ ಅವಳೂ  ... ' ಮುಂದೆ ಓದಲಾಗಲಿಲ್ಲ. ಹಾಗೆಯೇ ಕಣ್ಣು ಮುಚ್ಚಿ ನಿಂತ. ಅತ್ತ ಕಡೆಯಿಂದ ಬರುತಿದ್ದ ಗೊರವ, "ಬುದ್ಧಿ ... ಇದೇನ್ ಹಿಂಗ್ ನಿಂತ್ಬುಟ್ರಲ್ಲ ... ಅಲ್ಲಿ ರೈಟರ್ ರಾಮಣ್ಣಪ್ಪ ನಿಮ್ಗೇ ಕಾಯ್ತಾ ಅವ್ರೆ... ನಿಮ್ಮುನ್ನ ಕರ್ಕೋ ಬಾ ಅಂತ ಕಳುಸುದ್ರು .. ಬಿರ್ ಬಿರ್ನೆ ಬನ್ನಿ ."ಎಂದ. ಅವಾಕ್ಕಾಗಿ ಎಚ್ಚರಗೊಂಡವನಂತೆ ಶಾಮಣ್ಣ, "ಹಾ !!!  ಗೊರವ... ಇವತ್ತು ಬರೋಕ್ಕೆ ಆಗಲ್ಲ ನನಗೆ.. ಮೈಗೆ ಹುಷಾರಿಲ್ಲ ಅಂತ ಹೇಳೋ .. "ಎಂದು ಹೇಳಿ ಅವನ ಉತ್ತರಕ್ಕೂ ಕಾಯದೆಯೇ ಛತ್ರಿ ಹಿಡಿದು ನಡೆದೇಬಿಟ್ಟ. ಗೊರವನಿಗೆ ಏನೂ ಹೊಳೆಯದೇ, "ಇದೇನ್ ಈ ವಯ್ಯ ... ಇಲ್ಲೀಗಂಟ ಬಂದು ತ್ವಾಟ್ಕೆ ಬರಾಕಿಲ್ಲ ಅಂತದೆ ... "ಎಂದು ಗೊಣಗುತ್ತಾ ತೋಟದ ಕಡೆಗೆ ಹೆಜ್ಜೆ ಹಾಕಿದ.

ಶಾಮಣ್ಣ ಮನೆಗೆ ಬಂದವನೇ, ಛತ್ರಿ ಮಡಿಸಿ ಪಡಸಾಲೆಯಲ್ಲಿಟ್ಟು  ಅಲ್ಲೇ ಇದ್ದ ಕುರ್ಚಿಯ ಮೇಲೆ ಧೊಪ್ಪೆಂದು ಕೂತ. 'ತಾನು ಮಾಡುತ್ತಿರುವುದು ಸರಿಯೇ? ಅವನ ಇಷ್ಟಕ್ಕೆ ಅವನ ಮದುವೆ ಆಗುವುದರಲ್ಲಿ ತಪ್ಪೇನಿದೆ. ಅವನ ಜೀವನ ಸಂಗಾತಿ ಹುಡುಕಿಕೊಳ್ಳುವುದು ಅವನ ಹಕ್ಕಲ್ಲವೇ ... ' ಎಂದೆಲ್ಲಾ ಯೋಚಿಸಿದರೂ, ತಲೆಯಲ್ಲಿ ಮತ್ತೆ ಅದೇ... ರುದ್ರಾಭಿಷೇಕ, ರಾಮೋತ್ಸವ, ಸೀನನ ಮಗನ ಮದುವೆ, ಪ್ರಸಾದ, ಮಂಗಳಾರತಿ ....  ದೊಂಬರಾಟ.  ಅದನ್ನು ಎಷ್ಟೇ ಬಾರಿ ತೊಡೆದುಹಾಕಲು ಪ್ರಯತ್ನ ಪಟ್ಟರೂ ಹೋಗುತ್ತಲೇ ಇರಲಿಲ್ಲ.  ಅಷ್ಟರಲ್ಲೇ, "ಅಯ್ಯನೋರೆ ... "ಎಂದು ಯಾರೋ ಕೂಗಿದಂತಾಯ್ತು. "ಯಾರೂ ... "ಎಂದು ಒಳಗಿನಿಂದ ಇವೆಲ್ಲ ಏನೂ ತಿಳಿಯದ ಶಾಮಣ್ಣನ ಹೆಂಡತಿ ಭಾಗೀರಥಿ ಕೂಗುತ್ತಾ, ಅಡಿಗೆ ಮನೆಯಿಂದ ಸೆರಗಿನಿಂದ ಕೈ ಒರೆಸಿಕೊಳ್ಳುತ್ತಾ ಹೊರಬಂದಳು. "ಓ.. ನಿಂಗಿ ... ಹಿತ್ತಲ ಕಡೆ ಬಾ.. ಕಾಫಿ ಕೊಡ್ತೀನಿ ... ಸ್ವಲ್ಪ ಕೊಟ್ಟಿಗೆ ಕೆಲಸ ಇದೆ.  ಮಾಡೋವಂತೆ... "ಎನ್ನುತ್ತಾ ಒಳನಡೆದಳು. ಶಾಮಣ್ಣ ಮೌನವಾಗಿ ಧ್ಯಾನಸ್ಥನಾದಂತೆ ಕುಳಿತ.    

Wednesday, 25 March 2015

"ಸುರಗಿ"ಯಲ್ಲಿ ಪ್ರಕಟವಾದ ನನ್ನ  ಕವನ

ಏನೇ ಆಗಲಿ ನೀ ನಮ್ಮವನು

ಕಾವಿಯ ಕಾನದಿ ಅಡಗಿಸಿಟ್ಟೆವು,
ಮಂತ್ರದ ಬೇಲಿಯ ಹಾಕಿಬಿಟ್ಟೆವು,
ಗುಡಿಯ ಗೋಡೆಯಲಿ ಕೂಡಿಹಾಕಿದೆವು,
ಏನೇ  ಆಗಲಿ  ನೀ ನಮ್ಮವನು...

ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು,
ಭಾರಿ ಕೋರಿಕೆಗೆ ಮಹಲಿರಬೇಕು,
ಬಳಿಯಲಿ ಕಾಣಲು ಅನುಮತಿಬೇಕು,
ಜೇಬಿನ ತುಂಬಾ ನೋಟಿರಬೇಕು

ಆದರೂ ಬರುವೆವು ... ಏಕೆ.. ಏನೇ  ಆಗಲಿ  ನೀ ನಮ್ಮವನು...

ನೀನಾರೆಂದೇ ತಿಳಿದಿಲ್ಲ,
ನಿನ್ನ ಅಭಿಪ್ರಾಯವೂ ಗೊತ್ತಿಲ್ಲ,
ಅವನ ಹೊಡೆದು, ಇವನ ಕಡಿದು
ನಿನ್ನ  ಹೆಸರನೇ ನುಡಿಯುವೆವು,

ಏಕೆ ... ಏನೇ  ಆಗಲಿ  ನೀ ನಮ್ಮವನು...

ತಿಲಕ ಇಟ್ಟರೆ ಹಿಂದೂ ನಾನು
ಟೋಪಿ ಹಾಕಿದೊಡೆ ಮುಸ್ಲಿಮನು ,
ಕೊರಳಿಗೆ ಶಿಲುಬೆ ಬೀಳುತ್ತಲೇ
ನಾ ಈಸಾಯಿಯಾಗಿಬಿಡುವೆನು,
ನನಗೆ ನಾನಾರೆಂದೂ ತಿಳಿದಿಲ್ಲ

ಆದರೆ  ನಿನ್ನನಂತೂ ನಾ ಬಿಡಲೊಲ್ಲೆ,

ಏಕೆ... ಏನೇ  ಆಗಲಿ  ನೀ ನಮ್ಮವನು...

Thursday, 12 March 2015

ನನ್ನ ಸಣ್ಣ ಕಥೆ "ಅಂತರಾಳ" ಅವಧಿಯಲ್ಲಿ 
ನನ್ನ ಕವನ "ಅಳಲು " ಸುರಗಿಯಲ್ಲಿ



ನಾನೀಗ ಮಾಸಿದ ಪಾತ್ರೆ ,
ನನ್ನ ಜಾಗ ಅಡುಗೆ ಮನೆಯ ಮೂಲೆ ,
ಅರೆಬರೆ ಮಿಕ್ಕಿದ, ಅರ್ಧ ತಿಂದು
ಇನ್ನರ್ಧ ಕಕ್ಕಿದ, ಹಳಸಿದ ತಿನಿಸು ಮಾತ್ರ ನನಗೆ


ನನಗೂ ಯವ್ವನವಿತ್ತು ,
ಮಿರಿ ಮಿರಿ ಮಿಂಚುವ ಬಣ್ಣವಿತ್ತು,
ನನ್ನ ಒಡಲಲ್ಲೂ ಕೆನೆ ಹಾಲು ತೇಲಿತ್ತು.
ಈ ಮನೆಯ ಗೃಹಪ್ರವೇಶವೂ ನನ್ನ
ಹೃದಯದಿಂದ ಉಕ್ಕಿದ ಸಿಹಿ ಹಾಲಿಂದಲೇ ಆಗಿತ್ತು.

ಆದರೆ ಕಿಲುಬು ಹಿಡಿದಿದೆ ನನಗೀಗ,
ಶುಭದ ಯಾವುದೇ ಕೆಲಸಕ್ಕೂ ಯೋಗ್ಯನಲ್ಲ ನಾ ,
"ಎಷ್ಟು ಚಂದವಿದೆ, ಈ ಪಾತ್ರೆ " ಎಂದು
ಹೊಗಳಿದ್ದ ನನ್ನ ಮನೆಯವರೇ ,
ಈಗ "ಕಾಲು-ಕಾಲಿಗೆ ಸಿಗುತ್ತೆ ಹಾಳಾದ್ದು " ಎಂದು ತೆಗಳುವರು

ಇಂದಲ್ಲ ನಾಳೆ ನಾ ಇಲ್ಲಿಂದ ಹೊರಡುವವ
"ಹಳೇ ಪೇಪರ್ -ಖಾಲಿ ಶೀಶೆ " ಮಾರುವವನ
ಗುಜರಿ ಸೇರುವವ ,
ಹೋಗುವ ಮುನ್ನ ಒಂದೇ ಬಯಕೆ ,
ನನ್ನ ಅವನಿಗೆ ಕೊಡುವಾಗ , ಒಮ್ಮೆ ನೆನೆಯಿರಿ
ಕೊಟ್ಟ ಮೇಲೆ ನಾ ಮತ್ತೆ ಬರಲಾರೆನೆಂದು 

Monday, 9 March 2015

ವೇದನೆ

ಆಗಸ ಸಿಟ್ಟಿನಿಂದಲೋ ಏನೋ ಕಪ್ಪಿಟ್ಟಿತ್ತು. ನನ್ನ ಮನದಂತೆಯೇ ಅಲ್ಲೂ ಕೋಲಾಹಲ. ಗುಡುಗು, ಮಿಂಚುಗಳ ಗದ್ದಲ. ರೂಮಿನ ಒಳಗಡೆಯೂ ಕತ್ತಲು , ಹೊರಗಡೆಯೂ ಕೂಡ. ಒಳಗೆ ಕುಳಿತು ಆಗಸದ ಕಡೆಗೆ ದೃಷ್ಟಿ ನೆಟ್ಟಿದ್ದೆ. ಮಬ್ಬಾಗಿದ್ದ ಆಗಸದಿಂದ ಭರವಸೆಯ ಕೊಲ್ಬೆಳಕು  ಬಂದಂತೆ ಕೈಲಿದ್ದ ಮೊಬೈಲ್ ಒಮ್ಮೆ ರಿಂಗಣಿಸಿತು,  ಆಸೆಯಿಂದ ಮೊಬೈಲ್ ನೋಡಿದೆ.. airtel ನವರ ಮೆಸೇಜ್ ಇತ್ತು.  ಮತ್ತೆ ಅದೇ ಮೌನ.. ಅದೇ ಕತ್ತಲು. whatsapp ನಲ್ಲಿ  ಕ್ಷಮಾಳ ಪೇಜ್ ತೆಗೆದೆ, online ಎಂದು ಕಾಣಿಸುತ್ತಿತ್ತು. ನೋಟ ಬರುಬರುತ್ತಾ ಮಂಜಾಗತೊಡಗಿತು. ನೋಡ ನೋಡುತ್ತಲೇ ಕಣ್ಣಿಂದ ಜಾರಿದ ಹನಿ ಮೊಬೈಲಿನ ಮೇಲೆ ಬಿತ್ತು. ತಕ್ಷಣವೇ ಅತ್ತಿತ್ತ ನೋಡಿ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡೆ. ಕಣ್ಣೀರೂ ಒಂದು ಭಾಷೆ. ಎಲ್ಲರಿಗೂ ಅರ್ಥವಾಗದ ಭಾಷೆಯಷ್ಟೇ. ಮನದ ಮುಗಿಲಿನಲ್ಲೂ ಹೊರಗಿನಂತೆಯೇ ಗುಡುಗು ಸಿಡಿಲು ಸಹಿತ ಮಳೆ ಹೊಯ್ಯಲು ಆರಂಭಿಸಿತು.  "ಅವಳ ವರ್ತನೆಯಲ್ಲಿ ಇಷ್ಟೊಂದು ಬದಲಾವಣೆ ಏಕೆ ? " ಎನ್ನುವಾಗ ಹಿಂದಿನ ಸನ್ನಿವೆಶವೆಲ್ಲ ಸ್ಮೃತಿಪಟಲದಲ್ಲಿ ಒಂದೊಂದಾಗಿ ಬರತೊಡಗಿದವು..

ನನ್ನ ಮಟ್ಟಿಗೆ ಕ್ಷಮಾ ಮತ್ತು ನನ್ನ ಸಂಬಂಧ 'ಹೆಸರ'ನ್ನು ಮೀರಿದ್ದು.  ಆಕೆ ನನಗೆ ಒಬ್ಬಳು ಪ್ರೀತಿಯ ಸ್ನೇಹಿತೆ, ಅಕ್ಕರೆಯ ತಂಗಿ, ಮಮತೆಯ ತಾಯಿ ಎಲ್ಲಾ ಆಗಿದ್ದಳು. ಅವಳು ನನ್ನ ಭೇಟಿಯಾಗಿದ್ದು ಈಗ್ಗೆ ಎರಡು ವರುಷದ ಹಿಂದೆ, ನಾನು ಹಾಸನದಲ್ಲಿ ಇಂಜಿನಿಯರಿಂಗ್ ಮಾಡುವಾಗ. ನಾನು ಬಿ.ಇ ಮುಗಿಸಿ ಪುಣೆಗೆ ಬಂದ ನಂತರವಂತೂ ಅವಳ ನನ್ನ ಸಂಬಂಧ ಇನ್ನಷ್ಟು ಗಟ್ಟಿಯಾಯಿತು. ಇದಕ್ಕೆ ಮೂಲ ಕಾರಣ ಪ್ರಾಯಶಃ ನನ್ನ ಒಂಟಿತನ. ಭಾಷೆ ಅರಿಯದ ಊರಿನಲ್ಲಿ ನನ್ನವರು ಎನ್ನುವ ಒಂದು ನರಪ್ರಾಣಿಯೂ ಇಲ್ಲದಿರುವಾಗ, ಫೋನಿನಲ್ಲಿ ಆಗುವ ಸಂಭಾಷಣೆಗೆ ನನ್ನ ಮನ ಹಾತೊರೆಯುತ್ತಿದ್ದುದು ಸಹಜ. ಆದರೆ, ಮನಸ್ಸಿನ ಮೂಲೆಯಲ್ಲಿ ಒಂದು ಭಯವೂ ಇತ್ತು, ' ಇಂದಲ್ಲ ನಾಳೆ, ಈಕೆ ಮದುವೆಯಾಗಿ ಹೊರ ಹೋಗುವವಳು... ನಾನು ಎಷ್ಟಾದರೂ ಮೂರನೆಯ ವ್ಯಕ್ತಿ '. ಆದರೆ, ಅವಳ ಮಾತಿನ ಸಹಜತೆ ಮತ್ತು ವಿಶ್ವಾಸ ಈ ಭಯವನ್ನು ದೂರ ಮಾಡಿತ್ತು. ನನಗೆ ಇನ್ನೂ ಚೆನ್ನಾಗಿ ನೆನಪಿದೆ... ನನಗೆ ಸಣ್ಣ ಜ್ವರ ಬಂದಾಗ ಅವಳು ತೋರಿದ ಮಮತೆ ಅಮ್ಮನನ್ನು ನೆನಪಿಸುವಂತಿದ್ದದ್ದು. ನನ್ನ ಪ್ರತಿಯೊಂದು ನಿರ್ಧಾರವೂ ಅವಳ ಒಪ್ಪಿಗೆಯಿಂದಲೇ ಮುನ್ನಡೆದದ್ದು.

ಆದರೆ ಈಗ ಹಾಗಿಲ್ಲ. ಆಕೆಗೆ ನನ್ನ ಬಳಿ ಮಾತನಾಡಲು ಸಮಯವಿಲ್ಲ. ಬೇರೆ ಎಲ್ಲಕ್ಕೂ ಸಮಯ ಕೊಡುವ ಅವಳು ನನಗೆ ಮಾತ್ರ ಕೊಡಳು. ' 'ಕೊಡು' ಎಂದು ಅಪೇಕ್ಷೆ ಪಡುವುದು ಸರಿಯೇ ?? ಅವಳು ನನಗೆ ಕೊಡಲೇಬೇಕು ಎನ್ನುವ ಧೋರಣೆ ಸರಿಯೇ ?' ಎಂದು ಎಷ್ಟೋ ಬಾರಿ ನನಗೆ ನಾನೇ ಪ್ರಶ್ನಿಸಿಕೊಂಡಿದ್ದೇನೆ. ಮನಸ್ಸು ಮಾತ್ರ ಈ ವಿಚಾರದಲ್ಲಿ ಮೌನಿ. ಅವಳೊಟ್ಟಿಗಿನ ಈ ಸಲುಗೆ ಎಷ್ಟು ದಿನ ಸಾಧ್ಯ? ಇದೇಕೆ ನನ್ನ ಮನಸ ಹೊಕ್ಕುವುದಿಲ್ಲ?. ಇದಕ್ಕೆಲ್ಲ ಮೂಕವಾಗುವ ಮನ, ಕೇಳುವ ಒಂದೇ ಪ್ರಶ್ನೆ "ಅವಳೇಕೆ ಈಗ ಮಾತನಾಡುವುದಿಲ್ಲ... ಹಿಂದೆ ಹೀಗಿರಲಿಲ್ಲವಲ್ಲ".. ಇದಕ್ಕೆ ನನ್ನ ಬಳಿ ಉತ್ತರವಿಲ್ಲ. ಅವಳನ್ನೇ ನೇರವಾಗಿ ಕೇಳಿಯೂ ಕೇಳಿದ್ದೆ, " ಯಾಕೆ ಹೀಗೆ ಮಾಡುತ್ತಿದ್ದೆಯಾ ? " ಎಂದು.  'ಸಮಯವಿಲ್ಲ .. ' ಎನ್ನುವ ಉತ್ತರದೊಂದಿಗೆ  'ನನ್ನ ಆಪ್ತಮಿತ್ರರಿಗೇ  ಸಮಯ ಕೊಡಲಾಗುತ್ತಿಲ್ಲ.. ಇನ್ನು ನಿನಗೆ....  ' ಎನ್ನುವ ಮಾತೂ ಬಂದಿತ್ತು. ನಾನು ಅರ್ಥೈಸಿದ್ದು ಇಷ್ಟೇ " ನಿನಗೆ ಕೊಡುವಷ್ಟು ಸಮಯ ನನ್ನಲ್ಲಿಲ್ಲ...  " ಎಂದು. ಅದರೊಟ್ಟಿಗೆ ನನ್ನ ಸ್ಥಾನದ ಅರಿವೂ ಆಯಿತು. ನಾನೆಷ್ಟಾದರೂ ಮೂರನೆಯವನು.. ತಪ್ಪೋ.. ಸರಿಯೋ ತಿಳಿಯೆ. ಭಾವನೆಗಳ ವಿಷಯದಲ್ಲಿ ಮನಸ್ಸು ಬುದ್ಧಿಯ ಮಾತು ಕೇಳುವುದಿಲ್ಲ. ಅವಳ ಬದುಕು ಅವಳಿಷ್ಟ... 'ನಾನೇಕೆ ಹೀಗೆ ? ಇದೆಲ್ಲಾ ಹಾಗಾದರೆ ನನ್ನ ತಪ್ಪೇ ?...'

ಹಿಂದಿನಿಂದ ಬೆನ್ನಿನ ಮೇಲೆ ಕೈ ಹಾಕಿದ ಹರ್ಷ, " ಬಾ.. ಕಾಫಿ ಕುಡಿಯೋಣ .. ಇನ್ನು ಅರ್ಧ ಘಂಟೇಲಿ ಕ್ಯಾಂಟೀನ್ ಕ್ಲೋಸ್ ಆಗತ್ತೆ .. ಮಳೆ  ಬಿಟ್ಟಿದೆ .. ಯಾವಾಗ ಮತ್ತೆ ಶುರುವಾಗುತೋ ಏನೋ " ಎಂದ. ಅವನಿಂದ ಮುಖ ಮರೆಮಾಚಲು ಯತ್ನಿಸಿ, ಅತ್ತ ತಿರುಗಿ, " ಹೂ.. ಬಾ " ಎಂದು ಅವನೊಟ್ಟಿಗೆ ಎದ್ದೆ. ಅವನು

" ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ ...
   ಈಗ ಏಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ ... "

ಭಟ್ಟರ ಕವಿತೆ ಗುನುಗುತ್ತಾ ಮುಂದೆ ನಡೆದ. ನನ್ನ ಕುರಿತೇ ಹೇಳುತ್ತಿರುವನೇನೋ ಎಂದು ನನ್ನ ಮುಖದಲ್ಲಿ ಅಸಹಾಯಕತೆಯ, ಬೇಸರದ ಹುಸಿ ನಗೆ ಮಿಂಚಿ ಮರೆಯಾಯ್ತು. ಮುಗಿಲು ಕೂಡ ಅತ್ತು ಅತ್ತು ಸುಸ್ತಾಗಿ ಕುಳಿತಿತ್ತು. ಆದರೆ ಗುಡುಗುವ ಬಿಕ್ಕುವಿಕೆ ಮಾತ್ರ ನಿಂತಿರಲಿಲ್ಲ.




Tuesday, 24 February 2015

ಸಣ್ಣ ಕಥೆ "ಆಗಂತುಕ" , "ಅವಧಿ" ಯಲ್ಲಿ ...


"ಥೂ... ಈ ದರಿದ್ರ ಮಳಿ ಎಂತಕ್ ಬರ್ತದೋ... " ಎಂದು ಗೊಣಗುಡುತ್ತಾ ಸೋಮಯ್ಯ ರಾಜೇಶನ ಹೋಟೆಲಿನ ಒಳಗೆ  ಬಂದವನೇ ಛತ್ರಿ ಮಡಿಸುತ್ತಾ ಮಳೆಗೆ ಹಿಡಿ ಶಾಪ ಹಾಕಿದ. ಹೊರಗೆ 'ಧೋ' ಎಂದು ಮಳೆ ಸುರಿಯುತ್ತಿತ್ತು. ಮಲೆನಾಡಿನ ಪ್ರಚಂಡ ಮಳೆಯ ಆರ್ಭಟಕ್ಕೆ ಸೋಮಯ್ಯನ ಛತ್ರಿ ಕ್ಷುದ್ರ ಕೀಟದಂತೆ ಕಂಡಿರಬೇಕು, ಆಚೆ ಈಚೆ ಎಲ್ಲ ಕಡೆಯಿಂದ ರಭಸವಾಗಿ ಬೀಸಿದ ಎರಚಲಿಂದ ಛತ್ರಿ ಹಿಡಿದೂ ಅವನಿಗೆ ಕೊಂಚವೂ ಉಪಯೋಗವಾದಂತಿರಲಿಲ್ಲ. ಬಂದವನೇ ಹೆಗಲಲ್ಲಿದ್ದ ಒದ್ದೆ ಟವಲಿನಿಂದ ತಲೆ ಒರೆಸಿಕೊಳ್ಳುವ ನಿರರ್ಥಕ ಸಾಹಸ ಮಾಡುತ್ತಿದ್ದ. ಸುತ್ತಲೂ ಗವ್ವನೆ ಕತ್ತಲು ಕವಿದಿತ್ತು. ಮಳೆಗಾಲ ಅಂದರೆ ಹೀಗೆಯೇ, ಕಾಡಿನ ಮಧ್ಯೆ ಇಣುಕಿ ಬರುವ ಪವರ್ ಲೈನಿನ ಮೇಲೆ ಮರದ ರೆಂಬೆಯೋ, ಅಥವಾ ಇನ್ನೇನೋ ಬಿದ್ದು ತುಂಡಾಗಿರುತ್ತದೆ. ಅದನ್ನು ಕಂಡುಹಿಡಿಯಲು ಹೋಗುವ ಲೈನ್ಮನ್ ಸುಲ್ತಾನ, " ಕರೆಂಟು ಯಾವಾಗ ಬರುತ್ತೋ ?? " ಎಂದು ಕೇಳಿದ ಎಲ್ಲರಿಗೂ, ಶೆರ್ಲಾಕ್ ಹೊಲ್ಮ್ಸಿನ ರೇಂಜಿನಲ್ಲಿ, "ಎಲ್ಲೋ ಲೈನ್ ತುಂಡಾಗಿದೆ ಅನ್ಸತ್ತೆ, ನಾನು ಹೋಗಿ ಹುಡುಕಿ ಇವತ್ ರಾತ್ರಿ ಒಳಗೆ ಛಾರ್ಜ್ ಮಾಡ್ಸ್ಬಿಡ್ತೀನಿ ಅಣ್ಣ...  " ಎಂದು ಕರೆಂಟು ಹೋದ ನಾಲ್ಕು ದಿವಸದಿಂದಲೂ ಹೇಳುತ್ತಲೇ ಇರುವುದು ನಾವು ಕಾಣುವ ಸಾಮಾನ್ಯ ಸಂಗತಿ. ಸೂರಂಚಿನಿಂದ ಬೀಳುತ್ತಿದ್ದ ನೀರನ್ನು ಸಂಗ್ರಹಿಸಲು ರಾಜೇಶ ಎರಡೂ ಕೈಲಿ ಬಕೆಟ್ ಹಿಡಿದು, ತಲೆಗೊಂದು ರುಮಾಲು ಬಿಗಿದು, ಪಂಚೆ ಮೇಲೆ ಎತ್ತಿ ಕಟ್ಟಿ, ಮಳೆಯ ವಿರುದ್ಧ ಯುದ್ಧ ಮಾಡಲು ಸನ್ನದ್ಧನಾಗಿ ಬರುವ ಯೋಧನಂತೆ ಬಂದವನೇ , " ಏನ್ ಸೋಮಣ್ಣ... ಇಲ್ಲೇ ಇದ್ದೀಯ, ಕೂಡ್ರಸ್ತೆ ಜೀಪ್ ಹೋಯ್ತಲ್ಲ " ಎಂದು ಮಳೆಯನ್ನು ಬೈಯುತ್ತಾ ಛಳಿಯಿಂದ ನಡುಗುತ್ತಿದ್ದ ಸೋಮಣ್ಣನನ್ನು ಕೇಳಿದ. " ಹೂ ಕಣ್ ರಾಜೇಶ, ಅಯ್ಯೋ ಅದು ಮೂಲೆ ಮನೆ ಶೇಖರನ್ ಹತ್ರ ಮಾತಾಡ್ತಾ ಕುಂತ್ ಬಿಟ್ಟೆ, ಟೇಮು ಓಗಿದ್ದೆ ಗೊತಾಗ್ಲಿಲ್ ನೋಡು.. ಗುಳ್ಳೆ ನರಿ ಬಸ್ಸಲ್ ಹೊದ್ರಾತ್ ಬುಡು.. ಅದಿರ್ಲಿ, ಒಂದು ಒಳ್ಳೆ ಕಾಪಿ ಕೊಡು " ಎಂದು ತಾನು ಇನ್ನೂ ಇಲ್ಲೇ ಇರುವುದಕ್ಕೆ ಸಮಜಾಯಿಷಿ ಕೊಟ್ಟ. " ಸುಬ್ಬೂ.. ಸೋಮಣ್ಣಗೆ ಒಂದು ಬಿಸಿ ಬಿಸಿ ಕಾಪಿ ಕೊಡು " ಎಂದು ಕೂಗಿದ ರಾಜೇಶನ ಧ್ವನಿಗೆ "ಹಾ ... ಬಂದೆ " ಎನ್ನುವ ಸಣ್ಣ ಪ್ರತಿಧ್ವನಿ ಒಳಗಿನಿಂದ ಬಂತು. ಸುಬ್ಬೂ ರಾಜೇಶನ ಹೋಟೆಲಿಗೆ ಬಂದಾಗ ಅವನಿಗೆ ಆರೇಳು ತಿಂಗಳಿರಬೇಕು. ಯಾರೋ ರಾಮೋತ್ಸವದ ಟೈಮ್ ನೋಡಿಕೊಂಡು ಬೇಡದ ಕೂಸನ್ನು ಹೋಟೆಲಿನಲ್ಲೇ ಬಿಟ್ಟು ಹೋಗಿದ್ದರು. ರಾಜೇಶ ಎಷ್ಟೇ ಹುಡುಕಿದರೂ ಅವರ ಪತ್ತೆ ಆಗಲಿಲ್ಲ. ಆದ್ದರಿಂದ ಹೋಟೆಲಿನ ಮಾಣಿಯಾಗಿ ಮಾರ್ಪಾಡಾದ ಸುಬ್ಬು, ರಾಜೇಶನ ಬಲಗೈ ಅಂದರೂ ತಪ್ಪೇನಿಲ್ಲ. ಬಿಸಿ ಬಿಸಿ ಕಾಫಿ ಹಿಡಿದು ಹತ್ತು ಹನ್ನೊಂದರ ಹರೆಯದ ಹುಡುಗ ಬಂದು ಸೋಮಣ್ಣನ ಮುಂದೆ ಕಾಫಿ ತುಂಬಿದ ಲೋಟ ಇಟ್ಟ. ಹೋಟೆಲಿನಲ್ಲಿ ಇನ್ನ್ಯಾರೂ ಇರಲಿಲ್ಲ. ಇನ್ನೇನು ಮುಚ್ಚುವ ಹೊತ್ತಾಗಿತ್ತು. ರಾಜೇಶ ಒಳಗೆ ಬಂದವನೇ ಸೋಮಣ್ಣನ ಮುಂದೆ ಕುರ್ಚಿ ಎಳೆದುಕೊಂಡು ಕುಳಿತ. ಆ ವೇಳೆಗೆ ಮಳೆಯೂ ತನ್ನ ಆರ್ಭಟ ನಿಲ್ಲಿಸಿತ್ತು. ತುಂತುರಾಗಿ ಹೊರಗಿನ ವಾತಾವರಣದ ತೇವ ಹೆಚ್ಚಿಸುತ್ತಿತ್ತು. ಸುಬ್ಬೂ ಹೊರಗೆ ಬಂದು, ಸೂರಿಂದ ತೊಟ್ಟಿಕ್ಕಿ ಬಳುಕುತ್ತಾ ಬಾಗುತ್ತಾ ಧರೆಗೆ ಇಳಿಯುವ ನೀರಿನ ಹನಿಗಳೊಂದಿಗೆ ಕೇರಂ ಆಡಬಹುದೋ ಎಂದು ಕೈ ಬೆರಳಿನಿಂದ ಹೊಡೆಯುತ್ತಲೇ ಇದ್ದ. ಇವನು ಇತ್ತ ಗಮನ ಕೇಂದ್ರೀಕರಿಸಿ ಹನಿಯ ನೋಡ ಹೋದಂತೆಲ್ಲಾ, " ಏ... ಏಲಕ್ಕಿ ಎಷ್ಟಾದರೂ ನಮ್ ಕೈಗೆ ಹತ್ತಲ್ಲ ಬುಡು... ", " ನೀನ್ಯಾಕ್ ಅವನ್ ಹತ್ರ ಹೋದೋ... " ಎಂದು ಲೋಕಲ್ ರಾಜಕೀಯ ಮಾತಾಡುತ್ತಿದ್ದ ಸೋಮಯ್ಯ ಮತ್ತು ರಾಜೇಶನ ಧ್ವನಿ ಸುಬ್ಬೂಗೆ ಬರಬರುತ್ತಾ ಕ್ಷೀಣವಾಗುತ್ತಾ ಹೋಯಿತು. ಕಣ್ಣಿಗೆ ರಾಡಿ ಎರಚಿದಂತೆ ಬಂದ ಬೆಳಕಿನ ಕಿರಣದ ಜೊತೆ ಪೊಂ ಪೊಂ ಸದ್ದು ಮಾಡಿ ಗುಳ್ಳೆ ನರಿ ಬಸ್ಸು ರಾಜೇಶನ ಹೋಟೆಲಿನ ಮುಂದೆ ಬಂದು ನಿಂತಿತು. ಇದಕ್ಕೆ ಏಕೆ ಗುಳ್ಳೆನರಿ ಬಸ್ಸು ಎಂದು ಕರೆಯುತ್ತಾರೆ ಎನ್ನುವುದು ಸುಬ್ಬೂಗೆ ಗೊತ್ತಿರಲಿಲ್ಲ. ರಾತ್ರೋ ರಾತ್ರಿ ಗುಳ್ಳೆ ನರಿ ಹಾಗೆ ಕೆಲವೊಮ್ಮೆ ಬರುವ, ಹಲವು ಬರಿ ಕೈ ಕೊಡುವುದಕ್ಕೋ ಏನೋ ಅದಕ್ಕೆ ಈ ಹೆಸರು ಇಟ್ಟಿದಾರೆ ಎಂದುಕೊಂಡಿದ್ದ. ಒಂದು ರೀತಿಯಲ್ಲಿ ಅವನ ಊಹೆಯೂ ನಿಜವೇ ಆಗಿತ್ತು. ಕಿಟಕಿ ಬಾಗಿಲಿಲ್ಲದ ಆ ಬಸ್ಸು ಯಾವಾಗ ಬೇಕಿದ್ದರೂ, ಎಲ್ಲಿ ಬೇಕಿದ್ದರೂ ' ನಾನಿನ್ನು ಮುಂದೆ ಹೋಗಲಾರೆ... ' ಎಂದು ಕುಳಿತುಕೊಂಡು ಬಿಡುತಿತ್ತು. ಅಷ್ಟೆಲ್ಲಾ ಅವಾಂತರ ಮಾಡಿದರೂ ರಾತ್ರಿ ಸಂಚಾರ ವ್ಯವಸ್ಥೆಯೇ ಇಲ್ಲದೆ ದ್ವೀಪವಾಗುವ ಉಚ್ಚಂಗಿಯಿಂದ ಕೂಡುರಸ್ತೆಗೆ ಹೊರಡುವ ಎಲ್ಲ ಪ್ರಯಾಣಿಕರಿಗೂ ಜೀವನಾಡಿ ಆಗಿದ್ದಿತು.

ಬಸ್ಸಿನ ಕಂಡೆಕ್ಟರ್ ವೆಂಕು ರಾಜೇಶನ ಸ್ನೇಹಿತ, ಇಳಿದು ಬಂದವನೇ ರಾಜೇಶನ ಹೋಟೆಲಿನೊಳಗೆ, " ಬೇಗ ಕಾಫಿ ಕೊಡೊ ... " ಎಂದು ಹೇಳುತ್ತಲೇ ನುಗ್ಗಿದ. ಒಳಗೆ ಬಿಸಿ ಬಿಸಿ ಚರ್ಚೆ ನಡೆಸುತ್ತಿದ್ದ ಸೋಮಯ್ಯ, ರಾಜೇಶರಿಬ್ಬರೂ ಅವನ ನಿರೀಕ್ಷಿಸದ ಆಗಮನದಿಂದ ಬೆಚ್ಚಿ ಬಿದ್ದರು. " ಸ್ವಲ್ಪ ನಿಧಾನ ಮಾರಾಯ... ಯಾಕ್ ಅಷ್ಟು ಅರ್ಜೆಂಟು... ಸುಬ್ಬೂ ...  " ಎಂದು ಸೋಮಯ್ಯನಿಗೆ ವಿದಾಯ ಹೇಳಿ, ಕಾಣದ ಸುಬ್ಬೂನನ್ನು ಕರೆದ. ಸುಬ್ಬೂ " ಬಂದೆ ಅಣ್ಣಾ.. "ಎನ್ನುತ್ತಾ ತನ್ನ ಆಟಕ್ಕೆ ಕುತ್ತು ತಂದ ಬಸ್ಸಿಗೂ, ಕಂಡೆಕ್ಟರಿಗೂ ಮನದೊಳಗೆ ಹಿಡಿ ಶಾಪ ಹಾಕುತ್ತಾ ಒಳ ನಡೆದ. ಪೊಂ ಪೊಂ ಸದ್ದು ಮಾಡುತ್ತಿದ್ದ ಡ್ರೈವರ್ ವಸೀಮ್ ಸಾಬನಿಗೆ, " ಬಂದೆ ಕಣೋ ... ಬಂದೆ " ಎನ್ನುತ್ತಾ ಅವಸರ ಅವಸರದಲ್ಲಿ ಅರ್ಧ ಕಾಫಿ ಕುಡಿದು ವೆಂಕು ಬಸ್ಸು ಹತ್ತಿ "ರೈಟ್ ... " ಅಂದ. ಸಾಮಾನ್ಯವಾಗಿ ಗುಳ್ಳೆ ನರಿ ಬಸ್ಸಿನಲ್ಲಿ ಉಚ್ಚಂಗಿಗೆ ಬರುವ ಎಲ್ಲಾ ಪ್ರಯಾಣಿಕರೂ ರಾಜೇಶನಿಗೆ ಗೊತ್ತಿದ್ದವರೇ ಆಗಿರುತ್ತಾರೆ. ಶನಿವಾರಸಂತೆಗೋ, ಚಂಗ್ರಳ್ಳಿಗೋ ಹೋಗಿ ಬರುವ ಉಚ್ಚಂಗಿಯ ಗ್ರಮಸ್ಥರೆ ಹೆಚ್ಚು... ಆಗೊಮ್ಮೆ ಈಗೊಮ್ಮೆ ಊರ ನೆಂಟರು ಬಂದರೂ, ಅಲ್ಲೇ ಹುಟ್ಟಿ ಬೆಳೆದ ರಾಜೇಶನಿಗೆ ಗೊತ್ತಿಲ್ಲದ ಮುಖವಂತೂ ಆಗಿರುವುದಿಲ್ಲ. ಆದರೆ, ಅಪರಿಚಿತ ಮುಖವೊಂದು ಕೈಲಿ ಕಪ್ಪು ಸೂಟ್ಕೇಸ್ ಹಿಡಿದು ರಾಜೇಶನ ಹೋಟೆಲಿನ ಕಡೆಗೆ ನಡೆದು ಬರುತಿತ್ತು. ನೀಟಾಗಿ ಕ್ರಾಪು ಬಾಚಿದ್ದ ಯುವಕ ಸುಮಾರು ೨೫ ಹರೆಯದವನಂತೆ ಕಂಡ. ಮತ್ತೆ ಮಳೆ ಸುರಿಯಲು ಆರಂಭವಾಯಿತು. ಆ ವ್ಯಕ್ತಿ ಓಡಿ ಬಂದು ಹೋಟೆಲಿನೊಳಗೆ ಮಳೆಯಿಂದ ಪಾರಾಗಲು ಬಂದು ನಿಂತ. " ನಿಮ್ಮನ್ನು ಇಲ್ಲಿ ನೋಡಿಲ್ವಲ್ಲ ನಾನು .. ಹೊಸಬರ ಥರ ಕಾಣಿಸ್ತೀರ... ಕಾಫಿ ಗೇಫಿ ಕೊಡ್ಲಾ.. ಎಲ್ಲಿಗೆ ಹೋಗ್ಬೇಕು ... " ಎನ್ನುತ್ತಾ ಆಶ್ಚರ್ಯಚಕಿತ ಪ್ರಶ್ನಾರ್ಥಕ ಚಿಹ್ನೆಗಳು ರಾಜೇಶನ ಬಯ್ಬಿಲ್ಲಿನಿಂದ ವಾಗ್ಬಾಣಗಳಾಗಿ ಆ ವ್ಯಕ್ತಿಯ ಕಡೆ ತೂರಿ ಬಂದವು. ಅದೆಲ್ಲಕ್ಕೂ ಅವನ ಮೌನವೇ ಉತ್ತರವಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ, " ಛತ್ರಿ ಇದ್ರೆ ಕೊಡ್ತೀರಾ, ನಾಳೆ ಬೆಳಗ್ಗೆ ಹಾಗೆ ವಾಪಸ್ ಕೊಡ್ತೀನಿ... " ಎಂದು ಮೌನ ಮುರಿಯುತ್ತಾ ವ್ಯಕ್ತಿ ಮಾತನಾಡತೊಡಗಿದ. " ಎಲ್ಲಿಗೆ ಹೋಗ್ಬೇಕು ನೀವು... ಈ ಮಳೆಲೀ... ಸ್ವಲ್ಪ ತಡಿರಿ, ಕಮ್ಮಿ ಆದ್ಮೇಲೆ ಹೋಗೋರಂತೆ " ಎಂದ ರಾಜೇಶ. " ಇಲ್ಲಾ.. ಈಗ್ಲೇ ಹೊತ್ತಾಗಿದೆ. ಮೇಲ್ಮನೆ ಸುಬ್ರಹ್ಮಣ್ಯ ಭಟ್ಟರ ಮನೆಗೆ ಹೋಗ್ಬೇಕು... ಛತ್ರಿ ಕೊಟ್ರೆ ತುಂಬಾ ಉಪಯೋಗ ಆಗತ್ತೆ " ಎಂದು ತಾನು ಹೋಗಬೇಕಾದ ಸ್ಥಳ ಯಾವುದೆಂದು ನುಡಿದ ಆ ಆಗಂತುಕ. " ಅಯ್ಯೋ.. ಮಳೆಲಿ ಒಬ್ಬರೇ ಯಾಕೆ ಅಷ್ಟು ದೂರ ಹೋಗ್ತೀರಾ... ಸೂಟ್ಕೇಸು ಬೇರೆ ಇದೆ.. ನಮ್ ಸುಬ್ಬೂನ ಜೊತೆಗೆ ಕಳಿಸ್ತೀನಿ, ನಿಮಗೂ ಟಾರ್ಚು ಹಿಡ್ಯೋದಾದ್ರೂ ತಪ್ಪತ್ತೆ... " ಎಂದು ಹೇಳಿ, " ಸುಬ್ಬೂ... ಭಟ್ರ ಮನೆಗೆ ಇವರನ್ನ ಬಿಟ್ಬಾ ... " ಎಂದು ಸುಬ್ಬೂವಿಗೆ ಅಧಿಕಾರಯುಕ್ತ ಧ್ವನಿಯಲ್ಲಿ ಹೇಳಿದ ರಾಜೇಶ. " ಅಣ್ಣಾ.. ಈಗ್ಲ.. ಛಳಿ ಹೊರಗೆ... " ಎಂದ ಸುಬ್ಬೂವಿಗೆ ಕಣ್ಣಿನಲ್ಲೇ ಪ್ರಳಯ ರುದ್ರನ ಪ್ರತಿರೂಪ ತೋರಿ ಹೋಗುವಂತೆ ಸನ್ನೆ ಮಾಡಿದ ರಾಜೇಶ. ಒಲ್ಲದ ಮನಸ್ಸಿನಿಂದ ಟಾರ್ಚು ಮತ್ತು ಕೊಡೆ ಹಿಡಿದು ಸುಬ್ಬೂ ಆಗಂತುಕನ ಜೊತೆ ಸುರಿಯುತ್ತಿದ್ದ ಜೋರು ಮಳೆಯಲ್ಲಿ ಹೊರನಡೆದ.

ಸುಬ್ಬೂವೋ ಬಹಳ ಮಾತುಗಾರ. ಈ ವ್ಯಕ್ತಿ ಸಂಪೂರ್ಣ ಮೌನಿ. ಇವನು ಹತ್ತು ಮಾತಾಡಿದರೆ, ಅವನಿಂದ ಒಂದು " ಹೂ .. " ಎನ್ನುವ ಹೂಂಕಾರ ಬರುತ್ತಿತ್ತು. " ನಿಮ್ಮೂರಲ್ಲೂ ಹೀಗೇ ಮಳೆ ಬರುತ್ತಾ... " , " ನಿಮ್ ಸೂಟ್ಕೇಸು ಪಸಂದಾಗಿದೆ.. ", " ನಿಮ್ ಊರು ಯಾವುದು ... " ಎಂದು ಹತ್ತು ಹಲವು ಪ್ರಶ್ನೆಗಳ ಬಾಣ ಹೊರಡುತ್ತಲೇ ಇತ್ತು. ಎಲ್ಲವೂ ಅವನ ಗಾಢ ಮೌನದಲ್ಲಿ ಕರಗಿ ಹೋಗುತ್ತಿದ್ದವು. ಸುತ್ತಲೂ ಹಬ್ಬಿದ ಹಚ್ಚ ಹಸುರಿನ ಪರ್ವತ ಶ್ರೇಣಿ, ಭೋ ಎಂದು ಎಲ್ಲೋ ದೂರದಲ್ಲಿ ಧುಮುಕುವ ಸಣ್ಣ ಜಲಪಾತ, ಹಕ್ಕಿಗಳ ಚಿಲಿ ಪಿಲಿ... ಎಲ್ಲವೂ ಮಲೆನಾಡಿನ ಈ ಸುಂದರ ಊರು ಉಚ್ಚಂಗಿಯ ಪರಿಸರದ ಭಾವಗಳು. ರಾತ್ರಿಯ ಕತ್ತಲು ಎಲ್ಲೆಲ್ಲೂ ಮೆತ್ತಿಕೊಂಡಿತ್ತು. ಇದರ ಜೊತೆ ಸುರಿಯುತ್ತಿರುವ ಮಳೆ. ಮಲೆನಾಡಿನ ಮಳೆಯೇ ಹಾಗೆ. ಎಷ್ಟೇ ಬೇಡವೆಂದರೂ ನಿಲ್ಲುವಂತದ್ದಲ್ಲ. ಇಡೀ ಊರಿಗೆ ಏಕೈಕ ಹೋಟೆಲು ಅಂದರೆ ರಾಜೇಶನದ್ದೇ. ಊರಿಗೊಬ್ಬಳೇ ಪದ್ಮಾವತಿಯಂತೆ, ಅವನೇ ಪ್ರಯಾಣಿಕರ, ಗ್ರಾಮಕ್ಕೆ ಹೊಸತಾಗಿ ಬರುವವರ ಅನ್ನದಾತ. " ಅಗೋ ನೋಡಿ.. ಅಲ್ಲಿ ಮಿಣಿ ಮಿಣಿ ದೀಪ ಉಂಟಲ್ಲ..  ಅದೇ ಭಟ್ಟರ ಮನೆ .. " ಎಂದ ಸುಬ್ಬೂ.

ಭಟ್ಟರ ಮನೆಯ ಮುಂದೆ ಹಾಕಿದ್ದ ಹಸುಕಲ್ಲಿನ ಮೇಲೆ ಯತೇಚ್ಛವಾಗಿ ಹಸುರು ಪಾಚಿ ಬೆಳೆದಿತ್ತು. ಭಟ್ಟರ ಮಗ ರಂಗನಾಥ ಸತ್ತ ನಂತರ ಅವರ ಹೆಂಡತಿ ಸುಂದರಮ್ಮ ಖಾಯಿಲೆ ಬಿದ್ದರು. ಮನೆಯ ಎಲ್ಲಾ ಕೆಲಸ ಭಟ್ಟರದ್ದೇ ಆಗಿತ್ತು. ಅವರು ತಾನೆ ಎಷ್ಟೆಂದು ಮಾಡಿಯಾರು, ವಯಸ್ಸು ಅರವತ್ತರ ಆಸು ಪಾಸು. ಮನೆಯ ಮುಂದಿನ ಅಂಗಳ ತೊಳೆಯುವಷ್ಟು ಶಕ್ತಿ ಅವರಲ್ಲಿ ಇರಲಿಲ್ಲ. ಸುಬ್ಬೂ ಮನೆಯ ಬಳಿ ಬಂದವನೇ " ಭಟ್ಟರೇ... "ಎಂದು ಕೂಗು ಹಾಕಿದ. ಒಳಗಿನಿಂದ " ಯಾರೂ... ಬಂದೇ " ಎನ್ನುವ ಧ್ವನಿ ಹೊರಬಂತು. ಆಗ ತಾನೇ ಊಟ ಮುಗಿಸಿ ಕೈ ತೊಳೆದು, ತನ್ನ ಪಂಚೆಯಿಂದ ಕೈ ಒರೆಸಿಕೊಳ್ಳುತ್ತ ಮನೆಯ ಬಾಗಿಲು ತೆಗೆದರು ಭಟ್ಟರು. " ಏನೋ ಸುಬ್ಬೂ... ಈ ರಾತ್ರಿಲಿ ಒಬ್ಬನೇ ... " ಎಂದರು. ಸುಬ್ಬೂ, " ಏ ಇಲ್ಲಪ್ಪ... ಇವರನ್ನ ಕರ್ಕೊಂಡು ಹೋಗು ಅಂತ ಅಣ್ಣ ಕಳಿಸ್ದ... " ಎಂದು ಕೈ ತೋರಿಸಲು ಹಿಂದೆ ತಿರುಗಿದ. ಅವನ ಹಿಂದೆ ಗಾಢ ಕತ್ತಲು ಬಿಟ್ಟು ಇನ್ನೇನೂ ಇರಲಿಲ್ಲ. ಸುಬ್ಬೂವಿನ ಹೃದಯ ಧಸಕ್ಕೆಂದಿತು. ಅವನ ಪಕ್ಕದಲ್ಲಿ ಆ ಆಗಂತುಕನ ಸೂಟ್ಕೇಸು ಒಂಟಿಯಾಗಿ ನಿಂತಿತ್ತು. ಸುಬ್ಬೂ ಒಮ್ಮೆ " ಓ .. ಎಲ್ಲಿದ್ದೀರಿ ... "ಎಂದು ಕೂಗು ಹಾಕಿದ. ಯಾವುದೇ ಉತ್ತರ ಬರಲಿಲ್ಲ. ಮಳೆಯ ಕಾಯುವ ಕಪ್ಪೆಯ "ಟರ್ರ್ ಟರ್ರ್ ... " ಬಿಟ್ಟರೆ ಗವ್ವನೆ ಕವಿದ ಕತ್ತಲಲ್ಲಿ ಇನ್ನೊಂದು ಧ್ವನಿ ಇರಲಿಲ್ಲ. " ಅದೇನಿದೆ.. ನೋಡೋಣ ... ಸೂಟ್ಕೇಸು ತೆಗಿ ... " ಎಂದು ಭಟ್ಟರು ಸುಬ್ಬೂ ಗೆ ಹೇಳಿದರು. ಹೆದರಿಕೆಯಿಂದಲೇ ಸುಬ್ಬೂ ತೆಗೆದ ಸೂಟ್ಕೇಸಲ್ಲಿ ಮಿಲಿಟರಿಯವರ ಬಟ್ಟೆ ಮತ್ತು ಅದರ ಜೊತೆ ಒಂದು ಕಾಗದ ಇತ್ತು. ಕಾಗದ ತೆಗೆದು ಗಟ್ಟಿಯಾಗಿ ಓದಲು ಪ್ರಾರಂಭಿಸಿದರು ಭಟ್ಟರು, " Clothes of Late Mr. Ranganath S/o S. Bhatt ... need to be sent" .  ೧೦-೧೨-೧೯೯೯ ರ ಡೇಟಿನ ಕೆಳಗಿದ್ದ ಅಕ್ಷರಗಳು ಸುಬ್ಬೂವಿಗೆ ಸ್ಪಷ್ಟ ಗೋಚರವಾದುವು. 'ಅಬ್ಬಾ... ಹದಿನೈದು ವರ್ಷ ಹಿಂದಿನ ಲೆಟರು... ಯಾರೀತ.. ಯಾಕೆ ಬಂದ... ಇವನೇನಾದ್ರೂ ರಂಗನಾಥನೇ ನಾ ... " ಎಂದು ಹೆದರಿಕೆಯ ಸಮುದ್ರದಲ್ಲಿ ಹುಯ್ದಾಡುತ್ತ ಇದ್ದ ಸುಬ್ಬೂವಿನ ಮನಸ್ಸಿನ ದೋಣಿಯನ್ನು " ಸುಬ್ಬೂ... " ಎಂದು ಭಟ್ಟರು ಕರೆದು ಲಂಗರು ಹಾಕಿ ನಿಲ್ಲಿಸಿದರು. " ಯಾರೋ ಕೊಟ್ಟಿದ್ದು ಈ ಸೂಟ್ಕೇಸು ನಿಂಗೆ ... "ಎಂದು ಕಣ್ಣೀರು ತುಂಬಿದ ಮೊಗದಿಂದ , ಗದ್ಗದಿತವಾದ ಭಟ್ಟರ ಧ್ವನಿ ಸುಬ್ಬೂವಿನ ಹೆದರಿಕೆ ಇಮ್ಮಡಿಗೊಳಿಸಿತು. "ಅವರು .. ಅವರು .... " ಎಂದು ಸುಬ್ಬೂ ತೊದಲುತ್ತಲೇ ಇದ್ದ.

Friday, 20 February 2015

"ಹೊನಲು" ವಿನಲ್ಲಿ ಪ್ರಕಟವಾದ ನನ್ನ ಕವನ "ಬದುಕು"

ನಾನೇನು ತಪ್ಪು ಮಾಡಿರುವೆ,
ನೀನೇ ಹೇಳು ಪ್ರಬುವೇ ??
ನನಗೂ ಇರದೇ ಆಸೆ ?
ಆಡುವ, ಹಾಡುವ, ಕುಣಿಯುವ!

ಅವಳ ಕೈಗೆ ಕೊಟ್ಟ ಬೊಂಬೆಯ
ಬಿಂಬವಶ್ಟೆಯೇ ನನ್ನ ಕಣ್ಣಿಗೆ!!
ಬೆನ್ನ ಮೇಲೆ ಬ್ಯಾಗು ಹಾಕಿ
ಶಾಲೆಗೆ ಓಡುವ ಆಸೆ ಇರದೇ ನನಗೆ ?

ಅಮ್ಮನ ಅಂಗಡಿಗೆ ಎಳೆಯುವಾಸೆ,
ಅಪ್ಪನ ತೋಳಲಿ ಮಲಗುವಾಸೆ,
ಗೆಳೆಯರ ಕೂಡಿ ಆಡುವಾಸೆ,
ನನಗೂ ಇರಬಾರದೇಕೆ?

ನಾನೂ ನಿನ್ನ ಮಗಳೇ ಅಲ್ಲವೇ,
ಕೇಳಿದೆನೆ ಸಿರಿ, ಸಂಪತ್ತು, ಒಡವೆ ?
ಪ್ರಬು, ಬೇಡುವೆನು ಬದುಕ
ನನಗೂ ಕೊಡು, ಎಲ್ಲರಿಗೂ ಕೊಟ್ಟಂತೆ

Monday, 26 January 2015

"ಹೊನಲು"ವಿನಲ್ಲಿ ಪ್ರಕಟವಾದ ನನ್ನ ಇತ್ತೀಚೆಗಿನ ಕವನ, "ಅವಳು... "



ಬಿಚ್ಚುಮಲ್ಲಿಗೆ ಮೊಗದವಳೆ, ಬಾಗಿಲ ಬಳಿ ನಿಂತವಳೆ ,
ಲಜ್ಜೆಯಿಂದ ಕದವ ಕೆರೆವ ಮುದ್ದು ಬೆರಳೆ,
ನೀ ಹಚ್ಚಿದ ಪ್ರೇಮದ ಹಣೆತೆಯಿನ್ನೂ ಉರಿಯುತಿದೆ
ಬೆಚ್ಚಗಿನ  ಹೃದಯ ಮಂದಿರದಲ್ಲಿ ..

ಮಬ್ಬುಗತ್ತಲಲ್ಲಿ ಕೈ ಹಿಡಿದು, ಅತ್ತಿಂದಿತ್ತ ತಿರುಗಾಡಿ,
ಜೂಟಾಟವಾಡಿ, ಸೋತು ಗೆದ್ದೆಯಲ್ಲೇ,
ಕಿವಿಯಲ್ಲಿ ಪಿಸುಗುಟ್ಟಿ, ನಕ್ಕು ನುಡಿದ ಮಾತೆಲ್ಲವೂ ನೆನಪಾಗಿದೆ.

ಹಿಂದೆ ನಿಂತು,ಕೈ ಬೀಸಿ ಕಳಿಸಿಕೊಡು ವಯ್ಯಾರಿ,
ನೀನಿರದೆ ಖಾಲಿಯೆನಿಸುವ ಮನವ,
ನಿನ್ನ ಚೆನ್ನುಡಿಯಿಂದ ತುಂಬುವೆ,
ತುಟಿಗಚ್ಚಿ, ಮತ್ತೆ ಮತ್ತೆ ಹಿಂದಿರುಗಿ ಮಿಕ್ಕ ಜೀವನ ಸವೆಸುವೆ


Friday, 23 January 2015

"ಹೊನಲು"ವಿನಲ್ಲಿ ಪ್ರಕಟವಾದ ನನ್ನ ಇತ್ತೀಚಿಗಿನ ಸಣ್ಣ ಕಥೆ, ( ಇದು ನಲ್ಗನ್ನಡದಲ್ಲಿದೆ )


ಆಗಸದಲ್ಲಿ ನುಸುಳಲೂ ಜಾಗವಿಲ್ಲದಂತೆ ಮೋಡ ಮುಸುಕಿತ್ತು. ಇನ್ನೇನು ಮತ್ತೊಮ್ಮೆ ಮುಸಲಧಾರೆ ಸುರಿಯುವ ಎಲ್ಲಾ ಲಕ್ಷಣಗಳಿದ್ದುವು. ಬೆಳಗ್ಗಿನಿಂದ ಎಶ್ಟು ಸುರಿದರೂ, ಮಳೆರಾಯನಿಗೆ ತೃಪ್ತಿಯಾದಂತಿರಲಿಲ್ಲ. ಪುಣೆಯ ಮೇಲೆ ಎಡಬಿಡದೆ ಸುರಿದು, ಸುತ್ತಲ ಪರಿಸರವನ್ನು ಅರಳಿಸಿದ್ದ ಮಳೆರಾಯ. ಪ್ರತಿ ಹನಿ ಚುಂಬಿಸಿದಾಗಲೂ ಹಸಿರ ಲತೆ ನಾಚಿ, ಬಳುಕಿ ಮುಸು ಮುಸು ನಗುತ್ತಿತ್ತು. ಮಳೆಗಾಲ ಎಂದರೆ ಹೀಗೆಯೇ. ಸುತ್ತ ನೋಡಿದಲ್ಲೆಲ್ಲಾ ಹಸಿರು, ಎಲ್ಲೆಡೆ ನಗು, ನವಿರು. ನನ್ನ ಅಚ್ಚು ಮೆಚ್ಚಿನ ಸಮಯ ಎಂದರೆ ಮಳೆಗಾಲವೇ. ರಾಡಿಯಲ್ಲಿ ಮಿಂದು ಬಂದು ಅಮ್ಮನ ಬೈಗುಳ ತಿನ್ನುತ್ತಿದ್ದದ್ದು ಇನ್ನೂ ನೆನಪಿನ ಬುತ್ತಿಯಲ್ಲಿ ಹಚ್ಚ ಹಸಿರಾಗಿದೆ. ನನ್ನ ಇನ್ಸ್ಟಿಟ್ಯೂಟ್ ಇಂದ ಹೊರಟಾಗ ಸುಮಾರು ಸಮಯ ೧೧:೩೦ ಆಗಿತ್ತು. ಸೂರ್ಯ ಕೂಡ ಚಳಿ ಎಂದು ಮೋಡಗಳ ಬೆಚ್ಚಗಿನ ಮುಸುಕಲ್ಲಿ ಅಡಗಿ ಕುಳಿತಿದ್ದ. ಬಸ್ಸ್ ಸ್ಟಾಪಿಗೆ ಬಂದಾಗ ಮಳೆ ಜಿನುಗುತ್ತಿತ್ತು. ನನ್ನ ಬಳಿ ಅಶ್ಟೇನೂ  ಲಗೇಜ್ ಇಲ್ಲದಿದ್ದರಿಂದ, ಓಡಿ ಬಂದು ಬಸ್ ಸ್ಟಾಪಿನ ಚಾವಣಿಯ ಶರಣು ಹೋಗಲು ಬಹಳ ಕಾಲ ಹಿಡಿಯಲಿಲ್ಲ. ನಾನು ಅಲ್ಲಿಗೆ ಬಂದಾಗ, ಬಸ್ ಸ್ಟಾಪಿನಲ್ಲಿ ಒಬ್ಬಳು ಹೆಂಗಸು ತನ್ನೆರಡು ಮಕ್ಕಳೊಂದಿಗೆ ಕುಳಿತಿದ್ದಳು. ಒಂದು ಮಗು ೫-೬ ವರ್ಷದ ಹುಡುಗಿ ಇರಬಹುದು. ಇನ್ನೊಂದು ವರ್ಷವೂ ದಾಟದ ಕೂಸನ್ನು ಎದೆಗೆ ಅಪ್ಪಿ ಕುಳಿತಿದ್ದಳು. 'ಇಶ್ಟು ಮಳೆಯಲ್ಲಿ, ಚಳಿಯಲ್ಲಿ ಅ ಪುಟ್ಟ ಮಗುವನ್ನು ಕರೆದುಕೊಂಡು ಹೋಗುತ್ತಿದ್ದಾಳಲ್ಲಾ... ಅದರ ಆರೋಗ್ಯದ ಪಾಡೇನು ??? ' ಎಂದುಕೊಂಡೆ. ಕಾಲಿಗೆ ಚಪ್ಪಲಿ ಇರಲಿಲ್ಲ, ಮಾಸಿದ ಸೀರೆ ಅಲ್ಲಲ್ಲಿ ಹರಿದಿತ್ತು. ಅದಕ್ಕೆ ತೇಪೆ ಹಾಕುವ ಪ್ರಯತ್ನ ನಡೆದಿದ್ದರೂ ಅದು ಪ್ರಯೋಜನ ಆದಂತೆ ತೋರಲಿಲ್ಲ. ಆಕೆಯ ಪಕ್ಕದಲ್ಲೇ ಒಂದು ಹಳೆಯ ಬ್ಯಾಗು ಇತ್ತು. ಅದರಲ್ಲೇನಿದೆ ಎನ್ನುವ ಕುತೂಹಲ ಇದ್ದರೂ, ಆಕೆ ಏನೆಂದುಕೊಳ್ಳುವಳೋ ಎಂದು ಅತ್ತ ಕಡೆ ತಿರುಗದೆ ಬಸ್ಸು ಕಾಯುತ್ತಾ ನಿಂತೆ. 

ಪುಣೆಯಲ್ಲಿ ಸಿಟಿ ಬಸ್ಸು ಸರಿಯಾದ ಸಮಯಕ್ಕೆ ಸಿಗುವುದು, ನಮ್ಮ ಅರಸೀಕೆರೆಯಲ್ಲಿ ಮಳೆಯದಶ್ಟೇ  ವಿರಳ. ನನಗೆ ಅಶ್ಟೇನೂ ಸಮಯದ ಒತ್ತಡ ಇರಲಿಲ್ಲ. ೨:೩೦ಕ್ಕೆ ಬೆಂಗಳೂರಿಗೆ ಹೊರಡುವ ಬಸ್ ಬುಕ್ ಮಾಡಿದ್ದೆ. ಪುಣೆಯ ಹಣೆಬರಹ ಗೊತ್ತಿದ್ದೇ ಇಶ್ಟು ಬೇಗ ಹೊರಟಿದ್ದು. ಆದರೆ ಬಸ್ಸಿಗಾಗಿ ಕಾಯುವುದು ಇದೆಯಲ್ಲಾ .. ಅದಕ್ಕಿಂತ ಬೇಸರ ತರಿಸುವ ಸಂಗತಿಯೇ ಇಲ್ಲ . ನಾನು ನಿರಾಳವಾಗಿ ಬಸ್ಸಿಗಾಗಿ ಕಾಯುತ್ತಾ, ಮನದೊಳಗೆ ಶಪಿಸುತ್ತಾ ನಿಂತಿದ್ದೆ. ಆದರೆ, ಆಕೆ ಹೆಚ್ಚು ಆತಂಕಗೊಂಡಂತೆ ಕಂಡಳು. ಮಗುವನ್ನು ಅಪ್ಪಿಕೊಂಡೇ ತನ್ನ ಬಟ್ಟಲು ಕಂಗಳಲ್ಲಿ ಕಾತರತೆಯಿಂದ ಬಸ್ಸಿಗಾಗಿ ನೋಡುತ್ತಿದ್ದಳು. ಕೈ ಗಡಿಯಾರ ನೋಡಿಕೊಂಡೆ. ೧:೦೦ ಘಂಟೆ ತೋರಿಸುತ್ತಿತ್ತು. ಇನ್ನೂ ತಡವಾದರೆ ನನ್ನ ಬಸ್ಸು ಹೊರಟುಬಿಡುತ್ತದೆ ಎಂದೂ, ಇನ್ನು ಹದಿನೈದು ನಿಮಿಶ  ನೋಡಿ ಆಟೋ ಹಿಡಿಯುವುದು ಎಂದೂ ಯೋಚಿಸಿ ರಸ್ತೆಯ ಅತ್ತ ಬದಿ ತಿರುಗಿದೆ. ಬಾಗಿ ಬಳುಕಿ ಬರುತ್ತಿರುವ ಬಸ್ಸು ಕಂಡಿತು. "ಅಬ್ಬಾ !! .. ಬಂತಲ್ಲಾ .. " ಎಂದುಕೊಂಡು ಬಸ್ಸು ಹತ್ತಿದೆ. ಬಹುಪಾಲು ಖಾಲಿ ಇದ್ದ ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟು ಹಿಡಿದು ಕುಳಿತೆ. ನನ್ನ ಮುಂದಿನ ಸೀಟಿನಲ್ಲೇ ಆ ಹೆಂಗಸು ತನ್ನೆರಡು ಕಂದಮ್ಮಗಳನ್ನು ಕರೆದುಕೊಂಡು ಬಂದು ಕುಳಿತಳು. ಹರಿದ ಸೀರೆಯಿಂದ ಮೈ ಕಾಣುತಿತ್ತು. ಚಳಿಯಿಂದ ತನ್ನ ಕಂದನನ್ನು ಕಾಪಾಡಲು, ಹರಿದ ಸೀರೆಯನ್ನೇ ಅದಕ್ಕೂ ಹೊದಿಸಿ ಅಪ್ಪಿ ಕುಳಿತಿದ್ದಳು. ಕಂಡೆಕ್ಟರಿಗೆ " ಸ್ವಾರ್ ಗೇಟ್ " ಎಂದು ತನ್ನ ಕೈಲಿ ಮಡಚಿ ಹಿಡಿದಿದ್ದ ೨೦ರೂಗಳ ಎರಡು ನೋಟಲ್ಲಿ ಒಂದು ನೋಟನ್ನು ಅವನ ಕೈಗಿತ್ತಳು. ಈ ಪುಟ್ಟ ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೊರಟಿದ್ದಾಳೆ ಈ ಹೆಂಗಸು ಎಂದುಕೊಂಡೆ. ಮಗುವಿನ ಕೈಯಲ್ಲಿ ಒಂದು ಬಿಸ್ಕತ್ತಿನ ಪುಟ್ಟ ಪ್ಯಾಕಿತ್ತು. ಅಮ್ಮನ ತೊಡೆಯ ಪಕ್ಕದಿ ಕುಳಿತು ಬಿಸ್ಕತ್ತು ಚಪ್ಪರಿಸುತ್ತಿತ್ತು ಮಗು. ಅದರ ಬಟ್ಟೆಯೂ ಅಮ್ಮನ ಬಟ್ಟೆಯಂತೆಯೇ ಇತ್ತು. 

ಸ್ವಾರ್ ಗೇಟಿನ ಮುಂದೆ ಬಸ್ಸು ನಿಲ್ಲಿಸಿದಾಗ ಘಂಟೆ ೧:೩೦. ಸ್ವಾರ್ ಗೇಟ್ ಪುಣೆಯ ಮುಖ್ಯ ಬಸ್ಸು ನಿಲ್ದಾಣ ಇರುವ ಜಾಗ. ಬಸ್ಸಿನಿಂದ ಕೆಳಗೆ ಇಳಿದ ಕೂಡಲೇ ರಾಡಿಯ ಸಮುದ್ರದಲ್ಲಿ ಧುಮುಕಿದಂತೆ ಭಾಸವಾಯಿತು. ಮೇಲುಸೇತುವೆ ಕಟ್ಟುತ್ತಿದ್ದರಿಂದ ರಸ್ತೆಯೆಲ್ಲಾ ರಾಡಿಮಯವಾಗಿತ್ತು. ಹೇಗೆ ಹೇಗೋ ದಾಟಿಕೊಂಡು ರಾಡಿಯ ಸಮುದ್ರೋಲ್ಲಂಗನ ಮಾಡುತ್ತಾ ಮುಂದೆ ಹೋಗುತ್ತಿದ್ದ ನನಗೆ, ಆ ಯುವತಿ ಅಲ್ಲಿನ ಮೇಸ್ತ್ರಿಯ ಬಳಿ ಏನನ್ನೋ ಹೇಳುತ್ತಿದ್ದಿದ್ದು ಕಂಡಿತು. ಮೇಸ್ತ್ರಿಯ ಮತ್ತು ಅವಳ ಮುಖಭಾವ ಗುರುತಿಸಿ ಯಾರೂ ಮೇಸ್ತ್ರಿ ಅವಳನ್ನು ಬೈಯುತ್ತಿದ್ದಾನೆಂದು ಊಹಿಸಬಹುದಿತ್ತು. ಪ್ರಾಯಶಃ ಸಮಯಕ್ಕೆ ಸರಿಯಾಗಿ ಬರಲಿಲ್ಲ ಎಂದು ಬಯುತ್ತಿದ್ದಾನೆಂದು ತೋರುತ್ತದೆ. ಅವರನ್ನೇ ನೋಡುತ್ತಾ ನಿಂತೆ. ಕೈ ಕೈ ಮುಗಿದು ಯುವತಿ, ಏನನ್ನೋ ಬಿನ್ನಹಪಡಿಸಿ ಕೊನೆಗೂ ತನ್ನೆರಡು ಮಕ್ಕಳನ್ನು ಕರೆದುಕೊಂಡು ಬ್ಯಾಗು ಹಿಡಿದು ಅಲ್ಲಿದ್ದ ಪುಟ್ಟ ಚಾವಣಿಯ ಬಳಿಗೆ ಬಂದಳು. ಅದರ ಕೆಳಗೆ ಒಂದನ್ನು ಕೂರಿಸಿ, ಇನ್ನೊಂದನ್ನು ಮಲಗಿಸಿ, ಬ್ಯಾಗಿನಿಂದ ಕಲ್ಲು ಹೊರುವ ಬಾಣಲೆಯನ್ನು ಹೊತ್ತಿ ಎಲ್ಲರೊಡನೆ ಕೆಲಸದಲ್ಲಿ ಲೀನವಾದಳು. ಆ ಪುಟ್ಟ ಮಕ್ಕಳ  ನೋಡಿದೆ. ತನ್ನ ತಾಯಿ ಏನು ಮಾಡುತ್ತಿರುವಳು ಎನ್ನುವುದನ್ನೂ ಅರಿಯದೆ ಕುಳಿತಿದ್ದ ಮುಗ್ದ  ಮುಕ ನನ್ನ ಕರುಳ ಕಿವುಚಿತು. ಅವಳ ಮಾತ್ರು  ಹೃದಯಕ್ಕೆ ಸಲಾಂ ಹೇಳಲೋ, ಅಥವಾ ಅವಳಂತಹ ಪರಿಸ್ಥಿತಿಯಲ್ಲಿ ಸೊರಗುತ್ತಿರುವ ಹೆಣ್ಣು ಮಕ್ಕಳಿಗೆ ಮರುಗಲೋ ತಿಳಿಯಲಿಲ್ಲ. ಅವಳ ಹರಕು ಬಟ್ಟೆ ಕಂಡು " ಹುಡುಗಿಯರು ಬಟ್ಟೆ ಹಾಕುವ ರೀತಿಯೇ ಈಗಿನ ಅತ್ಯಾಚಾರ ಪ್ರಕರಣಗಳಿಗೆ ಮೂಲ ಕಾರಣ" ಎಂದ ಮಹಾನುಭಾವನ ಮಾತು ಸ್ಮ್ರುತಿಪಟಲದಲ್ಲಿ  ಹಾದು ಹೋಯಿತು. ಬಟ್ಟೆಯ ಮೇಲಿನ ವ್ಯಾಮೋಹ ಹೊಟ್ಟೆಯ ನಂತರದ್ದು. ಇದನ್ನು ನೋಡಿಯೂ ಹುಡುಗರ ಅತ್ಯಾಚಾರದ ಮನ ಜಾಗ್ರುತವಾಗುವುದಾದರೆ ಮನುಶ್ಯತ್ವದ  ಮೇಲೆಯೇ ದೊಡ್ಡ ಪ್ರಶ್ನೆಯ ನೆರಳು ಬೀಳುವುದಿಲ್ಲವೇ ಎಂದುಕೊಂಡೆ. ಅವಳನ್ನೇ ನೋಡುತ್ತಾ ನಿಂತ ನನ್ನ ತಲೆಯ ಮೇಲೆ ಚಿಟ ಚಿಟನೆ ಮಳೆ ಬೀಳಲು ಆರಂಭಿಸಿತು. ಮಳೆಯಿಂದ ರಕ್ಷಿಸಲು ಬಸ್ ಸ್ಟಾಂಡಿನ ದಾರಿ ಹಿಡಿದೆ. ಆಕೆ ಮಾತ್ರ ಮಳೆಯನ್ನೂ ಅಲಕ್ಷಿಸಿ ದುಡಿಯುತ್ತಲೇ ಇದ್ದಳು. 

Friday, 2 January 2015

ಗಾಳಿಗೋಪುರ

ಆಹಾ!... ಎಂತಹ ಸೊಗಸು... 
ಕನಸು ಕಾಣಲು ಕೊಡಬೇಕೇ ಕಾಸು,
ಇಷ್ಟು ತಿಳಿದ ಮೇಲೆ ಬಿಡವುದೇ ಮನಸು,
ಬೆಳೆದಿತ್ತು ನನ್ನ ಕನಸಿನ ವಯಸ್ಸು,
ಮಡಿಲಲ್ಲಿ ಎರಡು ಕೂಸು... 

ಒದ್ದು ಎಬ್ಬಿಸಿತು ವಾಸ್ತವದ ಬಿಂಬ,
ಎದ್ದು ನೋಡಿದ ನನಗೆ ಆಶಾಭಂಗ,
'ಅವಳಿಲ್ಲ', 'ಮಗಳಿಲ್ಲ', ನಾನು ಒಂಟಿ,
 ಸುತ್ತಲಿನ ಕೆಲಸ ನನಗೆ ಜಂಟಿ,

ಕನಸಿನಲ್ಲಿ ಕಟ್ಟಿದ್ದು ನಾ ಗಾಳಿಗೋಪುರ,
ಬಹು ಸುಂದರ ಈ ಪ್ರೇಮ ಮಂದಿರ,
ಬಳಲಿದ ಮನಕ್ಕಿದು ಒಲವಿನ ಬಿಡಾರ,
ಬಲ್ಲೆ, ಇದು ಕನಸು, ಇದಕ್ಕಿಲ್ಲ ನೆಲೆ,

ಆದರಿಲ್ಲೇ ಜೀವಿಸುವೆ... ಗಾಳಿಗೋಪುರ ಇದ್ದರೂ ... ಬಿದ್ದರೂ